Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ದುಶ್ಚಟ ಜೋಳಿಗೆಗೆ ಹಾಕಿ’: ಇದು ಖಾವಿಧಾರಿಯೊಬ್ಬರು ಮಾಡಿದ ವಿಭಿನ್ನ ಅಭಿಯಾನದ ಸ್ಟೋರಿ

Bagalkote News: ಬಾಗಲಕೋಟೆ ಜಿಲ್ಲೆಯ ಇಳಕಲ್ ವಿಜಯಮಹಾಂತೇಶ್ವರ ಮಠ ಲಿಂಗೈಕ್ಯ ಮಹಾಂತ ಶ್ರೀಗಳು ಭಕ್ತರ ಬಳಿ ಯಾವುದೇ ಚಿನ್ನ ಹಣ, ಆಸ್ತಿ, ವಾಹನ ಬೇಡಿದವರಲ್ಲ. ಬದಲಿಗೆ ಎಷ್ಟೋ ಜನರ ದುಶ್ಚಟ ಬಿಡಿಸಿದವರು. ‘ದುಶ್ಚಟ ಜೋಳಿಗೆಗೆ ಹಾಕಿ’ ಎಂಬ ಅಭಿಯಾನದ ಪ್ರತಿಫಲವೇ ಈಗ ರಾಜ್ಯಾದ್ಯಂತ ವ್ಯಸನಮುಕ್ತ ದಿನಾಚರಣೆ ಶುರುವಾಗಿದೆ.

‘ದುಶ್ಚಟ ಜೋಳಿಗೆಗೆ ಹಾಕಿ’: ಇದು ಖಾವಿಧಾರಿಯೊಬ್ಬರು ಮಾಡಿದ ವಿಭಿನ್ನ ಅಭಿಯಾನದ ಸ್ಟೋರಿ
ವಿಜಯಮಹಾಂತೇಶ್ವರ ಮಠ ಲಿಂಗೈಕ್ಯ ಮಹಾಂತ ಶ್ರೀಗಳು
Follow us
ರವಿ ಹೆಚ್ ಮೂಕಿ, ಕಲಘಟಗಿ
| Updated By: ಗಂಗಾಧರ​ ಬ. ಸಾಬೋಜಿ

Updated on: Aug 05, 2023 | 8:54 PM

ಬಾಗಲಕೋಟೆ, ಆಗಸ್ಟ್​ 05: ಅವರು ತಮ್ಮ ಮಠಕ್ಕಾಗಿ ಭಕ್ತರಿಂದ ಎಂದೂ ಏನನ್ನೂ ಕೇಳದ ಸ್ವಾಮೀಜಿ. ಆದರೆ ಅದೊಂದು ದಿನ ಮಠದ ಒಬ್ಬ ಭಕ್ತರ ಮನೆಗೆ ಹೋದಾಗ ಮಹಿಳೆ ಮಕ್ಕಳು ಒಂದೇ ಸಮನೆ ಅಳುತ್ತಿದ್ದರು. ಯಾಕೆ ಅಂತ ಆ ಸ್ವಾಮೀಜಿ ಕಾರಣ ಕೇಳಿದ್ದರು. ಆಗ ಅಳುತ್ತಾ ಭಕ್ತೆ ಹೇಳಿದ್ದು ಪತಿ ಕುಡಿದು ಕುಡಿದು ಮೃತಪಟ್ಟರು ಎಂದರು. ಆ ಕ್ಷಣವೇ ಆ ಸ್ವಾಮೀಜಿ‌ ವ್ಯಸನಮುಕ್ತ ಸಮಾಜ ಮಾಡಲು ಹೊರಟರು. ಹೆಗಲಿಗೆ ಜೋಳಿಗೆ ಹಾಕಿ ‘ದುಶ್ಚಟ ಜೋಳಿಗೆಗೆ ಹಾಕಿ’ (bad habit) ಎಂದು ಅಭಿಯಾನ ಶುರು ಮಾಡಿದರು. ಆ ಅಭಿಯಾನದ ಪ್ರತಿಫಲವೇ ಈಗ ರಾಜ್ಯಾದ್ಯಂತ ವ್ಯಸನಮುಕ್ತ ದಿನಾಚರಣೆ ಶುರುವಾಗಿದೆ. ಅಷ್ಟಕ್ಕೂ ಆ ಸ್ವಾಮೀಜಿಗಳು ಯಾರು ಎಲ್ಲಿಯವರು ಇಲ್ಲಿದೆ ಮಾಹಿತಿ.

ಬಾಗಲಕೋಟೆ ಜಿಲ್ಲೆಯ ಇಳಕಲ್ ವಿಜಯಮಹಾಂತೇಶ್ವರ ಮಠ ಲಿಂಗೈಕ್ಯ ಮಹಾಂತ ಶ್ರೀಗಳು ಕೇವಲ‌ ಮಠ ಧಾರ್ಮಿಕ ಭೋದನೆಗೆ ಮಾತ್ರ ಸೀಮಿತವಾಗಿರಲಿಲ್ಲ. ವಿಜಯಮಹಾಂತೇಶ್ವರ ಮಠದ 20ನೇ ಪೀಠಾಧಿಪತಿಯಾಗಿದ್ದ ಶ್ರೀಗಳು ಮಹಾಂತ‌ ಜೋಳಿಗೆ ಎಂದು ಕ್ರಾಂತಿಯನ್ನೇ ಮಾಡಿದವರು. ಭಕ್ತರ ಬಳಿ ಯಾವುದೇ ಚಿನ್ನ ಹಣ, ಆಸ್ತಿ, ವಾಹನ ಬೇಡಿದವರಲ್ಲ. ಬದಲಿಗೆ ಹೆಗಲಿಗೆ ಜೋಳಿಗೆ ಹಾಕಿಕೊಂಡು ದುಶ್ಚಟ ಜೋಳಿಗೆಗೆ ಹಾಕಿಸಿಕೊಂಡು ಎಷ್ಟೋ ಜನರ ದುಶ್ಚಟ ಬಿಡಿಸಿದವರು. ಇದರ ಪ್ರಯುಕ್ತ ರಾಜ್ಯಾದ್ಯಂತ ಅವರ ಜನ್ಮದಿನ ಆಗಷ್ಟ್ 1 ರಂದು ರಾಜ್ಯಾದ್ಯಂತ ವ್ಯಸನಮುಕ್ತ ದಿನಾಚಣೆಯನ್ನು ಸರಕಾರ ಆಚರಿಸುತ್ತಿದೆ. ಆದರೆ ರಾಜ್ಯಾದ್ಯಂತ ಆಚರಣೆಗೆ ಸರಕಾರ ಕೇವಲ 50 ಲಕ್ಷ ರೂ. ಅನುದಾನ ನೀಡುತ್ತಿದೆ.

ಇದನ್ನೂ ಓದಿ: Bagalkot century school: ಶತಮಾನೋತ್ಸವದ ಅಂಚಿನಲ್ಲಿ ಮೇಲ್ಛಾವಣಿ ಕುಸಿದು, ಮಕ್ಕಳಿಗೆ ಆಕಾಶ ದರ್ಶನ ಭಾಗ್ಯ! ಇದು ಸರಕಾರಿ ಮಾದರಿ ಶಾಲೆ

ರಾಜ್ಯಾದ್ಯಂತ ಆಯಾ ಜಿಲ್ಲಾಮಟ್ಟದ ಆಚರಣೆಗೆ 25 ಸಾವಿರ ರೂ. ತಾಲ್ಲೂಕು ಮಟ್ಟಕ್ಕೆ 17 ಸಾವಿರ ರೂ. ರಾಜ್ಯಮಟ್ಟ 3 ಲಕ್ಷ 80 ಸಾವಿರ ರೂ. ಹಂಚಿಕೆಯಾಗುತ್ತಿದೆ. ಇದರಿಂದ ಅರ್ಥಪೂರ್ಣವಾಗಿ ಆಚರಣೆ ಮಾಡಲು ಆಗೋದಿಲ್ಲ. ಇನ್ನು ಐವತ್ತು ಲಕ್ಷ ರೂ. ಅನುದಾನ ಸೇರಿ ಒಟ್ಟು ಒಂದು ಕೋಟಿ ರೂ. ಅನುದಾನ ನೀಡಬೇಕೆಂದು ಶ್ರೀಗಳ ಭಕ್ತರು ಆಗ್ರಹ ಮಾಡುತ್ತಿದ್ದಾರೆ.

ಮಹಾಂತ ಶ್ರೀಗಳು ಮೊದಲಿಂದಲೂ ದಾಸೋಹ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯ ಮಾಡುತ್ತಾ ಬಂದವರು. ಮಠಕ್ಕೆ ಬಂದ ಭಕ್ತರಿಗೆ ಹೆಚ್ಚು ದುಶ್ಚಟ ಬಗ್ಗೆ ಜಾಗೃತಿ, ಅರಿವು ಮೂಡಿಸುತ್ತಾ ಬಂದಿದ್ದಾರೆ. ಮಠಕ್ಕೆ ಬರುವ ಭಕ್ತರಿಗೆ ಮೊದಲು ಹೇಳುತ್ತಿದ್ದ ‌ಮಾತೆ ದುಶ್ಚಟದ ಬಗ್ಗೆ. ವಿದೇಶದಲ್ಲೂ ಜಾಗೃತಿ ವಚನ ನೀಡಿದವರು ಮಹಾಂತ ಶ್ರೀಗಳು.

ಈಗ ಅವರು ಭಕ್ತರ ಜೊತೆಗಿಲ್ಲ. ಆದರೆ ಅವರು ಹಾಕಿಕೊಟ್ಟ ಮಹಾಂತ ಜೋಳಿಗೆ ಇಂದಿಗೂ ಈಗಿನ ಶ್ರೀಗಳಾದ ಗುರಹಾಂತಶ್ರೀಗಳು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ರಾಜ್ಯಾದ್ಯಂತ ಅವರ ಜನ್ಮದಿನ ವ್ಯಸನಮುಕ್ತ ದಿನಾಚರಣೆ ನಡೆಯುತ್ತಿದೆ. ಆದರೆ ಶ್ರೀಗಳ ಭಕ್ತರು ಇಷ್ಟಕ್ಕೆ ಸುಮ್ಮನಿರದೆ ವ್ಯಸನಮುಕ್ತ ದಿನಾಚರಣೆಯನ್ನು ಇಡೀ ದೇಶಾದ್ಯಂತ ಆಚರಿಸಬೇಕು.

ಇದನ್ನೂ ಓದಿ: ಗ್ರಾಮಕ್ಕೆ ಖಾಯಂ ಸ್ಮಶಾನ ಬೇಕು; ರಸ್ತೆ ತಡೆದು ಬಾಗಲಕೋಟೆ ಸೀಗಿಕೇರಿ ಗ್ರಾಮಸ್ಥರ ಪ್ರತಿಭಟನೆ

ಭಾರತವನ್ನು ವ್ಯಸನಮುಕ್ತ ಭಾರತ ಮಾಡಬೇಕೆಂದು ಪ್ರಧಾನಿ ಮೋದಿಗೆ ಭಕ್ತರು ಪತ್ರ ಬರೆದಿದ್ದಾರೆ. ಇನ್ನು ವ್ಯಸನಮುಕ್ತ ದಿನಾಚರಣೆಗೆ ಹೆಚ್ಚಿನ ಅನುದಾನ ಬಗ್ಗೆ ಅಬಕಾರಿ ಸಚಿವ, ಭರವಸೆ ಮಾತನ್ನಾಡಿದ್ದಾರೆ. ನಾನು ಕೂಡ ವ್ಯಸನಮುಕ್ತ ಆಗಲಿ ಎನ್ನುವವನೆ, ಶ್ರೀಗಳ ಕಾರ್ಯ ಸ್ತುತ್ಯಾರ್ಹವಾಗಿದ್ದು, ಹೆಚ್ಚಿನ ಅನುದಾನ ನೀಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಜೊತೆ ಚರ್ಚೆ ಮಾಡಿ ಹೆಚ್ಚಿನ ಅನುದಾನ ಕೊಡಿಸುವ ಭರವಸೆ ನೀಡಿದರು.

ಶ್ರೀಗಳ ಮಹಾಂತ ಜೋಳಿಗೆ ಅಭಿಯಾನದ ಪ್ರತಿಫಲ ವ್ಯಸನಮುಕ್ತ ದಿನಾಚರಣೆಯಾಗಿ ಹೊರಹೊಮ್ಮಿದೆ. ಆ ಮೂಲಕ‌ ಸ್ವಾಮೀಜಿಯೊಬ್ಬರು ವಿಭಿನ್ನ ಅಭಿಯಾನದ ಮೂಲಕ ಸಮಾಜದಲ್ಲಿ ಸದಾ ಹಸಿರಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.