ಬಾಗಲಕೋಟೆ: ದಾವಣಗೆರೆಯಲ್ಲಿ ನಾಳೆ (ಆಗಸ್ಟ್ 03) ನಡೆಯಲಿರೋ ಸಿದ್ದಾರಾಮೋತ್ಸವಕ್ಕೆ ಭರ್ಜರಿ ಸಿದ್ಧತೆ ನಡೀತಿದೆ. ಸಿದ್ದು ಅಮೃತ ಮಹೋತ್ಸವಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಭೇಟಿ ನೀಡ್ತಿದ್ದಾರೆ. ಆದ್ರೆ ಸಿದ್ದರಾಮೋತ್ಸವಕ್ಕೆ ಆಗಮಿಸುತ್ತಿದ್ದ ಕ್ರೂಸರ್ ಪಲ್ಟಿಯಾಗಿ ಓರ್ವ ಮೃತಪಟ್ಟ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹೂಲಗೇರಿ ಗ್ರಾಮದ ಸಮೀಪ ನಡೆದಿದೆ. ಪ್ರಕಾಶ್ ಕಂಬಾರ(35) ಮೃತ ದುರ್ದೈವಿ. ಮೃತ ವ್ಯಕ್ತಿ ಬೀಳಗಿ ತಾಲೂಕಿನ ಚಿಕ್ಕ ಆಲಗುಂಡಿ ಗ್ರಾಮದವ ಎಂದು ತಿಳಿದು ಬಂದಿದೆ.
ಇನ್ನು ದುರ್ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿದ್ದು, 8 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡವರಲ್ಲಿ ಇಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು 9 ಜನರನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಕೆರೂರ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಇನ್ನು ಈ ಘಟನೆ ಸಂಬಂಧ ಮುಧೋಳ ಶಾಸಕ, ಜಲಸಂಪನ್ಮೂಲ ಸಚಿವ ಕಾರಜೋಳ ಸಂತಾಪ ಸೂಚಿಸಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ಚಾಲಕನಿಗೆ ಸಂತಾಪ ಸೂಚಿಸಿದ್ದಾರೆ. ದಾವಣಗೆರೆ ಸಿದ್ದರಾಮೋತ್ಸವಕ್ಕೆ ಮುಧೋಳದ ತಾಲೂಕಿನ ಹಿರೆಆಲಗುಂಡಿ ಗ್ರಾಮದ ಯುವಕರು ತೆರಳುತ್ತಿದ್ದರು. ಈ ವೇಳೆ ಹೂಲಗೇರಿ ಗ್ರಾಮದ ಬಳಿ ವಾಹನ ಅಪಘಾತಕ್ಕೀಡಾಗಿ ಚಾಲಕ ಪ್ರಕಾಶ ಮೃತಪಟ್ಟಿದ್ದಾನೆ. ಆತ ಮೃತಪಟ್ಟ ಸುದ್ದಿ ಕೇಳಿ ತೀವ್ರ ದುಃಖ, ನೋವಾಯಿತು. ಅವರ ಜೊತೆಯಲ್ಲಿ ವಾಹನದಲ್ಲಿದ್ದ ಮೂವರಿಗೆ ಗಂಭೀರ ಗಾಯವಾಗಿವೆ. ಇನ್ನುಳಿದವರಿಗೂ ಗಾಯವಾಗಿದೆ. ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ. ಮೃತ ಪ್ರಕಾಶ ಆತ್ಮಕ್ಕೆ ಚಿರಶಾಂತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಪ್ರಕಾಶ್ ಕುಟುಂಬದ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ -ಸಿದ್ದರಾಮಯ್ಯ
ನನ್ನ ಹುಟ್ಟುಹಬ್ಬದ ಸಮಾರಂಭಕ್ಕಾಗಿ ದಾವಣಗೆರೆಗೆ ಆಗಮಿಸುತ್ತಿದ್ದ ಮುದೋಳ ತಾಲೂಕಿನ ಪ್ರಕಾಶ್ ಬಡಿಗೇರ್ ಎಂಬವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಸುದ್ದಿ ತಿಳಿದು ಆಘಾತವಾಯಿತು. ಮೃತ ಪ್ರಕಾಶ್ ಅವರ ಕುಟುಂಬದ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ನನ್ನ ಹುಟ್ಟುಹಬ್ಬದ ಸಮಾರಂಭಕ್ಕಾಗಿ ದಾವಣಗೆರೆಗೆ ವಾಹನಗಳಲ್ಲಿ ಆಗಮಿಸುವವರು ಅನಗತ್ಯ ಧಾವಂತ ತೋರದೆ ಎಚ್ಚರಿಕೆಯಿಂದ ವಾಹನ ಚಲಾಯಿಸಿಕೊಂಡು ಬರಬೇಕೆಂದು ಕೈಮುಗಿದು ಮನವಿ ಮಾಡಿಕೊಳ್ಳುತ್ತಿದ್ದೇನೆ. ನಿಮ್ಮ ಜೀವ ನಮಗೆ ಮಾತ್ರವಲ್ಲ ನಿಮ್ಮನ್ನು ನಂಬಿರುವ ಕುಟುಂಬಕ್ಕೂ ಅಷ್ಟೇ ಅಮೂಲ್ಯ ಎಂಬ ಅರಿವಿರಲಿ ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ನನ್ನ ಹುಟ್ಟುಹಬ್ಬದ ಸಮಾರಂಭಕ್ಕಾಗಿ ದಾವಣಗೆರೆಗೆ ವಾಹನಗಳಲ್ಲಿ ಆಗಮಿಸುವವರು ಅನಗತ್ಯ ಧಾವಂತ ತೋರದೆ ಎಚ್ಚರಿಕೆಯಿಂದ ವಾಹನ ಚಲಾಯಿಸಿಕೊಂಡು ಬರಬೇಕೆಂದು ಕೈಮುಗಿದು ಮನವಿ ಮಾಡಿಕೊಳ್ಳುತ್ತಿದ್ದೇನೆ.
?ನಿಮ್ಮ ಜೀವ ನಮಗೆ ಮಾತ್ರವಲ್ಲ ನಿಮ್ಮನ್ನು ನಂಬಿರುವ ಕುಟುಂಬಕ್ಕೂ ಅಷ್ಟೇ ಅಮೂಲ್ಯ ಎಂಬ ಅರಿವಿರಲಿ.
2/2— Siddaramaiah (@siddaramaiah) August 2, 2022
Published On - 8:19 pm, Tue, 2 August 22