Sri Ram Sene: ಕರ್ನಾಟಕದಲ್ಲಿ ರಾಕ್ಷಸರನ್ನು ಬೆಳೆಸುತ್ತಿದೆ ಬಿಜೆಪಿ: ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 19, 2022 | 7:20 PM

Pramod Mutalik: ಸರ್ಕಾರದ ನಡೆ ಕಂಡು ನಮಗೆ ದುಃಖ, ನೋವು, ಸಿಟ್ಟು ಬರುತ್ತಿದೆ. ಎಂಐಎಂ ಮುಸ್ಲಿಮರ ಮತ ವಿಭಜಿಸುತ್ತದೆ ಎಂದು ಬೆಳೆಸುತ್ತಿದ್ದಾರೆ ಎಂದು ಪ್ರಮೋದ್ ಮುತಾಲಿಕ್ ದೂರಿದರು.

Sri Ram Sene: ಕರ್ನಾಟಕದಲ್ಲಿ ರಾಕ್ಷಸರನ್ನು ಬೆಳೆಸುತ್ತಿದೆ ಬಿಜೆಪಿ: ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್
ಪ್ರಮೋದ್​ ಮುತಾಲಿಕ್
Follow us on

ಬಾಗಲಕೋಟೆ: ಕರ್ನಾಟಕದಲ್ಲಿ ಪಿಎಫ್​ಐ, ಸಿಎಫ್​ಐ, ಎಂಐಎಂ ರಾಕ್ಷಸರನ್ನು ಬಿಜೆಪಿ ಸರ್ಕಾರವೇ ಬೆಳೆಸುತ್ತಿದೆ. ಇಂಥ ಸಂಘಟನೆಗಳನ್ನು ನಿಷೇಧಿಸದಿರುವುದು ಬೇಸರದ ಸಂಗತಿ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಶ್ರೀರಾಮಸೇನೆಯ ಮುಖಂಡ ಪ್ರಮೋದ್ ಮುತಾಲಿಕ್​ ಹರಿಹಾಯ್ದರು. ಸರ್ಕಾರದ ನಡೆ ಕಂಡು ನಮಗೆ ದುಃಖ, ನೋವು, ಸಿಟ್ಟು ಬರುತ್ತಿದೆ. ಎಂಐಎಂ ಮುಸ್ಲಿಮರ ಮತ ವಿಭಜಿಸುತ್ತದೆ ಎಂದು ಬೆಳೆಸುತ್ತಿದ್ದಾರೆ. ಬಿಜೆಪಿಯವರೇ ಪಿಎಫ್​ಐ, ಸಿಎಫ್​ಐ, ಎಂಐಎಂ ಸಾಕುತ್ತಿದ್ದಾರೆ. ಆದರೆ ಕಾಂಗ್ರೆಸ್, ಕಮ್ಯುನಿಸ್ಟ್​ ಪಕ್ಷದವರು ಬ್ಯಾನ್ ಮಾಡಿ ಅನ್ನುತ್ತಿದ್ದಾರೆ ಎಂದು ವಿಷಾದಿಸಿದರು. ಇನ್ನಾದರೂ ಬಿಜೆಪಿ ನಾಯಕರು ಅರ್ಥ ಮಾಡಿಕೊಳ್ಳಬೇಕು. ಇನ್ನಾದರೂ ತಮ್ಮ ವೋಟ್​ ಬ್ಯಾಂಕ್​ಗಾಗಿ ಉಗ್ರರನ್ನು ಬೆಳೆಸುವುದನ್ನು ನಿಲ್ಲಿಸಬೇಕು. ಈ ವಿಷಯದ ಬಗ್ಗೆ ಮುಂದಿನ ದಿನಗಳಲ್ಲಿ ಹಿಂದೂಪರ ಸಂಘಟನೆಗಳು ಸೇರಿ ಹೋರಾಟ ರೂಪಿಸಲಿವೆ. ಮುಸ್ಲಿಂ ಸಂಘಟನೆಗಳ ವಿರುದ್ಧ ನಾವು ಒಗ್ಗಟ್ಟಾಗಿ ಹೋರಾಡುತ್ತೇವೆ ಎಂದು ಹೇಳಿದರು.

ಪಿಎಫ್​ಐ ಮತ್ತು ಸಿಎಫ್​ಐ ಸಂಘಟನೆಗಳು ದೇಶದ್ರೋಹಿ ಚಟುವಟಿಕೆಯಲ್ಲಿ ತೊಡಗಿವೆ. ಪಿಎಫ್​ಐ ನಿಷೇಧಿಸಬೇಕು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಕೇಂದ್ರಕ್ಕೆ​ ಪತ್ರ ಬರೆದು ಒತ್ತಾಯಿಸಿದ್ದರು. ಕಾಂಗ್ರೆಸ್​ನವರೂ ಮುಖ್ಯಮಂತ್ರಿಯನ್ನು ಭೇಟಿಯಾಗಿ ನಿಷೇಧಕ್ಕೆ ಆಗ್ರಹಿಸಿದ್ದರು. ಕೊಲೆ, ಮತ್ತಿತರ ಪ್ರಕರಣಗಳಲ್ಲಿ ಈ ಸಂಘಟನೆಗಳ ಮೇಲೆ 9 ಆರೋಪಪಟ್ಟಿಗಳು ಸಲ್ಲಿಕೆಯಾಗಿವೆ. ಈ ಸಂಘಟನೆಗಳನ್ನು ನಿಷೇಧಿಸದಿದ್ದರೆ ಅವು ನಿಮ್ನನ್ನು ನುಂಗಿಹಾಕುತ್ತವೆ ಎಂದು ಎಚ್ಚರಿಸಿದರು. ಪಿಎಫ್ಐ ದೊಡ್ಡ ರಾಕ್ಷಸಿ ರೂಪವಾಗಿ ದೇಶಕ್ಕೆ ಕಂಟಕವಾಗುತ್ತದೆ ಎಂದರು.

ಕುಂಕುಮ, ಬಳೆ, ವಿಭೂತಿ ಬಳಕೆಯು ವೈಜ್ಞಾನಿಕವಾಗಿದೆ. ಅವು ಕೇವಲ ಅಲಂಕಾರಿಕ ವಸ್ತುಗಳಲ್ಲ. ಇವಕ್ಕೆ ಸಾವಿರಾರು ವರ್ಷಗಳ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯಿದೆ. ಈ ವಿಷಯಗಳು ಸಮವಸ್ತ್ರದ ಭಾಗಗಳಲ್ಲ. ಅವುಗಳ ಬಗ್ಗೆ ಮಾತನಾಡಿದರೆ ಉಗ್ರವಾಗಿ ಪ್ರತಿಭಟಿಸಬೇಕಾಗುತ್ತದೆ. ಸಮವಸ್ತ್ರ ಅಂದರೆ ಬರಿ ಬಟ್ಟೆ, ಹೀಗಾಗಿ ಕೇವಲ ಬಟ್ಟೆಯ ಬಗ್ಗೆ ಮಾತ್ರ ಮಾತಾಡಬೇಕು. ಗಣಪತಿ ಮತ್ತು ಸರಸ್ವತಿ ಪೂಜೆ ಬಗ್ಗೆಯೂ ಯಾರೂ ಮಾತನಾಡಬಾರದು. ಹಿಜಾಬ್​ ಹಿಂದೆ ಇಸ್ಲಾಮೀಕರಣದ ಪ್ರಚೋದನೆಯಿದೆ. ಹಿಜಾಬ್ ಅಷ್ಟೇ ಅಲ್ಲ, ನೇರವಾಗಿ ಬುರ್ಖಾ ಹಾಕಿಕೊಂಡು ಬರ್ತಾರೆ. ಮುಂದೆ ಶಾಲಾ ಕಾಲೇಜಿನಲ್ಲಿ ನಮಾಜ್​ಗೆ ಅವಕಾಶ ಬೇಕು ಅಂತಾರೆ. ಒಂದೊಂದಾಗಿ ಮುನ್ನುಗ್ಗುವ ಪ್ರವೃತ್ತಿಯ ಬಗ್ಗೆ ಇಸ್ಲಾಂನ ಇತಿಹಾಸವೇ ಹೇಳುತ್ತದೆ ಎಂದರು.

ಹಿಜಾಬ್ ವಿವಾದದಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವುದು ಎದ್ದು ಕಾಣುತ್ತಿದೆ. ಇಷ್ಟು ದಿನ ಕೊರೊನಾದಿಂದಾಗಿ ಎರಡು ವರ್ಷ ಶಿಕ್ಷಣಕ್ಕೆ ತೊಂದರೆ ಆಗಿತ್ತು. ಈಗ ಸುರಳಿತವಾಗಿ ಹೊರಟಿತ್ತು. ಈ ಇಸ್ಲಾಮಿ ಶಕ್ತಿಗಳು ವಿದ್ಯಾರ್ಜನೆಗೆ ತೊಂದರೆ ಮಾಡಿದರು. ಇಂಥ ಬೆಳವಣಿಗೆ ಸರಿಯಲ್ಲ. ಮುಸ್ಲಿಂ ವಿದ್ಯಾರ್ಥಿನಿಯರು ನಿಮ್ಮ ಹಿಂದೆ ಇರುವ ಇಸ್ಲಾಮಿಕ್ ಶಕ್ತಿಗಳಿಗೆ ಬೆಲೆ ಕೊಡಬಾರದು. ನಿಮಗೆ ಜಾಬ್ ಬೇಕಾದ್ರೆ ಹಿಜಾಬ್ ಬಿಡಿ. ನಿಮಗೆ ಧರ್ಮ ಅಲ್ಲ, ಜೀವನ, ಉಪಜೀವನ ಮುಖ್ಯ. ಇಲ್ಲಿ ಉನ್ನತ ಶಿಕ್ಷಣ ಪಡೆದು ಮಹಿಳೆಯರು ಫೈಲಟ್, ಐಎಎಸ್, ಐಪಿಎಸ್ ಪಡೆದು ಮೇಲೆ ಬರ್ತಿದ್ದಾರೆ. ನಿಮ್ಮನ್ನು ಹೀಗೆ ಹಿಂದಕ್ಕೆ ಎಳೆಯುವ ಎಸ್​ಡಿಪಿಐ, ಸಿಎಫ್​ಐ, ಪಿಎಫ್ಐಗೆ ಬಲಿಯಾಗಬೇಡಿ ಎಂದು ಕಿವಿಮಾತು ಹೇಳಿದರು.

ಇದನ್ನೂ ಓದಿ: ಬಟ್ಟೆ ಹೊಲಿಸಲು ಬರುವವರ ಜೊತೆ ಅಸಭ್ಯ ವರ್ತನೆ, ಶ್ರೀರಾಮಸೇನೆ ಕಾರ್ಯಕರ್ತರಿಂದ ಥಳಿತ

ಇದನ್ನೂ ಓದಿ: ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆಗಳು ತಪ್ಪುತ್ತಿಲ್ಲ; ಮತಾಂತರ, ಗೋಹತ್ಯೆ ವಿರುದ್ಧ ಸೂಕ್ತ ಕ್ರಮವಾಗಬೇಕು: ಪ್ರಮೋದ್ ಮುತಾಲಿಕ್