ಸಿದ್ದರಾಮಯ್ಯ ಸಿಎಂ ಆಗುತ್ತಿದ್ದಂತೆ ಚಿಗುರೊಡೆದ ಮೆಡಿಕಲ್ ‌ಕಾಲೇಜು ಕನಸು; ಮೊದಲ ಸಂಪುಟದಲ್ಲೇ ಹಣ ಮೀಸಲಿಡಲು ಆಗ್ರಹ

|

Updated on: May 20, 2023 | 9:36 AM

ಆ ಜಿಲ್ಲೆಗೆ ಹಿಂದೆ ಸಿದ್ದರಾಮಯ್ಯ ಸಿಎಮ್ ಆದಾಗ ಮೆಡಿಕಲ್ ಕಾಲೇಜು ಮಂಜೂರಾಗಿತ್ತು.ಆದರೆ ನಂತರ. ಬಂದ ಸಮ್ಮಿಶ್ರ ಸರಕಾರ ಬಿಜೆಪಿ ಸರಕಾರ ಮೆಡಿಕಲ್‌ ಕಾಲೇಜು ನಿರ್ಮಾಣದ ಸದ್ದೇ ಎತ್ತಲಿಲ್ಲ.ಇಚ್ಚಾಶಕ್ತಿ ಕೊರತೆ ಅದೊಂದು ಕ್ಷೇತ್ರದ ಶಾಸಕನ ಲಾಭಿ‌‌ ಮೆಡಿಕಲ್ ಕಾಲೇಜಿಗೆ ಗ್ರಹಣ ಹಿಡಿಸಿತ್ತು.ಆದರೆ ಇದೀಗ ಮತ್ತೆ ಸಿದ್ದರಾಮಯ್ಯ ಸಿಎಮ್ ಆಗುತ್ತಿದ್ದು,ಮೆಡಿಕಲ್ ಕಾಲೇಜು ಹೋರಾಟಗಾರರಿಗೆ ಭರವಸೆಯ ಚಿಗುರೊಡೆದಿದೆ.

ಸಿದ್ದರಾಮಯ್ಯ ಸಿಎಂ ಆಗುತ್ತಿದ್ದಂತೆ ಚಿಗುರೊಡೆದ ಮೆಡಿಕಲ್ ‌ಕಾಲೇಜು ಕನಸು; ಮೊದಲ ಸಂಪುಟದಲ್ಲೇ ಹಣ ಮೀಸಲಿಡಲು ಆಗ್ರಹ
ಸಿದ್ದರಾಮಯ್ಯ
Follow us on

ಬಾಗಲಕೋಟೆ: ಮೆಡಿಕಲ್‌ ಕಾಲೇಜಿಗಾಗಿ ಶೂ ಪಾಲಿಶ್, ಭಿಕ್ಷಾಟನೆ, ಅರೆಬೆತ್ತಲೆ ಹೋರಾಟ. ಈ ಹೋರಾಟಗಳು‌ ನಿರಂತರವಾಗಿ ನಡೆದಿದ್ದು ಬಾಗಲಕೋಟೆ(Bagalkote) ಜಿಲ್ಲೆಯಲ್ಲಿ. ಹೌದು ನಗರದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣ ಮಾಡಬೇಕೆಂದು ಬಹಳ ವರ್ಷಗಳಿಂದ ಬೇಡಿಕೆಯಿತ್ತು. ಆ ಬೇಡಿಕೆಗೆ ಸಿದ್ದರಾಮಯ್ಯ(Siddaramaiah) 2013 ರಲ್ಲಿ ಸಿಎಂ ಆದಾಗ ಫಲ ಸಿಕ್ಕು 2014-15 ರ ವೇಳೆ, ಆಗಿನ ಬಾಗಲಕೋಟೆ ಶಾಸಕ ಹೆಚ್ ವೈ ಮೇಟಿ(HY Meti) ಪ್ರಯತ್ನದ ಮೇರೆಗೆ ಸಿದ್ದರಾಮಯ್ಯ ಮಂಜೂರು ಮಾಡಿದರು. ಆದರೆ, ನಂತರ ಬಂದ ಸಮ್ಮಿಶ್ರ ಸರಕಾರ ಬಿಜೆಪಿ ಸರಕಾರದಲ್ಲಿ ಇದರ ಬಗ್ಗೆ ಮಾತಾಡಿಲ್ಲ. ಬಾಗಲಕೋಟೆ ಬಿಜೆಪಿ ಶಾಸಕ ವೀರಣ್ಣ ಚರಂತಿಮಠ ತಾವು ಕಾರ್ಯಾಧ್ಯಕ್ಷರಾಗಿರುವ ಬಿವಿವಿ ಸಂಘ ಮೆಡಿಕಲ್ ಕಾಲೇಜಿಗೆ ಹೊಡೆತ ಬೀಳುತ್ತೆಂದು, ಇಚ್ಚಾಶಕ್ತಿ‌ ತೋರಲೇ ಇಲ್ಲ. ಇದರಿಂದ ಕರವೇ ಕಾರ್ಯಕರ್ತರು ಜಿಲ್ಲಾದ್ಯಂತ ಬೂಟ್ ಚಪ್ಪಲಿ ಪಾಲಿಶ್ ಮಾಡಿ, ಭಿಕ್ಷೆ ಬೇಡಿ‌ ವಿನೂತನ ಪ್ರತಿಭಟನೆ ಮಾಡುವ ಮೂಲಕ ಹಣ ಸಂಗ್ರಹ ಕಾರ್ಯ ಶುರು ಮಾಡಿದ್ದರು.

ಇದೀಗ ಮತ್ತೆ ಅದೇ ಕಾಂಗ್ರೆಸ್ ಸರಕಾರ, ಜೊತೆಗೆ ಹೆಚ್ ವೈ ಮೇಟಿ ಬಾಗಲಕೋಟೆ ಶಾಸಕರಾಗಿದ್ದಾರೆ. ಘೋಷಣೆ ಮಾಡಿದ ಸಿದ್ದರಾಮಯ್ಯ ಸಿಎಂ ಆಗುತ್ತಿದ್ದಾರೆ. ಇದರಿಂದ ಮೆಡಿಕಲ್ ಕಾಲೇಜು ಹೋರಾಟಗಾರರಿಗೆ ಆಸೆ ಚಿಗುರೊಡೆದಿದೆ. ಅದರಲ್ಲೂ ಇದೆ ಚುನಾವಣೆ ವೇಳೆ ಪ್ರಚಾರಕ್ಕೆ ಬಾಗಲಕೋಟೆಗೆ ಬಂದಿದ್ದ ಸಿದ್ದರಾಮಯ್ಯ, ನಾವು ಮೆಡಿಕಲ್ ಕಾಲೇಜು ಆರಂಭ ಮಾಡುತ್ತೇವೆ, ನಾನೇ ಅದರ ಉದ್ಘಾಟನೆ ಮಾಡೋದಾಗಿ ಹೇಳಿದ್ದಾರೆ. ಇದರಿಂದ ಕಾಂಗ್ರೆಸ್ ಸರಕಾರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಆಗುವ ಕನಸಿಗೆ ರೆಕ್ಕೆ ಬಂದಿದೆ. 2014-15ರಲ್ಲಿ ಬಾಗಲಕೋಟೆಗೆ ಮೆಡಿಕಲ್ ಕಾಲೇಜು ಘೋಷಣೆಯಾಗಿ ಜಾಗ ಕೂಡ ಗುರುತು ಮಾಡಲಾಗಿದೆ. ಬಾಗಲಕೋಟೆಯ ನವನಗರದಲ್ಲಿ ಜಾಗ ಗುರುತಿಸಲಾಗಿದ್ದು, ಆದರೆ ನಿರ್ಮಾಣ ಕಾರ್ಯ ಮಾತ್ರ ನಡೆಯಲೇ ಇಲ್ಲ. ಇದರಿಂದ ಕರವೇ ಕಾರ್ಯಕರ್ತರು ಮೆಡಿಕಲ್ ಕಾಲೇಜಿಗಾಗಿ ಶೂ, ಚಪ್ಪಲಿ ಪಾಲಿಶ್,ಭಿಕ್ಷಾಟನೆ ಮಾಡುತ್ತಾ ನಿರಂತರ ಹೋರಾಟ ‌ಮಾಡುತ್ತಲೇ ಇದ್ದರು. ಆದರೆ, ಬಿಜೆಪಿ ಸರಕಾರ ಮಾತ್ರ ತಿರುಗಿ ನೋಡಲಿಲ್ಲ. ಈಗ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಿದ್ದು, ಹೆಚ್ ವೈ ಮೇಟಿ ಪುನಃ ಬಾಗಲಕೋಟೆ ಶಾಸಕರಾಗಿದ್ದಾರೆ. ಇದರಿಂದ ಕರವೇ ಕಾರ್ಯಕರ್ತರಿಗೆ ಮತ್ತೆ ಉತ್ಸಾಹ ಮೂಡಿದೆ.

ಇದನ್ನೂ ಓದಿ:ಕಾರವಾರ: ಹಣ ನೀಡಿದ್ರೆ ಪರೀಕ್ಷೆಯಲ್ಲಿ ಪಾಸ್, ಇಲ್ಲಾಂದ್ರೆ ಫೇಲ್​​; ಬೇಸತ್ತ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಂದ ಪ್ರತಿಭಟನೆ

ಸಿದ್ದರಾಮಯ್ಯ ಅಂದು ತಾವೇ ಘೋಷಣೆ ಮಾಡಿದ ಕಾಲೇಜಿಗೆ ಮೊದಲ ಸಂಪುಟದಲ್ಲೇ ನಿರ್ಣಯ ಕೈಗೊಳ್ಳಬೇಕು. ಮೆಡಿಕಲ್ ಕಾಲೇಜಿಗಾಗಿ ಹಣ ಮೀಸಲಿಡಬೇಕು. ಆದಷ್ಟು ಬೇಗ ಮೆಡಿಕಲ್ ಕಾಲೇಜು ನಿರ್ಮಾಣ ಕಾರ್ಯ ಕೈಗೊಳ್ಳಬೇಕು, ಇಲ್ಲದಿದ್ದರೆ ಮತ್ತೆ ನಮ್ಮ ಹೋರಾಟ ಶುರುವಾಗಲಿದೆ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಸಿದ್ದರಾಮಯ್ಯ ತಾವೇ ಘೋಷಣೆ ಮಾಡಿದ ಹಿನ್ನೆಲೆ, ಬಾಗಲಕೋಟೆ ಸರಕಾರಿ ಮೆಡಿಕಲ್ ಕಾಲೇಜು ಬೇಗ ತಲೆಯೆತ್ತಬಹುದು ಎಂಬ ನಿರೀಕ್ಷೆ ಬಾಗಲಕೋಟೆ ಜನರಲ್ಲಿದೆ. ಇದಕ್ಕೆ ಸಿದ್ದರಾಮಯ್ಯ ಎಷ್ಟು ಬೇಗ ಕಾರ್ಯೋನ್ಮುಖರಾಗುತ್ತಾರೊ ನೋಡಬೇಕಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ