ಕಾರವಾರ: ಹಣ ನೀಡಿದ್ರೆ ಪರೀಕ್ಷೆಯಲ್ಲಿ ಪಾಸ್, ಇಲ್ಲಾಂದ್ರೆ ಫೇಲ್; ಬೇಸತ್ತ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಂದ ಪ್ರತಿಭಟನೆ
ಜಿಲ್ಲೆಯಲ್ಲಿರುವ ಏಕೈಕ ಸರ್ಕಾರಿ ಮೆಡಿಕಲ್ ಕಾಲೇಜು ಎಂಬ ಹೆಗ್ಗಳಿಕೆಯೊಂದಿಗೆ ಕಳೆದ 6 ವರ್ಷಗಳಿಂದ ವೈದ್ಯಕೀಯ ಶಿಕ್ಷಣ ನೀಡುತ್ತದೆ. ಆದರೆ ಇಲ್ಲಿನ ಕೆಲ ಅವ್ಯವಸ್ಥೆಗಳು ಇಂದಿಗೂ ಮುಂದುವರಿದಿದ್ದು ಇದೀಗ ಕ್ರಿಮ್ಸ್ ಆಡಳಿತ ಅವ್ಯವಸ್ಥೆ ವಿರುದ್ಧ ಹಾಗೂ ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿ ವಿದ್ಯಾರ್ಥಿಗಳು ಬೀದಿಗೆ ಇಳಿದು ಪ್ರತಿಭಟನೆ ನಡೆಸಿದ್ದಾರೆ.
ಉತ್ತರ ಕನ್ನಡ: ಜಿಲ್ಲೆಯಲ್ಲಿರುವ ಏಕೈಕ ಸರ್ಕಾರಿ ಮೆಡಿಕಲ್ ಕಾಲೇಜು ಎಂಬ ಹೆಗ್ಗಳಿಕೆಯೊಂದಿಗೆ ಕಳೆದ ಆರು ವರ್ಷಗಳಿಂದ ವೈದ್ಯಕೀಯ ಶಿಕ್ಷಣ ನೀಡಲಾಗುತ್ತಿದೆ. ಈಗಾಗಲೇ ಒಂದು ಬ್ಯಾಚ್ ಹೊರ ಬಿದ್ದಿದ್ದು ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ಕ್ರಿಮ್ಸ್ನಲ್ಲಿ ಅವ್ಯವಸ್ಥೆ ಹಾಗೂ ಭ್ರಷ್ಟಾಚಾರ ತಾಂಡವ ಆಡುತ್ತಿರುವ ಬಗ್ಗೆ ವಿದ್ಯಾರ್ಥಿಗಳು ದಾಖಲೆ ಸಮೇತ ಗಂಭೀರ ಆರೋಪ ಮಾಡಿದ್ದಾರೆ. ಕ್ರಿಮ್ಸ್ನಿಂದ ಹೊರ ಬಂದು ಮುಖ್ಯದ್ವಾರದ ಬಳಿ ಜಮಾವಣೆಗೊಂಡ 50 ಕ್ಕೂ ಹೆಚ್ಚು ವೈದ್ಯ ವಿದ್ಯಾರ್ಥಿಗಳು ಆಕ್ರೋಶ ಹೊರ ಹಾಕಿದ್ದಾರೆ.
ವಿದ್ಯಾರ್ಥಿಗಳನ್ನು ತೆರ್ಗಡೆ ಮಾಡಲು ಪೀಡಿಯಾಟ್ರಿಕ್ ವಿಭಾಗದ ಸಹಾಯಕ ಪ್ರಾಧ್ಯಾಪಕರು ಪರೀಕ್ಷೆ ಪಾಸ್ ಮಾಡುವುದಕ್ಕೆ ಹಣ ಕೇಳಿದ್ದರು. ಅದರಂತೆ ಓರ್ವ ವಿದ್ಯಾರ್ಥಿ 34 ಸಾವಿರ ರೂ. ಜಮಾ ಮಾಡಿರುವ ಬಗ್ಗೆ ದಾಖಲೆ ಇದೆ. ಅಲ್ಲದೆ ಈ ಬಗ್ಗೆ ಪ್ರಶ್ನೆ ಮಾಡಿದ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ ಪ್ರಾಯೋಗಿಕ ಪರೀಕ್ಷೆಗಳಲ್ಲಿ ಫೇಲ್ ಮಾಡಲಾಗುತ್ತಿದೆ. ಕ್ರಿಮ್ಸ್ ಹಾಸ್ಟೆಲ್‌ಗಳಲ್ಲಿ ಊಟದ ಟೆಂಡರ್ ಬದಲಿಸದೇ ಕಳಪೆ ಮಟ್ಟದ ಊಟ ನೀಡಲಾಗುತ್ತಿದೆ. ರಾತ್ರಿ ತುರ್ತು ಚಿಕಿತ್ಸೆಗೆ ತೆರಳಲು ಅವಕಾಶ ನೀಡುತ್ತಿಲ್ಲ. ಪುಸ್ತಕ ಖರೀದಿಗೆ ಆನ್ಲೈನ್ ಟೆಂಡರ್ ಕರೆಯುವ ನಿಯಮವಿದ್ದರೂ, ಕಾನೂನು ಬಾಹೀರವಾಗಿ 40 ಲಕ್ಷ ರೂ. ವೆಚ್ಚದ ಪುಸ್ತಕ ಖರೀದಿ ಮಾಡಲಾಗಿದೆ. ಈ ಎಲ್ಲಾ ಅವ್ಯವಹಾರಗಳ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಅರ್ಜಿ ಹಾಕಿದರೂ ಈವರೆಗೆ ಯಾವ ಅರ್ಜಿಗೂ ಸ್ಪಂದಿಸಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
ಇನ್ನು ಕ್ರಿಮ್ಸ್ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಬಗ್ಗೆ ಮಾನವ ಹಕ್ಕು ಆಯೋಗ, ಜಿಲ್ಲಾಧಿಕಾರಿ, ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು ಕ್ರಿಮ್ಸ್ಗೆ ಭೇಟಿ ನೀಡಿದ ವೇಳೆ ಕೂಡ ವಿದ್ಯಾರ್ಥಿಗಳೆಲ್ಲರು ಸ್ವ ಇಚ್ಚೆಯಿಂದ ಸಹಿ ಮಾಡಿ ದೂರಿನ ಪತ್ರವನ್ನು ನೀಡಲಾಗಿದೆ. ಆದರೆ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಮೆಡಿಕಲ್ ವಿದ್ಯಾರ್ಥಿಗಳು ಹಾಸ್ಟೆಲ್ ಹಾಗೂ ಕಾಲೇಜಿನಲ್ಲಿ ಇರುವ ಅವ್ಯವಸ್ಥೆಯನ್ನು ಸರಿಪಡಿಸಿ, ಭ್ರಷ್ಟಾಚಾರ ಎಸಗಿದವರ ವಿರುದ್ಧ ಸೂಕ್ತ ತನಿಕೆಯಾಗುವಂತೆ ಆಗ್ರಹಿಸಿದರು. ಮೆಡಿಕಲ್ ಕಾಲೇಜು ಎಂದು ಹೇಳುವುದಕ್ಕೆ ಮಾತ್ರ ಇದೆ. ಆದರೆ ಇಲ್ಲಿ ತುರ್ತು ಸಂದರ್ಭದಲ್ಲಿ ಸರಿಯಾದ ಚಿಕಿತ್ಸೆ ಸಿಗದೇ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಇಂತಹದರಲ್ಲಿ ವಿದ್ಯಾರ್ಥಿಗಳಿಂದಲೂ ಹಣ ವಸೂಲಿ ಮಾಡಲಾಗುತ್ತಿದೆ, ಇದು ಹೀಗೆ ಮುಂದುವರಿದರೆ ವಿದ್ಯಾರ್ಥಿಗಳೊಂದಿಗೆ ಕೈ ಜೋಡಿಸಿ ಆರೋಗ್ಯ ಸಚಿವರ ವಿರುದ್ಧ ಹೋರಾಟ ಮಾಡುವುದು ಅನಿವಾರ್ಯ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ. ಒಟ್ಟಾರೆ ಉತ್ತಮ ವೈದ್ಯರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕಿರುವ ಕ್ರಿಮ್ಸ್ನಲ್ಲಿಯೂ ಭ್ರಷ್ಟಾಚಾರ ಅವ್ಯವಸ್ಥೆ ಆರೋಪ ಕೇಳಿಬಂದಿದೆ. ಈ ಬಗ್ಗೆ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ಸತ್ಯಾಸತ್ಯತೆ ತಿಳಿದು ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಬೇಕಿದೆ.
ವರದಿ: ವಿನಾಯಕ ಬಡಿಗೇರ ಟಿವಿ 9 ಕಾರವಾರ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ