ಅಂತರ್ಜಲ ಹೆಚ್ಚಳದಿಂದ ಕೆಂದೂರು ಗ್ರಾಮದ ರೈತರು ಕಂಗಾಲು

| Updated By: Rakesh Nayak Manchi

Updated on: Nov 08, 2022 | 8:39 AM

ಮಳೆ ಹೆಚ್ಚಳದಿಂದ ನದಿ ಹಳ್ಳಕೊಳ್ಳಗಳು ಕೆರೆ ಕಟ್ಟೆಗಳು ತುಂಬಿ ತುಳುಕುತ್ತಿವೆ‌. ಅಂತರ್ಜಲ ಮಟ್ಟ ಕೂಡ ಹೆಚ್ಚಾಗಿದೆ. ಇದು ರೈತರಿಗೆ ಖುಷಿ ತಂದರೂ ಕೆಂದೂರು ಗ್ರಾಮದ ರೈತರಿಗೆ ಮಾತ್ರ ಸಂಕಷ್ಟ ತಂದೊಡ್ಡಿದೆ. ಹೆಚ್ಚಾದ ಅಂತರ್ಲದಿಂದ ಬೋರ್​ವೆಲ್​ಗಳಿಂದ ನೀರು ಹೊರಚಿಮ್ಮಿ ಜಮೀನುಗಳು ಜಲಾವೃತಗೊಂಡಿವೆ.

ಅಂತರ್ಜಲ ಹೆಚ್ಚಳದಿಂದ ಕೆಂದೂರು ಗ್ರಾಮದ ರೈತರು ಕಂಗಾಲು
ಅಂತರ್ಜಲ ಹೆಚ್ಚಳದಿಂದ ಬೋರ್ವೆಲ್​ಗಳಿಂದ ಹೊರ ಚಿಮ್ಮುವ ನೀರು
Follow us on

ಬಾದಾಮಿ: ಅತಿಯಾದರೆ ಅಮೃತ ಕೂಡ ವಿಷ ಎಂಬ ಸ್ಥಿತಿ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಕೆಂದೂರು ಗ್ರಾಮದ ರೈತರಿಗೆ ಬಂದೊದಗಿದೆ. ಅತಿವೃಷ್ಟಿಯಿಂದ ಈ ಬಾರಿ ಕೆರೆ ಕಟ್ಟೆಗಳು ತುಂಬಿದ್ದು, ಗ್ರಾಮದ ಕೆರೆಯೂ ಕೂಡ ತುಂಬಿದೆ. ಇದು ಗ್ರಾಮಸ್ಥರಲ್ಲಿ ಹರ್ಷ ತಂದಿದೆ. ಕೆರೆ ತುಂಬಿದ ಹಿನ್ನೆಲೆ ಗ್ರಾಮದಲ್ಲಿ ಬತ್ತಿದ್ದ ನೂರಾರು ಕೊಳವೆಬಾವಿಗಳು ಎಲ್ಲವೂ ಭರ್ತಿಗೊಂಡಿವೆ. ಆದರೆ ಕೆರೆ ಪಕ್ಕದಲ್ಲಿದ್ದ ರೈತರಿಗೆ‌ ಈಗ ತುಂಬಿರುವ ಕೆರೆಯೇ ಕಂಟಕವಾಗಿದೆ. ಯಾಕೆಂದರೆ ಅಂತರ್ಜಲ ತೀರಾ ಹೆಚ್ಚಾದ ಪರಿಣಾಮ ಕೊಳವೆ ಬಾವಿಗಳಿಂದ ಬಿಟ್ಟುಬಿಡದೆ ನೀರು ಹೊರ ಚಿಮ್ಮುತ್ತಿದೆ. ಬೋರ್ ವೆಲ್ ಶುರು ಮಾಡದೇ ಇದ್ದರೂ ನೀರು ಹೊರ ಚಿಮ್ಮುತ್ತಿದೆ. ಕಳೆದ 20 ದಿನಗಳಿಂದ ಇದೇ ರೀತಿ ನೀರು ಚಿಮ್ಮುತ್ತಿದ್ದು, ಹೊಲ ಗದ್ದೆಗಳು ಕೆರೆಯಂತಾಗಿವೆ. ಇದರಿಂದ ಬೆಳೆಗಳಿಗೆ ಹಾನಿಯಾಗಿದ್ದು, ರೈತರು ಕಂಗಾಲಾಗಿದ್ದಾರೆ.

ಒಟ್ಟು 160 ಎಕರೆ ವಿಸ್ತೀರ್ಣ ಹೊಂದಿರುವ ಕೆಂದೂರು ಕೆರೆ ಕಳೆದ 12 ವರ್ಷದಿಂದ ತುಂಬಿರಲಿಲ್ಲ. ಕೆರೆ ಹೂಳೆತ್ತಿ ಅಭಿವೃದ್ಧಿ ಪಡಿಸಿ ನೀರು ತುಂಬಿಸಲು ಐದು ಕೋಟಿ ಖರ್ಚು ಮಾಡಲಾಗಿದೆ. ಜೊತೆಗೆ ನಿರಂತರವಾಗಿ ಸುರಿದ ಮಳೆಯಿಂದಲೂ ಕೂಡ ಕೆರೆಗೆ ಹೆಚ್ಚು ನೀರು ಬಂದಿದ್ದು, ಇಡೀ ಕೆರೆ ಈಗ ತುಂಬಿ ತುಳುಕುತ್ತಿದೆ. ಇದರಿಂದಾಗಿ ಅಂತರ್ಜಲ ಕೂಡ ಹೆಚ್ಚಾಗಿದೆ. ಆದರೆ ಇದೇ ಅಂತರ್ಜಲ ಕೆರೆ ಪಕ್ಕದ ರೈತರಿಗೆ ಮುಳುವಾಗಿದೆ. ನಿರಂತರವಾಗಿ ಬೋರ್ ವೆಲ್‌ನಲ್ಲಿ ನೀರು ಚಿಮ್ಮುತ್ತಿರುವುದರಿಂದ ಹೊಲದಲ್ಲಿ ಬೆಳೆದ ಶುಂಟಿ, ಕಡಲೆ ಕಬ್ಬು ಬಾಳೆ ಜಲಾವೃತವಾಗಿವೆ. ಕೆಲ ಬೆಳೆಗಳಂತೂ ಒಂಚೂರು ಕಾಣದೆ ಮುಳುಗಡೆಯಾಗಿವೆ. ಇದರಿಂದ ರೈತರಿಗೆ ಬಾರಿ ನಷ್ಟವಾಗಿದ್ದು ಸೂಕ್ತ ಪರಿಹಾರಕ್ಕೆ ಆಗ್ರಹ ಮಾಡುತ್ತಿದ್ದಾರೆ.

ಇನ್ನು, ಇದೇ ರೀತಿ ನೀರು ಹೊರ ಚಿಮ್ಮುವುದು ಮುಂದುವರಿದರೆ ಬೋರ್ ವೆಲ್ ಕೂಡ ನಾಶವಾಗುತ್ತವೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ರೈತರಿಗೆ ಮತ್ತಷ್ಟು ಹಾಮಿಯಾಗುವ ಸಾಧ್ಯತೆ ಇದೆ. ಪರಿಸ್ಥಿತಿ ಹೀಗಿದ್ದರೂ ಯಾವುದೇ ಅಧಿಕಾರಿಗಳು ಇಲ್ಲಿ ಭೇಟಿ ನೀಡಿಲ್ಲ. ಕೂಡಲೆ ಅಧಿಕಾರಿಗಳು ಭೇಟಿ ನೀಡಿ ರೈತರಿಗೆ ಸಲಹೆ ನೀಡುವುದರ ಜೊತೆಗೆ ಸೂಕ್ತ ಪರಿಹಾರ ಕೊಡಿಸಬೇಕು ಎಂದು ರೈತರು ಮನವಿ ಮಾಡಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ರೈತರಿಗೆ ವರದಾನವಾಗಬೇಕಿದ್ದ ಕೆರೆ ಸಂಕಷ್ಟ ತಂದೊಡ್ಡಿದೆ. ಕೆರೆ ತುಂಬಿ ಅಂತರ್ಜಲ ಹೆಚ್ಚಾಯಿತು ಅಂತ ಖುಷಿ ಪಡುವ ಬದಲು ಬೆಳೆ ಹಾಳಾಗಿ ರೈತರು ಪರಿತಪಿಸುವಂತಾಗಿದೆ.

ವರದಿ: ರವಿ ಮೂಕಿ, ಟಿವಿ9 ಬಾಗಲಕೋಟೆ

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ