ವಿಜಯನಗರ: ತುಂಗಭದ್ರಾ (Tungabhadra dam) ಜಲಾಶಯದಿಂದ ಮತ್ತೆ ನೀರು ಹೊರಕ್ಕೆ ಬಿಟ್ಟಿದ್ದು, ಜಲಾಶಯದಿಂದ 1 ಲಕ್ಷ 10ಸಾವಿರ ಕ್ಯೂಸೆಕ್ ನೀರನ್ನು ಟಿಬಿ ಬೋರ್ಡ್ ನದಿಗೆ ಹರಿಸಿದೆ. ಒಳ ಹರಿವು ಹೆಚ್ಚಳ ಹಿನ್ನೆಲೆಯಲ್ಲಿ, ನದಿಗೆ ನೀರು ಹರಿಸಲಾಗುತ್ತಿದೆ. 20 ಗೇಟ್ಗಳನ್ನು 2.50. ಅಡಿ ಎತ್ತರಿಸಿ, 10 ಗೇಟ್ಗಳನ್ನು 1.50 ಅಡಿ ಎತ್ತರಿಸಿ ನದಿಗೆ ನೀರು ಬಿಡಲಾಗಿದ್ದ, ಮತ್ತೊಮ್ಮೆ ಹಂಪಿಯ ಹಲವು ಸ್ಮಾರಕಗಳು ಜಲಾವೃತವಾಗಿವೆ. ಪುರಂದರ ದಾಸರ ಮಂಟಪ, ಸಾಲು ಮಂಟಪ, ಧಾರ್ಮಿಕ ವಿಧಿವಿಧಾನಗಳ ಮಂಟಪ ಜಲಾವೃತವಾಗಿವೆ. ಕಂಪ್ಲಿ ಮತ್ತು ಗಂಗಾನದಿ ಮಧ್ಯೆ ಇರೋ ಸೇತುವೆ ಜಲಾವೃತವಾಗಲು ಕ್ಷಣಗಣನೆ ಶುರುವಾಗಿದೆ.
ಕೆ.ಆರ್.ಎಸ್. ಜಲಾಶಯದಿಂದ 1 ಲಕ್ಷ ಕ್ಯೂಸೆಕ್ ಬಿಡುಗಡೆ
ಮಂಡ್ಯ: ಕೆ.ಆರ್.ಎಸ್. ಜಲಾಶಯದಿಂದ 1 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಬಿಟ್ಟ ಹಿನ್ನೆಲೆ ನದಿ ಪಾತ್ರದಲ್ಲಿರುವ ಹಲವು ದೇವಾಲಯಗಳು ಮುಳುಗಡೆಯಾಗಿವೆ. ಶ್ರೀರಂಗಪಟ್ಟಣದ ವೆಲ್ಲಸ್ಲಿ ಸೇತುವೆ ಬಳಿ ಇರುವ ಆಂಜನೇಯಸ್ವಾಮಿ ಹಾಗೂ ಈಶ್ವರನ ದೇವಾಲಯ ಮುಳುಗಡೆಯಾಗಿವೆ. ಮುಂಜಾಗ್ರತಾವಾಗಿ ಶ್ರೀರಂಗಪಟ್ಟಣದ ವೆಲ್ಲಸ್ಲಿ ಸೇತುವೆ ಮೇಲೆ ಬಾರಿ ವಾಹನ ಸಂಚಾರ ನಿಷೇಧಿಸಲಾಗಿದೆ. ನೀರಿನ ಪ್ರಮಾಣ ಮತ್ತಷ್ಟು ಹೆಚ್ಚಾದ್ರೆ ಸೇತುವೆ ಮುಳುಗಡೆಯಾಗುವ ಆತಂಕ ಎದುರಾಗಲಿದೆ. ಒಂದು ಲಕ್ಷ ಕ್ಯೂಸೆಕ್ ನೀರು ಬಿಟ್ಟಿರುವ ಕಾರಣ ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಕೊಡಗಿನಲ್ಲಿ ಮತ್ತಷ್ಟು ಮಳೆಯಾದ್ರೆ ನದಿಗೆ ಮತ್ತಷ್ಟು ನೀರನ್ನು ಬಿಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಕೊಡಗಿನಲ್ಲಿ ಮಳೆ ಅಬ್ಬರ ಇಳಿಮುಖ
ಮಡಿಕೇರಿ: ಕೊಡಗಿನಲ್ಲಿ ಮಳೆ ಅಬ್ಬರ ಇಳಿಮುಖವಾಗಿದೆ. ಹಾರಂಗಿ ಜಲಾಶಯದಿಂದ ಹೆಚ್ಚುವರಿ ನೀರು ಬಿಡುಗಡೆ ಹಿನ್ನೆಲೆ ಕುಶಾಲನಗರ ಸಾಯಿ ಬಡಾವಣೆಗೆ ಕಾವೇರಿ ನದಿ ನೀರು ನುಗ್ಗಿದೆ. ಬಡಾವಣೆ ರಸ್ತೆಗಳ ಮೇಲೆ ನದಿ ನೀರು ನಿಂತ್ತಿದ್ದು, ಮತ್ತೆ ಪ್ರವಾಹ ಪರಿಸ್ಥಿತಿ ಮರುಕಳಿಸುವ ಆತಂಕ ಎದುರಾಗಿದೆ. ರಾಜಕಾಲುವೆ, ಚರಂಡಿ ತುಂಬಿ ಬಡಾವಣೆ ರಸ್ತೆಯಲ್ಲೂ ನೀರು ಆವರಿಸಿದ್ದು, ನಿವಾಸಿಗಳು ನಿನ್ನೆಯೇ ಬಡಾವಣೆ ತೊರೆದಿದ್ದಾರೆ.
ಕಬಿನಿ ಜಲಾಶಯದ ಒಳ ಹರಿವಿನ ಪ್ರಮಾಣ ಏರಿಕೆ
ಮೈಸೂರು: ಕೇರಳದ ವಯನಾಡು, ಕಬಿನಿ ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚಾಗಿದ್ದು, ಜಿಲ್ಲೆಯ ಹೆಚ್.ಡಿ ಕೋಟೆ ತಾಲ್ಲೂಕಿನ ಬೀಚನಹಳ್ಳಿ ಗ್ರಾಮದ ಕಬಿನಿ ಜಲಾಶಯದ ಒಳ ಹರಿವಿನ ಪ್ರಮಾಣದಲ್ಲಿ ಸ್ವಲ್ಪ ಏರಿಕೆಯಾಗಿದೆ. ಜಲಾಶಯದ ಇಂದಿನ ಒಳಹರಿವು 24,932 ಕ್ಯೂಸೆಕ್. ಜಲಾಶಯದ ಹೊರಹರಿವು 26,000 ಕ್ಯೂಸೆಕ್ ಇದೆ. 84 ಅಡಿ ಗರಿಷ್ಠ ಸಾಮರ್ಥ್ಯದ ಕಬಿನಿ ಜಲಾಶಯ, ಇಂದಿನ ನೀರಿನ ಮಟ್ಟ 82.94 ಅಡಿಯಾಗಿದೆ.
ಒಟ್ಟು 19.52 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವನ್ನು ಕಬಿನಿ ಜಲಾಶಯ ಹೊಂದಿದ್ದು, ಜಲಾಶಯದಲ್ಲಿ ಇಂದು 18.82 ಟಿಎಂಸಿ ನೀರು ಹೊಂದಿದೆ. 100 ಎಂ.ಎಂ ಮಳೆ ಪ್ರಮಾಣ ದಾಖಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:45 am, Mon, 8 August 22