Ballari News: ಸೇತುವೆ ಮೇಲಿಂದ ನದಿಗೆ ಮಗುಚಿ ಬಿದ್ದ ಲಾರಿ: ಸತತ 13 ಗಂಟೆಗಳ ಬಳಿಕ ಚಾಲಕನ ರಕ್ಷಣೆ, ಕ್ಲೀನರ್​​ಗಾಗಿ ಮುಂದುವರೆದ ಕಾರ್ಯಾಚರಣೆ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 03, 2022 | 7:14 AM

ಲಾರಿ ಚಾಲಕ ಅಹ್ಮದ್, ಕ್ಲೀನರ್ ಹುಸೇನ್​ಗಾಗಿ ಕಾರ್ಯಾಚರಣೆಗೆ ತೆರಳಿದ ವೇಳೆ ಅಗ್ನಿಶಾಮಕ ಸಿಬ್ಬಂದಿ ಪ್ರವಾಹದಲ್ಲಿ ಸಿಲುಕಿದ್ದು, ನದಿಯಲ್ಲಿ ಸಿಲುಕಿದ ನಾಲ್ವರ ರಕ್ಷಣೆಗೆ ತಾಲೂಕಾಡಳಿತ ಹರಸಾಹಸ ಪಟ್ಟಿದೆ.

Ballari News: ಸೇತುವೆ ಮೇಲಿಂದ ನದಿಗೆ ಮಗುಚಿ ಬಿದ್ದ ಲಾರಿ: ಸತತ 13 ಗಂಟೆಗಳ ಬಳಿಕ ಚಾಲಕನ ರಕ್ಷಣೆ, ಕ್ಲೀನರ್​​ಗಾಗಿ ಮುಂದುವರೆದ ಕಾರ್ಯಾಚರಣೆ
ನದಿಯಲ್ಲಿ ಕೊಚ್ಚಿ ಹೋದವರಿಗಾಗಿ ಕಾರ್ಯಚರಣೆ ಮಾಡುತ್ತಿರುವುದು.
Follow us on

ಬಳ್ಳಾರಿ: ಭತ್ತ ತುಂಬಿದ ಲಾರಿಯೊಂದು ಸೇತುವೆ ಮೇಲಿಂದ ನದಿಗೆ ಬಿದ್ದಿರುವಂತಹ ಘಟನೆ ಜಿಲ್ಲೆಯ ಸಿರಗುಪ್ಪ ತಾಲೂಕಿನ ರಾರಾವಿಯ ವೇದಾವತಿ ನದಿಯಲ್ಲಿ ನಡೆದಿದೆ. ಭತ್ತದ ಲೋಡ್ ತುಂಬಿಕೊಂಡು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ನಂದಿ ಕೊಟ್ಟೂರಿಗೆ ಲಾರಿ ತೆರಳುತ್ತಿದ್ದು, ಪ್ರವಾಹವನ್ನ ಲೆಕ್ಕಿಸದೇ ಸೇತುವೆ ದಾಟಿಸಲು‌ ಮುಂದಾದ ವೇಳೆ ಲಾರಿ ಮಗುಚಿ ನದಿಗೆ ಬಿದ್ದಿದೆ. 13 ಗಂಟೆಗಳಿಂದ ಸತತವಾಗಿ ಜೀವ ಉಳಿಸಿಕೊಳ್ಳಲು ಚಾಲಕ ಮತ್ತು ಕ್ಲೀನರ್ ಪರದಾಡುತ್ತಿದ್ದು, ಸದ್ಯ ಲಾರಿ ಚಾಲಕ ಅಹ್ಮದ್​ನನ್ನು ರಕ್ಷಣೆ ಮಾಡಿದ್ದು, ಕ್ಲೀನರ್ ಹುಸೇನ್​ಗಾಗಿ ಕಾರ್ಯಾಚರಣೆ ನಡೆಯುತ್ತಿದೆ.

ಪ್ರವಾಹದಲ್ಲಿ ಸಿಲುಕಿದ ಅಗ್ನಿಶಾಮಕ ಸಿಬ್ಬಂದಿ

ಇನ್ನೂ ಲಾರಿ ಚಾಲಕ ಅಹ್ಮದ್, ಕ್ಲೀನರ್ ಹುಸೇನ್​ಗಾಗಿ ಕಾರ್ಯಾಚರಣೆಗೆ ತೆರಳಿದ ವೇಳೆ ಅಗ್ನಿಶಾಮಕ ಸಿಬ್ಬಂದಿ ಪ್ರವಾಹದಲ್ಲಿ ಸಿಲುಕಿದ್ದು, ನದಿಯಲ್ಲಿ ಸಿಲುಕಿದ ನಾಲ್ವರ ರಕ್ಷಣೆಗೆ ತಾಲೂಕಾಡಳಿತ ಹರಸಾಹಸ ಪಟ್ಟಿದೆ. ಸದ್ಯ ಇಬ್ಬರ ರಕ್ಷಣೆ ಮಾಡಿದ್ದು, ಇನ್ನಿಬ್ಬರ ರಕ್ಷಣೆಗೆ ಕಾರ್ಯಾಚರಣೆ ಮುಂದುವರೆದಿದೆ. ದೊಡ್ಡ ಬೋಟ್ ತರಿಸಿ ಚಾಲಕ ಮತ್ತು ಕ್ಲೀನರ್ ರಕ್ಷಣೆಗೆ ಯತ್ನಿಸಲಾಗುತ್ತಿದೆ. ಸ್ಥಳದಲ್ಲೆ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ತಾಲೂಕಾಡಳಿತದ ಅಧಿಕಾರಿಗಳು ಮೊಕ್ಕಾ ಹೂಡಿದ್ದಾರೆ. ಸ್ಥಳಕ್ಕೆ ಸಿರಗುಪ್ಪ ಶಾಸಕ ಎಂ.ಎಸ್ ಸೋಮಲಿಂಗಪ್ಪ, ಎಂ.ಎಸ್ ಸಿದ್ದಪ್ಪ ಭೇಟಿ ನೀಡಿದ್ದು, ತಹಶಿಲ್ದಾರ ಜೊತೆ ರಕ್ಷಣಾ ಕಾರ್ಯಾಚರಣೆಗೆ ಶಾಸಕ ಹಾಗೂ ಶಾಸಕರ ಪುತ್ರ ಸಹಕಾರ ನೀಡುತ್ತಿದ್ದಾರೆ.

ರಕ್ಷಣಾ ಕಾರ್ಯಾಚರಣೆಗೆ ಇಳಿದ ಬೋಟ್ ಸಹ ಪಂಚರ್ ಆಗಿದ್ದು, ಪ್ರವಾಹ ಹೆಚ್ಚಳ ಹಿನ್ನಲೆಯಲ್ಲಿ ತಾಲೂಕಾಡಳಿತ ಬೋಟ್ ತರಿಸುತ್ತಿದ್ದು, ನಸುಕಿನ ಜಾವ ಮತ್ತೆ ಕಾರ್ಯಾಚರಣೆ ನಡೆಸಲು ನಿರ್ಧಾರ ಮಾಡಲಾಗಿದ್ದು, ಎನ್​​ಡಿಆರ್​ಎಫ್ ರಕ್ಷಣಾ ತಂಡಕ್ಕೆ ಬುಲಾವ್ ನೀಡಲಾಗಿದೆ.

Published On - 7:09 am, Wed, 3 August 22