
ಬಳ್ಳಾರಿ, ಅಕ್ಟೋಬರ್ 06: ಅಂಕಪಟ್ಟಿಯಲ್ಲಿ ವಿದ್ಯಾರ್ಥಿ (Student) ಭಾವ ಚಿತ್ರ ಹಾಕುವ ಬದಲು ಸ್ವಾಮೀಜಿಯೊಬ್ಬರ ಫೋಟೋ ಹಾಕಲಾಗಿದೆ. ಈ ಮಾರ್ಕ್ಸ್ ಕಾರ್ಡ್ (Mark Card) ನೋಡಿದ ದೇವರಾಜ್ ಮೂಲಿಮನಿ ಎಂಬ ವಿದ್ಯಾರ್ಥಿಯೇ ದಂಗಾಗಿ ಹೋಗಿದ್ದಾನೆ. ಇಂತಹದೊಂದು ಘಟನೆ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯ ಅಡಿ ಬರುವ ಕೊಪ್ಪಳದ ಗವಿಸಿದ್ದೇಶ್ವರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ನಡೆದಿದೆ.
ಈ ದೇವರಾಜ್ ಮೂಲಿಮನಿ ಓದುತ್ತಿರುವ ಕೊಪ್ಪಳದ ಗವಿಸಿದ್ದೇಶ್ವರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ವಿಜಯನಗರ ಶ್ರೀಕೃಷ್ಣ ದೇವರಾಯ ವಿವಿ ವ್ಯಾಪ್ತಿಗೆ ಬರುತ್ತದೆ. ಈ ವಿದ್ಯಾರ್ಥಿಯು ಆನ್‌ಲೈನ್ ಮೂಲಕ ಅಂಕಪಟ್ಟಿಗಾಗಿ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣೆ ವ್ಯವಸ್ಥೆಗೆ ಅರ್ಜಿ ಸಲ್ಲಿಸಿದ್ದ.
ಕೆಲ ದಿನಗಳ ಬಂದ ಅಂಕಪಟ್ಟಿ ನೋಡಿದ ದೇವರಾಜ್ಗೆ ಆಘಾತವಾಗಿತ್ತು. ಅವನ ಫೋಟೋ ಬದಲು ಸ್ವಾಮೀಜಿಯೊಬ್ಬರ ಫೋಟ್ ಅಂಕಪಟ್ಟಿಯಲ್ಲಿತ್ತು.
ಈ ಬಗ್ಗೆ ವಿಜಯನ ಶ್ರೀಕೃಷ್ಣ ದೇವರಾಯ ವಿವಿ ಮೌಲ್ಯಮಾಪನ ಕುಲಸಚಿವ ಎನ್ಎಂ ಸಾಲಿ ಪ್ರತಿಕ್ರಿಯಿಸಿದ್ದು, ವಿದ್ಯಾರ್ಥಿಯ ಮಾಹಿತಿ ಆನ್‌ಲೈನ್ ಮೂಲಕ ಯುಯುಸಿಎಂಎಸ್ನಲ್ಲಿ ವಿದ್ಯಾರ್ಥಿಯೇ ಹಾಗೆ ಹಾಕಿದ್ದ. ನಾವು ಅದರ ಪರಿಶೀಲನೆ ಮಾಡಲ್ಲ. ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣೆ ವ್ಯವಸ್ಥೆಯಿಂದಲೇ ಮಾರ್ಕ್ಸ್ ಕಾರ್ಡ್ ನಮಗೆ ಬರುತ್ತೆ. ಆ ಬಳಿಕ ನಾವು ಪ್ರಿಂಟ್ ಮಾಡಿ ಅವರಿಗೆ ಕೊಡೋದಷ್ಟೇ ನಮ್ಮ ಕೆಲಸ ಎಂದಿದ್ದಾರೆ.
ತಪ್ಪಾಗಿದ್ದರೆ ಮತ್ತೆ ಅದೇ ವಿದ್ಯಾರ್ಥಿ ತನ್ನ ಸರಿಯಾದ ಮಾಹಿತಿಯನ್ನ ಯುಯುಸಿಎಂಎಸ್ನಲ್ಲಿ ಹಾಕಬೇಕು. ಇದು ಕೇವಲ ಈ ವಿದ್ಯಾರ್ಥಿಯ ಸಮಸ್ಯೆಯಲ್ಲ, ಇನ್ನು ಕೆಲವರು ಸೆಲ್ಫಿ ಫೋಟೋ ಮತ್ತೆ ಕೆಲವರು ಗೂಗಲ್ ಫೋಟೋ ಹಾಕಿದ್ದಾರೆ. ಆನ್‌ಲೈನ್ ಮೂಲಕ ಹಾಕಿದ ಮಾಹಿತಿ ನಮಗೆ ತಿಳಿಯುವುದು ಮಾರ್ಕ್ಸ್ ಕಾರ್ಡ್ ಬಂದ ಬಳಿಕವೇ ಎಂದರು.
ಇದನ್ನೂ ಓದಿ: B.Sc Nursing, B.Pharma, Pharma.D ಕೋರ್ಸ್: ಅಂತಿಮ ಸುತ್ತಿನ ಸೀಟು ಹಂಚಿಕೆ
ಸದ್ಯ ಎಲ್ಲರಿಂದಲೂ ಈಗ ಮತ್ತೆ ಅರ್ಜಿಯನ್ನು ಪಡೆದು ಯುಯುಸಿಎಂಎಸ್ಗೆ ನಾವು ಕಳಿಸುತ್ತೇವೆ. ಆ ಬಳಿಕ ಬೇರೆ ಮಾರ್ಕ್ಸ್ ಕಾರ್ಡ್ ಆ ವಿದ್ಯಾರ್ಥಿಗಳಿಗೆ ಕೊಡುತ್ತೇವೆ ಎಂದು ಎನ್ಎಂ ಸಾಲಿ ಹೇಳಿದ್ದಾರೆ. ಒಟ್ಟಿನಲ್ಲಿ ಈ ಪ್ರಕರಣದಲ್ಲಿ ಯಾರು ಯಡವಟ್ಟು ಮಾಡಿದ್ದಾರೆ ಅನ್ನೋದು ತನಿಖೆಯಿಂದಷ್ಟೇ ತಿಳಿದು ಬರಬೇಕಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.