ಬಳ್ಳಾರಿ: ನಗರದ ಹೊರಗಡೆ ಎರಡು ರಿಂಗ್ ರೋಡ್ (Ring road)ಗಳು ಇದ್ದು ದಶಕಗಳು ಕಳೆದರೂ ಕಾಮಗಾರಿ ಪೂರ್ಣಗೊಳ್ಳದ ಕಾರಣ ರಿಂಗ್ ರೋಡ್ ಬದಲಾಗಿ ಮಹಾನಗರದಲ್ಲಿ ಅದಿರು ಲಾರಿಗಳ ಜೊತೆಗೆ ಬೃಹತ್ ಗಾತ್ರದ ವಾಹನಗಳು ಓಡಾಟ ಮಾಡುತ್ತಿದೆ. ಎಲ್ಲಿ ನೋಡಿದರಲ್ಲಿ ತಗ್ಗು ಗುಂಡಿಗಳು ಬಿದ್ದಿದ್ದು, ನಿತ್ಯ ಅಪಘಾತಗಳಿಗೆ ಆಹ್ವಾನ ನೀಡುತ್ತಿದೆ ಎಂದು ಮಹಾನಗರದ ಜನ ಸರ್ಕಾರ, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ವಿರುದ್ದ ಹಿಡಿಶಾಪ ಹಾಕುತ್ತಿದ್ದಾರೆ.
ಹೊಸಪೇಟೆಯಿಂದ ಬಳ್ಳಾರಿ ಮಾರ್ಗವಾಗಿ ಗುತ್ತಿಯವರೆಗೂ ರಸ್ತೆ ಕಾಮಗಾರಿ ಕೈಗೊಂಡಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಗರದ ಹೊರಗಡೆ ರಿಂಗ್ ರೋಡ್ ಕಾಮಗಾರಿ ಕೂಡ ನಡೆಸುತ್ತಿದೆ. ವಿದೇಶಿ ಮಾದರಿಯಲ್ಲಿ ರಿಂಗ್ ರೋಡ್ ಕಾಮಗಾರಿ ನಡೆಸುತ್ತಿದ್ದು ಅರ್ಧಕ್ಕೆ ಸ್ಥಗಿತಗೊಂಡಿದೆ. ಬೃಹತ್ ಗಾತ್ರದ ವಾಹನಗಳು ರಿಂಗ್ ರೋಡ್ ಬದಲಿಗೆ ನಗರದಲ್ಲಿಯೆ ಓಡಾಡುತ್ತಿವೆ. ರಿಂಗ್ ರೋಡ್ ಸಂಪೂರ್ಣವಾಗಿ ಹದಗೆಟ್ಟು ಹೋಗಿರುವ ಪರಿಣಾಮ ಬೃಹತ್ ಗಾತ್ರದ ಲಾರಿಗಳು ನಗರದಲ್ಲಿ ಸಂಚರಿಸುತ್ತಿರುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚಳವಾಗುತ್ತಿದೆ.
ಇದನ್ನೂ ಓದಿ:ಬಳ್ಳಾರಿ ನಗರ ಕ್ಷೇತ್ರದ ಟಿಕೇಟ್ಗಾಗಿ ಶುರುವಾಗಿದೆ ಬಿಗ್ ಫೈಟ್: ಒಬ್ಬರಲ್ಲ ಇಬ್ಬರಲ್ಲ ಬರೋಬ್ಬರಿ 20 ಆಕಾಂಕ್ಷಿ ಅರ್ಜಿ
ಈ ಕುರಿತು ನಗರಾಭಿವೃದ್ದಿ ಪ್ರಾಧಿಕಾರ ಈಗಾಗಲೇ ಗುತ್ತಿಗೆದಾರರಿಗೆ ನೋಟಸ್ ಜಾರಿ ಮಾಡಿದ್ದು, 18 ಕೀಲೋ ಮೀಟರ್ ವ್ಯಾಪ್ತಿಯ ರಿಂಗ್ ರೋಡ್ನಲ್ಲಿಯೇ ವಾಹನಗಳು ಓಡಾಡುವಂತೆ ಸೂಚನೆ ನೀಡಿರುವುದಾಗಿ ಹೇಳುತ್ತಿದ್ದಾರೆ. ರಿಂಗ್ ರೋಡ್ ಅವ್ಯವಸ್ಥೆಯಿಂದ ನಗರದಲ್ಲಿ ಭಾರಿ ಗಾತ್ರದ ವಾಹನಗಳು ಓಡಾಡುತ್ತಿರುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚಳವಾಗಿದೆ. ನಿತ್ಯ ನಗರದಲ್ಲಿ ಅಪಘಾತಗಳು ಸಂಭವಿಸುತ್ತಿರುವುರಿಂದ ಸ್ಥಳೀಯರು ಹೊರಗೆ ಸಂಚರಿಸಲು ಭಯಬೀಳುವಂತಾಗಿದೆ.
ಇದನ್ನೂ ಓದಿ:ಬಳ್ಳಾರಿ: ಮುಖ್ಯ ಶಿಕ್ಷಕಿ ಕರ್ತವ್ಯ ವಹಿಸಿಕೊಳ್ಳುವಾಗ ಬೈಬಲ್ ಬೋಧನೆ ಮಾಡಿದ ಪಾಸ್ಟರ್, ನೊಟೀಸ್ ನೀಡಿದ ಡಿಡಿಪಿಐ
ಇನ್ನಾದರೂ ಭಾರಿ ಗಾತ್ರದ ವಾಹನಗಳು, ಅದಿರು ಲಾರಿಗಳ ಅಟ್ಟಹಾಸಕ್ಕೆ ಪೊಲೀಸ್ ಇಲಾಖೆ, ಜಿಲ್ಲಾಡಳಿತ ಬ್ರೇಕ್ ಹಾಕಿ ಜನರ ಪ್ರಾಣ ರಕ್ಷಣೆ ಮಾಡುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಾಗಿದೆ.
ವರದಿ: ವೀರೇಶ್ ದಾನಿ ಟವಿ9 ಬಳ್ಳಾರಿ
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ