ಬಳ್ಳಾರಿ ನಗರ ಕ್ಷೇತ್ರದ ಟಿಕೇಟ್ಗಾಗಿ ಶುರುವಾಗಿದೆ ಬಿಗ್ ಫೈಟ್: ಒಬ್ಬರಲ್ಲ ಇಬ್ಬರಲ್ಲ ಬರೋಬ್ಬರಿ 20 ಆಕಾಂಕ್ಷಿ ಅರ್ಜಿ
ಒಂದೇ ಕ್ಷೇತ್ರದಿಂದ ಬರೋಬ್ಬರಿ 20ಕ್ಕೂ ಹೆಚ್ಚು ಟಿಕೇಟ್ ಆಕ್ಷಾಂಕಿಗಳು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಡಿಕೆಶಿ-ಸಿದ್ದರಾಮಯ್ಯ ಹಾಗೂ ಖರ್ಗೆ ಶಿಷ್ಯರ ಆಪ್ತರು ಟಿಕೇಟ್ ನನಗೆ ಸಿಗುತ್ತದೆ ಎಂಬ ಭರವಸೆಯಲ್ಲಿ ಈಗಿನಿಂದಲೇ ಪ್ರಚಾರ ನಡೆಸುತ್ತಿದ್ದಾರೆ.
ಬಳ್ಳಾರಿ: ಗಣಿ ನಾಡು ಬಳ್ಳಾರಿ(ballari) ಅಂದ ಕೂಡಲೇ ಕಾಂಗ್ರೇಸ್ನ ಭದ್ರಕೋಟೆ ಎನ್ನುತ್ತಾರೆ. ಬಳ್ಳಾರಿಯಿಂದ ಕಾಂಗ್ರೇಸ್ನ ಅಧಿನಾಯಕಿ ಸೋನಿಯಾ ಗಾಂಧಿ ಕೂಡ ಬಳ್ಳಾರಿಯಲ್ಲಿ ಸ್ಪರ್ಧೆ ಮಾಡಿ ಗೆಲುವು ಕಂಡಿದ್ದಾರೆ. ಕಾಂಗ್ರೇಸ್ನ ಭದ್ರಕೋಟೆಯಾಗಿರುವ ಬಳ್ಳಾರಿಯಲ್ಲಿ ಕೈ ನಾಯಕರ ಮಧ್ಯೆ ಒಡಕು, ಭಿನ್ನಮತ ಸಹ ಅಷ್ಟೇ ಪ್ರಮಾಣದಲ್ಲಿದೆ. ಆದರೂ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಟಿಕೇಟ್ಗಾಗಿ ಈಗಿನಿಂದಲೇ ಹಲವು ನಾಯಕರು ಹಾಗೂ ಮುಖಂಡರ ಮಧ್ಯೆ ಪೈಪೋಟಿ ಶುರುವಾಗಿದೆ. ಅಷ್ಟರ ಮಟ್ಟಿಗೆ ಬಳ್ಳಾರಿಯಲ್ಲಿ ಕಾಂಗ್ರೇಸ್ ಪೈಪೋಟಿಯಿದೆ. ಇದೀಗ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಟಿಕೇಟ್ಗಾಗಿ ಬಿಗ್ ಪೈಟ್ ಶುರುವಾಗಿದೆ.
ಕೆಪಿಸಿಸಿ ಟಿಕೇಟ್ ಆಕ್ಷಾಂಕಿಗಳಿಂದ ಅರ್ಜಿ ಆಹ್ವಾನ ಮಾಡುತ್ತಿದ್ದಂತೆ, ಕೈ ನಾಯಕರು ಟಿಕೇಟ್ಗಾಗಿ ಪೈಪೋಟಿ ಶುರು ಮಾಡಿದ್ದಾರೆ. ಬಳ್ಳಾರಿ ನಗರ ಕ್ಷೇತ್ರದ ಟಿಕೇಟ್ ಗಾಗಿ ಮಾಜಿ ಶಾಸಕರು, ಮಾಜಿ ಶಾಸಕರ ಪುತ್ರರು, ಮೇಯರ್, ಮಾಜಿ ಮೇಯರ್. ಅಷ್ಟೇ ಅಲ್ಲದೆ ಡಿಕೆಶಿ, ಸಿದ್ದರಾಮಯ್ಯ, ಖರ್ಗೆ ಆಪ್ತರು ಟಿಕೇಟ್ಗೆ ಅರ್ಜಿ ಸಲ್ಲಿಕೆ ಮಾಡಿ ತಮಗೆ ಟಿಕೇಟ್ ಸಿಗುತ್ತೆ ಎಂದು ಪೈಪೋಟಿಗೆ ಇಳಿದಿದ್ದಾರೆ. ಕಾಂಗ್ರೇಸ್ ಟಿಕೇಟ್ಗಾಗಿ ಈಗಾಗಲೇ ಅರ್ಜಿ ಸಲ್ಲಿಕೆ ಮಾಡಿರುವ ಕೈ ನಾಯಕರು ತಮಗೇ ಟಿಕೇಟ್ ಸಿಗುತ್ತದೆ ಎನ್ನುತ್ತಿದ್ದಾರೆ. ಜೊತೆಗೆ ಚುನಾವಣೆ ಘೋಷಣೆಗೂ ಮುನ್ನವೇ ಈಗಿನಿಂದಲೇ ನಗರದೆಲ್ಲೆಡೆ ಪ್ರಚಾರವನ್ನು ಶುರು ಮಾಡಿದ್ದಾರೆ. ಕೆಲವರು ಡಿಕೆಶಿವಕುಮಾರ್. ಸಿದ್ದರಾಮಯ್ಯ. ಖರ್ಗೆ ಪ್ರಭಾವದಿಂದ ಟಿಕೇಟ್ ಸಿಗುತ್ತೆ ಎಂದು ಕಾಯುತ್ತಿದ್ದಾರೆ.
ಈ ಮಧ್ಯೆ ತಮಗೇ ಟಿಕೇಟ್ ದೊರೆಯುತ್ತದೆ ಎನ್ನುವ ಭರವಸೆಯಲ್ಲಿರುವ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ನಾರಾ ಭರತರೆಡ್ಡಿ ಮನೆ ಮನೆಗೆ ಕುಕ್ಕರ್ ಹಂಚಿಕೆ ಮಾಡುತ್ತಾ ಪ್ರಚಾರ ನಡೆಸುತ್ತಿದ್ದಾರೆ. ಇನ್ನು ನನಗೆ ಪಕ್ಷ ಟಿಕೇಟ್ ಕೊಟ್ಟರೆ ಪಕ್ಷವನ್ನು ಗೆಲ್ಲಿಸಿ ತರುತ್ತೇವೆ ಎಂದು ಟಿಕೇಟ್ ಆಕ್ಷಾಂಕಿಗಳು ಹೇಳುತ್ತಿದ್ದಾರೆ. ಈಗಾಗಲೇ ಬಳ್ಳಾರಿ ನಗರ ಕಾಂಗ್ರೇಸ್ನ ಟಿಕೇಟ್ಗಾಗಿ 20ಕ್ಕೂ ಹೆಚ್ಚು ಆಕ್ಷಾಂಕಿಗಳು ಅರ್ಜಿ ಸಲ್ಲಿಕೆ ಮಾಡಿ ಪೈಪೋಟಿ ನಡೆಸುತ್ತಿರುವುದು ಪಕ್ಷದೊಳಗಿನ ಭಿನ್ನಮತ,ಆಕ್ರೋಶಕ್ಕೆ ಕಾರಣವಾಗಿದೆ. ರೆಡ್ಡಿ–ರಾಮುಲು ಅಬ್ಬರದ ವೇಳೆ ಟಿಕೇಟ್ ಕೇಳದವರು ಇದೀಗ ಟಿಕೇಟ್ಗೆ ಅರ್ಜಿ ಸಲ್ಲಿಕೆ ಮಾಡುತ್ತಿದ್ದಾರೆ. ಜನರಿಗೆ ಸುಳ್ಳು ಹೇಳುತ್ತಾ ಪಕ್ಷದ ಕಾರ್ಯಕರ್ತರನ್ನ ಹಾದಿ ತಪ್ಪಿಸುತ್ತಿರುವವರ ವಿರುದ್ದ ಹೈಕಮಾಂಡ್ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಶಾಸಕ ಅನಿಲ್ ಲಾಡ್ ಆಕ್ರೋಶ ಹೊರಹಾಕುತ್ತಿದ್ದಾರೆ.
2023ರ ವಿಧಾನಸಭೆ ಚುನಾವಣೆ ನಂತರ ರಾಜ್ಯದಲ್ಲಿ ಕಾಂಗ್ರೇಸ್ ಅಧಿಕಾರಕ್ಕೆ ಬರುತ್ತದೆ ಎಂದು ಭರವಸೆ ವ್ಯಕ್ತಪಡಿಸುತ್ತಿರುವ ಕೈ ನಾಯಕರು ಇದೀಗ ಟಿಕೇಟ್ಗಾಗಿ ಪೈಪೋಟಿ ಶುರು ಮಾಡಿದ್ದಾರೆ. ಆದರೆ ಬಳ್ಳಾರಿ ನಗರ ಕಾಂಗ್ರೇಸ್ ಟಿಕೇಟ್ ಡಿಕೆಶಿ, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಆಪ್ತರಿಗೆ ಸಿಗುತ್ತದೆಯೋ ಇಲ್ಲವೇ ಪಕ್ಷಕ್ಕಾಗಿ ದುಡಿದವರಿಗೆ ಟಿಕೇಟ್ ನೀಡುತ್ತದೆಯೇ ಕಾದು ನೋಡಬೇಕಿದೆ.
ವರದಿ: ವೀರೇಶ್ ದಾನಿ ಟಿವಿ9 ಬಳ್ಳಾರಿ
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:17 am, Wed, 23 November 22