ಅದು ಬಳ್ಳಾರಿಗೆ ಐಕಾನ್ ನಂತಿರೋ ವೃತ್ತ. ಅಲ್ಲಿ ದಶಕಗಳಿಂದಲೂ ಒಂದು ಟವರ್ ಇತ್ತು. ಅದನ್ನು ಕೆಡವಿ ರಾಜ್ಯದಲ್ಲಿಯೇ ಅತಿ ಎತ್ತರದ ಟವರ್ ಕ್ಲಾಕ್ ನಿರ್ಮಾಣ ಮಾಡಬೇಕೆನ್ನುವ ಪ್ಲಾನ್ ಮಾಡಿ ಅಂದಿನ ಬಿಜೆಪಿ ಸರ್ಕಾರದಲ್ಲಿ ಚಾಲನೆ ನೀಡಲಾಗಿತ್ತು. ಇದೀಗ ಅರ್ಧ ಕಾಮಗಾರಿಗೆ ನಿಂತಿರೋ ಟವರ್ ನ ಎತ್ತರವನ್ನು ಕಡಿಮೆ ಮಾಡಬೇಕೆನ್ನುವ ಚಿಂತನೆ ನಡೆದಿದೆ. ಇದು ಆಡಳಿತಾರೂಢ ಮತ್ತು ವಿರೋಧ ಪಕ್ಷದ ನಾಯಕರ ಮಧ್ಯೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ.
ಬಿಜೆಪಿ ಸರ್ಕಾರದ ಕಾಮಗಾರಿ ಪೂರ್ಣಗೊಳಿಸಲು ಹಾಲು ಕಾಂಗ್ರೆಸ್ ಸರ್ಕಾರ ಮೀನಾಮೇಷ ಎಣಿಸುತ್ತಿದೆಯೇ? ತರಾತುರಿಯಲ್ಲಿ ಚುನಾವಣೆಗೂ ಕೆಲ ತಿಂಗಳ ಮುನ್ನ ಟವರ್ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಹೌದು, ಬಳ್ಳಾರಿ ನಗರದ ಹೃದಯ ಭಾಗದಲ್ಲಿರೋ ರಾಯಲ್ ವೃತ್ತದಲ್ಲಿ ಲೆಬೆನಾನ್ ದೇಶದ ಮಾದರಿಯಲ್ಲಿ 140 ಅಡಿ ಎತ್ತರದ ಟವರ್ ನಿರ್ಮಾಣ ಮಾಡುವುದಕ್ಕೆ ಬಿಜೆಪಿ ಸರ್ಕಾರದಲ್ಲಿ ಪ್ಲಾನ್ ಮಾಡಲಾಗಿತ್ತು.
7 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರೋ ಈ ಟವರಿಗೆ ಹತ್ತು ಹಲವು ವಿಶೇಷಗಳಿವೆ. 7ನೇ ಮಹಡಿಯಲ್ಲಿ ವ್ಯೂ ಪಾಯಿಂಟ್ 8ನೇ ಮಹಡಿಯಲ್ಲಿ ಕ್ಲಾಕ್ ಮತ್ತು ಒಟ್ಟು ಹತ್ತು ಮಹಡಿ ಎತ್ತರದಲ್ಲಿ ನಿರ್ಮಿಸೋ ಮೂಲಕ ಬಳ್ಳಾರಿಗೆ ದೊಡ್ಡದೊಂದು ಐಕಾನ್ ಪಾಯಿಂಟ್ ಮಾಡಲು ಉದ್ದೇಶಿಸಲಾಗಿತ್ತು. ಆದರೆ, ಚುನಾವಣೆ ವೇಳೆ ನೀತಿ ಸಂಹಿತೆ ಹೆಸರಲ್ಲಿ, ಮತ್ತು ನಂತರ ಬೇಕಾದ ಮೆಟರಿಯಲ್ ಸಿಗಲಿಲ್ಲವೆಂದು ಕಾಮಗಾರಿಯನ್ನು ನಿಲ್ಲಿಸಲಾಗಿದೆ.
ಇದರ ಜೊತೆಗೆ ಇದೀಗ ತಾಂತ್ರಿಕ ತೊಂದರೆ ಮತ್ತು 140 ಅಡಿ ಎತ್ತರದಲ್ಲಿ ನಿರ್ಮಾಣ ಮಾಡಿದರೆ, ನಿರ್ವಹಣೆ ಮಾಡುವುದು ಕಷ್ಟವೆಂದು ಸದ್ಯ 80 ಅಡಿಯಷ್ಟು ನಿರ್ಮಾಣವಾಗಿರೋ ಟವರ್ ಕೆಲಸ 140 ಅಡಿಯ ಬದಲು 117 ಅಡಿಗೆ ನಿಲ್ಲಿಸಲು ಲೋಕೋಪಯೋಗಿ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರೋ ಮಾಜಿ ಸಚಿವ ಶ್ರೀರಾಮುಲು ದ್ವೇಷದ ರಾಜಕೀಯ ಬಿಟ್ಟು ಅರ್ಧಕ್ಕೆ ನಿಂತಿರೋ ಕಾಮಗಾರಿಯನ್ನು ಪೂರ್ಣಗೊಳಿಸಿ ಎಂದು ಟಾಂಗ್ ನೀಡಿದ್ದಾರೆ.
ಬಳ್ಳಾರಿಯ ಕ್ಲಾಕ್ ಟವರ್ಗೆ ತನ್ನದೇ ಆದ ಇತಿಹಾಸವಿದೆ. ಸ್ವಾತ್ಯಂತ್ರ ಹೋರಾಟಗಾರ ಗಡಿಗಿ ಚೆನ್ನಪ್ಪ ಅವರ ಹೆಸರಲ್ಲಿ ದಶಕಗಳ ಹಿಂದೆಯೇ ಚಿಕ್ಕದೊಂದು ಕ್ಲಾಕ್ ಟವರ್ ನಿರ್ಮಾಣ ಮಾಡಲಾಗಿತ್ತು. ಅದನ್ನು 2009ರಲ್ಲಿ ಜನಾರ್ದನ ರೆಡ್ಡಿ ಕಾಲದಲ್ಲಿ ರಾತ್ರೋರಾತ್ರಿ ಒಡೆದು ಹಾಕೋ ಮೂಲಕ ಹೊಸದು ಮಾಡುತ್ತೇವೆಂದು ಮಾಡಲೇ ಇಲ್ಲ. ನಂತರ 2013ರಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ನಲವತ್ತು ಅಡಿಯ ಕ್ಲಾಕ್ ಟವರ್ ನಿರ್ಮಾಣ ಮಾಡಿದ್ರು. ಅದನ್ನು ಕೂಡ ಕಳೆದ ವರ್ಷ ಶ್ರೀರಾಮುಲು ಉಸ್ತುವಾರಿ ಸಚಿವರಿದ್ದಾಗ ರಾತ್ರೋರಾತ್ರಿ ಕೆಡವಿ 2022 ಆಗಸ್ಟ್ 15ರಂದು ಏಳು ಕೋಟಿ ವೆಚ್ಚದಲ್ಲಿ ಲೆಬನಾನ್ ಮಾದರಿಯಲ್ಲಿ 140 ಅಡಿ ಎತ್ತರದ ಟವರ್ ನಿರ್ಮಾಣಕ್ಕೆ ಚಾಲನೆ ನೀಡಿದ್ರು. ಆದರೆ ಅದು ಕೂಡ ಇದೀಗ ಅರ್ಧಕ್ಕೆ ನಿಂತಿದೆ. ಆದರೆ ಹಾಲಿ ಬಳ್ಳಾರಿ ಉಸ್ತುವಾರಿ ಸಚಿವ ನಾಗೇಂದ್ರ ಮಾತ್ರ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡೋದಿಲ್ಲ. ಕಾಮಗಾರಿ ಪೂರ್ಣಗೊಳಿಸುತ್ತೇವೆ ಎನ್ನುತ್ತಿದ್ದಾರೆ.
ಬಳ್ಳಾರಿ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ