
ಬಳ್ಳಾರಿ, ಜನವರಿ 11: ಬ್ಯಾನರ್ ವಿಚಾರಕ್ಕೆ ಶಾಸಕರಾದ ಜನಾರ್ದನ ರೆಡ್ಡಿ ಮತ್ತು ಭರತ್ ರೆಡ್ಡಿ ಬೆಂಬಲಿಗರ ನಡುವೆ ಮಾರಾಮಾರಿ ವೇಳೆ ಓರ್ವ ಕಾಂಗ್ರೆಸ್ ಕಾರ್ಯಕರ್ತ ಮೃತಟಪಟ್ಟ ಪ್ರಕರಣ ರಾಜ್ಯ ಮಾತ್ರವಲ್ಲದೆ ದೇಶಾದ್ಯಂತ ಭಾರೀ ಸದ್ದು ಮಾಡಿದೆ. ಈ ಬೆನ್ನಲ್ಲೇ ಬಳ್ಳಾರಿ ಜಿಲ್ಲಾಡಳಿತ ಎಚ್ಚೆತ್ತುಕೊಂಡಿಂದ್ದು, ಬ್ಯಾನರ್ ವಿಚಾರವಾಗಿ ಕಠಿಣ ಕ್ರಮಗಳ ಜಾರಿಗೆ ಮುಂದಾಗಿದೆ. ಬಳ್ಳಾರಿಯ ಗಲಭೆ ಬಳಿಕ ಶಾಂತಿಭಂಗ ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗಿದ್ದು, ನಗರದಲ್ಲಿ ಎಲ್ಲೆಂದರಲ್ಲಿ ಬ್ಯಾನರ್ ಅಳವಡಿಕೆಗೆ ನಿಷೇಧ ಹೇರಲಾಗಿದೆ. ನಿಯಮ ಮೀರಿದ್ರೆ ದಂಡ ಬೀಳಲಿದೆ.
ಬಳ್ಳಾರಿ ನಗರದಲ್ಲಿ ಅನುಮತಿ ಇಲ್ಲದೆ ಬ್ಯಾನರ್, ಹೋಲ್ಡಿಂಗ್ಸ್, ಫ್ಲೆಕ್ಸ್ ಅಥವಾ ಪೋಸ್ಟರ್ ಅಳವಡಿಕೆಗೆ ಜಿಲ್ಲಾಡಳಿತ ನಿಷೇಧ ವಿಧಿಸಿದೆ. ಸಾರ್ವಜನಿಕ ಸ್ಥಳದಲ್ಲಿ ಇವುಗಳ ಅವಳವಡಿಕೆಗೆ ಸ್ಥಳೀಯ ಆಡಳಿತ ಸಂಸ್ಥೆಯ ಪೂರ್ವಾನುಮತಿ ಕಡ್ಡಾಯಗೊಳಿಸಲಾಗಿದೆ. ನಿಯಮ ಜಾರಿ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಿದ್ರೆ ಅಂತಹ ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳೋದಾಗಿ ತಿಳಿಸಲಾಗಿದೆ. ಅನಧಿಕೃತ ಜಾಹೀರಾತು ಮತ್ತು ಬ್ಯಾನರ್ಗಳ ಮೇಲೆ ಪೊಲೀಸ್ ಇಲಾಖೆ ಇನ್ಮುಂದೆ ನಿಗಾ ಇಡಲಿದ್ದು, ಬ್ಯಾನರ್ ವಿಚಾರವಾಗಿಯೇ ಗಲಾಟೆ ನಡೆದು ಜಿಲ್ಲೆ ಪ್ರಕ್ಷುಬ್ಧಗೊಂಡಿದ್ದ ಕಾರಣ ಕಠಿಣ ನಿರ್ಧಾರಗಳನ್ನು ಜಿಲ್ಲಾಡಳಿತ ತೆಗೆದುಕೊಂಡಿದೆ.
ಇದನ್ನೂ ಓದಿ: ಬಳ್ಳಾರಿ ಗಲಭೆ ಖಂಡಿಸಿ ಬಿಜೆಪಿಯಿಂದ ಸಮರ; ಜ 17ರಂದು ಪ್ರತಿಭಟನೆ ಎಂದ ಜನಾರ್ದನ ರೆಡ್ಡಿ
ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಇಂದು ತಮ್ಮ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಅವರ ಬರ್ತ್ ಡೇ ಸಂದರ್ಭ ಅಥವಾ ಯಾವುದೇ ಕಾರ್ಯಕ್ರಮ ಇದ್ದಾಗ ಈ ಹಿಂದೆ ಬಳ್ಳಾರಿಯಲ್ಲಿ ಬ್ಯಾನರ್ಗಳು ರಾರಾಜಿಸುತ್ತಿದ್ದವು. ಆದ್ರೆ ಇದೇ ಮೊದಲ ಬಾರಿಗೆ ಯಾವುದೇ ಬ್ಯಾನರ್ ಇಲ್ಲದೆ ಗಣಿದಣಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ನಾಯಕನ ಜನ್ಮ ದಿನವನ್ನು ಸರಳವಾಗಿ ಆಚರಿಸಲು ಬೆಂಬಲಿಗರು ಕೂಡ ನಿರ್ಧರಿಸಿದ್ದು, ಅದ್ಧೂರಿ ಆಚರಣೆ ಮತ್ತು ಕೇಕ್ ಕಟ್ಟಿಂಗ್ ಕೂಡ ಬೇಡ ಎಂದು ಜನಾರ್ದನ ರೆಡ್ಡಿ ಬೆಂಬಲಿಗರಿಗೆ ಸಂದೇಶ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಕೇವಲ ಶುಭಾಶಯಕ್ಕೆ ಜನಾರ್ದನ ರೆಡ್ಡಿ ಬರ್ತ್ ಡೇ ಸೀಮಿತವಾಗಿರಲಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:58 am, Sun, 11 January 26