ಕಾಡು-ಪ್ರಾಣಿಗಳ ಮಧ್ಯೆ ವೃಕ್ಷ ರಕ್ಷಕ, ಗಣಿನಾಡಿನಲ್ಲಿ ಅಪರೂಪದ ಕಾಯಕಯೋಗಿ

| Updated By: ಆಯೇಷಾ ಬಾನು

Updated on: Jun 17, 2020 | 1:26 PM

ಬಳ್ಳಾರಿ: ಸಾಲುಮರಗಳ ನೆಟ್ಟು ಅವುಗಳನ್ನು ಹಲವಾರು ವರ್ಷಗಳ ಕಾಲ ಪೋಷಿಸಿದ ಸಾಲುಮರದ ತಿಮ್ಮಕ್ಕನವರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ. ಮರಗಳಿಂದಲೇ ನಮ್ಮ ಉಸಿರು, ಅವುಗಳಿಲ್ಲದೆ ನಾವಿಲ್ಲ ಎಂಬ ಅವರ ಪರಿಸರ ಕಾಳಜಿ ಕೂಡ ಎಲ್ಲರಿಗೆ ಗೊತ್ತು.  ಹಾಗೆಯೇ ಕಾಡುಪ್ರಾಣಿಗಳ ಮಧ್ಯೆ ಮರ ಗಿಡಗಳನ್ನು ಪೋಷಿಸಿ, ಅವುಗಳನ್ನು ರಕ್ಷಿಸಲು ತನ್ನನ್ನ ತಾನೇ ಸಮರ್ಪಿಸಿಕೊಂಡ ಗಣಿನಾಡು ಬಳ್ಳಾರಿಯ ಕಾಯಕಯೋಗಿಯೊಬ್ಬನ ಅಪರೂಪದ ಕಥೆ ಇಲ್ಲಿದೆ. ಚಿತ್ರದುರ್ಗ ಜನ್ಮಭೂಮಿಯಾದ್ರೂ ಬಳ್ಳಾರಿಯಾಯ್ತು ಕರ್ಮಭೂಮಿ ಅಂದ ಹಾಗೆ ನಾವು ಹೇಳುತ್ತಿರುವ ಆ ವ್ಯಕ್ತಿಯ ಹೆಸರು ಭಟ್ರಹಳ್ಳಿ […]

ಕಾಡು-ಪ್ರಾಣಿಗಳ ಮಧ್ಯೆ ವೃಕ್ಷ ರಕ್ಷಕ, ಗಣಿನಾಡಿನಲ್ಲಿ ಅಪರೂಪದ ಕಾಯಕಯೋಗಿ
Follow us on

ಬಳ್ಳಾರಿ: ಸಾಲುಮರಗಳ ನೆಟ್ಟು ಅವುಗಳನ್ನು ಹಲವಾರು ವರ್ಷಗಳ ಕಾಲ ಪೋಷಿಸಿದ ಸಾಲುಮರದ ತಿಮ್ಮಕ್ಕನವರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ. ಮರಗಳಿಂದಲೇ ನಮ್ಮ ಉಸಿರು, ಅವುಗಳಿಲ್ಲದೆ ನಾವಿಲ್ಲ ಎಂಬ ಅವರ ಪರಿಸರ ಕಾಳಜಿ ಕೂಡ ಎಲ್ಲರಿಗೆ ಗೊತ್ತು.  ಹಾಗೆಯೇ ಕಾಡುಪ್ರಾಣಿಗಳ ಮಧ್ಯೆ ಮರ ಗಿಡಗಳನ್ನು ಪೋಷಿಸಿ, ಅವುಗಳನ್ನು ರಕ್ಷಿಸಲು ತನ್ನನ್ನ ತಾನೇ ಸಮರ್ಪಿಸಿಕೊಂಡ ಗಣಿನಾಡು ಬಳ್ಳಾರಿಯ ಕಾಯಕಯೋಗಿಯೊಬ್ಬನ ಅಪರೂಪದ ಕಥೆ ಇಲ್ಲಿದೆ.

ಚಿತ್ರದುರ್ಗ ಜನ್ಮಭೂಮಿಯಾದ್ರೂ ಬಳ್ಳಾರಿಯಾಯ್ತು ಕರ್ಮಭೂಮಿ
ಅಂದ ಹಾಗೆ ನಾವು ಹೇಳುತ್ತಿರುವ ಆ ವ್ಯಕ್ತಿಯ ಹೆಸರು ಭಟ್ರಹಳ್ಳಿ ಗೂಳಪ್ಪ. ಮೂಲತ: ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಭಟ್ರಹಳ್ಳಿ ಗ್ರಾಮದವರಾದ ಗೂಳಪ್ಪ ತಮ್ಮ ಕರ್ಮಭೂಮಿಯಾಗಿ ಆಯ್ಕೆ ಮಾಡಿದ್ದು ಮಾತ್ರ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ರಾಯಪುರ-ಹಾಲಸಾಗರ ಅರಣ್ಯ ಪ್ರದೇಶವನ್ನ.

ರಾಯಪುರ-ಹಾಲಸಾಗರ ಅರಣ್ಯ ಪ್ರದೇಶವನ್ನು ಸುತ್ತಮುತ್ತಲಿನ ರೈತರು ಹಲವಾರು ವರ್ಷಗಳ ಹಿಂದೆ ಒತ್ತುವರಿ ಮಾಡಿಕೊಂಡು ಬೇಸಾಯ ಮಾಡುತ್ತಿದ್ದರು. ಆದರೆ, ಇದು ಅರಣ್ಯ ಇಲಾಖೆಯ ಗಮನಕ್ಕೆ ಬಂದು ಅವರು ಒತ್ತುವರಿಯನ್ನ ತೆರವು ಮಾಡಿ ಸುಮಾರು 50 ಹೆಕ್ಟೇರ್​ ಪ್ರದೇಶದಲ್ಲಿ 50 ಸಾವಿರಕ್ಕೂ ಹೆಚ್ಚು ವಿವಿಧ ಬಗೆಯ ಸಸಿಗಳನ್ನು ನೆಟ್ಟಿದ್ದರು. ಆಗ ಗೂಳಪ್ಪನವ್ರು ಸಸಿಗಳನ್ನ ನೆಡುವ ಕಾರ್ಮಿಕ ತಂಡದ ಭಾಗವಾಗಿದ್ದರು. ತದನಂತರ ಪರಿಸರ ಪ್ರೇಮಿಯಾಗಿದ್ದ ಗೂಳಪ್ಪ ಅವುಗಳನ್ನು ರಕ್ಷಿಸುತ್ತಾ, ಪೋಷಿಸುತ್ತಾ ಅಲ್ಲೇ ಉಳಿದುಬಿಟ್ಟರು.

ಮರಗಳ ರಕ್ಷಣೆಯೇ ನಿತ್ಯಕಾಯಕ, ಕಾಡುಪ್ರಾಣಿಗಳಿಗೂ ಡೋಂಟ್​ ಕೇರ್​!
ಇತ್ತ ಸಸಿಗಳನ್ನು ನೆಟ್ಟ ಅರಣ್ಯಾಧಿಕಾರಿಗಳು ಅವುಗಳ ಕಾಳಜಿ ಬಗ್ಗೆ ಹೆಚ್ಚು ಗಮನ ಹರಿಸದಿದ್ದರೂ ಗೂಳಪ್ಪ ಅವುಗಳನ್ನು ಬಿಡಲಿಲ್ಲ. ಇದುವೇ ತನ್ನ ನಿತ್ಯಕಾಯಕ ಎಂದು ಭಾವಿಸಿ ಪ್ರತಿನಿತ್ಯ ಬೆಳಿಗ್ಗೆ 6 ರಿಂದ ರಾತ್ರಿ 10 ರವರೆಗೆ ಅವುಗಳ ಆರೈಕೆ ಮತ್ತು ರಕ್ಷಣೆಯಲ್ಲಿ ತೊಡಗಿದ್ದಾರೆ. ಹೀಗೆ ಗೂಳಪ್ಪನವರ 30 ವರ್ಷಗಳ ಸತತ ಪರಿಶ್ರಮದಿಂದ ಇವತ್ತು ಈ ಎಲ್ಲಾ ಸಸಿಗಳು ಹೆಮ್ಮರವಾಗಿ ಬೆಳೆದು ನಿಂತು ದಟ್ಟ ಕಾನನವಾಗಿ ಮಾರ್ಪಾಡಾಗಿದೆ.

ಈ ಅರಣ್ಯವು ಚಿರತೆ, ಕರಡಿ, ಕಾಡು ಹಂದಿ ಸೇರಿದಂತೆ ಹಲವು ಭಯಾನಕ ಪ್ರಾಣಿಗಳ ವಾಸ ಸ್ಥನವಾಗಿಬಿಟ್ಟಿದೆ. ಜೊತೆಗೆ ಹಲವಾರು ಸಂದರ್ಭಗಳಲ್ಲಿ ಇವರ ಮೇಲೆ ಕರಡಿಗಳು ದಾಳಿ ಸಹ ಮಾಡಿದೆ. ಆದರೆ ಇದ್ಯಾವುದಕ್ಕೂ ಎದೆ ಗುಂದದ ಗೂಳಪ್ಪ ತಮ್ಮ ಕಾಯಕವನ್ನು ಮುಂದುವರೆಸಿದ್ದಾರೆ. ಇದಲ್ಲದೆ ಈ ನಡುವೆ ಮರಗಳ್ಳರ ಕಾಟ ಕೂಡ ಹೆಚ್ಚಾಗಿದೆ. ಹೀಗೆ ಒಂದು ರಾತ್ರಿ ಮರಕಡಿಯಲು ಬಂದಿದ್ದ ಮರಗಳ್ಳರ ಗುಂಪೊಂದನ್ನು ಏಕಾಂಗಿಯಾಗಿ ಹಿಡಿದು ಅರಣ್ಯಾಧಿಕಾರಿಗಳಿಗೆ ಸಹ ಒಪ್ಪಿಸಿದ್ದರಂತೆ.

ಆದರೆ, ಅಚ್ಚರಿಯ ಸಂಗತಿಯೆಂದರೆ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಗೂಳಪ್ಪ ತಮ್ಮ ಕೆಲಸಕ್ಕೆ ಒಂದು ನಯಾ ಪೈಸೆ ಸಂಭಾವನೆ ಪಡೆದಿರಲಿಲ್ಲವಂತೆ. ಇದನ್ನು ಗಮನಿಸಿದ ಅರಣ್ಯ ಇಲಾಖೆಯು ಕಳೆದ ಕೆಲವು ವರ್ಷಗಳಿಂದ ಅವರಿಗೆ ದಿನಗೂಲಿ ನೀಡುತ್ತಿದೆ. ಬಟ್​, ಗೂಳಪ್ಪರದ್ದು ಬಡಕುಟುಂಬ. ಬರುವ ದಿನಗೂಲಿಯಲ್ಲೇ ನಾಲ್ಕು ಜನ ಮಕ್ಕಳಿರುವ ತುಂಬು ಸಂಸಾರವನ್ನ ನಡೆಸಬೇಕು.

ಆದ್ರೇ ಗೂಳಪ್ಪರಿಗೆ ಇವುಗಳಿಗಿಂತ ತಮ್ಮ ಕಾಡಿನ ಸಂರಕ್ಷಣೆಯೇ ಮೊದಲ ಆದ್ಯತೆ. ದಿನಬೆಳಗಾದ್ರೆ ಸಾಕು ಡ್ಯೂಟಿಗೆ ಹಾಜರ್. ​ಪ್ರತಿನಿತ್ಯವೂ ಅದೇ ಶ್ರದ್ಧೆಯಿಂದ ಕೆಲಸ ಮಾಡುತ್ತಾರೆ. ಒಟ್ನಲ್ಲಿ ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಷು ಕದಾಚನ ಎಂಬ ಭಗವದ್ಗೀತೆಯ ಶ್ಲೋಕದ ಸಾಲಿನಂತೆ ಯಾವುದೇ ಫಲಾಪೇಕ್ಷೆಯಿಲ್ಲದೆ ತಮ್ಮ ಕೆಲಸದಲ್ಲಿ ತೊಡಗಿರುವ ಗೂಳಪ್ಪರೇ ನಿಜವಾದ ಕಾಯಕಯೋಗಿ. ಅರಣ್ಯರಕ್ಷಕ -ಬಸವರಾಜ ಹರನಹಳ್ಳಿ

Published On - 5:19 pm, Mon, 15 June 20