ಬಳ್ಳಾರಿ: ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಬೆಳಗಾವಿ, ಗದಗ, ಉತ್ತರ ಕನ್ನಡ, ಬಳ್ಳಾರಿ ಭಾಗದಲ್ಲಿ ಧಾರಾಕಾರ ಮಳೆಗೆ ಪ್ರವಾಹ ಭೀತಿ ಎದುರಾಗಿದೆ. ಹೀಗಿರುವಾಗಲೇ ಬಳ್ಳಾರಿ ಭಾಗದಲ್ಲಿನ ತುಂಗಭದ್ರಾ ಡ್ಯಾಂನಿಂದ ಹೆಚ್ಚುವರಿ ನೀರು ಬಿಡುಗಡೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ನದಿ ಪಾತ್ರದಲ್ಲಿದ್ದ ಹಂಪಿಯ ಪುರಂದರದಾಸರ ಮಂಟಪ ಮತ್ತು ಸ್ನಾನಘಟ್ಟ ಮುಳುಗಡೆಯಾಗಿದೆ.
ತುಂಗಾಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ರಾಮ, ಲಕ್ಷ್ಮಣ, ಯಂತ್ರೋಧ್ಧರ ದೇವಸ್ಥಾನಕ್ಕೆ ಸಂಪರ್ಕ ಕಡಿತವಾಗಿದೆ. ಹೀಗಾಗಿ, ನದಿ ಬಳಿ ತೆರಳದಂತೆ ಪ್ರವಾಸಿಗರಿಗೆ ಸೂಚನೆ ನೀಡಲಾಗಿದೆ.
ದಾವಣಗೆರೆ: ನಿರಂತರ ಮಳೆಯಿಂದ ಸಾಂಬಾರ್ ಸೌತೆಕಾಯಿ ಬೆಳೆ ನಾಶ
ಮೂರು ದಿನ ಸುರಿದ ನಿರಂತರ ಮಳೆಗೆ ಬೆಳೆ ನೆಲಕಚ್ಚಿದೆ. ಅಷ್ಟೇ ಅಲ್ಲ ದಾವಣಗೆರೆ ತಾಲೂಕಿನ ಮಂಡಲೂರು ಗ್ರಾಮದಲ್ಲಿ ಜಮೀನಿನಲ್ಲಿಯೇ ಸಾಂಬರ್ ಸೌತೆಕಾಯಿ ಕೊಳೆತು ಹೋಗಿದೆ. ಮಹಾಂತೇಶ ಎಂಬ ರೈತರಿಗೆ ಸೇರಿದ ಮೂರು ಎಕರೆ ಪ್ರದೇಶದಲ್ಲಿನ ಸಾಂಬರ್ ಸೌತೆಕಾಯಿ ಕೊಳೆತು ಹೋಗಿದೆ. ಇನ್ನೇನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಬೇಕು ಎನ್ನುವಷ್ಟರಲ್ಲಿ, ಶುರುವಾದ ಮಳೆಯಿಂದ ಒಂದು ಲಕ್ಷಕ್ಕೂ ಅಧಿಕ ಹಣ ವೆಚ್ಚಮಾಡಿ ಬೆಳೆದಿದ್ದ ಬೆಳೆ ನಾಶವಾಗಿದೆ.
ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳ; ರೈತನ ಮನೆಗೆ ಬಂದ ಮೊಸಳೆ ಮರಿ
ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದ ಹಿನ್ನಲೆಯಲ್ಲಿ, ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಗ್ರಾಮದ ರೈತನ ಮನೆಗೆ ಮೊಸಳೆ ಮರಿ ಬಂದಿದೆ. ಸಾಸ್ವೆಹಳ್ಳಿಯ ತುಂಗಭದ್ರಾ ನದಿ ತಟದಲ್ಲಿ ರೈತನ ಮನೆಯಿದ್ದು, ಈ ವೇಳೆ ನದಿಯ ನೀರು ಹೆಚ್ಚಾದ ಹಿನ್ನಲೆ ಮೊಸಳೆ ಮರಿ ರೈತನ ಮನೆ ಹತ್ತಿರ ಬಂದಿದೆ. ಸದ್ಯ ಮೊಸಳೆ ಮರಿಯನ್ನು ರಕ್ಷಿಸಿದ ಗ್ರಾಮಸ್ಥರು, ಮಾವೀನ ಕೋಟೆ ಅರಣ್ಯ ಇಲಾಖೆ ಅಧಿಕಾರಿ ಸಿದ್ದೇಶ್ ಅವರಿಗೆ ಒಪ್ಪಿಸಿದ್ದಾರೆ.
ಮೂರು ಭಾಗವಾಗಿ ಉರುಳಿ ಬಿದ್ದ ಆಲದ ಮರ
ವಿಜಯನಗರ ಜಿಲ್ಲೆ ಹರಪನಹಳ್ಳಿ ಪಟ್ಟಣ ಗೋಕರ್ಣೇಶ್ವರ ದೇವಸ್ಥಾನದ ಎದುರು ಇದ್ದಕ್ಕಿದ್ದಂತೆ ಮೂರು ಭಾಗವಾಗಿ ಆಲದ ಮರ ಉರುಳಿ ಬಿದ್ದಿದೆ. ಕಟ್ಟೆಯ ನಾಗದೇವರಿಗೆ ಹಾನಿಯಾಗಿದ್ದು, ನಿತ್ಯ ಈ ಭಾಗದಲ್ಲಿ ನೂರಾರು ಜನರು ಓಡಾಡುತಿದ್ದರು. ಸದ್ಯ ಭಾರೀ ಅನಾಹುತ ತಪ್ಪಿದಂತಾಗಿದೆ. 50 ಮೀಟರ್ ನಷ್ಟು ದೂರ ಮರ ಬಿದ್ದರು ಯಾವುದೇ ಹಾನಿ ಸಂಬವಿಸಿಲ್ಲ ಎನ್ನುವುದು ಗ್ರಾಮಸ್ಥರಿಗೆ ಸಮಾಧಾನ ತಂದಿದೆ.
ರಾಯಚೂರು: ಗರ್ಭಿಣಿ ಬಾಣಂತಿಯರ ರಕ್ಷಣೆಗೆ ಹರಸಾಹಸ
ಬಸವ ಸಾಗರ ಜಲಾಶಯದಿಂದ ಕೃಷ್ಣ ನದಿಗೆ ನೀರು ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ, ನದಿ ದಂಡೆ ಗ್ರಾಮಗಳಲ್ಲೂ ಗರ್ಭಿಣಿ, ಬಾಣಂತಿಯರ ರಕ್ಷಣೆಗೆ ಹರಸಾಹಸ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಲಿಂಗಸಗೂರ ತಾಲೂಕಿನ ಯರಡೋಣಿ ಗ್ರಾಮದ ಇಬ್ಬರು ಗರ್ಭಿಣಿಯರನ್ನು ಕುಟುಂದವರ ಮನವೊಲಿಸಿ ಆರೋಗ್ಯ ಇಲಾಖೆ ಸಿಬ್ಬಂದಿಗಳು ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ.
ಶೀಲಹಳ್ಳಿ ಸೇತುವೆ ಮುಳುಗಡೆ ಹಿನ್ನೆಲೆ ಹಲವು ಹಳ್ಳಿಗಳ ಸಂಪರ್ಕ ಕಡಿತವಾಗಿತ್ತು. ಅಲ್ಲದೆ ಯರೆಡೋಣಿ ಗ್ರಾಮದ ಬಳಿಯ ಸೇತುವೆಯು ಮುಳುಗುವ ಹಂತಕ್ಕೆ ತಲುಪಿದೆ. ಈ ನಿಟ್ಟಿನಲ್ಲಿ ಸೇತುವೆ ಮುಳುಗಡೆಯಾದರೆ 6 ಹಳ್ಳಿಗಳ ಸಂಪರ್ಕ ಸಂಪೂರ್ಣ ಕಡಿತವಾಗಲಿದೆ. ಹೀಗಾಗಿ ಮುನ್ನೆಚ್ಚರಿಕೆ ವಹಿಸಿದ್ದು, ಯರಡೋಣಿ ಸೇರಿ ಆರು ಹಳ್ಳಿಗಳಲ್ಲಿನ ಗರ್ಭಿಣಿಯರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಇದನ್ನೂ ಓದಿ:
ಕಾರವಾರ: ಮಳೆಗೆ ಮನೆ ಕುಸಿತ; ನೆಲಸಮವಾದ ಸೂರು ನೋಡಿ ಭಾವುಕರಾದ ದಂಪತಿ
ಮಳೆ ಅಬ್ಬರ ತಗ್ಗಿದರೂ ಬೆಳಗಾವಿಯಲ್ಲಿ ನಿಲ್ಲದ ಭೀತಿ; ಬೆಳೆ ಹಾನಿಗೆ ಪರಿಹಾರ ನೀಡುವಂತೆ ರೈತರ ಆಗ್ರಹ
Published On - 9:04 am, Mon, 26 July 21