ಬಳ್ಳಾರಿ: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಚುನಾವಣಾ ಪ್ರಚಾರ ದಿನೇ ದಿನೇ ರಂಗೇರುತ್ತಿದೆ. ಅದ್ರಲ್ಲೂ ರಾಜ್ಯದಲ್ಲಿ ಮತ್ತೊಮ್ಮೆ ಕಮಲ ಅರಳಿಸಲು ಸ್ವತ: ಚುನಾವಣಾ ಚಾಣಕ್ಯ ಅಮಿತ್ ಶಾ (Amit Shah) ರಾಜ್ಯಕ್ಕೆ ಎಂಟ್ರಿ ಕೊಟ್ಟಿದ್ತಾರೆ. ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿರುವ ಸಂಡೂರು ಕ್ಷೇತ್ರದ ಮೂಲಕವೇ ವಿಜಯ ಸಂಕಲ್ಪ ಯಾತ್ರೆ ಆರಂಭಿಸುತ್ತಿರುವ ಶಾ ಬಳ್ಳಾರಿಯ (Ballari) ಸಂಡೂರು (Sanduru) ಕೋಟೆ ಮೇಲೆ ಕೇಸರಿ ಪತಾಕೆ ಹಾರಿಸಲು ರಣತಂತ್ರ ರೂಪಿಸಿದ್ದಾರೆ. ಅಮಿತ್ ಶಾ ಆಗಮನದ ಹಿನ್ನೆಲೆಯಲ್ಲಿ ಸಂಡೂರಿನಲ್ಲಿಂದು ಬೃಹತ್ ಸಮಾವೇಶ ಆಯೋಜಿಸಲಾಗಿದೆ.
ಸಂಡೂರಿನಲ್ಲಿಂದು ಬಿಜೆಪಿ ವಿಜಯ ಸಂಕಲ್ಪ ಸಮಾವೇಶ ನಡೆಯಲಿದ್ದು, ಸಮಾವೇಶದಲ್ಲಿ ಕೇಂದ್ರ ಸಚಿವ ಅಮಿತ್ ಶಾ ಭಾಗಿಯಾಗಲಿದ್ದಾರೆ. ಸಂಡೂರಿನ ಎಸ್ ಆರ್ ಎಸ್ ಮೈದಾನದಲ್ಲಿ ಮಧ್ಯಾಹ್ನ 1:30 ರಿಂದ ನಡೆಯಲಿದೆ. ಸಮಾವೇಶದಲ್ಲಿ ಅಮಿತ್ ಶಾ ಜೊತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ ವೈ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್. ಬಿಜೆಪಿ ರಾಜಾಧ್ಯಕ್ಷ ನಳೀನಕುಮಾರ್ ಕಟೀಲ್ ಭಾಗಿಯಾಗಲಿದ್ದಾರೆ. ಸಮಾವೇಶದಲ್ಲಿ 2 ಲಕ್ಷಕ್ಕೂ ಅಧಿಕ ಜನರು ಭಾಗಿಯಾಗುವ ಸಾಧ್ಯತೆಯಿದೆ (Karnataka Assembly Elections 2023).
ಸಂಡೂರು ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಅಮಿತ್ ಶಾ ಈ ಬಾರಿ ಸಂಡೂರು ಕ್ಷೇತ್ರದಲ್ಲಿ ಕೇಸರಿ ಪತಾಕೆ ಹಾರಿಸಲು ರಣತಂತ್ರ ರೂಪಿಸಿದ್ದಾರೆ. ಮಹರಾಜ್ ಕಾರ್ತಿಕ ಘೋರ್ಪಡೆ ಮಹರಾಜ ಮೂಲಕ ಸಂಡೂರು ಕೋಟೆ ವಶಪಡಿಸಿಕೊಳ್ಳಲು ಶಾ ಚುನಾವಣಾ ರಣತಂತ್ರ ಹೆಣೆದಿದ್ದಾರೆ. ಅಲ್ಲದೇ ಸಂಡೂರು ಕ್ಷೇತ್ರದಿಂದ ಈ ಭಾರಿ ಸಚಿವ ಶ್ರೀರಾಮುಲು ಸ್ಪರ್ಧೆ ಮಾಡಲು ತಯಾರಿ ನಡೆಸಿದ್ದಾರೆ. ಹೀಗಾಗಿ ಬಿಜೆಪಿ ನಾಯಕರು ಸಂಡೂರಿನ ವಿಜಯ ಸಂಕಲ್ಪ ಸಮಾವೇಶದ ಮೂಲಕ ಕಾಂಗ್ರೆಸ್ ಭದ್ರಕೋಟೆಯನ್ನ ವಶಪಡಿಸಿಕೊಳ್ಳಲು ಇನ್ನಿಲ್ಲದ ತಂತ್ರ ರೂಪಿಸಿದ್ದಾರೆ.
ಸಮಾವೇಶಕ್ಕೆ ಆಗಮಿಸುವವರಿಗೆ ವೇದಿಕೆ ಪಕ್ಕದಲ್ಲೆ ಊಟದ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕರ್ತರಿಗೆ ಪಾಯಸ, ಪಲಾವ್, ಮೊಸರನ್ನದ ಊಟದ ವ್ಯವಸ್ಥೆ ಮಾಡಲಾಗಿದೆ. ಬೃಹತ್ ಬಹಿರಂಗ ಸಮಾವೇಶದ ನಂತರ ಪ್ರಮುಖರ ಜೊತೆ ಶಾ ಸಭೆ ನಡೆಸಲಿದ್ದಾರೆ. ಸಂಡೂರಿನ ಶಿವಪುರ ಪ್ಯಾಲೇಸ್ ನಲ್ಲಿ ವಿಭಾಗ ಮಟ್ಟದ ಪ್ರಮುಖರ ಸಭೆ ಹಮ್ಮಿಕೊಳ್ಳಲಾಗಿದೆ.
ಬಳ್ಳಾರಿ, ವಿಜಯನಗರ, ರಾಯಚೂರು, ಕೊಪ್ಪಳ ಜಿಲ್ಲೆಯ ಪ್ರಮುಖರ ಜೊತೆ ಸಭೆ ಏರ್ಪಡಿಸಲಾಗಿದೆ. ನಾಲ್ಕು ಜಿಲ್ಲೆಗಳ 22 ವಿಧಾನಸಭಾ ಕ್ಷೇತ್ರಗಳ ನಾಯಕರ ಜೊತೆ ಅಮಿತ್ ಶಾ ಚರ್ಚೆ ನಡೆಸಲಿದ್ದಾರೆ, ಸಭೆಯಲ್ಲಿ ಶಾಸಕರು, ಸಂಸದರು, ಮಾಜಿ ಸಂಸದರು, ಮಾಜಿ ಶಾಸಕರು, ಜಿಲ್ಲಾಧ್ಯಕ್ಷರು ಭಾಗಿಯಾಗಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ 82 ನಾಯಕರ ಜೊತೆ ಚುನಾವಣೆ ಕುರಿತು ಅಮಿತ್ ಶಾ ಚರ್ಚೆ ನಡೆಸಲಿದ್ದಾರೆ.
ಸಂಡೂರಿನಲ್ಲಿ ಬಿಜೆಪಿಯಿಂದ ವಿಜಯ ಸಂಕಲ್ಪ ಸಮಾವೇಶ ಹಿನ್ನೆಲೆಯಲ್ಲಿ ಸಂಡೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಭದ್ರತೆಗಾಗಿ 4 ಎಸ್ ಪಿ, 4 ಹೆಚ್ಚುವರಿ ಎಸ್ ಪಿ, 14 ಡಿಎಸ್ ಪಿ, 59 ಸಿಪಿಐ, 100 ಪಿಎಸ್ಐ, 1200 ಪೊಲೀಸ್ ಪೇದೆಗಳು, 10 ಕೆಎಸ್ಆರ್ ಪಿ ತುಕಡಿ, 12 ಡಿಎಆರ್ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ.
Also Read:
ಇದನ್ನೂ ಓದಿ: ಬಿಜೆಪಿ ಸೇರ್ಪಡೆ ಕಾರ್ಯಕ್ರಮಕ್ಕೆ ಅನಂತ್ ನಾಗ್ ಗೈರು, ಕುತೂಹಲ ಕೆರಳಿಸಿದ ದಿಢೀರ್ ನಿರ್ಧಾರ
ಅಮಿತ್ ಶಾ ಸಮಾವೇಶ ಹಿನ್ನೆಲೆಯಲ್ಲಿ ಸಂಡೂರಿನಲ್ಲಿ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ವಿಜಯ ಸಂಕಲ್ಪ ಸಮಾವೇಶಕ್ಕೆ ಬರುವವರಿಗೆ ವಿಶೇಷ ಪಾರ್ಕಿಂಗ್ ವ್ಯವಸ್ಥೆಯಿದೆ. ಯಾರೂ ಕಪ್ಪು ಬಟ್ಟೆ ಧರಿಸಿಕೊಂಡು ಬಾರದಂತೆ ಪೊಲೀಸರು ಸೂಚನೆ ನೀಡಿದ್ದಾರೆ.
ಕಾಂಗ್ರೆಸ್ ಭದ್ರಕೋಟೆಯಾಗಿರುವ ಸಂಡೂರು ಕೋಟೆಗೆ ಅಮಿತ್ ಶಾ ಆಗಮಿಸುತ್ತಿರುವುದು ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಿಸಿದ್ರೆ ಇನ್ನೊಂದೆಡೆ ಕೈ ಪಡೆ ಅಮಿತ್ ಶಾ ಗೋ ಬ್ಯಾಕ್ ಅಂತಿದೆ. ಸಂಡೂರಿನಲ್ಲಿ ಬಿಜೆಪಿ ಸಮಾವೇಶ ಆಯೋಜನೆ ಮಾಡಿರುವುದಕ್ಕೆ ಮಾಜಿ ಸಚಿವ ಸಂತೋಷ್ ಲಾಡ್ ಹಾಗೂ ಕಾಂಗ್ರೆಸ್ ಶಾಸಕ ಈ ತುಕಾರಾಂ ಕೆಂಡ ಕೆಂಡವಾಗಿದ್ದಾರೆ. ಬಿಜೆಪಿ ನಾಯಕರು ಸಂಡೂರಿಗೆ ಎನೂ ಕೊಡುಗೆ ನೀಡದಿದ್ದರೂ ಈಗ ಮತಯಾಚನೆಗೆ ಸಂಡೂರಿಗೆ ಬರುತ್ತಿದ್ದಾರೆ. ಆದ್ರೆ ಸಂಡೂರಿನ ಜನರು ಕಾಂಗ್ರೆಸ್ ಪಕ್ಷವನ್ನ ಕೈ ಬಿಡಲ್ಲ. ಅಮಿತ್ ಶಾ ಆಗಮಿಸುತ್ತಿರುವುದು ಯಾವುದೇ ಪರಿಣಾಮ ಬೀರಲ್ಲ ಅಂತಿದ್ದಾರೆ.
ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಚುನಾವಣಾ ಚಾಣಕ್ಯ ಅಮಿತ್ ಶಾ ರಾಜ್ಯಕ್ಕೆ ಪದೇ ಪದೇ ಎಂಟ್ರಿ ಕೊಡುತ್ತಿರುವುದು ಬಿಜೆಪಿ ಕಾರ್ಯಕರ್ತರು ನಾಯಕರಲ್ಲಿ ಹೊಸ ಹುರುಪು ಹುಮಸ್ಸು ಮೂಡಿಸಿದೆ. ಅಲ್ಲದೇ ಕಾಂಗ್ರೆಸ್ ಕ್ಷೇತ್ರಗಳನ್ನೆ ಟಾರ್ಗೆಟ್ ಮಾಡಿರುವ ಅಮಿತ್ ಶಾ ಕೈ ಕೋಟೆಗೆ ಲಗ್ಗೆ ಈಡುತ್ತಿರುವುದು ಕಾಂಗ್ರೆಸ್ ನಾಯಕರಲ್ಲಿ ಆತಂಕ ಮೂಡಿಸಿರುವುದಂತೂ ಸುಳ್ಳಲ್ಲವಾಗಿದೆ. ಮುಂದಿನ ದಿನಗಳಲ್ಲಿ ಯಾವ ಕ್ಷೇತ್ರದಲ್ಲಿ ಯಾರು ಮೋಡಿ ಮಾಡುತ್ತಾರೆ ಅನ್ನೋದನ್ನ ಕಾಯ್ದು ನೋಡಬೇಕಿದೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 6:15 am, Thu, 23 February 23