ಬಳ್ಳಾರಿ: ಜಿಲ್ಲೆಯ ಕುಡಿತಿನಿ ಪಟ್ಟಣದಲ್ಲಿ ಮರ್ಯಾದೆ ಹತ್ಯೆ ನಡೆದಿದೆ. ಅನ್ಯಕೋಮಿನ ಯುವಕನ ಪ್ರೀತಿಸಿದ್ದಕ್ಕೆ ತಂದೆಯೇ ತನ್ನ ಮಗಳನ್ನು ಕೊಲೆ ಮಾಡಿದ್ದಾರೆ. ಓಂಕಾರಗೌಡ ಎಂಬ ವ್ಯಕ್ತಿ ತನ್ನ ಮಗಳು ಅನ್ಯಕೋಮಿನ ಯುವಕನನ್ನು ಪ್ರೀತಿಸಿದಳು ಎಂಬ ಕಾರಣಕ್ಕೆ ಹೆಚ್ಎಲ್ಸಿ ಕಾಲುವೆಗೆ ತಳ್ಳಿ ಕೊಲೆ ಮಾಡಿದ್ದಾರೆ. ಬಳಿಕ ಪೊಲೀಸರ ಮುಂದೆ ತಪ್ಪೊಪ್ಪಿಗೊಂಡಿದ್ದಾರೆ.
ಆರೋಪಿ ಓಂಕಾರಗೌಡ ಕುಟುಂಬ ಕುಡುತಿನಿ ಪಟ್ಟಣದ ಬುಡ್ಗ ಜಂಗಮ ಕಾಲೋನಿಯಲ್ಲಿ ವಾಸವಾಗಿದೆ. ಹೈಸ್ಕೂಲ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ ಓಂಕಾರಗೌಡನ ಮಗಳು, ಅನ್ಯಕೋಮಿನ ಯುವಕನನ್ನ ಪ್ರೀತಿಸುತ್ತಿದ್ದಳು. ಈ ಬಗ್ಗೆ ಮನೆಯವರಿಗೆ ಗೊತ್ತಾಗುತ್ತಿದ್ದಂತೆಯೇ ಯುವಕನಿಂದ ದೂರವಿರುವಂತೆ ಎಚ್ಚರಿಕೆ ನೀಡಲಾಗಿದೆ. ಆದ್ರು ಯುವಕನೊಡನೆ ಪ್ರೀತಿ ಒಡನಾಟ ಮುಂದುವರೆಸುತ್ತಿದ್ದಳು ಎಂದು ಶಂಕಿಸಿ ಓಂಕಾರಗೌಡ ಸಿನಿಮೀಯ ರೀತಿಯಲ್ಲಿ ತನ್ನ ಮಗಳನ್ನೇ ಕೊಲೆ ಮಾಡಿದ್ದಾನೆ.
ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಹಿಂದೂ ಧರ್ಮದ ಬಗ್ಗೆ ಮಾತಾಡಿಲ್ಲ, ವಿಕಿಪಿಡಿಯಾದಲ್ಲಿರುವುದನ್ನು ಹೇಳಿದ್ದಾರೆ : ರಾಮಲಿಂಗಾ ರೆಡ್ಡಿ
ಅಕ್ಟೋಬರ್ 31 ರಂದು ಮಧ್ಯಾಹ್ನ ಮಗಳನ್ನು ಸಿನಿಮಾ ತೋರಿಸುವುದಾಗಿ ಬೈಕ್‌ನಲ್ಲಿ ಕರೆದೊಯ್ದಿದ್ದಾರೆ. ಆದ್ರೆ ಚಿತ್ರಮಂದಿರದ ಬಳಿ ಹೋದಾಗ ಸಿನಿಮಾ ಆರಂಭವಾಗಿತ್ತು. ಅಲ್ಲಿಂದ ಹೊಟೇಲ್‌ಗೆ ಕರೆದೊಯ್ದು ತಿಂಡಿ ತಿನ್ನಿಸಿ ಬಳಿಕ ದೊಡ್ಡ ಬಸವೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನ ಮಾಡಿಸಿ ನಂತರ ಆಭರಣದ ಅಂಗಡಿಯಲ್ಲಿ ಒಂದು ಜೊತೆ ಓಲೆ, ಉಂಗುರವನ್ನು ಮಗಳಿಗೆ ಕೊಡಿಸಿದ್ದಾನೆ. ಇದೆಲ್ಲಾ ಆಗಿ ಊರಿಗೆ ಹಿಂತಿರುಗುವ ಹೊತ್ತಿಗೆ ರಾತ್ರಿಯಾಗಿತ್ತು. ಈ ವೇಳೆ ಸಮಯ ನೋಡಿಕೊಂಡು ಎಚ್‌ಎಲ್‌ಸಿ ಕಾಲುವೆ ಬಳಿ ಮಗಳನ್ನು ಕರೆತಂದು, ಸ್ವಲ್ಪ ಹೊತ್ತು ನಿಂತಿರು, ಕೆಲಸವಿದೆ ಎಂದು ಹೇಳಿ ತಂದೆ ಕಣ್ಮರೆಯಾಗಿದ್ದಾನೆ. ಆನಂತರ ಹಿಂದಿನಿಂದ ಬಂದು ಕಾಲುವೆಗೆ ಮಗಳನ್ನ ತಳ್ಳಿದ್ದಾನೆ. ಬಾಲಕಿ ಅಪ್ಪ, ಅಪ್ಪ ಎಂದು ಕೂಗಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾಳೆ.
ಆನಂತರ ಓಂಕಾರಗೌಡ ಬೈಕ್ ಅನ್ನು ತನ್ನ ಗೆಳೆಯ ಭೀಮಪ್ಪನ ಮನೆಯಲ್ಲಿ ಬಿಟ್ಟು ತಿರುಪತಿಗೆ ರೈಲು ಹತ್ತಿದ್ದಾನೆ. ತಿರುಪತಿ ದರ್ಶನ ಮುಗಿಸಿ ವಾಪಸ್ ಬರುವಾಗ ಕೊಪ್ಪಳದ ಬಳಿ ಓಂಕಾರಗೌಡನನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿ ಶವಕ್ಕಾಗಿ ಪೊಲೀಸರು ಹೆಚ್ಎಲ್ಸಿ ಕಾಲುವೆಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
Published On - 2:55 pm, Wed, 9 November 22