Electricity Load Shedding: ಕಾಂಗ್ರೆಸ್​​ ಸರ್ಕಾರದ ಮಹತ್ವಾಕಾಂಕ್ಷಿ ಜೀನ್ಸ್ ಉದ್ಯಮಕ್ಕೆ ಮುಳುವಾದ ಅನಿಯಮಿತ ಲೋಡ್ ಶೆಡ್ಡಿಂಗ್!

| Updated By: ಸಾಧು ಶ್ರೀನಾಥ್​

Updated on: Oct 19, 2023 | 12:43 PM

Electricity: ಗ್ಯಾರಂಟಿ ನೀಡುವ ಭರದಲ್ಲಿ ಸರ್ಕಾರ ವಿದ್ಯುತ್ ನಿರ್ವಹಣೆ ಮಾಡುವಲ್ಲಿ ಎಡವುತ್ತಿದೆ. ಕರೆಂಟ್ ಕಣ್ಣಾಮುಚ್ಚಾಲೆ ಎಂಬ ಸಂಕಷ್ಟ ರೈತರಿಗೆ ಮಾತ್ರವಲ್ಲದೇ ಇದೀಗ ಸಣ್ಣ ಸಣ್ಣ ಉದ್ಯಮದಾರರಿಗೆ ದೊಡ್ಡಮಟ್ಟದ ಹೊಡೆತ ನೀಡುತ್ತಿದೆ. ಸರ್ಕಾರ ಮುಂದಿನ ಬಜೆಟ್ನಲ್ಲಿ ಬಳ್ಳಾರಿಯಲ್ಲಿ 5000 ಕೋಟಿ ವೆಚ್ಚದಲ್ಲಿ ಜೀನ್ಸ್ ಪಾರ್ಕ್ ಮಾಡಲು ಚಿಂತನೆ ಮಾಡುತ್ತಿದೆ. ಇದ್ಯಾವುದು ನಮಗೆ ಬೇಡ ಮೊದಲು ಕರೆಂಟ್ ಕೊಡಿ ಎನ್ನುತ್ತಿದ್ದಾರೆ ಇಲ್ಲಿನ ಕಾರ್ಮಿಕರು.

Electricity Load Shedding: ಕಾಂಗ್ರೆಸ್​​ ಸರ್ಕಾರದ ಮಹತ್ವಾಕಾಂಕ್ಷಿ ಜೀನ್ಸ್ ಉದ್ಯಮಕ್ಕೆ ಮುಳುವಾದ ಅನಿಯಮಿತ ಲೋಡ್ ಶೆಡ್ಡಿಂಗ್!
ಬಳ್ಳಾರಿ: ಜೀನ್ಸ್ ಪಾರ್ಕ್ ಆ ಮೇಲೆ ಮಾಡಿ, ಮೊದಲು ಕರೆಂಟ್ ಕೊಡಿ ಎನ್ನುತ್ತಿರುವ ಕಾರ್ಮಿಕರು
Follow us on

ಜೀನ್ಸ್ ಹಬ್ ಎಂದು ಪ್ರಖ್ಯಾತಿ ಪಡೆದಿರೋ ಬಳ್ಳಾರಿಯ (Bellary) ಜೀನ್ಸ್ ಉದ್ಯಮ (Jeans Park) ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಈಗಾಗಲೇ ಕಚ್ಚಾ ವಸ್ತುಗಳ ದರ, ಇಂಪೋರ್ಟ್ ಮತ್ತು ಎಕ್ಸ್ ಪೋರ್ಟ್ ದರ ಹೆಚ್ಚಾದ ಬೆನ್ನಲ್ಲೇ ಇದೀಗ ವಿದ್ಯುತ್ ಕಣ್ಣಾಮುಚ್ಚಾಲೆ (electricity) ಉದ್ಯಮದಾರರಷ್ಟೆ ಅಲ್ಲದೇ ಕಾರ್ಮಿಕರ ಬದುಕನ್ನು ಕೂಡ ಸಂಕಷ್ಟಕ್ಕೀಡು ಮಾಡಿದೆ. ಅನಿಯಮಿತ ಲೋಡ್ ಶೆಡ್ಡಿಂಗ್ ಪರಿಣಾಮ (Karnataka Congress government) ದಿನಕ್ಕೆ 300 ರೂಪಾಯಿ ದುಡಿಯುವ ಕಾರ್ಮಿಕ ವರ್ಗದ ಆದಾಯಕ್ಕೂ ಖೋತಾ ಬಿದ್ದಿರೋ ಹಿನ್ನೆಲೆ ಜೀನ್ಸ್ ಕಾರ್ಮಿಕರು ಪರದಾಡುತ್ತಿದ್ದಾರೆ.

ಅನಿಯಮಿತ ಲೋಡ್ ಶೆಡ್ಡಿಂಗ್ ನಿಂದಾಗಿ ಗ್ರಾಹಕರಷ್ಟೇ ಅಲ್ಲದೇ ಉದ್ಯಮದಾರರು ಹೈರಾಣಾಗ್ತಿದ್ದಾರೆ. ರಾಜ್ಯದಲ್ಲಿ ಅನಿಯಮಿತ ಲೋಡ್ ಶೆಡ್ಡಿಂಗ್ ನಿಂದಾಗಿ ರೈತರು ಮಾತ್ರ ಸಂಕಷ್ಟ ಅನುಭವಿಸುತಿಲ್ಲ.. ಸಣ್ಣ ಸಣ್ಣ ಕೈಗಾರಿಕೆಯ ಮೇಲೂ ಲೋಡ್ ಶೆಡ್ಡಿಂಗ್ ಪ್ರಭಾವ ಬೀರುತ್ತಿದೆ… ಹೌದು, ಹೀಗೆ ಕರೆಂಟ್ ಕಣ್ಣಾಮುಚ್ಚಾಲೆಯಿಂದ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಪ್ರತಿಯೊಬ್ಬರು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಬಳ್ಳಾರಿಯಲ್ಲಿ ಜೀನ್ಸ್ ಉದ್ಯಮವನ್ನು ನಂಬಿಕೊಂಡು 60 ರಿಂದ 80 ಸಾವಿರ ಕುಟುಂಬಗಳು ಜೀವನ ಮಾಡುತ್ತವೆ.

ಜೀನ್ಸ್ ಉದ್ಯಮದ ವಿವಿಧ ವಿಭಾಗಗಳಲ್ಲಿ ಪ್ರತಿನಿತ್ಯ ಸಾವಿರಾರು ಜನರು ಕೆಲಸ ಮಾಡುತ್ತಿದ್ಧಾರೆ. ಆದ್ರೇ, ಲೋಡ್ ಶೆಡ್ಡಿಂಗ್ ನಿಂದಾಗಿ ಇದೀಗ ಅವರಿಗೆ ಕೆಲಸವೇ ಇಲ್ಲದಂತಾಗಿದೆ. ಕೆಲಸದ ವೇಳೆ ಕರೆಂಟ್ ಯಾವಾಗ ಹೋಗ್ತದೆ ಯಾವಾಗ ಬರುತ್ತದೆ ಅನ್ನೋದು ಯಾರಿಗೂ ಗೊತ್ತಿಲ್ಲ. ಹೀಗಾಗಿ ಕೆಲಸಕ್ಕೆ ಬಂದ ಕಾರ್ಮಿಕರು ದಿನದ ಬಹುತೇಕ ಅವಧಿಯಲ್ಲಿ ಕೆಲಸವಿಲ್ಲದೇ ಖಾಲಿ ಕುಳಿತಿರೋ ಸ್ಥಿತಿ ನಿರ್ಮಾಣವಾಗುತ್ತಿದೆ. ಇದರ ಜೊತೆ ಇಲ್ಲಿ ನಿಗದಿತ ಸಂಬಳವಿರೋದಿಲ್ಲ.

ಒಂದು ಪ್ಯಾಂಟ್ ಹೊಲಿದರೇ ಇಂತಿಷ್ಟು ಹಣ ಇರುತ್ತದೆ. ದಿನಕ್ಕೆ ಎಷ್ಟು ಪ್ಯಾಂಟ್ ಹೊಲಿಯುತ್ತಾರೋ ಅಷ್ಟು ಹಣ ಬರುತ್ತದೆ. ಹೆಚ್ಚು ಕಡಿಮೆ ದಿನಕ್ಕೆ ಮೂನ್ನೂರು ರಿಂದ ನಾಲ್ಕು ನೂರರವರೆಗೂ ದುಡಿಯುತ್ತಾರೆ ಆದ್ರೇ, ಕರೆಂಟ್ ಇಲ್ಲದ ಹಿನ್ನೆಲೆ ಎರಡರಿಂದ ಮೂನ್ನೂರು ಬಂದ್ರೆ, ಅದೇ ಹೆಚ್ಚು ಎನ್ನುತ್ತಿದ್ಧಾರೆ ಇಲ್ಲಿಯ ಉದ್ಯಮದಾರರು.

ಗಣಿನಾಡು ಬಳ್ಳಾರಿ, ಜೀನ್ಸ್ ಉದ್ಯಮಕ್ಕೆ ಹೆಸರುವಾಸಿಯಾಗಿದೆ. ಆದ್ರೇ, ಕರೆಂಟ್ ಕೈಕೊಡ್ತಿರೋ ಹಿನ್ನೆಲೆ ಅದನ್ನು ನೆಚ್ಚಿಕೊಂಡ ಮಾಲೀಕರು ಮತ್ತು ಕಾರ್ಮಿಕರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ದಿನಕ್ಕೆ ಸುಮಾರು ಐದಾರು ಗಂಟೆಗಳ ಕಾಲ ಕರೆಂಟ್ ಕಡಿತಗೊಳಿಸುತ್ತಿರೋ ಹಿನ್ನೆಲೆ ಜೀವನ ನಿರ್ವಹಣೆಗೆ ಅಗತ್ಯವಾದಷ್ಟು ಹಣವನ್ನು ದುಡಿಯಲಾಗದೇ ಪರದಾಡುತ್ತಿದ್ದಾರೆ. ಅಲ್ಲದೇ ವಿದ್ಯುತ್ ಸ್ಥಗಿತಗೊಳಿಸಲು ಸಮಯ ನಿಗದಿ ಮಾಡಿ, ಬೇಕಾಬಿಟ್ಟಿಯಾಗಿ ಕರೆಂಟ್ ಕಟ್ ಮಾಡಿದ್ರೇ ಹೇಗೆ ಎಂದು ಪ್ರಶ್ನೆ ಮಾಡುತ್ತಿದ್ಧಾರೆ. ಇನ್ನು ಸರ್ಕಾರ ಮುಂದಿನ ಬಜೆಟ್ನಲ್ಲಿ ಬಳ್ಳಾರಿಯಲ್ಲಿ ಐದು ಸಾವಿರ ಕೋಟಿ ವೆಚ್ಚದಲ್ಲಿ ಜೀನ್ಸ್ ಪಾರ್ಕ್ ಮಾಡಲು ಚಿಂತನೆ ಮಾಡುತ್ತಿದೆ. ಇದ್ಯಾವುದು ನಮಗೆ ಬೇಡ ಮೊದಲು ಕರೆಂಟ್ ಕೊಡಿ ಎನ್ನುತ್ತಿದ್ದಾರೆ ಇಲ್ಲಿನ ಕಾರ್ಮಿಕರು

ಗ್ಯಾರಂಟಿ ನೀಡುವ ಭರದಲ್ಲಿ ಸರ್ಕಾರ ವಿದ್ಯುತ್ ನಿರ್ವಹಣೆ ಮಾಡುವಲ್ಲಿ ಎಡವುತ್ತಿದೆ. ಕರೆಂಟ್ ಕಣ್ಣಾಮುಚ್ಚಾಲೆ ಕೇವಲ ರೈತರಿಗೆ ಮಾತ್ರವಲ್ಲದೇ ಇದೀಗ ಸಣ್ಣ ಸಣ್ಣ ಉದ್ಯಮದಾರರಿಗೆ ದೊಡ್ಡ ಮಟ್ಟದ ಹೊಡೆತ ನೀಡುತ್ತಿದೆ. ಹೀಗಾಗಿ ಸರ್ಕಾರ ಈ ಬಗ್ಗೆ ಗಮನಹರಿಸೋ ಮೂಲಕ ರೈತರ ಜೊತೆ ಉದ್ಯಮದಾರರನ್ನು ಕಾಪಾಡಬೇಕಿದೆ.

ವರದಿ: ಸಂತೋಷ್​ ಚಿನ್ನಗುಂಡಿ, ಟಿವಿ9, ಬಳ್ಳಾರಿ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ