ಬಳ್ಳಾರಿ, ಡಿಸೆಂಬರ್ 24: ಬಳ್ಳಾರಿ ಜಿಲ್ಲಾ ಆಸ್ಪತ್ರೆ (BIMS) ಯಲ್ಲಿ ಐವರು ಬಾಣಂತಿಯರು ಮೃತಪಟ್ಟಿದ್ದ ಘಟನೆ ಕರ್ನಾಟಕ ಸರ್ಕಾರದ ನಿದ್ದೆಗೆಡಿಸಿದೆ. ಬಿಮ್ಸ್ನಲ್ಲಿ ಬಾಣಂತಿಯರ (Maternal) ಸಾವಿನ ಪ್ರಕರಣದ ತನಿಖೆ ನಡೆಯುತ್ತಿದೆ. ಈ ನಡುವೆ ಮತ್ತೊಂದು ಆಘಾತಕಾರಿ ಅಂಶ ಬಹಿರಂಗಗೊಂಡಿದೆ. ಬಳ್ಳಾರಿ ಜಿಲ್ಲೆಯಲ್ಲಿ 8 ತಿಂಗಳ ಅವಧಿಯಲ್ಲಿ 23 ಬಾಣಂತಿಯರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತ ಸರ್ಕಾರಕ್ಕೆ ಸಲ್ಲಿಸಿದ ಅಡಿಟ್ ವರದಿಯಲ್ಲಿ ಉಲ್ಲೇಖವಾಗಿದೆ.
2024ರ ಏಪ್ರಿಲ್‌ನಿಂದ ಈವರೆಗೆ ಬಳ್ಳಾರಿ ಜಿಲ್ಲೆಯಲ್ಲಿ 23 ಬಾಣಂತಿಯರು ಮೃತಪಟ್ಟಿದ್ದಾರೆ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಾಹಿತಿ ನೀಡಿದ್ದಾರೆ. ಹೆರಿಗೆ ಸಂದರ್ಭದಲ್ಲಿ ಅಪೌಷ್ಟಿಕತೆ, ಅನಿಮಿಯಾ ಸೇರಿ ಇತರೆ ಕಾಯಿಲೆಯಿಂದ ಬಾಣಂತಿಯರು ಸಾವಿಗೀಡಾಗಿದ್ದಾರೆ ಎಂದು ತಿಳಿಸಿದ್ದಾರೆ.
ನವೆಂಬರ್ 9 ರಂದು ಜಿಲ್ಲಾ ಆಸ್ಪತ್ರೆಯಲ್ಲಿ 14 ಬಾಣಂತಿಯರಿಗೆ ಸಿಸೇರಿಯನ್ ಮೂಲಕ ಹೆರಿಗೆ ಮಾಡಲಾಗಿತ್ತು. ಈ ಪೈಕಿ ಒಂಬತ್ತು ಬಾಣಂತಿಯರ ಆರೋಗ್ಯದಲ್ಲಿ ಏಕಾಏಕಿ ಏರುಪೇರು ಕಂಡುಬಂದಿತ್ತು. ತಕ್ಷಣ ಏನಾಯಿತು ಅಂತ ಗಮನಿಸುವಷ್ಟರಲ್ಲಿ ಇಬ್ಬರು ಬಾಣಂತಿಯರು ಮೃತಪಟ್ಟಿದ್ದರು. ಬಳಿಕ, ಉಳಿದ ಏಳು ಬಾಣಂತಿಯರನ್ನು ಬಿಮ್ಸ್ ಆಸ್ಪತ್ರೆಗೆ ಶಿಪ್ಟ್ ಮಾಡಲಾಗಿತ್ತು. ಏಳು ಬಾಣಂತಿಯರಲ್ಲಿ ನವೆಂಬರ್ 13 ಓರ್ವ ಬಾಣಂತಿ ಮತ್ತು ನವೆಂಬರ್ 25 ಓರ್ವ ಬಾಣಂತಿ ಮೃತಪಟ್ಟಿದ್ದರು. ಕೇವಲ 10-15 ದಿನಗಳ ಅಂತರದಲ್ಲಿ ಐವರು ಬಾಣಂತಿಯರು ಮೃತ್ತಿಟ್ಟಿದ್ದರು.
ಇದನ್ನೂ ಓದಿ: ಬಾಣಂತಿ ಸಾವಿಗೆ ಕಾರಣವಾಯ್ತಾ ಬಿಮ್ಸ್ ಸಿಬ್ಬಂದಿ ನೀಡಿದ ಔಷಧ? ಕುಟುಂಬದವರಿಂದ ದೂರು ದಾಖಲು
ರಾಯಚೂರು ಜಿಲ್ಲೆಯಲ್ಲಿ ಮೂರು ತಿಂಗಳಲ್ಲಿ ಒಟ್ಟು 10 ಮಂದಿ ಬಾಣಂತಿಯರು ಮೃತಪಟ್ಟಿದ್ದಾರೆ. ಸಿಂಧನೂರು ತಾಲೂಕು ಆಸ್ಪತ್ರೆಯಲ್ಲೇ ನಾಲ್ವರು ಬಾಣಂತಿಯರು ಮೃತಪಟ್ಟಿದ್ದಾರೆ. ಸಿಂಧನೂರು ತಾಲೂಕು ಆಸ್ಪತ್ರೆಗೆ ಅಕ್ಟೋಬರ್ ತಿಂಗಳಲ್ಲಿ ದಾಖಲಾಗಿದ್ದ ನಾಲ್ವರು ಬಾಣಂತಿಯರು ಸಿಸೇರಿಯನ್ ಬಳಿಕ ಮೃತಪಟ್ಟಿದ್ದರು. ರಾಯಚೂರು ಜಿಲ್ಲೆಯವರೇಯಾದ ಮೌಸಂಬಿ ಮಂಡಲ್, ಚನ್ನಮ್ಮ, ಚಂದ್ರಕಲಾ, ರೇಣುಕಮ್ಮ ಮೃತ ಬಾಣಂತಿಯರು. ಈ ನಾಲ್ವರು ಬಾಣಂತಿಯರಿಗೂ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಳಕೆಯಾಗಿದ್ದ IVದ್ರಾವಣವೇ ನೀಡಲಾಗಿತ್ತು ಎಂದು ಹೇಳಲಾಗಿತ್ತು.
ಬೆಳಗಾವಿಯಲ್ಲಿ ಆರು ತಿಂಗಳಲ್ಲಿ 29 ಬಾಣಂತಿಯರು ಮತ್ತು 322 ಶಿಶುಗಳು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿಗಳು ತಿಳಿಸಿದ್ದರು. ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯದಿರುವುದು, ರಕ್ತಸ್ರಾವ, ವೈದ್ಯರ ನಿರ್ಲಕ್ಷ್ಯ ಮುಂತಾದ ಕಾರಣಗಳಿಂದ ಬಾಣಂತಿಯರು ಮೃತಪಟ್ಟಿದ್ದಾರೆ ಎಂದು ತಿಳಸಿದ್ದರು.
ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಮಹಿಳೆ ಬೆಂಗಳೂರಿನ ನಾಗರಾಬಾವಿಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪ ಮಾಡಿದ್ದರು. ಒಂದು ತಿಂಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದ ಬಾಣಂತಿ, ಅನಾರೋಗ್ಯದಿಂದಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಒಟ್ಟಾರೆಯಾಗಿ ರಾಜ್ಯದಲ್ಲಿ ಸಂಭಿಸುತ್ತಿರುವ ಮತ್ತು ಸಂಭವಿಸಿರುವ ಬಾಣಂತಿಯರ ಸಾವಿನ ಪ್ರಕರಣದಿಂದ ರಾಜ್ಯ ಸರ್ಕಾರ ತಲೆ ತಗ್ಗಿಸುವಂತಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:46 am, Tue, 24 December 24