ಬಳ್ಳಾರಿ: ಬೆಂಗಳೂರು ನಂತರ ಬಳ್ಳಾರಿಯಲ್ಲೂ ಚಿರತೆ (Leopard) ಭಯ ಮೂಡಿಸಿದೆ. ಜಿಲ್ಲೆಯ ಸಂಡೂರು ತಾಲೂಕಿನ ನಂದಿಹಳ್ಳಿ ಬಳಿಯ ಶ್ರೀಕೃಷ್ಣ ದೇವರಾಯ ವಿಶ್ವ ವಿದ್ಯಾಲಯದ (Sri Krishnadevaraya University) ಪಿಜಿ ಸೆಂಟರ್‌ನಲ್ಲಿ ಚಿರತೆ ಕಾಣಿಸಿಕೊಂಡಿದೆ. ಕಳೆದ ಒಂದು ವಾರದಿಂದ ಪಿಜಿ ಸೆಂಟರ್ ಸುತ್ತಮುತ್ತ ಚಿರತೆ ಓಡಾಡುತ್ತಿದೆ. ಚಿರತೆಯ ಓಡಾಟ ಕಂಡು ಪಿಜಿ ಸೆಂಟರ್‌ನ ವಿದ್ಯಾರ್ಥಿಗಳು ಭಯಭೀತರಾಗಿದ್ದಾರೆ. ಇನ್ನೂ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಬೋನ್ ಇಟ್ಟಿದ್ದಾರೆ.
ಚಿರತೆ ಭೀತಿ: ದೊಣ್ಣೆ ಹಿಡಿದುಕೊಂಡು ಬೆಳೆ ಕಟಾವು ಮಾಡುತ್ತಿರುವ ಗಂಡ-ಹೆಂಡತಿ
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಚೆನ್ನಾಪುರದಲ್ಲಿ ಚಿರತೆ ಪ್ರತ್ಯಕ್ಷ ವಾಗಿರುವುದು ಜನರಲ್ಲಿ ಭೀತಿ ಹೆಚ್ಚಿಸಿದೆ. ಪರಿಣಾಮವಾಗಿ ಕೂಲಿಕಾರ್ಮಿಕರು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದು, ಕಟಾವಿಗೆ ಬಂದ ಬೆಳೆಗಳನ್ನು ಕಟಾವು ಮಾಡಲು ಕೃಷಿಕರು ಪರದಾಡುವಂತಾಗಿದೆ. ಬೆಟ್ಟದ ತಪಲಿನ ಕಡೆ ಹೊಲಗಳಿರುವ ಕಾರಣ ಕೆಲಸಕ್ಕೆ ಕರೆದರೂ ಕೂಲಿ ಕಾರ್ಮಿಕರು ಬರುತ್ತಿಲ್ಲವೆಂದು ವಿಧಿಯಿಲ್ಲದೆ ದಂಪತಿಗಳೇ ತೋಟಕ್ಕಿಳಿದು ದೊಣ್ಣೆ ಹಿಡಿದುಕೊಂಡು ಬೆಳೆ ಕಟಾವು ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಚಿರತೆ ದಾಳಿ ಯನ್ನು ತಡೆಯಲು ಗಂಡ ದೊಣ್ಣೆ ಹಿಡಿದುಕೊಂಡು ನಿಂತರೆ ಹೆಂಡತಿ ಕೊಯ್ಲಿಗೆ ಬಂದಿರುವ ರಾಗಿ ಬೆಳೆಗಳನ್ನು ಕಟಾವು ಮಾಡುವಲ್ಲಿ ನಿರತರಾಗಿದ್ದಾರೆ.
ಚಿರತೆ ಆತಂಕದ ನಡುವೆಯು ಪ್ರವಾಸಿಗರ ಹುಚ್ಚಾಟ
ದೊಡ್ಡಬಳ್ಳಾಪುರ ತಾಲೂಕಿನ ಚೆನ್ನಾಪುರ ಬಳಿಯ ಚೆನ್ನಗಿರಿ ಬೆಟ್ಟಕ್ಕೆ ಚಿರತೆ ಭೀತಿಯ ನಡುವೆಯೂ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಯುವಕ ಯುವತಿಯರು ಬೈಕ್ಗಳಲ್ಲಿ ಬೆಟ್ಟಕ್ಕೆ ಟ್ರಕ್ಕಿಂಗ್ ಬರುತ್ತಿರುವ ಹಿನ್ನೆಲೆ ಅರಣ್ಯ ಇಲಾಖೆಯಿಂದ ಪ್ರವೇಶ ನಿಷೇಧ ಬೋರ್ಡ್ ಅಳವಡಿಕೆ ಮಾಡಲಾಗಿದೆ. ಆದರೂ ಬೆಟ್ಟಕ್ಕೆ ಪ್ರವಾಸಿಗರು ಆಗಮಿಸುತ್ತಿದ್ದಾರೆ.
ರಾಜ್ಯದಲ್ಲಿ ಅದರಲ್ಲೂ ಬೆಂಗಳೂರು, ಮೈಸೂರು ಮತ್ತು ಮಂಡ್ಯದಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಚಿರತೆ ದಾಳಿಗೆ ಸಾಕು ಪ್ರಾಣಿಗಳು ಮಾತ್ರವಲ್ಲದೆ ಜನರ ಕೂಡ ಬಲಿಯಾಗಿದ್ದಾರೆ. ಮೈಸೂರಿನ ಟಿ.ನರಸೀಪುರ ತಾಲೂಕಿನಲ್ಲಿ ಇಬ್ಬರು ಚಿರತೆ ದಾಳಿಗೆ ಬಲಿಯಾಗಿದ್ದಾರೆ. ಪಿರಿಯಾಪಟ್ಟಣ ತಾಲೂಕಿನ ತಿಮ್ಕಾಪುರ ದಡ ಗ್ರಾಮದಲ್ಲಿ ಚಿರತೆ ದಾಳಿಗೆ ಹಸು ಬಲಿಯಾಗಿದ್ದು, ಹುಣಸೂರು ತಾಲೂಕಿನಲ್ಲಿ ಕಳೆದ ಒಂದು ವಾರದಲ್ಲಿ 7 ಸಾಕು ಪ್ರಾಣಿಗಳು ಹುಲಿ ದಾಳಿಗೆ ಬಲಿಯಾಗಿವೆ. ಕಳೆದ ಒಂದು ವಾರದಿಂದ ಚಿರತೆ ಕಾಡಿನಿಂದ ನಾಡಿಗೆ ಬರುತ್ತಿದ್ದು, ಸ್ಥಳದಲ್ಲಿ ಬೋನು ಇಡುವಂತೆ ಗ್ರಾಮಸ್ಥರ ಅರಣ್ಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಬೆಂಗಳೂರಿನ ತುರಹಳ್ಳಿ ಬಳಿ ಜಿಂಕೆಯನ್ನ ಬೇಟೆಯಾಡಿರುವ ಚಿರತೆ ಯ ವಿಡಿಯೋ ವೈರಲ್ ಆದ ನಂತರ ಜನರು ಭಯಭೀತರಾಗಿದ್ದಾರೆ. ಕೆಂಗೇರಿ ಸಮೀಪದ ಕೋಡಿಪಾಳ್ಯ, ಚಟ್ಟಿಪಾಳ್ಯ ನಿವಾಸಿಗಳಲ್ಲಿ ಭೀತಿ ಹೆಚ್ಚಿಸಿದೆ. ತುರಹಳ್ಳಿ ಗ್ರಾಮಕ್ಕೆ ಹೊಂದಿಕೊಂಡು ಕಗ್ಗಲೀಪುರ-ತುರಹಳ್ಳಿ ಅರಣ್ಯ ಪ್ರದೇಶವಿದ್ದು, ಸೋಂಪುರ, ಶ್ರೀನಿವಾಸಪುರ, ಆರ್.ಆರ್.ನಗರ, ಮೈಲಸಂದ್ರ, ಕೋಡಿಪಾಳ್ಯ, ಗೆಟ್ಟಿಗರಹಳ್ಳಿಯನ್ನ ಸುತ್ತುವರಿದಿದೆ. ಈ ಅರಣ್ಯ ಪ್ರದೇಶವು 514.26 ಎರಕೆ ವಿಸ್ತೀರ್ಣದಲ್ಲಿದೆ. ಐಟಿಸಿ ಪ್ಯಾಕ್ಟರಿಯಲ್ಲಿ ಚಿರತೆ ಪ್ರತ್ಯಕ್ಷ ಹಿನ್ನೆಲೆ ಚೀತಾ ಕೂಂಬಿಂಗ್ ಮುಂದುವರಿದಿದೆ.
ಮಂಡ್ಯದಲ್ಲಿ ಮನೆ ಮುಂದೆ ಮಲಗಿದ್ದ ಶ್ವಾನದ ಮೇಲೆ ದಾಳಿ ನಡೆಸಿದ್ದ ಚಿರತೆ ಒಂದು ತಿಂಗಳು ಕಳೆದರೂ ಯಾರ ಕಣ್ಣಿಗೂ ಬಿದ್ದಿಲ್ಲ. ಮಳವಳ್ಳಿ ತಾಲೂಕಿನ ದನಗೂರು ಫಾರ್ಮ್ ಹೌಸ್ನಲ್ಲಿ ಶ್ವಾನದ ಮೇಲಿನ ಚಿರತೆ ದಾಳಿಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳೆದ 15 ದಿನಗಳ ಹಿಂದೆ ನಡೆದ ಈ ಘಟನೆಯಲ್ಲಿ ಚಿರತೆ ದಾಳಿಯಿಂದ ಕೂದಲೆಳೆ ಅಂತದಲ್ಲಿ ಶ್ವಾನ ಪ್ರಾಣಾಪಾಯದಿಂದ ಪಾರಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ