ಚಾಕೊಲೇಟ್ ನೆಪದಲ್ಲಿ ಬಾಲಕನ ಕಿಡ್ನಾಪ್ – ಕುಡುಕರಂತೆ ನಟಿಸುತ್ತ ಅಪಹರಣಕಾರರ ಯತ್ನ ವಿಫಲಗೊಳಿಸಿದ ಹಗರಿಬೊಮ್ಮನಹಳ್ಳಿ ಪೊಲೀಸರು!

| Updated By: ಸಾಧು ಶ್ರೀನಾಥ್​

Updated on: Jul 05, 2022 | 6:49 PM

ಅಪಹರಣಕಾರರು ಮಣ್ಣಿನ ರಸ್ತೆಯಲ್ಲಿ ಬಾಲಕನ ಸಮೇತ ಅಡಗಿ ಕುಳಿತ್ತಿದ್ದನ್ನ ಅರಿತು ಬಾಲಕನ ತಂದೆ ರಾಘವೇಂದ್ರ ತಾಯಿ ಅನುಷಾ ಹಣದ ಸಮೇತ ಅಲ್ಲಿಗೆ ತೆರಳಿದ್ದರು. ಬಾಲಕನ ಪೋಷಕರ ಜೊತೆ ಪೊಲೀಸರು ಗ್ರಾಮೀಣರಂತೆ ವೇಷ ಮರೆಸಿಕೊಂಡು ಹಿಂಬಾಲಿಸಿ, ಸುತ್ತುವರೆದಿದ್ದರು.

ಚಾಕೊಲೇಟ್ ನೆಪದಲ್ಲಿ ಬಾಲಕನ ಕಿಡ್ನಾಪ್ - ಕುಡುಕರಂತೆ ನಟಿಸುತ್ತ ಅಪಹರಣಕಾರರ ಯತ್ನ ವಿಫಲಗೊಳಿಸಿದ ಹಗರಿಬೊಮ್ಮನಹಳ್ಳಿ ಪೊಲೀಸರು!
ಚಾಕೊಲೇಟ್ ನೆಪದಲ್ಲಿ 5 ವರ್ಷದ ಬಾಲಕನ ಕಿಡ್ನಾಪ್ - 15 ಲಕ್ಷ ಹಣಕ್ಕೆ ಬೇಡಿಕೆ, ಆರು ಆರೋಪಿಗಳು ಅಂದರ್!
Follow us on

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ತೀವ್ರ ಆತಂಕ ಮೂಡಿಸಿದ್ದ ಬಾಲಕನ ಅಪಹರಣ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದೆ. ಅಪಹರಣಕ್ಕೊಳಗಾಗಿದ್ದ ಐದು ವರ್ಷದ ಬಾಲಕ ಅದ್ವಿಕ್ ಸುರಕ್ಷಿತವಾಗಿ ಪೋಷಕರ ಮಡಿಲು ಸೇರಿದ್ದಾನೆ. ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಭಾನುವಾರ ಮಧ್ಯಾಹ್ನ ನಡೆದ ಅಪಹರಣ ಪ್ರಕರಣವನ್ನ 24 ಗಂಟೆಯೊಳಗೆ ಭೇದಿಸಿ, 6 ಆರೋಪಿಗಳನ್ನ ಬಂಧಿಸಿ ಪ್ರಕರಣಕ್ಕೆ ಮಂಗಳ ಹಾಡಿದ್ದಾರೆ.

ಪ್ರಕರಣದ ಹಿನ್ನೆಲೆ:
ಹಗರಿಬೊಮ್ಮನಹಳ್ಳಿ ಪಟ್ಟಣದ ಹಳೆ ಊರಿನ ನೀರಾವರಿ ಇಲಾಖೆಯ ಆವರಣದ‌ ನಿವಾಸಿ ರಾಘವೇಂದ್ರ ಹಾಗೂ ಅನುಷಾ ದಂಪತಿಯ ಪುತ್ರನಾಗಿರುವ 5 ವರ್ಷದ ಬಾಲಕ ಭಾನುವಾರ ಮಧ್ಯಾಹ್ನ ಆಟ ಆಡುತ್ತಿದ್ದ. ಆಟವಾಡುತ್ತಿದ್ದ ಅದ್ವಿಕ್‌ನನ್ನು ಬೈಕ್ ನಲ್ಲಿ ಬಂದಿದ್ದ ವ್ಯಕ್ತಿಯೊಬ್ಬ ಚಾಕೊಲೇಟ್ ಕೊಡಿಸುವುದಾಗಿ ನಂಬಿಸಿ ಕಿಡ್ನಾಪ್ ಮಾಡಿದ್ದ. ಬಾಲಕನ ಕಿಡ್ನಾಪ್ ಮಾಡಿ ಆತನ ತಂದೆ ರಾಘವೇಂದ್ರ ಅವರಿಗೆ ಅಪಹರಣಕಾರರು ಕರೆ ಮಾಡಿ 15 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಪೋಷಕರು ತಡಮಾಡದೆ ಈ ವಿಷಯವನ್ನ ಪೊಲೀಸರ ಗಮನಕ್ಕೆ ತಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ ಅವರು ಹಗರಿಬೊಮ್ಮನಹಳ್ಳಿಗೆ ಧಾವಿಸಿ, ಡಿವೈಎಸ್‌ಪಿ ಹರೀಶ್‌, ಸಿಪಿಐ ಟಿ. ಮಂಜಣ್ಣ, ಪಿಎಸ್ಐ ಸರಳಾ ನೇತೃತ್ವದಲ್ಲಿ ಮೂರು ತನಿಖಾ ತಂಡ ಸನ್ನದ್ಧವಾಯಿತು. ತನಿಖೆಗೆ ಇಳಿದ ಪೊಲೀಸರು ಅಪಹರಣಕಾರರು ಮೋರಿಗೇರಿ ಕ್ರಾಸ್‌ನ ಉಲವತ್ತಿ ಗ್ರಾಮದ ಮಣ್ಣಿನ ರಸ್ತೆಯಲ್ಲಿ ಬಾಲಕನ ಸಮೇತ ಅಡಗಿ ಕುಳಿತ್ತಿದ್ದನ್ನ ಅರಿತು ರಾಘವೇಂದ್ರ ಅವರು ಪತ್ನಿ ಅನುಷಾ ಅವರೊಂದಿಗೆ ಹಣದ ಸಮೇತ ಅಲ್ಲಿಗೆ ತೆರಳಿದ್ದರು. ಬಾಲಕನ ಪೋಷಕರ ಜೊತೆ ಪೊಲೀಸರು ಗ್ರಾಮೀಣರಂತೆ ವೇಷ ಮರೆಸಿಕೊಂಡು ಹಿಂಬಾಲಿಸಿ, ಸುತ್ತುವರೆದಿದ್ದರು. ಇಬ್ಬರು ಪೊಲೀಸರು, ಕುಡುಕರಂತೆ ನಟಿಸುತ್ತ ಅಪಹರಣಕಾರರ ಬಳಿ ತೆರಳುತ್ತಿದ್ದಂತೆ ಅಪಹರಣಕಾರರು ಬಾಲಕನನ್ನು ಬಿಟ್ಟು ಪರಾರಿಯಾಗಿದ್ರು.

ಪೊಲೀಸರು ಬಾಲಕನನ್ನ ಅಪಹರಣ ಮಾಡಿದ ಹಗರಿಬೊಮ್ಮನಹಳ್ಳಿಯ ಅಲ್ಲಾಭಕ್ಷಿ ಕರೀಂ ಸಾಬ್ (25 ) ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಹಲಗಾಪುರದ ಚನ್ನಬಸವ ಸೋಮಪ್ಪ (26), ಕೊಟ್ರೇಶ ಜಂಬಪ್ಪ (23), ಕೇಶವರಾಯನಬಂಡಿಯ ರಮೇಶ ದೊಡ್ಡನಿಂಗಪ್ಪ (22) ಬಸವರಾಜ ನಿಂಗಪ್ಪ (22) , ಹಂಪಾಪಟ್ಟಣದ ರವಿ ನಿಂಗಪ್ಪ (38) ಎನ್ನುವ ಆರು ಅರೋಪಿಗಳನ್ನ ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ 7 ಮೊಬೈಲ್, ಎರಡು ದ್ವಿಚಕ್ರ ವಾಹನಗಳನ್ನ ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳ ಪೈಕಿ ಅಲ್ಲಾಭಕ್ಷಿ ಬಾಲಕನ ಮನೆಯವರ ಕಾರಿನ ಚಾಲಕನಾಗಿ ಇತ್ತೀಚೆಗೆ ಮಂತ್ರಾಲಯಕ್ಕೆ ತೆರಳಿದ್ದ. ಈ ವೇಳೆ ಬಾಲಕನ ಕುಟುಂಬದ ಅರ್ಥಿಕ ಸ್ಥಿತಿ ಬಗ್ಗೆ ತಿಳಿದುಕೊಂಡು ಕಿಡ್ನಾಪ್ ಪ್ಲ್ಯಾನ್ ರೂಪಿಸಿದ್ದ!

ಕಿಡ್ನಾಪ್ ಪ್ರಕರಣವನ್ನ ಭೇದಿಸುವಲ್ಲಿ ಹಗರಿಬೊಮ್ಮನಹಳ್ಳಿ ಠಾಣೆಯ ಸಿಪಿಐ ಟಿ. ಮಂಜಣ್ಣ, ಪಿಎಸ್ಐ ಸರಳಾ. ಮುಖ್ಯ ಪೇದೆಗಳಾದ ರೇವಣಸಿದ್ದಪ್ಪ, ಕಾನ್‌ಸ್ಟೆಬಲ್‌ಗಳಾದ ರಾಮಾಂಜನೇಯ, ಮಲ್ಲೇಶ್ ನಾಯ್ಕ ಮಂಜುನಾಥ , ಶಂಕರನಾಯ್ಕ, ಆನಂದಪ್ಪ, ಸುರೇಶ್ ಯಮನಪ್ಪ ಬಂಡೆ, ಗುರುಬಸವರಾಜ, ಗಿರೀಶ್ ನಿಚ್ಚಾಪುರ, ಗಣೇಶ್, ರೇವಣಸಿದ್ದಪ್ಪ ಪೂಜಾರ್ ಗಣೇಶ್, ಸಿ. ವೀರೇಶ್ ಕಾರ್ಯಾಚರಣೆಯಲ್ಲಿದ್ದರು.