
ಬಳ್ಳಾರಿ, ಏಪ್ರಿಲ್ 16: ಇತ್ತೀಚೆಗೆ ನಗರದಲ್ಲಿ ಮನಿ ಡಬ್ಲಿಂಗ್ ಸ್ಕ್ಯಾಮ್ (Money-Doubling Scam) ಪ್ರಕರಣವೊಂದು ಬೆಳಕಿಗೆ ಬಂದಿತ್ತು. ಸಾಕಷ್ಟು ಜನರಿಂದ ಬರೋಬ್ಬರಿ 50 ಕೋಟಿಗೂ ಹೆಚ್ಚು ಹಣ ವಂಚನೆ ಮಾಡಿರುವ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಬ್ರೂಸ್ ಪೇಟೆ ಪೋಲಿಸ್ ಠಾಣೆಯಲ್ಲಿ (Bruce Town Police) ಪ್ರಕರಣ ಕೂಡ ದಾಖಲಾಗಿತ್ತು. ಇದೀಗ ಕೋಟ್ಯಂತರ ಹಣದ ಸಮೇತ ಪರಾರಿಯಾಗಿರುವ ವಂಚಕ ವಿಶ್ವನಾಥ್ 10 ದಿನ ಕಳೆದರೂ ಇನ್ನೂ ಪತ್ತೆಯಾಗಿಲ್ಲ. ಕರ್ನಾಟಕ, ಆಂಧ್ರ ಸೇರಿದಂತೆ ವಿವಿಧೆಡೆ ವಿಶ್ವನಾಥ್‌ಗಾಗಿ ಎರಡು ತಂಡಗಳನ್ನು ರಚಿಸಿ ಪೊಲೀಸ್ ಹುಡುಕಾಡಿದರೂ ಆರೋಪಿ ಸುಳಿವು ಸಿಕ್ಕಿಲ್ಲ. ಇತ್ತ ಹಣ ಕಳೆದುಕೊಂಡ 900ಕ್ಕೂ ಹೆಚ್ಚು ಜನರು ಠಾಣೆಗೆ ಅಲೆದಾಡುತ್ತಿದ್ದಾರೆ.
ವಾಸವಿ ಹೋಮ್ ನೀಡ್ಸ್ ಕಂಪನಿ ಹೆಸರಲ್ಲಿ ಟಿ.ವಿಶ್ವನಾಥ್ ಎಂಬಾತನ ಬಳಿ ಕಳೆದ 3 ವರ್ಷಗಳಿಂದ ನೂರಾರು ಜನರು ಹಣ ಹೂಡಿಕೆ ಮಾಡಿದ್ದರು. 75 ಸಾವಿರ ರೂ ಹಣ ಹೂಡಿಕೆ ಮಾಡಿದರೆ ಪ್ರತಿ ತಿಂಗಳು 25% ಲಾಭಾಂಶದ ಜೊತೆಗೆ 1 ಲಕ್ಷ ರೂ ಕೊಡುವುದಾಗಿ ಆಸೆ ಹುಟ್ಟಿಸಿದ್ದ. ಹಣ ದ್ವಿಗುಣಗೊಳಿಸುವುದಾಗಿ ಹೇಳಿದ್ದಕ್ಕೆ ಸಾಲ ಮಾಡಿ, ಚಿನ್ನಾಭರಣ ಅಡವಿಟ್ಟು 900ಕ್ಕೂ ಹೆಚ್ಚು ಜನರು ಹೂಡಿಕೆ ಮಾಡಿದ್ದಾರೆ. ಬಳಿಕ ನೂರಾರು ಕೋಟಿ ರೂ ಹಣದ ಸಮೇತ ಟಿ.ವಿಶ್ವನಾಥ್ ಪರಾರಿಯಾಗಿದ್ದಾನೆ.
ಇದನ್ನೂ ಓದಿ: ಬಳ್ಳಾರಿಯಲ್ಲಿ ಮತ್ತೊಂದು ಮನಿ ಡಬ್ಲಿಂಗ್ ಸ್ಕ್ಯಾಮ್: ಬರೋಬ್ಬರಿ 50 ಕೋಟಿಗೂ ಹೆಚ್ಚು ವಂಚನೆ!
ಆರೋಪಿ ಟಿ.ವಿಶ್ವನಾಥ್ ಎಂತಹ ಖತರ್ನಾಕ್ ವ್ಯಕ್ತಿ ಎಂದರೆ, ಕೇವಲ ಬಡವರು ಹಾಗೂ ಮಧ್ಯಮ ವರ್ಗದವರಿಗೆ ಅಷ್ಟೇ ಅಲ್ಲದೇ ಶಿಕ್ಷಣ ಸಂಸ್ಥೆಗಳು, ಉದ್ಯಮಿಗಳು ಹಾಗೂ ರಾಜಕಾರಣಿಗಳಿಗೂ ವಂಚಿಸಿದ್ದಾನೆ. ಸದ್ಯ ಪ್ರಕರಣದ ಎ1 ವಿಶ್ವನಾಥ್ ಪತ್ತೆ ಮಾಡುವುದು ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಆರೋಪಿಯ ಮೂಲ ವಿಳಾಸ ಪತ್ತೆಯಾಗದ ಹಿನ್ನೆಲೆ ಜನರು ಪರದಾಡುವಂತಾಗಿದೆ. ಇದೆಲ್ಲದರ ಮಧ್ಯೆ ಆರೋಪಿ ವಿಶ್ವನಾಥ್ ತೆಲುಗು ಹಾಡಿಗೆ ಖುಷಿಯಿಂದಲೇ ಸ್ಟೇಪ್ ಹಾಕಿರುವ ವಿಡಿಯೋವೊಂದು ವೈರಲ್ ಆಗಿದೆ.
ಇದನ್ನೂ ಓದಿ: ಮಾರಕಾಸ್ತ್ರ, ಪಿಸ್ತೂಲ್ ಹಿಡಿದು ಮನೆಗೆ ನುಗ್ಗುತ್ತಾರೆ ಮುಸುಕುಧಾರಿ ಗ್ಯಾಂಗ್: ಆತಂಕದಲ್ಲಿ ಹಾಸನ ಜನತೆ
ಒಟ್ಟಾರೆ ಈ ವಿಶ್ವನಾಥ್ ವಂಚನೆ ಪ್ರಕರಣವನ್ನು ನೋಡುತ್ತಿದ್ದರೆ, ಉಂಡು ಹೋದ ಕೊಂಡು ಹೋದ ಸಿನಿಮಾ ನೆನಪಾಗತ್ತೆ. ಆತನನ್ನು ಆದಷ್ಟು ಬೇಗ ಬಂಧಿಸುವ ಮೂಲಕ ಪೋಲಿಸರು ಅಮಾಯಕರ ನೆರವಿಗೆ ಬರಬೇಕಿದೆ. ಅಷ್ಟೇ ಅಲ್ಲದೆ ಸರ್ಕಾರ ಈ ಬಗ್ಗೆ ಎಸ್ಐಟಿ ತನಿಖೆ ಮಾಡಿಸಬೇಕು ಎನ್ನುವ ಒತ್ತಾಯ ಕೂಡ ಕೇಳಿ ಬರುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.