ಮಾರಕಾಸ್ತ್ರ, ಪಿಸ್ತೂಲ್ ಹಿಡಿದು ಮನೆಗೆ ನುಗ್ಗುತ್ತಾರೆ ಮುಸುಕುಧಾರಿ ಗ್ಯಾಂಗ್: ಆತಂಕದಲ್ಲಿ ಹಾಸನ ಜನತೆ
ಹಾಸನ ನಗರದಲ್ಲಿ ಜನರು ಅಕ್ಷರಶಃ ಆತಂಕದಲ್ಲಿದ್ದಾರೆ. ಜನರೆಲ್ಲಾ ನಿದ್ರೆಗೆ ಜಾರುತ್ತಲೇ ಸದ್ದಿಲ್ಲದೆ ಮನೆ ಬಳಿ ಬರುತ್ತಿರುವ ಮುಸುಕುಧಾರಿ ಖದೀಮರು ಮನೆಯೊಳಗೆ ಜನರಿರಲಿ, ಇಲ್ಲದಿರಲಿ ಬಾಗಿಲು ಮುರಿದು ಒಳಗೆ ಬಂದು ಭೀತಿ ಸೃಷ್ಟಿಸುತ್ತಿದ್ದಾರೆ. ಕೈಯಲ್ಲಿ ಪಿಸ್ತೂಲ್, ಮಾರಕಾಸ್ತ್ರ ಹಿಡಿದು ಬರುವ ದುರುಳರ ಅಟ್ಟಹಾಸ ಜನತೆಯ ಆತಂಕ ಹೆಚ್ಚಿಸಿದೆ. ಮಂಗಳವಾರ ರಾತ್ರಿ ನ್ಯಾಯಾಧೀಶರ ಮಾಲೀಕತ್ವದ ಕಟ್ಟಡವೊಂದರಲ್ಲಿ ಕಳ್ಳತನಕ್ಕೆ ಯತ್ನ ನಡೆದಿದ್ದು, ಮನೆಯಲ್ಲಿದ್ದ ಕಾರು ಚಾಲಕನ ಸಮಯ ಪ್ರಜ್ಞೆ ಹಾಗು ಸಾಕು ನಾಯಿಯ ಧೈರ್ಯದಿಂದ ಮನೆಯಲ್ಲಿ ಆಗಬಹುದಾಗಿದ್ದ ದೊಡ್ಡ ಕಳ್ಳತನ ಪ್ರಕರಣವೊಂದು ತಪ್ಪಿದೆ.

ಹಾಸನ, ಏಪ್ರಿಲ್ 16: ಮಾರಕಾಸ್ತ್ರ, ಪಿಸ್ತೂಲ್ ಹಿಡಿದು ಮನೆಗೆ ನುಗ್ಗುವ ಮುಸುಕುಧಾರಿಗಳ ಗ್ಯಾಂಗ್ ಹಾಸನ (Hassan) ನಗರದ ಜನತೆಯಲ್ಲಿ ಭೀತಿ ಸೃಷ್ಟಿಸಿದೆ. ಇದೇ ಗ್ಯಾಂಗ್ ಹಾಸನದ ಎಸ್ಬಿಎಂ ಬಡಾವಣೆಯಲ್ಲಿ (SBM Layout) ನ್ಯಾಯಾಧೀಶರೊಬ್ಬರ ಮಾಲೀಕತ್ವದ ಮನೆಗೆ ನುಗ್ಗಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿರುವುದು ಜನರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಹಾಸನ ನಗರದ ಒಂದಿಲ್ಲೊಂದು ಬಡಾವಣೆಯಲ್ಲಿ ನಡೆಯುತ್ತಿರುವ ಸರಣಿ ಕಳ್ಳತನ ಪ್ರಕರಣಗಳು ಭೀತಿ ಹುಟ್ಟಿಸಿವೆ. ಈ ಹಿಂದೆಲ್ಲ, ಮನೆಯಲ್ಲಿ ಯಾರೂ ಇಲ್ಲದ್ದನ್ನು ಖಾತ್ರಿ ಮಾಡಿಕೊಂಡು ಕಳ್ಳತನಕ್ಕೆ ಯತ್ನಿಸುತ್ತಿದ್ದ ಕಳ್ಳರು ಇದೀಗ ಮನೆಯಲ್ಲಿ ಜನರು ಇದ್ದರೂ ಹೊಂಚು ಹಾಕುತ್ತಿದ್ದಾರೆ. ಕೈಯಲ್ಲಿ ಮಾರಕಾಸ್ತ್ರ, ಪಿಸ್ತೂಲ್ ಹಿಡಿದು ಮನೆಗೆ ನುಗ್ಗಿ ಕಳ್ಳತನ ಮಾಡಲು ಮುಂದಾಗುತ್ತಿದ್ದಾರೆ.
ಮಂಗಳವಾರ ಮುಂಜಾನೆ 3 ಗಂಟೆ ಸುಮಾರಿಗೆ, ಹಾಸನದ ಅರಸೀಕೆರೆ ರಸ್ತೆಯಲ್ಲಿರೊ ಎಸ್.ಬಿ.ಎಂ ಬಡಾವಣೆಯಲ್ಲಿರುವ ಜೈಶಂಕರ್ (ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶ) ಎಂಬುವವರ ಮಾಲೀಕತ್ವದ, ಭರತ್ ಎಂಬ ಉದ್ಯಮಿಯ ಮನೆಗೆ ನುಗ್ಗಿದ ಖದೀಮರು ಮನೆಯ ಹಿಂಬದಿಯ ಗೇಟ್ ಮುರಿದು, ಬಾಗಿಲನ್ನೂ ತೆಗೆದು ಒಳ ನುಗ್ಗಿದ್ದಾರೆ. ಆ ಸಂದರ್ಭದಲ್ಲಿ, ಅಲ್ಲೇ ಕಾರ್ ಶೆಡ್ನಲ್ಲಿ ಮಲಗಿದ್ದ ಕಾರು ಚಾಲಕ ಅಜಯ್ಗೆ ಎಚ್ಚರವಾವಾಗಿದೆ. ತಕ್ಷಣವೇ ಅವರು ಭಯದಿಂದ ಹೆದರಿ ಮಾಲೀಕರಿಗೆ ಕರೆ ಮಾಡಿದ್ದಾರೆ. ಅಲ್ಲೇ ಇದ್ದ ಸಾಕು ನಾಯಿ ಮಾತ್ರ ಜೋರಾಗಿ ಬೊಗಳಲು ಶುರುಮಾಡಿದೆ. ಇದರಿಂದ ಸ್ವಲ್ಪ ಧೈರ್ಯ ತಂದುಕೊಂಡ ಅಜಯ್ ಲೈಟ್ ಆನ್ ಮಾಡಿದ್ದಾರೆ. ಅಷ್ಟರಲ್ಲಿ ಖದೀಮರು ಅಲ್ಲಿಂದ ಪರಾರಿಯಾಗಿದ್ದಾರೆ.
ಮೂಲತಃ ಬೆಳಗಾವಿ ಜಿಲ್ಲೆಯವರಾದ ಭರತ್ ಕುಟುಂಬ ಹಾಸನದಲ್ಲಿ ಉದ್ಯಮ ಮಾಡಿಕೊಂಡಿದ್ದು, ಒಂದು ವರ್ಷದಿಂದ ಇದೇ ಮನೆಯಲ್ಲಿ ವಾಸವಾಗಿದ್ದಾರೆ. ವಿಜಯಪುರದಲ್ಲಿ ಸಂಬಂಧಿಕರ ಮಧುವೆ ಕಾರ್ಯನಿಮಿತ್ತ ಕುಟುಂಬ ಸಮೇತವಾಗಿ ಹೋಗಿದ್ದಾಗ ಘಟನೆ ಸಂಭವಿಸಿದೆ. ಆದರೆ, ಮನೆಯಲ್ಲಿ ಸಾಕು ನಾಯಿಯನ್ನು ನೋಡಿಕೊಳ್ಳಲು ಕಾರು ಚಾಲಕರಿಗೆ ಹೇಳಿ ಹೋಗಿದ್ದರಿಂದ ಬಚಾವಾಗಿದ್ದಾರೆ.
ಏಪ್ರಿಲ್ 10ರಂದು ಕೂಡ ಹಾಸನದ ಶಾಂತಿನಗರದಲ್ಲಿ ಮೂರ್ನಾಲ್ಕು ಮನೆಗಳಲ್ಲಿ ಕಳ್ಳತನಕ್ಕೆ ಯತ್ನ ನಡೆದಿತ್ತು. ಅದೇ ದಿನ ಹಾಸನ ಹೊರವಲಯದ ಚಿಕ್ಕಕೊಂಡಗೊಳ ಗ್ರಾಮದಲ್ಲೂ ಮನೆ ನುಗ್ಗುವ ಯತ್ನ ಮಾಡಲಾಗಿತ್ತು. ಸರಣಿ ಘಟನೆಗಳು ನಡೆಯುತ್ತಿದ್ದು ಪೊಲೀಸರು ಗಸ್ತು ಹೆಚ್ಚಿಸಿದ್ದರೂ ಖದೀಮರ ಸಂಚಾರ ಮಾತ್ರ ಕಡಿಮೆ ಆದಂತೆ ಕಾಣಿಸುತ್ತಿಲ್ಲ.
ಇದನ್ನೂ ಓದಿ: ಸಕಲೇಶಪುರ: ಜೀಪ್ ರ‍್ಯಾಲಿ ನಡೆಯುವ ವೇಳೆ ಕಾಡಾನೆ ಡೆಡ್ಲಿ ಅಟ್ಯಾಕ್, ಭಯಾನಕ ವಿಡಿಯೋ ಇಲ್ಲಿದೆ
ಕಳ್ಳತನ ಸಂಬಂದ ಕೇಸ್ ದಾಖಲು ಮಾಡಿಕೊಂಡಿರುವ ಹಾಸನ ಬಡಾವಣೆ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಸುತ್ತ ಮುತ್ತ ಸಿಗುವ ಸಿಸಿ ಕ್ಯಾಮೆರಾಗಳ ದೃಶ್ಯ ಆಧರಿಸಿ ತನಿಖೆ ಕೈಗೊಂಡಿದ್ದಾರೆ. ನಗರದಲ್ಲಿ ನಡೆಯುತ್ತಿರುವ ಕಳ್ಳತನ ಪ್ರಕರಣಗಳನ್ನು ತಡೆದು ಜನರ ಆತಂಕ ದೂರಮಾಡಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕಿದೆ.