Bidar Bangalore Flight: ಬೀದರ್ ಬೆಂಗಳೂರು ವಿಮಾನ ಹಾರಾಟ ಇಂದಿನಿಂದ ಶುರು: ಇಲ್ಲಿದೆ ವೇಳಾಪಟ್ಟಿ
ಬೆಂಗಳೂರು ಬೀದರ್ ವಿಮಾನ ಸಂಚಾರ: ಬೀದರ್‌ನಿಂದ ರಾಜ್ಯದ ರಾಜ್ಯಧಾನಿ ಬೆಂಗಳೂರಿಗೆ ವಿಮಾನ ಹಾರಾಟ ಮತ್ತೆ ಆರಂಭವಾಗಬೇಕೆಂಬ ಕನಸು ನನಸಾಗುತ್ತಿದೆ. ಕಳೆದ ಒಂದೂವರೆ ವರ್ಷದಿಂದ ಬೀದರ್ ವಿಮಾನ ನಿಲ್ದಾಣದಿಂದ ಸ್ಥಗಿತಗೊಂಡಿದ್ದ ಸಂಚಾರ, ಜನರ ಹೋರಾಟದ ಫಲವಾಗಿ ಇದೀಗ ಮತ್ತೆ ಆರಂಭವಾಗುತ್ತಿದೆ. ವಿಮಾನ ಸಂಚಾರಕ್ಕೆ ಇಂದು ಮರು ಚಾಲನೆ ದೊರೆಯುತ್ತಿದೆ.

ಬೀದರ್, ಏಪ್ರಿಲ್ 16: ಬೀದರ್ (Bidar) ಜಿಲ್ಲೆಯಿಂದ ರಾಜ್ಯ ರಾಜ್ಯಧಾನಿ ಬೆಂಗಳೂರಿಗೆ (Bengaluru) ವಿಮಾನ ಹಾರಾಡಬೇಕೆಂಬ (Bengaluru Bidar Flight) ಆಸೆ ಎರಡು ರಾಜ್ಯದ ಗಡಿ ಹಂಚಿಕೊಂಡಿರುವ ಬೀದರ್ ಜಿಲ್ಲೆಯ ಜನರ ಬಹುದೊಡ್ಡ ಆಸೆಯಾಗಿತ್ತು. ಇದಕ್ಕಾಗಿ ಹತ್ತಾರು ಹೋರಾಟಗಳನ್ನು ಸಹ ಮಾಡಲಾಗಿತ್ತು. ಜನರ ಹೋರಾಟಕ್ಕೆ ಮಣಿದಿದ್ದ ಕೇಂದ್ರ ಸರಕಾರ 7 ಪೆಬ್ರುವರಿ 2020 ರಂದು ಬೀದರ್‌ನಿಂದ ಬೆಂಗಳೂರಿಗೆ 72 ಸೀಟ್ನ ಟ್ರೋಜೆಟ್ ವಿಮಾನದ ಹಾರಾಟ ಆರಂಭಿಸಿತ್ತು. ಆದರೆ ಪ್ರಯಾಣಿಕರ ಕೊರತೆ, ಆರ್ಥಿಕ ನಷ್ಟದಿಂದಾಗಿ ಟ್ರೂಜೇಟ್ ವಿಮಾನ ಕೆಲವು ತಿಂಗಳಲ್ಲಿಯೇ ಹಾರಾಟ ನಿಲ್ಲಿಸಿತ್ತು. ಇದಾದ ಬಳಿಕ ಒಂದು ವರ್ಷಗಳ ಕಾಲ ವಿಮಾನ ಹಾರಾಡಲೇ ಇಲ್ಲ. ಪ್ರಯಾಣಿಕರು ಹೈದರಾಬಾದ್ಗೆ ಹೋಗಿ ಅಲ್ಲಿಂದ ವಿಮಾಣದ ಮೂಲಕ ಬೆಂಗಳೂರು ಹಾಗೂ ಬೇರೆ ಬೇರೆ ರಾಜ್ಯಗಳಿಗೆ ಪ್ರಯಾಣ ಮಾಡುತ್ತಿದ್ದರು. ಇದು ಪ್ರಯಾಣಿಕರಿಗೆ ಕಷ್ಟವಾಗತೊಡಗಿದಾಗ ಪ್ರಯಾಣಿಕರ ಒತ್ತಾಯದ ಮೇರೆಗೆ ಮತ್ತೆ 2022 ಜೂನ್ 15 ರಂದು ಸ್ಟಾರ್ ಏರ್ ವಿಮಾನ ಹಾರಾಟ ಆರಂಭಿಸಿತು. ಆದರೆ ಕಳೆದ ಒಂದೂವರೆ ವರ್ಷದಿಂದ ಆರ್ಥಿಕ ನಷ್ಟದಿಂದಾಗಿ ಸಂಚಾರ ನಿಲ್ಲಿಸಿತ್ತು. ಈಗ ಮತ್ತೆ ಬೀದರ್‌ನಿಂದ ವಿಮಾನ ಹಾರಾಟ ಆರಂಭವಾಗುತ್ತಿದೆ. ಸಾರ್ವಜನರಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.
ಈಗಾಗಲೇ ಶುರುವಾಗಿದೆ ಬೀದರ್ ಬೆಂಗಳೂರು ವಿಮಾನ ಟಿಕೆಟ್ ಬುಕಿಂಗ್
ವಿಮಾನ ಹಾರಾಟಕ್ಕೆ ಎದುರಾಗಿದ್ದ ಎಲ್ಲ ತಾಂತ್ರಿಕ ಅಡೆತಡೆಗಳನ್ನು ನಿವಾರಿಸಲಾಗಿದ್ದು, ಇಂದಿನಿಂದ ಸ್ಟಾರ್ ಏರ್‌ಲೈನ್ಸ್ ವಿಮಾನ ಹಾರಾಟ ನಡೆಸಲಿದೆ. ಒಂದು ತಿಂಗಳ ಹಿಂದಿನಿಂದಲೇ ಸ್ಟಾರ್ ಏರ್‌ಲೈನ್ಸ್ ಆನ್‌ಲೈನ್‌ನಲ್ಲಿ ವಿಮಾನದ ಟಿಕೆಟ್ ಬುಕ್ಕಿಂಗ್ ಕೂಡ ಆರಂಭಿಸಿತ್ತು.
ಬೀದರ್ ಬೆಂಗಳೂರು ವಿಮಾನ ಸಂಚಾರದ ಸಮಯ
ಬೆಳಿಗ್ಗೆ 7.45ಕ್ಕೆ ಬೆಂಗಳೂರಿನಿಂದ ಬೀದರ್ ಕಡೆಗೆ ವಿಮಾನ ಸಂಚರಿಸಲಿದೆ. ಅದೇ ದಿನ ಬೆಳಿಗ್ಗೆ 9.30ಕ್ಕೆ ಬೀದರ್‌ನಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದೆ. ವಿಮಾನದ ಟಿಕೆಟ್ ಬುಕ್ಕಿಂಗ್ ಆರಂಭಗೊಂಡು ವಿಮಾನ ಹಾರಾಟ ನಡೆಸುತ್ತಿರುವುದಕ್ಕೆ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಸ್ಟಾರ್ ಏರ್ ಹಾರಾಟ ಸ್ಥಗಿತಗೊಂಡಿದ್ದೇಕೆ?
ಪ್ರಯಾಣಿಕರ ಬೇಡಿಕೆಯ ಸಮಯಕ್ಕೆ ತಕ್ಕಂತೆ ವಿಮಾನ ಸಂಚರಿಸದ ಕಾರಣ ಕಂಪನಿಯ ಆದಾಯದಲ್ಲಿ ನಷ್ಟ ಉಂಟಾಗಿ ಸ್ಟಾರ್ ಏರ್ ವಿಮಾನ ಸಂಚಾರ ಒಪ್ಪಂದದ ಅವಧಿ ಪೂರ್ಣಗೊಳ್ಳುವುದಕ್ಕೂ ಮುನ್ನವೇ 2023ರ ಡಿಸೆಂಬರ್ 26ರಂದು ಸ್ಥಗಿತಗೊಂಡಿತ್ತು. ವಿಮಾನ ಹಾರಾಟದ ಸಮಯ ಬದಲಿಸಿ ವಿಮಾನ ಸಂಚಾರ ಪುನರಾರಂಭಿಸಬೇಕೆಂದು ವಿವಿಧ ಸಂಘ ಸಂಸ್ಥೆಗಳು ಸರ್ಕಾರವನ್ನು ಆಗ್ರಹಿಸಿದ್ದವು.
ಇದನ್ನೂ ಓದಿ: ವರ್ಷದಿಂದ ಹಾರಾಡದ ವಿಮಾನ: ಮುಚ್ಚುವ ಭೀತಿಯಲ್ಲಿ ಬೀದರ್ ಏರ್ಪೋರ್ಟ್!
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಬೃಹತ್ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಅವರ ಮನವೊಲಿಸಿ, ವಿಮಾನ ಸೇವೆ ಆರಂಭಿಸುವುದಕ್ಕೆ ಮೂಲಸೌಕರ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಿಂದ 13.48 ಕೋಟಿ ರೂ. ಅನುದಾನಕ್ಕೆ ಅನುಮೋದನೆ ಪಡೆದಿದ್ದರು. ಸಚಿವ ಸಂಪುಟವೂ ಒಪ್ಪಿಗೆ ನೀಡಿತ್ತು. ಹೀಗಾಗಿ ಇಂದಿನಿಂದ ವಿಮಾನ ಹಾರಾಟ ಶುರುವಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:38 am, Wed, 16 April 25