ಸಂವಿಧಾನಕ್ಕೆ ಅಪಚಾರ ಆರೋಪ: ಸಚಿವ ಕೆಎನ್ ರಾಜಣ್ಣ ವಿರುದ್ಧ ದಾಖಲಾಯ್ತು ದೂರು
ಸದನದಲ್ಲಿ ಹನಿಟ್ರ್ಯಾಪ್ ವಿಚಾರ ಪ್ರಸ್ತಾಪಿಸಿ ಸಂವಿಧಾನಕ್ಕೆ ಅಪಚಾರ ಮಾಡಿದ್ದಾರೆಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದವರು ಸಚಿವ ಕೆ.ಎನ್. ರಾಜಣ್ಣ ಅವರ ವಿರುದ್ಧ ಬೆಂಗಳೂರಿನ ಜೆ.ಸಿ. ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 48 ಗಂಟೆಯೊಳಗೆ ಎಫ್‌ಐಆರ್ ದಾಖಲಿಸದಿದ್ದರೆ ಸರ್ಕಾರದ ವಿರುದ್ಧ ಹೋರಾಟ ಮಾಡುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು, ಏಪ್ರಿಲ್ 14: ಸಂವಿಧಾನಕ್ಕೆ ಅಪಚಾರವೆಸಗಿದ್ದಾರೆ ಎಂದು ಆರೋಪಿಸಿ ಸಚಿವ ಕೆ.ಎನ್.ರಾಜಣ್ಣ (K. N. Rajanna) ವಿರುದ್ಧ ನಗರದ ಜೆ.ಸಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ ಎಂಬುವವರಿಂದು ದೂರು ನೀಡಲಾಗಿದೆ. ಪ್ರಮಾಣವಚನ ಸ್ವೀಕಾರ ವೇಳೆ ಗೌಪ್ಯತೆ ಕಾಪಾಡುತ್ತೇನೆ ಅಂದಿದ್ದರು. ಆದರೆ ಸಚಿವರಾಗಿ ಸದನದಲ್ಲಿ ಹನಿಟ್ರ್ಯಾಪ್ (Honeytrap) ವಿಚಾರ ಪ್ರಸ್ತಾಪಿಸಿದ್ದಾರೆ. ಆ ಮೂಲಕ ಸಂವಿಧಾನಕ್ಕೆ ಅಪಚಾರ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಚಿವ ರಾಜಣ್ಣ ನಮ್ಮ ಬಳಿ ಸಿಡಿ ಇದೆ ಅಂತ ಹೇಳಿದ್ದಾರೆ. ಹಾಗಾಗಿ ಪೊಲೀಸರು ಅವರನ್ನು ಕೊಡಲೇ ವಶಕ್ಕೆ ಪಡೆದು CD ಎಲ್ಲಿದೆ ಅಂತ ಪತ್ತೆಹಚ್ಚಬೇಕು. 48 ಗಂಟೆಯಲ್ಲಿ ಸಚಿವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ಹೋರಾಡುತ್ತೇನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಧಿಕಾರಿಗಳ ಕಾಲಿಗೆ ಬೀಳುತ್ತೇನೆ, ಹಣ ವಸೂಲಿ ಮಾಡುವುದನ್ನು ನಿಲ್ಲಿಸಿ ಎಂದ ಶಾಸಕ ಕೆಎಸ್ ಬಸವಂತಪ್ಪ
ಪೌರ ಕಾರ್ಮಿಕರ ಖಾಯಮಾತಿಗೆ ಪುರಸಭೆ, ನಗರಸಭೆ, ನಗರಪಾಲಿಕೆ ಅಧಿಕಾರಿಗಳು ಲಕ್ಷಾಂತರ ರೂ. ಲಂಚ ಪಡೀತಿದ್ದಾರೆ ಎಂದು ದಾವಣಗೆರೆ ಜಿಲ್ಲೆ ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಎಸ್.ಬಸವಂತಪ್ಪ ಆರೋಪ ಮಾಡದ್ದಾರೆ. ದಾವಣಗೆರೆ ನಗರ ಪಾಲಿಕೆಯಿಂದ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರ ಖಾಯಮಾತಿ ಮಾಡುವುದಾಗಿ ಸಿಎಂ ಘೋಷಿಸಿದ್ದಾರೆ. ಆದರೆ ಅಧಿಕಾರಿಗಳು ಪೌರಕಾರ್ಮಿಕರಿಂದ 2, 3, 4 ಲಕ್ಷ ರೂ ಲಂಚ ಪಡೆಯುತ್ತಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ ಎನ್‌ಕೌಂಟರ್ ಕೇಸ್: ಪಿಎಸ್ಐ ಅನ್ನಪೂರ್ಣಗೆ ಮೆಚ್ಚುಗೆಯ ಮಹಾಪೂರ, ಯಾರೀ ಲೇಡಿ ಸಿಂಗಂ?
ಪೌರಕಾರ್ಮಿಕರ ಖಾಯಮಾತಿ ಆದೇಶಪತ್ರಕ್ಕಾಗಿ ಲಂಚ ನೀಡಬೇಕೆಂದಿದ್ದಾರೆ. ರಾಜ್ಯದ ಎಲ್ಲಾ ಪುರಸಭೆ, ನಗರಸಭೆ, ನಗರಪಾಲಿಕೆಗಳಲ್ಲಿ ಪೌರ ಕಾರ್ಮಿಕರ ಶೋಷಣೆ ಮಾಡುವ ಕೆಲಸಗಳು ನಡೆಯುತ್ತಿವೆ. ಪೌರ ಕಾರ್ಮಿಕರನ್ನು ಖಾಯಂ ಮಾಡುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ ಆದರೆ, ಅಧಿಕಾರಿಗಳು ಕೇಳಿದಷ್ಟು ಲಂಚ ಕೊಡಲು ಬಡ್ಡಿಗೆ ಸಾಲ ತರಬೇಕಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮುಂದಿನ 3-ವರ್ಷ ಅವಧಿಗೂ ಸಿದ್ದರಾಮಯ್ಯನೇ ಸಿಎಂ ಆಗಿ ಮುಂದುವರಿಯುತ್ತಾರೆ: ಬಸವರಾಜ ರಾಯರೆಡ್ಡಿ
ಪೌರಕಾರ್ಮಿಕರನ್ನು ಅಧಿಕಾರಿಗಳೇ ಸಾಲದ ಸುಳಿಯಲ್ಲಿ ಸಿಲುಕಿಸಬಾರದು. ನಾವು ಸುಮ್ಮನೆ ಭಾಷಣ ಮಾಡಿ ಹೋದರೆ ಪೌರಕಾರ್ಮಿಕರಿಗೆ ನ್ಯಾಯ ಸಿಗಲ್ಲ. ಅಧಿಕಾರಿಗಳ ಕಾಲಿಗೆ ಬೀಳುತ್ತೇನೆ, ಹಣ ವಸೂಲಿ ಮಾಡುವುದನ್ನು ನಿಲ್ಲಿಸಿ. ಪೌರಕಾರ್ಮಿಕರಿಂದ ಲಂಚ ಪಡೆಯಬೇಡಿ ಎಂದು ಮಹಾನಗರ ಪಾಲಿಕೆ ಆಯುಕ್ತರು ಸೇರಿದಂತೆ ಎಲ್ಲಾ ಅಧಿಕಾರಿಗಳಿಗೆ ಶಾಸಕ ಬಸವಂತಪ್ಪ ಮನವಿ ಮಾಡಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.