Karnataka Lorry Strike: ಕರ್ನಾಟಕ ಲಾರಿ ಮುಷ್ಕರ ಶುರು; ಲಾರಿ, ಟ್ರಕ್ ಸಂಚಾರ ಸ್ಥಗಿತ
ಕರ್ನಾಟಕ ಲಾರಿ ಮುಷ್ಕರ: ಡಿಸೇಲ್ ದರ ಏರಿಕೆ ಖಂಡಿಸಿ ಹಾಗೂ ಇತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಲಾರಿ ಮಾಲೀಕರು ಕರೆ ನೀಡಿರುವ ಕರ್ನಾಟಕ ಮುಷ್ಕರ ಸೋಮವಾರ ಮಧ್ಯರಾತ್ರಿಯಿಂದ ಆರಂಭವಾಗಿದೆ. ಬೆಂಗಳೂರು, ಮೈಸೂರು ಸೇರಿದಂತೆ ಅನೇಕ ಕಡೆಗಳಲ್ಲಿ ಲಾರಿಗಳ ಹಾಗೂ ಟ್ರಕ್ಗಳ ಸಂಚಾರ ಸ್ಥಗಿತಗೊಂಡಿದೆ.

ಬೆಂಗಳೂರು, ಏಪ್ರಿಲ್ 15: ಡೀಸೆಲ್ ದರ ಏರಿಕೆ (Diesel Price Hike) ವಿರೋಧಿಸಿ ಲಾರಿ ಮಾಲೀಕರ ಸಂಘ ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರ (Lorry Strike) ಸೋಮವಾರ ಮಧ್ಯರಾತ್ರಿಯಿಂದ ಆರಂಭವಾಗಿದೆ. ಬೆಂಗಳೂರಿನಲ್ಲಿ (Bengaluru) ಲಾರಿ ಹಾಗೂ ಟ್ರಕ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಯಶವಂತಪುರದ ಟ್ರಕ್ ಟರ್ಮಿನಲ್‌ನಲ್ಲಿ ಲಾರಿಗಳು ಸಾಲು ಸಾಲಾಗಿ ನಿಂತಿರುವ ದೃಶ್ಯ ಕಂಡು ಬಂದಿದೆ. ದಿನಸಿ, ತರಕಾರಿ, ಎಲೆಕ್ಟ್ರಾನಿಕ್ ವಸ್ತುಗಳನ್ನು ಸಗಾಟ ಮಾಡುವ ಲಾರಿಗಳು ಸಂಚಾರ ಸ್ಥಗಿತಗೊಳಿಸಿವೆ. ಹೆದ್ದಾರಿ ಹಾಗೂ ನಿಲ್ದಾಣಗಳಲ್ಲಿ ಲಾರಿ ನಿಲ್ಲಿಸಿ ಚಾಲಕರು ಕೂಡ ಮುಷ್ಕರದಲ್ಲಿ ಭಾಗಿಯಾಗಿದ್ದಾರೆ.
ಸಂಸ್ಕೃತಿಕ ನಗರ ಮೈಸೂರಿನಲ್ಲಿ ಕೂಡ ಲಾರಿ ಮತ್ತು ಗೂಡ್ಸ್ ವಾಹನಗಳ ಸಂಚಾರ ಸಂಪೂರ್ಣ ಬಂದ್ ಆಗಿದೆ. ಮೈಸೂರಿನ ಬಂಡಿಪಾಳ್ಯ ಮಾರುಕಟ್ಟೆ ಬಳ್ಳಿ ನೂರಾರು ಲಾರಿಗಳು ನಿಂತಿವೆ.
ಲಾರಿ ಮಾಲೀಕರ ಬೇಡಿಕೆಗಳೇನು?
- ರಾಜ್ಯ ಸರ್ಕಾರ ಡೀಸೆಲ್ ಮೇಲಿನ ತೆರಿಗೆ ಹೆಚ್ಚಳ ಆದೇಶ ಹಿಂಪಡೆಯಬೇಕು
- ರಾಜ್ಯದ ಹೆದ್ದಾರಿ ಟೋಲ್ಗಳಲ್ಲಿನ ಹಣ ವಸೂಲಿ ತಡೆಯಬೇಕು
- ಗಡಿಗಳಲ್ಲಿ ಆರ್ಟಿಒ ಚೆಕ್ಪೋಸ್ಟ್ಗಳನ್ನು ತೆರವು ಮಾಡಬೇಕು
- ಎಫ್ಸಿ ಫಿಟ್ನೆಸ್ ಶುಲ್ಕ ಏರಿಕೆ ಮಾಡಿರುವುದನ್ನು ಹಿಂಪಡೆಯಬೇಕು
- ಗೂಡ್ಸ್ ವಾಹನಗಳಿಗೆ ಬೆಂಗಳೂರು ಪ್ರವೇಶ ನಿರ್ಬಂಧ ಆದೇಶ ಹಿಂಪಡೆಯಬೇಕು
- ಲಾರಿ ಚಾಲಕರ ಮೇಲಿನ ಹಲ್ಲೆ, ದೌರ್ಜನ್ಯಗಳನ್ನು ತಡೆಯಬೇಕು
ಲಾರಿ ಚಾಲಕರು ಹೇಳುವುದೇನು?
ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಗಿದಂತಾಗಿದೆ ನಮ್ಮ ಸ್ಥಿತಿ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜಗಳದಲ್ಲಿ ನಮಗೆ ಸಮಸ್ಯೆ ಆಗಿದೆ. ಹೀಗಾಗಿ ಲಾರಿ ಮುಷ್ಕರಕ್ಕೆ ಸಂಪೂರ್ಣ ಬೆಂಬಲ ನೀಡಿದ್ದೇವೆ ಎಂದು ಲಾರಿ ಚಾಲಕ ಕುಮಾರ್ ಎಂಬವರು ಮೈಸೂರಿನಲ್ಲಿ ‘ಟಿವಿ9’ಗೆ ತಿಳಿಸಿದ್ದಾರೆ. ಪ್ರತಿ ನಿತ್ಯ ನೂರಾರು ಲಾರಿಗಳು ಓಡಾಡುತ್ತಿದ್ದವು. ಇಂದು ಒಂದೇ ಒಂದು ಲಾರಿ ರಸ್ತೆಗಿಳಿಯುವುದಿಲ್ಲ. ನಮ್ಮ ಬೇಡಿಕೆ ಈಡೇರಿಸುವವರೆಗೂ ಲಾರಿ ಓಡಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ಎಲ್ಲಾ ಅಗತ್ಯ ವಸ್ತುಗಳ ಬೆಲೆ ಜಾಸ್ತಿ ಆಗಿದೆ, ಬಾಡಿಗೆ ಮಾತ್ರ ಜಾಸ್ತಿ ಮಾಡಿಲ್ಲ. ಲಾರಿ ಮಾಲೀಕರು ಹಾಗೂ ಚಾಲಕರ ಸಮಸ್ಯೆಯನ್ನು ಯಾರೂ ಆಲಿಸುತ್ತಿಲ್ಲ. ಇದೆಲ್ಲವೂ ಗ್ಯಾರಂಟಿ ಎಫೆಕ್ಟ್. ನಮ್ಮಿಂದ ಕಿತ್ತು ಅವರಿಗೆ ಕೊಡುತ್ತಿದ್ದಾರೆ. ಮಹಿಳೆಯರು ಯಾರೂ ಉಚಿತ ಕೇಳಿರಲಿಲ್ಲ, ಕೊಡುವುದಿದ್ದರೆ 60 ವರ್ಷ ಮೇಲ್ಪಟ್ಟವರಿಗೆ ನೀಡಿ ಎಂದು ಚಾಲಕ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ಲಾರಿ ಮುಷ್ಕರ, ಅಗತ್ಯ ವಸ್ತುಗಳ ಸಾಗಾಟಕ್ಕೆ ತಟ್ಟಲಿದೆ ಬಿಸಿ
ಮೈಸೂರಿನ ದೇವರಾಜ ಅರಸು ಟ್ರಕ್ ಟರ್ಮಿನಲ್‌ನಲ್ಲಿ ನೂರಾರು ಲಾರಿಗಳು ನಿಂತಿವೆ. ನೂರಾರು ಲಾರಿಗಳನ್ನು ನಿಲ್ಲಿಸಿ ಹೋಗಿದ್ದಾರೆ. ಬೆಳಗ್ಗೆಯಿಂದ ಯಾರು ಸಹಾ ಬಂದಿಲ್ಲ. ಮಾಮೂಲಿಯಾಗಿ ಬೆಳಗ್ಗೆ ಹೊತ್ತು ಹೆಚ್ಚು ಲಾರಿಗಳು ಸಂಚರಿಸುತ್ತಿದ್ದವು. ಆದರೆ ಇವತ್ತು ಒಂದು ಲಾರಿ ಸಹಾ ಹೋಗಿಲ್ಲ ಎಂದು ಟ್ರಕ್ ಟರ್ಮಿನಲ್ ಉಸ್ತುವಾರಿ ಸತ್ಯ ತಿಳಿಸಿದ್ದಾರೆ.
ಲಾರಿ ಮುಷ್ಕರಕ್ಕೆ ಟ್ಯಾಕ್ಸಿ ಚಾಲಕರಿಂದ ಬೆಂಬಲ: ಸಂಚಾರಕ್ಕಿಲ್ಲ ತಡೆ
ಲಾರಿ ಮುಷ್ಕರಕ್ಕೆ ಟ್ಯಾಕ್ಸಿ ಚಾಲಕರು ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ, ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಎಂದಿನಂತೆ ಟ್ಯಾಕ್ಸಿಗಳು ಸಂಚರಿಸುತ್ತಿವೆ. ಒಲಾ, ಉಬರ್, ಏರ್ಪೋಟ್ ಟ್ಯಾಕ್ಸಿ ಸೇರಿದಂತೆ ಎಲ್ಲಾ ಕ್ಯಾಬ್ಗಳು ಸಂಚಾರ ಮಾಡುತ್ತಿವೆ.