SK Shyam Sundar Passes away: ಎಸ್ಕೆ ಶ್ಯಾಮಸುಂದರ್ ನಿಧನ, ಕನ್ನಡ ಡಿಜಿಟಲ್ ಮಾಧ್ಯಮದ ಹರಿಕಾರ ಇನ್ನಿಲ್ಲ
ಕನ್ನಡ ಭಾಷಾ ಡಿಜಿಟಲ್ ಪತ್ರಿಕೋದ್ಯಮದಲ್ಲಿ ವಿಶೇಷ ಛಾಪು ಮೂಡಿಸಿದ್ದ ಹಿರಿಯ ಪತ್ರಕರ್ತ ಎಸ್ಕೆ ಶ್ಯಾಮ್‌ಸುಂದರ್ (SK Shyam Sundar) ಹೃದಯಾಘಾತದಿಂದ ಸೋಮವಾರ ರಾತ್ರಿ ಇಹಲೋಕ ತ್ಯಜಿಸಿದರು. ಸುಮಾರು 39 ವರ್ಷ ಕಾಲ ಕನ್ನಡ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಅವರು, ಡಿಜಿಟಲ್ ಮಾಧ್ಯಮ ಲೋಕದ ಭೀಷ್ಮ ಎಂದೇ ಪ್ರಸಿದ್ಧಿ ಪಡೆದಿದ್ದರು.

ಬೆಂಗಳೂರು, ಏಪ್ರಿಲ್ 15: ಕನ್ನಡದ ಹಿರಿಯ ಪತ್ರಕರ್ತ, ಅದರಲ್ಲೂ ಕನ್ನಡ ಡಿಜಿಟಲ್ ಮಾಧ್ಯಮದ (Kannada Digital Media) ಹರಿಕಾರ ಎಂದೇ ಪ್ರಸಿದ್ಧರಾಗಿದ್ದ ಎಸ್ಕೆ ಶ್ಯಾಮ್‌ಸುಂದರ್ (SK Shyam Sundar) ಸೋಮವಾರ ರಾತ್ರಿ ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು. ಶ್ಯಾಮ್‌ಸುಂದರ್ ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ಬೆಂಗಳೂರಿನ (Bengaluru) ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿ ಅವರು ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು. ಶ್ಯಾಮ್‌ಸುಂದರ್ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಸಂತಾಪ ಸೂಚಿಸಿದ್ದಾರೆ.
ಹಿರಿಯ ಪತ್ರಕರ್ತ ಎಸ್.ಕೆ. ಶ್ಯಾಮಸುಂದರ್ ಅವರ ನಿಧನದ ಸುದ್ದಿ ದುಃಖವುಂಟುಮಾಡಿದೆ. ಬರಹವನ್ನೇ ಬದುಕಾಗಿಸಿಕೊಂಡಿದ್ದ ಶ್ಯಾಮಸುಂದರ್ ಅವರು ಸುದೀರ್ಘಕಾಲ ಪತ್ರಕರ್ತರಾಗಿ ದುಡಿದವರು. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬವರ್ಗಕ್ಕೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಕರ್ನಾಟಕ ಮುಖ್ಯಮಂತ್ರಿಗಳು ಎಕ್ಸ್ ಸಂದೇಶದಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಮುಖ್ಯಮಂತ್ರಿ ಸಂದೇಶ
ಹಿರಿಯ ಪತ್ರಕರ್ತ ಎಸ್.ಕೆ. ಶ್ಯಾಮಸುಂದರ್ ಅವರ ನಿಧನದ ಸುದ್ದಿ ದುಃಖವುಂಟುಮಾಡಿದೆ. ಬರಹವನ್ನೇ ಬದುಕಾಗಿಸಿಕೊಂಡಿದ್ದ ಶ್ಯಾಮಸುಂದರ್ ಅವರು ಸುದೀರ್ಘಕಾಲ ಪತ್ರಕರ್ತರಾಗಿ ದುಡಿದವರು.
ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬವರ್ಗಕ್ಕೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. – ಮುಖ್ಯಮಂತ್ರಿ… pic.twitter.com/WZmifEo7zz
— CM of Karnataka (@CMofKarnataka) April 14, 2025
ಎಸ್.ಕೆ. ಶ್ಯಾಮಸುಂದರ್ ಸುಮಾರು 39 ವರ್ಷಗಳ ಕಾಲ ಕನ್ನಡ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದರು. ಈ ಅವಧಿಯಲ್ಲಿ ಅವರು ಕನ್ನಡ ಪತ್ರಿಕೋದ್ಯಮಕ್ಕೆ, ಅದರಲ್ಲೂ ವಿಶೇಷವಾಗಿ ಡಿಜಿಟಲ್ ಪತ್ರಿಕೋದ್ಯಮ ವಲಯಕ್ಕೆ ಗಮನಾರ್ಹ ಕೊಡುಗೆ ನೀಡಿದ್ದಾರೆ. ಕನ್ನಡ ಡಿಜಿಟಲ್ ಮಾಧ್ಯಮ ಲೋಕದ ಭೀಷ್ಮ ಎಂದೇ ಖ್ಯಾತರಾಗಿದ್ದ ಅವರು ಅನೇಕ ಪ್ರಶಸ್ತಿಗಳಿಗೂ ಭಾಜನರಾಗಿದ್ದರು.
ಇದನ್ನೂ ಓದಿ: ಹಿರಿಯ ನಟ ಬ್ಯಾಂಕ್ ಜನಾರ್ಧನ್ ನಿಧನ; 800ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ
ಎಸ್ಕೆ ಶ್ಯಾಮಸುಂದರ್ ಸುದ್ದಿ ವಾಹಿನಿಗಳ ಚರ್ಚೆ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸುತ್ತಿದ್ದರು. ಎದ್ದೇಳು ಮಂಜುನಾಥ ಸಿನಿಮಾದಲ್ಲಿಯೂ ನಟಿಸಿದ್ದರು. ಮೂಲತಃ ಚಿತ್ರದುರ್ಗ ಜಿಲ್ಲೆ ಜಾನಕೊಂಡದವರಾಗಿದ್ದ ಶ್ಯಾಮಸುಂದರ್, ಬೆಂಗಳೂರಿನಲ್ಲಿ ವಾಸವಿದ್ದರು. ಅವಿವಾಹಿತರಾಗಿದ್ದರು.
ಡಿಸಿಎಂ ಡಿಕೆ ಶಿವಕುಮಾರ್ ಸಂತಾಪ
ಹಿರಿಯ ಪತ್ರಕರ್ತ ಎಸ್.ಕೆ.ಶ್ಯಾಮಸುಂದರ್ ನಿಧನಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ. ಕನ್ನಡಕ್ಕೆ ಡಿಜಿಟಲ್ ಪತ್ರಿಕೋದ್ಯಮ ಪರಿಚಯಿಸಿದ್ದ ಅಗ್ರಗಣ್ಯರಾದ ಹಿರಿಯ ಪತ್ರಕರ್ತ ಎಸ್.ಕೆ.ಶ್ಯಾಮಸುಂದರ್ ಅವರ ನಿಧನದ ಸುದ್ದಿ ತಿಳಿದು ದುಃಖ ಉಂಟಾಯಿತು. ಎರಡು ದಶಕಗಳ ಹಿಂದೆಯೇ ಆನ್ ಲೈನ್ ನಲ್ಲೂ ಜನತೆ ಸುದ್ದಿ ಮಾಹಿತಿಗಳನ್ನು ಓದಬಹುದು ಎನ್ನುವುದನ್ನು ಕನ್ನಡ ಸುದ್ದಿಲೋಕಕ್ಕೆ ಪರಿಚಯಿಸಿದ್ದ ವ್ಯಕ್ತಿ ಅವರು. ಹೊರನಾಡ ಕನ್ನಡಿಗರ ಸುದ್ದಿ ಸಮಾಚಾರಗಳನ್ನು ಕನ್ನಡಿಗರಿಗೆ ತಲುಪಿಸಲು ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸಿದ್ದರು. ಡಿಜಿಟಲ್ ಮಾಧ್ಯಮಗಳ ಮೇಲಿನ ಅವರ ಆಸಕ್ತಿ, ಬದ್ಧತೆ, ಕಾರ್ಯವೈಖರಿ ಹಾಗೂ ದೂರದೃಷ್ಟಿ ಈಗಿನ ಯುವ ಪತ್ರಕರ್ತರಿಗೆ ಪ್ರೇರಣೆ. ಕೆಲವು ಸಿನಿಮಾಗಳಲ್ಲೂ ಅವರು ಬಣ್ಣ ಹಚ್ಚಿ ನಟನೆಗೂ ಸೈ ಎಂದೆನಿಸಿಕೊಂಡಿದ್ದರು. ಅವರ ಅಗಲಿಕೆ ಕನ್ನಡ ಮಾಧ್ಯಮರಂಗಕ್ಕೆ, ಅದರಲ್ಲೂ ಡಿಜಿಟಲ್ ಪತ್ರಿಕೋದ್ಯಮಕ್ಕೆ ಅತಿದೊಡ್ಡ ಭರಿಸಲಾಗದ ನಷ್ಟ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಶೋಕ ಸಂದೇಶದಲ್ಲಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:34 am, Tue, 15 April 25