ಹಾಸನ ಉಸ್ತವಾರಿಯಿಂದ ಬಿಡುಗಡೆ ಕೋರಿ ಪತ್ರ ನೀಡಿದ್ದೇನೆ: ಕೆಎನ್ ರಾಜಣ್ಣ
ಕೆ.ಎನ್. ರಾಜಣ್ಣನವರು ಹಾಸನ ಜಿಲ್ಲಾ ಉಸ್ತುವಾರಿಯಿಂದ ಬಿಡುಗಡೆಗೊಳಿಸುವಂತೆ ಮನವಿ ಮಾಡಿದ್ದಾರೆ. ಪಕ್ಷ ಸಂಘಟನೆ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆ ಕಾರ್ಯಕ್ಕಾಗಿ ಇದನ್ನು ಕೋರಿದ್ದಾರೆ. ಅವರು ದಲಿತ ಸಚಿವರ ಪ್ರತ್ಯೇಕ ಸಮಾವೇಶದ ಅವಶ್ಯಕತೆಯನ್ನು ಒತ್ತಿ ಹೇಳಿದ್ದು, ಕಾಂಗ್ರೆಸ್ ಪುನಃ ಅಧಿಕಾರಕ್ಕೆ ಬರುವಂತೆ ಜಾಗೃತಿ ಮೂಡಿಸುವ ಉದ್ದೇಶದಿಂದ ಚಿತ್ರದುರ್ಗ, ದಾವಣಗೆರೆ ಅಥವಾ ಹುಬ್ಬಳ್ಳಿಯಲ್ಲಿ ಸಮಾವೇಶ ಆಯೋಜಿಸುವ ಯೋಜನೆಯನ್ನು ಬಹಿರಂಗಪಡಿಸಿದ್ದಾರೆ.
ಹಾಸನ, ಫೆಬ್ರವರಿ 14: ಹಾಸನ (Hassan) ಉಸ್ತವಾರಿಯಿಂದ ಬಿಡುಗಡೆ ಕೋರಿ ಮುಖ್ಯಮಂತ್ರಿಗಳಿಗೆ ಮತ್ತು ಕೆಪಿಸಿಸಿ ಅಧ್ಯಕ್ಷರಿಗೆ ಪತ್ರ ಕೊಟ್ಟಿದ್ದೇನೆ. ನನ್ನ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡಿಬೇಕಿದೆ. ಹೀಗಾಗಿ, ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇನೆ. ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕೆಲಸ ಮಾಡಬೇಕಿದೆ. ನಾನು ಯಾವ ಜಿಲ್ಲೆಗೂ ಉಸ್ತುವಾರಿ ಕೊಡಿ ಎಂದು ಕೇಳುವುದಿಲ್ಲ ಎಂದು ದೆಹಲಿಯಲ್ಲಿ ಸಹಕಾರ ಇಲಾಖೆ ಸಚಿವ ಕೆ.ಎನ್.ರಾಜಣ್ಣ (KN Rajanna) ಹೇಳಿದರು.
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದಲಿತ ಸಚಿವರಿಂದ ಪ್ರತ್ಯೇಕ ಸಮಾವೇಶದ ಅಗತ್ಯವನ್ನು ನಾಯಕರ ಗಮನಕ್ಕೆ ತಂದಿದ್ದೇವೆ. ನಾನು ಎಸ್ಟಿ ಸಮುದಾಯದ ಮತಗಳಿಂದ ಮಾತ್ರ ಗೆದ್ದಿಲ್ಲ. ಎಲ್ಲ ಸಮುದಾಯದ ಆಶೀರ್ವಾದ ಬೇಕು. ಕಾಂಗ್ರೆಸ್ಗೆ ಯಾವ ಸಮಾವೇಶ ಮಾಡಿದರೆ ಒಳ್ಳೆಯದೋ, ಆ ಸಮಾವೇಶ ಮಾಡಬೇಕು. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಜಾಗೃತಿ ಮೂಡಿಸಬೇಕಿದೆ ಎಂದರು.
ಸಮಾವೇಶದ ಅಗತ್ಯವನ್ನು ಕೇಂದ್ರ ನಾಯಕರ ಗಮನಕ್ಕೆ ತಂದಿದ್ದೇವೆ. ಕೇಂದ್ರದ ನಾಯಕರನ್ನು ಸಮಾವೇಶಕ್ಕೆ ಕರೆಸುತ್ತೇವೆ. ಮುಂದಿನ ದಿನಗಳಲ್ಲಿ ಸಮಾವೇಶಕ್ಕೆ ಬರುತ್ತೇವೆ ಎಂದು ಹೇಳಿದ್ದಾರೆ. ಪಕ್ಷದ ವೇದಿಕೆಯಲ್ಲಿಯೇ ಸಮಾವೇಶ ಮಾಡುತ್ತೇವೆ. ಚಿತ್ರದುರ್ಗ, ದಾವಣಗರೆ ಅಥವಾ ಹುಬ್ಬಳ್ಳಿಯಲ್ಲಿ ಸಮಾವೇಶ ನಡೆಯುತ್ತದೆ. ಪಕ್ಷ ಗಟ್ಟಿಯಾದರೆ ಸಿದ್ದರಾಮಯ್ಯನವರು ಇರುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ: ಲಾಂಗೆಸ್ಟ್ ಚೀಫ್ ಮಿನಿಸ್ಟರ್ ಆಫ್ ಕರ್ನಾಟಕ’ ಆಗ್ತೀನಿ ಎಂದ ಸಿದ್ದರಾಮಯ್ಯ: ಸಿಎಂ ಹುದ್ದೆ ಚರ್ಚೆಗೆ ಮೆಗಾ ಟ್ವಿಸ್ಟ್
ಸಮಾವೇಶ ಮಾಡಲು ಕೆಪಿಸಿಸಿ ಅಧ್ಯಕ್ಷರನ್ನು ಕೇಳಬೇಕಿಲ್ಲ. ಎಐಸಿಸಿ ಅಧ್ಯಕ್ಷರು ದೊಡ್ಡವರೋ? ಕೆಪಿಸಿಸಿ ಅಧ್ಯಕ್ಷರು ದೊಡ್ಡವರೋ? ಕೆಪಿಸಿಸಿ ಅಧ್ಯಕ್ಷರ ನೇತೃತ್ವದಲ್ಲೇ ಸಮಾವೇಶ ಮಾಡಲಾಗುತ್ತದೆ. ಹಾಸನದಲ್ಲೂ ಪಕ್ಷದ ವೇದಿಯಲ್ಲೇ ಸಮಾವೇಶ ಮಾಡುತ್ತೇವೆ. ಎಐಸಿಸಿಯವರ ಅಧ್ಯಕ್ಷ ಆಗು ಅಂದರೆ ಆಗುತ್ತೇನೆ. ಮಂತ್ರಿಸ್ಥಾನ ಬಿಟ್ಟು ಅಧ್ಯಕ್ಷನಾಗುತ್ತೇನೆ. ಒನ್ ಮ್ಯಾನ್ ಒನ್ ಪೋಸ್ಟ್ಗೆ ಬದ್ಧನಾಗಿರುತ್ತೇನೆ ಎಂದು ಇಂಗಿತ ವ್ಯಕ್ತಪಡಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:15 pm, Fri, 14 February 25