KPCC ಅಧ್ಯಕ್ಷರ ಬದಲಾವಣೆ ಅಷ್ಟು ಸುಲಭವಲ್ಲ: ಡಿಕೆಶಿ ಬದಲಾವಣೆಗಿರುವ ತೊಡಕೇನು?
ಕರ್ನಾಟಕ ಬಿಜೆಪಿಯ ರಾಜ್ಯಾಧ್ಯಕ್ಷ ಬದಲಾವಣೆ ಕೂಗು ಜೋರಾಗಿದ್ದರೆ, ಇತ್ತ ಕಾಂಗ್ರೆಸ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ. ಒಂದೆಡೆ ಸಚಿವ ರಾಜಣ್ಣ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ರೆ, ಬೆಳಗಾವಿ ಸಾಹುಕಾರ ಸತೀಶ್ ಜಾರಕಿಹೊಳಿ ಸೈಲೆಂಟ್ ಆಗಿಯೇ ಕುರ್ಚಿಗೆ ಟವೆಲ್ ಹಾಕಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಈ ಕುರಿತ ಟಿವಿ9ಗೆ ಲಭ್ಯವಾದ ಇನ್ಸೈಡ್ ಮಾಹಿತಿ ಇಲ್ಲಿದೆ.

ಬೆಂಗಳೂರು, (ಫೆಬ್ರವರಿ 15): ಕರ್ನಾಟಕ ಕಾಂಗ್ರೆಸ್‌ನಲ್ಲಿ ಕುರ್ಚಿ ಫೈಟ್ ದಿನಕ್ಕೊಂದು ತಿರುವು ಪಡೆಯುತ್ತಿದೆ. ಡಿಕೆ ಶಿವಕುಮಾರ್ ಸಿಎಂ ಆಗಬೇಕೆಂದು ಹಲವರು ಬ್ಯಾಟಿಂಗ್ ಮಾಡುತ್ತಿದ್ರೆ, ಮತ್ತೊಂದೆಡೆ ಸಿದ್ದರಾಮಯ್ಯ ಬಣದ ದಲಿತ ಸಚಿವರು ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಪಟ್ಟುಹಿಡಿದಿದ್ದಾರೆ. ಮೇಲಿಂದ ಮೇಲೆ ದೆಹಲಿಗೆ ರೌಂಡ್ಸ್ ಹಾಕುತ್ತಿದ್ದಾರೆ. ಒಂದು ಹೆಜ್ಜೆ ಮುಂದೆ ಹೋಗಿರುವ ಸಚಿವ ಕೆ.ಎನ್.ರಾಜಣ್ಣ ಒಬ್ಬರಿಗೆ ಒಂದೇ ನಿಯಮದಡಿ ಕೆಪಿಸಿಸಿ ಅಧ್ಯಕ್ಷರು ಬದಲಾವಣೆ ಆಗಲೇಬೇಕೆಂದು ಹೈಕಮಾಂಡ್ ಬಳಿ ಬೇಡಿಕೆ ಮುಂದಿಟ್ಟಿದ್ದಾರೆ. ಮೂರು ದಿನ ದೆಹಲಿಯಲ್ಲೇ ಬೀಡುಬಿಟ್ಟು ಖರ್ಗೆ ಅವರನ್ನು ಭೇಟಿಯಾಗಿರುವ ರಾಜಣ್ಣ, ಹೈಕಮಾಂಡ್ ಅವಕಾಶ ನೀಡಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಕೆಪಿಸಿಸಿ ಅಧ್ಯಕ್ಷರಾಗಲು ಸಿದ್ಧ ಎಂದು ಹೇಳಿದ್ದಾರೆ.
ಸಚಿವ ಸತೀಶ್ ಜಾರಕಿಹೊಳಿ ಹೈಕಮಾಂಡ್ ಮುಂದೆ ನೇರವಾಗಿ ಅಧ್ಯಕ್ಷ ಸ್ಥಾನದ ಬೇಡಿಕೆ ಇಟ್ಟಿದ್ದಾರೆ. ಮಂತ್ರಿ ಸ್ಥಾನದ ಜತೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವಂತೆ ಕೇಳಿದ್ದಾರೆ. ಡಿಕೆಗೆ ಏನು ವಿಶೇಷ ಸವಲತ್ತು ಕೊಡಲಾಗಿದೆಯೋ ಅದೆಲ್ಲ ಬೇಕೆಂದು ಮನವಿ ಸಲ್ಲಿಸಿದ್ದಾರೆ. 3 ವರ್ಷ ಮಂತ್ರಿ ಸ್ಥಾನದ ಜೊತೆಗೆ ಅಧ್ಯಕ್ಷ ಸ್ಥಾನ ನೀಡಿ. ಪಕ್ಷ ಸಂಘಟನೆಗೆ ನಾನು ರೆಡಿ ಎಂದು ಹೇಳಿದ್ದಾರೆ. ಅಷ್ಟಕ್ಕೂ ಸತೀಶ್ ಈ ವಿಚಾರ ಪ್ರಸ್ತಾಪಿಸಿದ್ದು ಸುರ್ಜೇವಾಲ-ವೇಣುಗೋಪಾಲ್ ಮುಂದೆ.. ಆದ್ರೆ ಮಂತ್ರಿಸ್ಥಾನದ ಜತೆ ಅಧ್ಯಕ್ಷ ಸ್ಥಾನ ನೀಡಲು ಹೈಕಮಾಂಡ್ ಹಿಂದೇಟು ಹಾಕ್ತಿದೆ. ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಜತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳೋದಾಗಿ ಹೇಳಿದ್ದಾರಂತೆ.
ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಖರ್ಗೆ ಸುಳಿವು ಬೆನ್ನಲ್ಲೇ ಡಿಕೆಶಿ ಮಾರ್ಮಿಕ ಟ್ವೀಟ್!
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗಿರುವ ತೊಡಕೇನು?
ಕೆಲ ಸಚಿವರು ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಪಟ್ಟುಹಾಕಿದ್ದಾರೆ. ಆದ್ರೆ ಹೈಕಮಾಂಡ್ ಮಾತ್ರ ಸದ್ಯಕ್ಕೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಇಲ್ಲ ಅನ್ನೋ ಸಂದೇಶ ನೀಡಿದೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆಗೆ ಇರುವ ತೊಡಕೇನು? ಎನ್ನುವುದನ್ನು ನೋಡುವುದಾದರೆ, KPCC ಅಧ್ಯಕ್ಷರ ಬದಲಾವಣೆ ಅಂದುಕೊಂಡಷ್ಟು ಸುಲಭವಲ್ಲ ಅನ್ನೋದು ಕಾಂಗ್ರೆಸ್ ಹೈಕಮಾಂಡ್ಗೆ ಮನವರಿಕೆಯಾಗಿದೆ. ಯಾಕಂದ್ರೆ ಡಿಕೆ ರಾಜ್ಯದ ಅಂತ್ಯಂತ ಪ್ರಬಲ ನಾಯಕ.. ಇವರಂತೆ ಪ್ರಬಲ ಹಾಗೂ ಸಕ್ರಿಯ ನಾಯಕನಿಗಾಗಿ ಹುಡುಕಾಟ ಶುರುವಾಗಿದೆ.
ವೇಗದ ಅಭ್ಯರ್ಥಿ ಹುಡುಕಾಟದಲ್ಲಿ ನಾಯಕರು ನಿರತರಾಗಿದ್ದಾರೆ. ಒಂದು ವೇಳೆ ಸೂಕ್ತ ಕ್ಯಾಂಡಿಟೇಟ್ ಸಿಕ್ರೂ ಅದಕ್ಕೆ ಸಿಎಂ ಹಾಗೂ ಡಿಸಿಎಂ ಒಪ್ಪಿಗೆ ಬೇಕು. ಜಾತಿ ಸಮೀಕರಣದ ಬಗ್ಗೆಯೂ ಚಿಂತನೆ ನಡೆದಿದೆ. ಅಹಿಂದ ಹಾಗೂ ಮೇಲ್ವರ್ಗ ಎರಡೂ ಸಮುದಾಯ ಒಪ್ಪುವ ನಾಯಕ ಬೇಕು. ಈ ಮಧ್ಯೆ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಚುನಾವಣೆಯ ಸಾರಥ್ಯಕ್ಕಾಗಿ ಡಿಕೆ ಪಟ್ಟು ಹಿಡದಿದ್ದಾರಂತೆ. ಈ ಎಲ್ಲ ಕಾರಣಗಳಿಂದ KPCC ಅಧ್ಯಕ್ಷರ ಬದಲಾವಣೆಗೆ ಬ್ರೇಕ್ ಬಿದ್ದಿದೆ.
ಕುತೂಹಲ ಮೂಡಿಸಿದ ಡಿಕೆಶಿ-ಸಿಎಂ ಭೇಟಿ
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ದಲಿತ ಸಚಿವರ ಬೇಡಿಕೆ ಬೆನ್ನಲ್ಲೇ, ಡಿ.ಕೆ.ಶಿವಕುಮಾರ್ ನಿನ್ನೆ ರಾತ್ರಿ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿ ಮಾತುಕತೆ ನಡೆಸಿರೋದು ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಸಚಿವರ ಬಹಿರಂಗ ಹೇಳಿಕೆಗಳಿಗೆ ಬ್ರೇಕ್ ಹಾಕುವಂತೆ ಡಿಕೆಶಿ ಸಿಎಂ ಜತೆ ಚರ್ಚಿಸಿದ್ದಾರಾ? ಬೇರೆ ಯಾವ ವಿಚಾರ ಕುರಿತು ಸಮಾಲೋಚನೆ ನಡೆಸಿದ್ದಾರೆ ಅನ್ನೋದು ಕೌತುಕ ಮೂಡಿಸಿದೆ.
ದಲಿತ ಸಮಾವೇಶಕ್ಕೆ ಹೈಕಮಾಂಡ್ ಗ್ರೀನ್ ಸಿಗ್ನಲ್
ಒಂದೆಡೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಪಟ್ಟುಹಿಡಿದಿರೋ ಸಚಿವ ರಾಜಣ್ಣ, ಮತ್ತೊಂದೆಡೆ ದಲಿತ ಸಿಎಂ ದಾಳ ಉರುಳಿಸಿದ್ದಾರೆ. ಎಸ್.ಸಿ ಎಸ್‌ಟಿ ಸಮಾವೇಶ ನಡೆಸುವ ಮೂಲಕ ಶಕ್ತಿಪ್ರದರ್ಶನಕ್ಕೂ ಮುಂದಾಗಿದ್ದಾರೆ. ಆದ್ರೆ ಹೈಕಮಾಂಡ್ ತಡೆ ನೀಡಿತ್ತು. ಆದ್ರೆ ಇದೀಗ ದಲಿತ ಸಮಾವೇಶಕ್ಕೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ್ದು, ಇಂದು ಅಥವಾ ನಾಳೆ ಅಹಿಂದ ಸಚಿವರಿಂದ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ. ಕೆ ಎನ್ ರಾಜಣ್ಣ ಹಾಗೂ ಸತೀಶ್ ಜಾರಕಿಹೊಳಿ ಭೇಟಿಯಾಗಿ ಮಾತುಕತೆ ನಡೆಸಿ ದೆಹಲಿಯ ನಾಯಕರ ಮೆಸೇಜ್ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಬಳಿಕ ಸಮಾವೇಶದ ದಿನಾಂಕ ಫಿಕ್ಸ್ ಮಾಡಲಿದ್ದಾರೆ.
ಇನ್ನು ಈ ಬಗ್ಗೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಶೋಷಿತರ ಸಮಾವೇಶ ನಡೆಸುವ ಉದ್ದೇಶ ಇದೆ. ದಾವಣಗೆರೆ, ಚಿತ್ರದುರ್ಗ ಅಥವಾ ಹುಬ್ಬಳ್ಳಿಯಲ್ಲಿ ಮಾಡುವ ಉದ್ದೇಶ ಇದ್ದು, ಕಾಂಗ್ರೆಸ್ ಪಕ್ಷದಡಿಯಲ್ಲಿ ಶೋಷಿತರ ಸಮಾವೇಶ ನಡೆಸಲಾಗುತ್ತೆ. ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಸಮಾವೇಶ ನಡೆಸಲು ಚಿಂತನೆ ನಡೆಸಿದ್ದು, ಈ ಸಮಾವೇಶಕ್ಕೆ ಎಐಸಿಸಿ ನಾಯಕರಿಗೆ ಆಹ್ವಾನ ನೀಡಲಾಗುತ್ತೆ. ಹೈಕಮಾಂಡ್ ನಾಯಕರನ್ನು ಒಪ್ಪಿಸಿಯೇ ಸಮಾವೇಶ ನಡೆಸುತ್ತೇವೆ ಎಂದು ಸ್ಪಷ್ಟಪಡಿಸಿದರು.