ಬಳ್ಳಾರಿ ಪಾದಯಾತ್ರೆ ನಡೆಸಿ ಸಿಎಂ ಆದವರು ಈ ಜಿಲ್ಲೆಯ ಅಭಿವೃದ್ಧಿಗೆ ನಯಾಪೈಸೆ ಕೊಟ್ಟಿಲ್ಲ: ‘ಭಾರತ್​ ಜೋಡೋ’ ಪಾದಯಾತ್ರೆ ಬಗ್ಗೆ ಶ್ರೀರಾಮುಲು ವ್ಯಂಗ್ಯ

| Updated By: ಆಯೇಷಾ ಬಾನು

Updated on: Oct 15, 2022 | 7:58 AM

ಭಾರತ್​ ಜೋಡೋ’ ಪಾದಯಾತ್ರೆ ಬಗ್ಗೆ ಸಚಿವ ಶ್ರೀರಾಮುಲು ವ್ಯಂಗ್ಯ ಮಾಡಿದ್ದಾರೆ. ಕಾಂಗ್ರೆಸ್​​ನ ‘ತೋಡೋ’ ಯಾತ್ರೆಗೆ ಸುಸ್ವಾಗತ ಕೋರಿ ವ್ಯಂಗ್ಯವಾಡಿದ್ದಾರೆ.

ಬಳ್ಳಾರಿ ಪಾದಯಾತ್ರೆ ನಡೆಸಿ ಸಿಎಂ ಆದವರು ಈ ಜಿಲ್ಲೆಯ ಅಭಿವೃದ್ಧಿಗೆ ನಯಾಪೈಸೆ ಕೊಟ್ಟಿಲ್ಲ: ‘ಭಾರತ್​ ಜೋಡೋ’ ಪಾದಯಾತ್ರೆ ಬಗ್ಗೆ ಶ್ರೀರಾಮುಲು ವ್ಯಂಗ್ಯ
ಸಚಿವ ಬಿ ಶ್ರೀರಾಮುಲು
Follow us on

ಬಳ್ಳಾರಿ: ಬಳ್ಳಾರಿಯಲ್ಲಿ ಇಂದು ‘ಭಾರತ್​ ಜೋಡೋ’ ಪಾದಯಾತ್ರೆ(Bharat Jodo Yatra) ನಡೆಯುತ್ತಿದೆ. ಪಾದಯಾತ್ರೆ ಬಳಿಕ ಸಮಾವೇಶ ನಡೆಯಲಿದೆ. ಈ ಬೆನ್ನಲ್ಲೆ ‘ಜೋಡೋ’ ಪಾದಯಾತ್ರೆ ಬಗ್ಗೆ ಸಚಿವ ಶ್ರೀರಾಮುಲು(Sri Ramulu) ವ್ಯಂಗ್ಯ ಮಾಡಿದ್ದಾರೆ. ಕಾಂಗ್ರೆಸ್​​ನ ‘ತೋಡೋ’ ಯಾತ್ರೆಗೆ ಸುಸ್ವಾಗತ ಕೋರಿ ವ್ಯಂಗ್ಯವಾಡಿದ್ದಾರೆ.

1999 ರ ಲೋಕಸಭಾ ಚುನಾವಣೆ ವೇಳೆ ಅಮೇಥಿಯಲ್ಲಿ ಸೋಲಬಹುದು ಎಂಬ ಭೀತಿಯಿಂದ ಬಳ್ಳಾರಿಗೆ ಓಡೋಡಿ ಬಂದು ರಾಜಕೀಯ ಪುನರ್ ಜನ್ಮ ಪಡೆದಿದ್ದಕ್ಕೆ ಪ್ರತಿಯಾಗಿ, ಜಿಲ್ಲೆಯ ಜನತೆಗೆ ಚೂರಿ ಹಾಕಿ ಹೋಗಿದ್ದ ಕಾಂಗ್ರೆಸ್ ಪಕ್ಷದ ಭಾರತ್ ತೋಡೋ ಯಾತ್ರೆಗೆ ಹಾರ್ದಿಕ ಸುಸ್ವಾಗತ ಎಂದು ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಿಂದ ಗೆದ್ದು, ಸೌಜನ್ಯಕ್ಕಾದರೂ ಜನತೆಗೆ ಧನ್ಯವಾದಗಳನ್ನು ತಿಳಿಸದೇ, ದೆಹಲಿಯಿಂದಲೇ ರಾಜೀನಾಮೆ ಪತ್ರ ಬಿಸಾಕಿದ ಖಾಯಂ ಎಐಸಿಸಿ AICC ಅಧ್ಯಕ್ಷರ ಮುದ್ದಿನ ಪುತ್ರ ಪಾದಯಾತ್ರೆಯ ಮೂಲಕ ಬಳ್ಳಾರಿಗೆ ಆಗಮಿಸುತ್ತಿರುವುದಕ್ಕೆ ನಿಮಗಿದೋ ಭವ್ಯ ಸ್ವಾಗತ. ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಏದುಸಿರು‌ ಬಿಡುತ್ತಾ ಕೈಲಾಗದಿದ್ದರೂ ಎದ್ದೋ ಬಿದ್ದನಂತೆ ಓಡುತ್ತಾ, ರಸ್ತೆಯಲ್ಲಿ ಬಸ್ಕಿ ಹೊಡೆಯುತ್ತಾ, ಹಾವು- ಮುಂಗುಸಿಯಂತೆ ಇದ್ದರೂ, ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಕ್ಯಾಮರಾ ಮುಂದೆ ಪೋಜು ನೀಡುವ ಕೆಪಿಸಿಸಿ ಮಹಾನ್ ನಾಯಕರೆಲ್ಲರಿಗೂ ಸುಸ್ವಾಗತ.

ಬಳ್ಳಾರಿ ಜಿಲ್ಲೆ ಅಭಿವೃದ್ದಿಯಲ್ಲಿ ಬಿಜೆಪಿ ಸರ್ಕಾರದ ಕೊಡುಗೆಯೇ ದೊಡ್ಡದು. ಅದು ಜಿಲ್ಲೆಯ ಜನರಿಗೂ ಗೊತ್ತಿದೆ. ಹಾಗಾಗಿ ರಾಹುಲ್‌ ಗಾಂಧಿ ಭಾರತ್‌ ಜೋಡೋ ಯಾತ್ರೆ ಮೂಲಕ ಬಂದು ಏನೇ ಮಾಡಿದರೂ ನಂಬುವುದಿಲ್ಲ. ಅವರಿಗೆ ವಾಸ್ತವದ ಮೇಲೆ ನಂಬಿಕೆಯೇ ಹೊರತು, ಬರೀ ನಾಟಕ ಮಾಡುವವರ ಮೇಲಲ್ಲ. ಬಳ್ಳಾರಿ ಪಾದಯಾತ್ರೆ ನಡೆಸಿ ಮುಖ್ಯಮಂತ್ರಿ ಆದವರೂ ಕೂಡ ಜಿಲ್ಲೆಯ ಅಭಿವೃದ್ಧಿಗೆ ನಯಾಪೈಸೆ ಹಣ ಕೊಡದೆ, ಈಗ ಯಾವ ಮುಖ ಇಟ್ಟುಕೊಂಡು ಜನರ ಮುಂದೆ ಭಾಷಣ ಮಾಡುತ್ತೀರಿ? ನಮ್ಮ ಜನ ಸ್ವಾಭಿಮಾನಿಗಳು. ಎಲ್ಲದಕ್ಕೂ ಹೌದು ಹುಲಿಯಾ, ಎನ್ನುವವರಲ್ಲ ಅಥವಾ ಟಗರು ಟಗರು ಎಂದು ಜೈಕಾರ ಹಾಕುವವರೂ ಅಲ್ಲ ಎಂದು ಪರೋಕ್ಷವಾಗಿ ಸಿದ್ದರಾಯ್ಯ ಮತ್ತು ಕಾಂಗ್ರೆಸ್ ವಿರುದ್ಧ ಶ್ರೀರಾಮುಲು ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:58 am, Sat, 15 October 22