FSL ವರದಿಗೆ ಇನ್ಮುಂದೆ ತಿಂಗಳಾನುಗಟ್ಟಲೆ ಕಾಯಬೇಕಿಲ್ಲ! ಕ್ಷಿಪ್ರವಾಗಿ ತನಿಖಾಧಿಕಾರಿ ಕೈ ಸೇರಲಿದೆ ಎಫ್ಎಸ್ಎಲ್ ವರದಿ ಎಂಬ ಬ್ರಹ್ಮಾಸ್ತ್ರ!

Bellary FSL: ರಾಜ್ಯ ಸರ್ಕಾರ ಈ ಎಫ್ಎಸ್ಎಲ್ ಕೇಂದ್ರಕ್ಕೆ ವಿಜ್ಞಾನಿಗಳು, ಸಿಬ್ಬಂದಿ ಹಾಗೂ ಅಗತ್ಯ ಸೌಕರ್ಯ ಸೇರಿ ಎಲ್ಲ ಸೌಲಭ್ಯಗಳನ್ನು ಒದಗಿಸಿದ್ದು, ಇನ್ನೂ ಅಗತ್ಯವಿದ್ದಲ್ಲಿ ಸ್ಥಳೀಯವಾಗಿ ಜಿಲ್ಲಾಡಳಿತ ಒದಗಿಸಲಿದೆ - ಬಳ್ಳಾರಿ ಜಿಲ್ಲಾಧಿಕಾರಿ ಪವನ್ ಮಾಲ್ಪಾಟಿ

FSL ವರದಿಗೆ ಇನ್ಮುಂದೆ ತಿಂಗಳಾನುಗಟ್ಟಲೆ ಕಾಯಬೇಕಿಲ್ಲ! ಕ್ಷಿಪ್ರವಾಗಿ ತನಿಖಾಧಿಕಾರಿ ಕೈ ಸೇರಲಿದೆ ಎಫ್ಎಸ್ಎಲ್ ವರದಿ ಎಂಬ ಬ್ರಹ್ಮಾಸ್ತ್ರ!
FSL ವರದಿಗೆ ಇನ್ಮುಂದೆ ತಿಂಗಳಾನುಗಟ್ಟಲೆ ಕಾಯಬೇಕಿಲ್ಲ! ಕ್ಷಿಪ್ರವಾಗಿ ತನಿಖಾಧಿಕಾರಿ ಕೈ ಸೇರಲಿದೆ ಎಫ್ಎಸ್ಎಲ್ ವರದಿ ಎಂಬ ಬ್ರಹ್ಮಾಸ್ತ್ರ!
Follow us
TV9 Web
| Updated By: ಸಾಧು ಶ್ರೀನಾಥ್​

Updated on: May 03, 2022 | 7:37 PM

ಬಳ್ಳಾರಿ: ಅಪರಾಧ ಶಾಸ್ತ್ರದಲ್ಲಿ ತನಿಖಾಧಿಕಾರಿಗಳನ್ನು ನಿರ್ದಿಷ್ಟ ದಿಕ್ಕಿಗೆ, ಕೈಹಿಡಿದು ಕರೆದೊಯ್ಯುವ ಫೋರೆನ್ಸಿಕ್​ ಸೈನ್ಸ್​ ಲ್ಯಾಬ್ -ಎಫ್ ಎಸ್ಎಲ್ (FSL Bellary -Forensic Science Laboratory) ವರದಿಗಾಗಿ ಕಲಬುರಗಿ, ಬೆಂಗಳೂರು, ಹೈದ್ರಾಬಾದ್ ಗೆ ಓಡಾಡೋ ಕಾಲ‌ ಮುಗಿಯಿತು. ಮಹತ್ವದ FSL ರಿಪೋರ್ಟ್ ಗಾಗಿ ತಿಂಗಳುಗಳು ಗಟ್ಟಲೇ ಕಾಯೋ ಕೆಲಸವೂ ಇನ್ನಿಲ್ಲವಾಗಿದೆ. ಇನ್ನೇನಿದ್ರೂ ವಾರದಲ್ಲಿಯೇ ವಿಧಿ ವಿಜ್ಞಾನ ಪ್ರಯೋಗಾಲಯ ವರದಿ ತನಿಖಾಧಿಕಾರಿಗಳ ‌ಕೈ ಸೇರಲಿದೆ. ಬಳ್ಳಾರಿಯ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯವನ್ನು ವರ್ಚ್ಯುವಲ್ ವ್ಯವಸ್ಥೆ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾ (Union Home Minister Amit Shah) ಉದ್ಘಾಟನೆ ಮಾಡಿ ಎಫ್ ಎಸ್ ಎಲ್ ಲ್ಯಾಬ್ ಗೆ ಚಾಲನೆ ನೀಡಿದ್ದಾರೆ. ಈ‌ ಮೂಲಕ ಬಳ್ಳಾರಿ, ರಾಯಚೂರು, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ ವ್ಯಾಪ್ತಿಯ ಪೊಲೀಸರು ಫೋರೆನ್ಸಿಕ್ ರಿಪೋರ್ಟ್ ಗಾಗಿ ದೂರದ ಊರುಗಳಿಗೆ ಅಲೆದಾಡೋದು ತಪ್ಪಿದಂತಾಗಿದೆ.

7 ಜಿಲ್ಲೆಯ ಜನರಿಗೆ ಕಲಬುರಗಿ ಆಧಾರವಾಗಿತ್ತು.. ಇದುವರೆಗೂ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಯ ಜನರು ಹಾಗೂ ಪೊಲೀಸರು ಫೋರೆನ್ಸಿಕ್ ಸೈನ್ಸ್ ವರದಿಗೆ ಸಂಪೂರ್ಣವಾಗಿ ಕಲಬುರಗಿಯಲ್ಲಿರೋ ಲ್ಯಾಬ್ ಮೇಲೆ ಅವಲಂಬನೆಯಾಗಿರಬೇಕಿತ್ತು. ಕಲಬುರಗಿ ಲ್ಯಾಬ್ ನಲ್ಲಿರುವ ಒತ್ತಡದಿಂದ ಕನಿಷ್ಠವೆಂದ್ರೂ‌‌ ಯಾವುದೇ ಪ್ರಕರಣದ ವರದಿಗಳಿಗಾಗಿ ಎರಡು ತಿಂಗಳು ಕಾಯುವ ಸ್ಥಿತಿ ಇತ್ತು. ಕೆಲ ಪ್ರಕರಣದಲ್ಲಿ ಬೇಗ ವರದಿ ಬೇಕಿದ್ದಲ್ಲಿ ಹೈದ್ರಾಬಾದ್ ಅಥವಾ ಬೆಂಗಳೂರು ಸೇರಿದಂತೆ ಇತರೆ ದೂರದ ಊರಿಗೆ ಹೋಗೋ ಅನಿವಾರ್ಯ ಪೊಲೀಸರದ್ದಾಗಿತ್ತು. ಆದ್ರೀಗ ಬಳ್ಳಾರಿಯಲ್ಲಿ ಲ್ಯಾಬ್ ನಿರ್ಮಾಣವಾದ ಪ್ರಭಾವದಿಂದಾಗಿ ಕಲಬುರಗಿ ಎಫ್ ಎಸ್ ಎಲ್ ಕೇಂದ್ರದ ಮೇಲಿದ್ದ ಒತ್ತಡ ಕಡಿಮೆಯಾಗಲಿದೆ. ಅಲ್ಲದೇ ಬಳ್ಳಾರಿ, ರಾಯಚೂರು, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ ಫೋರೆನ್ಸಿಕ್ ವರದಿಗಳು ಬೇಗನೇ ಲಭ್ಯವಾಗಲಿದ್ದು ಇದರಿಂದ ಹೆಚ್ಚಿನ ಅನುಕೂಲವಾಗಲಿದೆ.

ಬಹು ದಿನಗಳ ಹೋರಾಟದ ಪ್ರಯತ್ನಕ್ಕೆ ಸಿಕ್ಕ ಫಲ.. ಅತ್ಯಾಧುನಿಕ ಲ್ಯಾಬ್ ನಿರ್ಮಾಣ ಕುರಿತಂತೆ ಬಳ್ಳಾರಿ ಜಿಲ್ಲಾ ಪೊಲೀಸರು ‌ಬಹಳ ಶ್ರಮಪಟ್ಟಿದ್ದಾರೆ. ಲ್ಯಾಬ್ ನಿರ್ಮಾಣ ಕುರಿತು ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸೋದ್ರ ಜೊತೆಗೆ ನಿರಂತರವಾಗಿ ನಡೆದ ಪ್ರಯತ್ನದಿಂದ ಇಂದು ಬಳ್ಳಾರಿಯಲ್ಲಿ ‌ಲ್ಯಾಬ್ ನಿರ್ಮಾಣವಾಗಿದೆ. ಬಿಎಸ್ಎನ್ ಎಲ್ ಕಚೇರಿಯ ಆವರಣದಲ್ಲಿರುವ ಕಟ್ಟಡದಲ್ಲಿ ಸ್ಥಾಪಿಸಲಾಗಿರುವ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯಕ್ಕೆ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರು ಬೆಂಗಳೂರಿನಿಂದ ವರ್ಚುವಲ್ ಮೂಲಕ ಇಂದು ಮಂಗಳವಾರ ಚಾಲನೆ ನೀಡಿದರು.

ಜಿಲ್ಲಾ SP-DC ಯಿಂದ ಅಧಿಕೃತವಾಗಿ ಆರಂಭಗೊಂಡ ಲ್ಯಾಬ್.. ಇನ್ಮುಂದೆ ಎಫ್ಎಸ್ಎಲ್ ವರದಿ ಬೇಗ ಬರೋದ್ರಿಂದ ಪ್ರಕರಣಗಳಲ್ಲಿ ಅರೋಪಗಳ ದೃಢಪಡುವಿಕೆ ಪ್ರಮಾಣ ಹೆಚ್ಚಾಗಲಿದೆ. ಎಫ್ಎಸ್ಎಲ್ ಸದೃಢಗೊಳಿಸಿದರೆ ಪೊಲೀಸರ ಸಾಕ್ಷ್ಯಾಧಾರಗಳು ಸ್ಟ್ರಾಂಗ್ ಆಗಲು ಮತ್ತು ಶಿಕ್ಷೆ ಪ್ರಮಾಣ ಹೆಚ್ಚಾಗಲು ಸಾಧ್ಯ ಜೊತೆಗೆ ಅಪರಾಧ ಪ್ರಕರಣಗಳ ಪ್ರಮಾಣ ಕಡಿಮೆಯಾಗಲು ಸಹಕಾರಿಯಾಗಲಿದೆ ಎಂದು ‌ಜಿಲ್ಲಾಧಿಕಾರಿ ಪವನ್ ಮಾಲ್ಪಾಟಿ ಹೇಳಿದ್ರು. ರಾಜ್ಯ ಸರ್ಕಾರ ಈ ಎಫ್ಎಸ್ಎಲ್ ಕೇಂದ್ರಕ್ಕೆ ವಿಜ್ಞಾನಿಗಳು, ಸಿಬ್ಬಂದಿ ಹಾಗೂ ಅಗತ್ಯ ಸೌಕರ್ಯ ಸೇರಿ ಎಲ್ಲ ಸೌಲಭ್ಯಗಳನ್ನು ಒದಗಿಸಿದ್ದು, ಇನ್ನೂ ಅಗತ್ಯವಿದ್ದಲ್ಲಿ ಸ್ಥಳೀಯವಾಗಿ ಜಿಲ್ಲಾಡಳಿತ ಒದಗಿಸಲಿದೆ ಎಂದರು.

ಎಸ್ಪಿ ಸೈದುಲು ಅಡಾವತ್ ಅವರು ಮಾತನಾಡಿ, ಇದುವರೆಗೆ ಒಂದು ವರದಿ ಬರಬೇಕಾದರೇ ಎರಡು ತಿಂಗಳಾಗುತ್ತಿತ್ತು. ಇನ್ಮುಂದೆ 15 ದಿನದಿಂದ ತಿಂಗಳೊಳಗೆ ವರದಿ ಕೈಸೇರಲಿದೆ. ಬಜೆಟ್ ನಲ್ಲಿ ಘೋಷಣೆಯಾದ ಎರಡು ತಿಂಗಳಲ್ಲಿಯೇ ಎಫ್ಎಸ್ಎಲ್ ಕೇಂದ್ರವನ್ನು ಬಳ್ಳಾರಿಯಲ್ಲಿ ಅನುಷ್ಠಾನಗೊಳಿಸಲಾಗಿದೆ. ಈಗಿನಿಂದಲೇ ಈ ಲ್ಯಾಬ್ ಕಾರ್ಯನಿರ್ವಹಿಸಲಿದೆ. ಎಲ್ಲ ಅಗತ್ಯ ಸಿಬ್ಬಂದಿ ಹಾಗೂ ಸೌಕರ್ಯಗಳನ್ನು ಸರ್ಕಾರ ಒದಗಿಸಿದೆ ಎಂದರು. -ವೀರಪ್ಪ ದಾನಿ, ಟಿವಿ 9, ಬಳ್ಳಾರಿ