Bengaluru-Chennai Expressway: ಬೆಂಗಳೂರು ಚೆನ್ನೈ ಎಕ್ಸ್‌ಪ್ರೆಸ್‌ ವೇ ಕರ್ನಾಟಕದಲ್ಲಿ ಸಾರ್ವಜನಿಕ ಸಂಚಾರಕ್ಕೆ ಮುಕ್ತ

ಬೆಂಗಳೂರು ಚೆನ್ನೈ ಎಕ್ಸ್‌ಪ್ರೆಸ್‌ವೇಯ ಕರ್ನಾಟಕ ಭಾಗವು ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿದೆ. ಸಣ್ಣಪುಟ್ಟ ಕೆಲಸಗಳನ್ನು ಹೊರತುಪಡಿಸಿ 71 ಕಿಲೋಮೀಟರ್ ರಸ್ತೆಯ ಕಾಮಗಾರಿ ಪೂರ್ಣಗೊಂಡಿದೆ ಎಂದು ಎನ್​ಎಚ್​ಎಎಐ ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳೀಯರು ಈಗಾಗಲೇ ಬಳಸುತ್ತಿದ್ದಾರೆ. ಟೋಲ್ ಶುಲ್ಕ ಇನ್ನೂ ವಿಧಿಸುತ್ತಿಲ್ಲ. ಆದಾಗ್ಯೂ, ಆಂಧ್ರಪ್ರದೇಶ ಮತ್ತು ತಮಿಳುನಾಡು ವ್ಯಾಪ್ತಿಯ ಕಾಮಗಾರಿ 2025ರ ಆಗಸ್ಟ್‌ವರೆಗೆ ಮುಂದುವರಿಯಲಿದೆ.

Bengaluru-Chennai Expressway: ಬೆಂಗಳೂರು ಚೆನ್ನೈ ಎಕ್ಸ್‌ಪ್ರೆಸ್‌ ವೇ ಕರ್ನಾಟಕದಲ್ಲಿ ಸಾರ್ವಜನಿಕ ಸಂಚಾರಕ್ಕೆ ಮುಕ್ತ
ಬೆಂಗಳೂರು-ಚೆನ್ನೈ ಎಕ್ಸಪ್ರೆಸ್​ವೇ ಕಾಮಗಾರಿಯ ಸಂಗ್ರಹ ಚಿತ್ರ

Updated on: Dec 09, 2024 | 9:13 AM

ಬೆಂಗಳೂರು, ಡಿಸೆಂಬರ್ 9: ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಯ ಕರ್ನಾಟಕ ವ್ಯಾಪ್ತಿಯ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಸಂಚಾರಕ್ಕೆ ಮುಕ್ತವಾಗಿದೆ. ಸದ್ಯ ಸ್ಥಳೀಯರು ಎಕ್ಸ್​​ಪ್ರೆಸ್​ ವೇ ಬಳಸುತ್ತಿದ್ದಾರೆ. ಜಾಲಿ ರೈಡ್​ಗಳಿಗೂ ಎಕ್ಸ್​​ಪ್ರೆಸ್ ವೇ ಬಳಕೆಯಾಗುತ್ತಿದೆ ಎಂಬುದು ತಿಳಿದುಬಂದಿದೆ. 260 ಕಿಲೋಮೀಟರ್ ಎಕ್ಸ್‌ಪ್ರೆಸ್‌ವೇ ಕಾಮಗಾರಿ ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಇನ್ನೂ ಪೂರ್ಣಗೊಂಡಿಲ್ಲ. 2025 ರ ಆಗಸ್ಟ್ ವೇಳೆಗೆ ಕಾಮಗಾರಿ ಸಂಪೂರ್ಣವಾಗಿ ಮುಕ್ತಾಯಗೊಂಡು ಹೆದ್ದಾರಿ ಲೋಕಾರ್ಪಣೆಗೊಳ್ಳುವ ನಿರೀಕ್ಷೆ ಇದೆ.

ಸದ್ಯ ಕರ್ನಾಟಕ ವ್ಯಾಪ್ತಿಯ 71 ಕಿಲೋಮೀಟರ್ ರಸ್ತೆಯ ಕಾಮಗಾರಿ ಬಹುತೇಕ ಮುಕ್ತಾಯಗೊಂಡಿದ್ದು, ರಸ್ತೆ ಸಾರ್ವನಿಕರಿಗೆ ಮುಕ್ತವಾಗಿದೆ. ಎಕ್ಸ್‌ಪ್ರೆಸ್‌ವೇ ಸುತ್ತಮುತ್ತ ವಾಸಿಸುವ ಸ್ಥಳೀಯರು ರಸ್ತೆಯಲ್ಲಿ ಸಂಚಾರ ಆರಂಭಿಸಿದ್ದಾರೆ.

ಸಂಚಾರಕ್ಕೆ ಮುಕ್ತ

ಹೊಸಕೋಟೆ ಸಮೀಪದಲ್ಲಿ ದೇವಸ್ಥಾನವೊಂದರಿಂದಾಗಿ ಕಾಮಗಾರಿ ವಿಳಂಬವಾಗಿತ್ತು. ದೇವಸ್ಥಾನವನ್ನು ಸ್ಥಳಾಂತರಿಸಲಾಗಿದ್ದು, 400 ಮೀಟರ್ ವ್ಯಾಪ್ತಿಯ ಕಾಮಗಾರಿ ಈಗ ಮುಗಿದಿದೆ. ಕೆಲವು ಸಣ್ಣಪುಟ್ಟ ಕಾಮಗಾರಿಗಳನ್ನು ಹೊರತುಪಡಿಸಿದರೆ, ರಸ್ತೆಯು ಜನರಿಗೆ ಮುಕ್ತವಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ಚೆನ್ನೈ ಎಕ್ಸ್​ಪ್ರೆಸ್​​ ವೇ: ಎಲ್ಲೆಲ್ಲಿ ನಿರ್ಗಮನ?

ಬೆಂಗಳೂರು ಚೆನ್ನೈ ಎಕ್ಸ್​ಪ್ರೆಸ್​​ ವೇ ಕರ್ನಾಟಕ ವ್ಯಾಪ್ತಿಯಲ್ಲಿ ಮಾಲೂರು, ಬಂಗಾರಪೇಟೆ ಮತ್ತು ಬೇತಮಂಗಲದಲ್ಲಿ ನಿರ್ಗಮನ ಕೇಂದ್ರಗಳನ್ನು ಹೊಂದಿದೆ. ಸಂಪೂರ್ಣ ವಿಸ್ತರಣೆ ಇನ್ನೂ ಪೂರ್ಣಗೊಳ್ಳದ ಕಾರಣ ಟೋಲ್ ಸಂಗ್ರಹಿಸುತ್ತಿಲ್ಲ. ಎಕ್ಸ್‌ಪ್ರೆಸ್‌ವೇಯನ್ನು ಈಗ ಸ್ಥಳೀಯರು ಮತ್ತು ಲಾಂಗ್ ಡ್ರೈವ್‌ಗಳಿಗೆ ಹೋಗುವವರು ಬಳಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್​ಪ್ರೆಸ್’ ವರದಿ ಮಾಡಿದೆ.

ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ಈ ಮೂರು ರಾಜ್ಯಗಳ ಮೂಲಕ ಹಾದುಹೋಗುವ ಎಕ್ಸ್‌ಪ್ರೆಸ್‌ವೇಯಲ್ಲಿ ಗಂಟೆಗೆ ಗರಿಷ್ಠ 120 ಕಿಮೀ ವೇಗದ ಮಿತಿ ನಿಗದಿಪಡಿಸಲಾಗಿದೆ. ಸದ್ಯ ಬೆಂಗಳೂರು ಮತ್ತು ಚೆನ್ನೈ ನಡುವಣ ಪ್ರಯಾಣಕ್ಕೆ ಆರು ಗಂಟೆಗಳಿಗಿಂತ ಹೆಚ್ಚು ಸಮಯ ಬೇಕಾಗುತ್ತದೆ. ಇದನ್ನು ಮೂರು ಗಂಟೆಗಳಿಗೆ ಕಡಿಮೆ ಮಾಡುವ ಗುರಿಯನ್ನು ಈ ಎಕ್ಸ್​​ಪ್ರೆಸ್ ವೇ ಹೊಂದಿದೆ.

ಇದನ್ನೂ ಓದಿ: ಬೆಂಗಳೂರು ಚೆನ್ನೈ ಎಕ್ಸ್​ಪ್ರೆಸ್​​ವೇ; ದೂರ, ಸಮಯ, ಇತರ ಮಾಹಿತಿ ಇಲ್ಲಿದೆ

ಚತುಷ್ಪಥ ಎಕ್ಸ್‌ಪ್ರೆಸ್‌ವೇಯನ್ನು ಕರ್ನಾಟಕದಲ್ಲಿ ಮೂರು ಪ್ಯಾಕೇಜ್‌ಗಳಾಗಿ ವಿಂಗಡಿಸಲಾಗಿದೆ. ಮೊದಲ ಪ್ಯಾಕೇಜ್ ಹೊಸಕೋಟೆ ಮತ್ತು ಮಾಲೂರು ನಡುವೆ, 27.1 ಕಿ.ಮೀ. ವ್ಯಾಪಿಸಿದೆ. ಎರಡನೇಯದ್ದು ಮಾಲೂರು ಮತ್ತು ಬಂಗಾರಪೇಟೆ, 27.1ಕಿ.ಮೀ, ಮೂರನೇಯದ್ದು ಬಂಗಾರಪೇಟೆ ಮತ್ತು ಬೇತಮಂಗಲ, 17.5 ಕಿ.ಮೀ ವ್ಯಾಪಿಸಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ