
ರಾಜ್ಯ ರಾಜಕೀಯದಲ್ಲಿ ಪ್ರತಿ ದಿನ ಒಂದೊಂದು ಬೆಳವಣಿಗೆಗಳಾಗುತ್ತಿವೆ. ಬ್ರಾಹ್ಮಣ ಸಮುದಾಯ ಕೆಣಕಿದ ಹೆಚ್‌ಡಿ ಕುಮಾರಸ್ವಾಮಿ ವಿರುದ್ಧ ಒಂದು ಕಡೆ ದಳ್ಳರಿ ಧಗಧಗ ಅಂತ ಹೊತ್ತಿ ಉರಿಯುತ್ತಿದೆ. ಕುಮಾರಸ್ವಾಮಿ ಅವರು ಕ್ಷಮೆಗೆ ಸಮುದಾಯ ಹಾಗೂ ಕೇಸರಿ ಪಡೆ ಬಿಗಿ ಪಟ್ಟು ಹಾಕಿ ಕುಳಿತಿದೆ. ಹೀಗಿದ್ರು ದಳಪತಿ ಮಾತ್ರ ಒಂದಿಷ್ಟು ತಗ್ಗಿಲ್ಲ, ಕುಗ್ಗಿಲ್ಲ. ಬದಲಾಗಿ ಮತ್ತೆ ಪ್ರಲ್ಹಾದ್ ಜೋಶಿ ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದಾರೆ. ಜೋಶಿಯನ್ನ ಗಾಂಧಿ ಕೊಂದ ಪಂಗಡ. ಪೇಶ್ವೆಗಳ ಡಿಎನ್ಎಗೆ ಹೋಲಿಕೆ ರೊಚ್ಚಿಗೆದ್ದಿದ್ದಾರೆ. ಇದರ ನಡುವೆ ಮತ್ತೊಂದೆಡೆ ಇತ್ತ ಕಾಂಗ್ರೆಸ್ ಇಂದು ಕಲಬುರಗಿ ಜಿಲ್ಲೆಯಲ್ಲಿ ಮೂರನೇ ದಿನದ ಪ್ರಜಾಧ್ವನಿ ಯಾತ್ರೆ ನಡೆಸುತ್ತಿದೆ. ಮುಸ್ಲಿಂ ಮತಗಳನ್ನ ಸೆಳೆಯಲು ಜನಾರ್ದನ ರೆಡ್ಡಿ ಸಭೆಗಳ ಮೇಲೆ ಸಭೆ ನಡೆಸುತ್ತಿದ್ದಾರೆ. ಬನ್ನಿ ಬಿರುಸಿನ ಓಟಕಿತ್ತ ರಾಜಕೀಯ ಪಕ್ಷಗಳ ಕ್ಷಣ ಕ್ಷಣದ ಮಾಹಿತಿಯನ್ನು ಟಿವಿ9 ಕನ್ನಡ ಡಿಜಿಟಲ್ ಲೈವ್ನಲ್ಲಿ ಪಡೆಯಿರಿ.
ಶಿವಮೊಗ್ಗ: H.D.ಕುಮಾರಸ್ವಾಮಿ ರಾಜ್ಯಾದ್ಯಂತ ಸುತ್ತಾಡಿಕೊಂಡು ಬಂದಿದ್ದಾರೆ. ಇದರಿಂದ ಹೆಚ್.ಡಿ.ಕುಮಾರಸ್ವಾಮಿ ಸ್ಥಾನ ಏನೆಂಬುದು ಗೊತ್ತಾಗಿದೆ. ಹೆಚ್ಡಿಕೆ ಜಾತಿ, ಧರ್ಮಗಳ ನಡುವೆ ತಂದಿಡುವ ಕೆಲಸ ಮಾಡ್ತಿದ್ದಾರೆ. ಇದರಿಂದ ವೋಟ್ ಬರಬಹುದೇನೋ ಅಂತಾ ಪ್ಲ್ಯಾನ್ ಮಾಡಿದ್ದಾರೆ. ಕಳೆದ ಚುನಾವಣೆಯಲ್ಲಿ ಇದೇ ರೀತಿ ಸಿದ್ದರಾಮಯ್ಯ ಮಾಡಿದ್ದರು. ಲಿಂಗಾಯತ, ವೀರಶೈವರ ನಡುವೆ ತಂದಿಡುವ ಕೆಲಸ ಮಾಡಿದ್ದರು ಎಂದು ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಶಿವಮೊಗ್ಗ: ಸಿದ್ದರಾಮಯ್ಯ ಅರ್ಥವಿಲ್ಲದ ಮಾತುಗಳನ್ನು ಆಡುತ್ತಿದ್ದಾರೆ. ಅಲ್ಪಸಂಖ್ಯಾತರ ಎಂಜಲಿಗೆ ಕೈಯೊಡ್ಡುವ ಕೆಲಸ ಮಾಡುತ್ತಿದ್ದಾರೆ. ಇಂತಹ ಹೇಳಿಕೆಯಿಂದ ಸಿದ್ದರಾಮಯ್ಯ ಕಳೆದುಕೊಳ್ಳುವುದೇ ಜಾಸ್ತಿ ಎಂದು ಶಿವಮೊಗ್ಗದಲ್ಲಿ ಗೃಹ ಇಲಾಖೆ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಬೆಂಗಳೂರು: ಫೆಬ್ರವರಿ 10ರಿಂದ 24ರವರೆಗೆ ರಾಜ್ಯ ಬಜೆಟ್ ಅಧಿವೇಶನ ಹಿನ್ನೆಲೆ ವಿಧಾನಸೌಧದ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಲಾಗಿದೆ. ವಿಧಾನಸೌಧ ಸುತ್ತಮುತ್ತ 5ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ. ಮೆರವಣಿಗೆ, ಪ್ರತಿಭಟನೆ, ಸಭೆಗಳ ಆಯೋಜನೆಗೆ ನಿಷೇಧಿಸಲಾಗಿದೆ. ಯಾವುದೇ ಪ್ರತಿಕೃತಿಗಳ ಪ್ರದರ್ಶನ, ದಹನ ಮಾಡುವಂತಿಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಆದೇಶಿಸಿದ್ದಾರೆ.
ದಾವಣಗೆರೆ: ಹೆಚ್.ಡಿ.ಕುಮಾರಸ್ವಾಮಿ ಠುಸ್ ಗಿರಾಕಿ ಎಂದು ಬಿ.ಸಿ.ಪಾಟೀಲ್ ಹೇಳಿದರು. ಯಾವ ಜಾತಿಯವರು ಬೇಕಾದರೂ ಮುಖ್ಯಮಂತ್ರಿ ಆಗಬಹುದು. ಇದು ಜಾತ್ಯತೀತ ರಾಷ್ಟ್ರ, ಯಾರ ಬೇಕಾದ್ರೂ ಸಿಎಂ ಆಗಬಹುದು. ಲಿಂಗಾಯಿತರು, ಒಕ್ಕಲಿಗರ ನಡುವೆ ಹೆಚ್ಡಿಕೆ ವಿಷಬೀಜ ಬಿತ್ತಿದ್ದಾರೆ. ಡಿಕೆಶಿ, ಸಿದ್ದರಾಮಯ್ಯ ನಾನೇ ಸಿಎಂ ಅಂತಾ ಹೇಳಿಕೊಳ್ಳುತ್ತಿದ್ದಾರೆ. ಆದ್ರೆ ನಮ್ಮ ಪಕ್ಷದಲ್ಲಿ ವರಿಷ್ಠರು, ಶಾಸಕರು ಸಿಎಂ ಆಯ್ಕೆ ಮಾಡ್ತಾರೆ ಎಂದು ಹೇಳಿದರು.
ಚಿಕ್ಕಬಳ್ಳಾಪುರ: ತಮ್ಮ ತಟ್ಟೆಯಲ್ಲಿ ಏನಿದೆ ನೋಡಿಕೊಳ್ಳಿ, ಆಮೇಲೆ ನಮ್ಮ ತಟ್ಟೆ ನೋಡಿ. ರಾಹುಲ್ ಗಾಂಧಿಯನ್ನು ಕರೆಸಿ ರಸ್ತೆ ರಸ್ತೆಯಲ್ಲಿ ಯಾಕೆ ಅಲೆಸಿದ್ದರು. ರಾಜ್ಯದಲ್ಲಿ ಮಹಿಳಾ ನಾಯಕಿಯರಿದ್ದರೂ ಪ್ರಿಯಾಂಕಾ ಕರೆಸಿದ್ಯಾಕೆ? ನಮಗೆ ನರೇಂದ್ರ ಮೋದಿ ಎಂಬ ಹೆಮ್ಮೆಯ ಪ್ರಧಾನಮಂತ್ರಿ ಇದ್ದಾರೆ. ಮೋದಿ ಎಂಬ ವಿಶ್ವಮಟ್ಟದ ನಾಯಕ ನಮಗೆ ಇದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿಕೆಗೆ ಸಚಿವ ಡಾ.ಕೆ.ಸುಧಾಕರ್ ತಿರುಗೇಟು ನೀಡಿದರು.
ಬೆಂಗಳೂರು: ತಲ್ಲಣ ಉಂಟಾಗಿರೋದು ಜೆಡಿಎಸ್ನಲ್ಲಿ. ಈ ತರ ಹುಚ್ಚುಚ್ಚು ಹೇಳಿಕೆ ಕೊಡಬಾದ್ರು. ಅಮಿತ್ ಶಾ ಅವರು ಮೋದಿ ಬಂದಾಗ ಹೇಳಿದ್ದಾರೆ. ಬೊಮ್ಮಾಯಿ ಅವರ ನೇತೃತ್ವದಲ್ಲಿ ಚುನಾವಣೆ ಅನ್ನೋದು. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಅವರು ತಮ್ಮ ವರ್ಚಸ್ಸಿನಿಂದ ಕೆಳಗೆ ಬರ್ತಿದ್ದಾರೆ. ರಾಮನಗರ ವಿಚಾರದಲ್ಲೂ ಒಳ್ಳೆ ಅಭ್ಯರ್ಥಿಯನ್ನ ಹಾಕುತ್ತೇವೆ ಎಂದು ಸಚಿವ ಆರ್.ಅಶೋಕ್ ಹೇಳಿದರು.
ಬೆಂಗಳೂರು: ನಮ್ಮಲ್ಲಿ ಮುಖ್ಯಮಂತ್ರಿ ಆಗಬೇಕಾದರೆ ಟ್ಯಾಲೆಂಟ್ ಇರಬೇಕು. ಜೋಶಿ ಸಿಎಂ ಆಗುವ ಬಗ್ಗೆ ಕೇಂದ್ರದಲ್ಲಿ ತೀರ್ಮಾನ ಆಗುತ್ತದೆ. ಸಿಎಂ ಯಾರಾಗಬೇಕೆಂದು ಕೇಂದ್ರದ ನಾಯಕರು ನಿರ್ಧರಿಸುತ್ತಾರೆ. ಈಗಲೂ ಬಸವರಾಜ ಬೊಮ್ಮಾಯಿ ಅವರೇ ಸಿಎಂ ಎಂದು ಆರ್.ಅಶೋಕ್ ಟಾಂಗ್ ನೀಡಿದರು.
ಬೆಂಗಳೂರು: ಹೆಚ್.ಡಿ.ಕುಮಾರಸ್ವಾಮಿ ಸ್ವಭಾವ ಏನು ಅನ್ನೋದು ನಮಗೆ ಗೊತ್ತು. ಚುನಾವಣೆ ವೇಳೆ ಜನರು ಚರ್ಚೆ ಮಾಡಲು ಏನಾದರೂ ಬಿಡುತ್ತಾರೆ. ಬ್ರಾಹ್ಮಣರನ್ನು ಸಿಎಂ ಮಾಡ್ತಾರೆ ಅನ್ನೋ ವಿಚಾರ ನಮಗೆ ಗೊತ್ತಿಲ್ಲ. ಬ್ರಾಹ್ಮಣರನ್ನು ಸಿಎಂ ಮಾಡ್ತಾರೆ ಅನ್ನೋದು ಹೇಗೆ ಗೊತ್ತಾಯ್ತು. ಅದು ಜಾತ್ಯತೀತ ಪಕ್ಷ, ಜಾತಿಗಳ ಬಗ್ಗೆ ಅವರು ಮಾತನಾಡಬಾರದು ಎಂದು ಎಸ್.ಆರ್.ವಿಶ್ವನಾಥ್ ಟಾಂಗ್ ನೀಡಿದರು.
ಬೆಂಗಳೂರು: ಬಿಜೆಪಿ ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಸಮಾವೇಶ ಆಯೋಜನೆ ಮಾಡಿದ್ದು, ಮೋರ್ಚಾಗಳ ಸಮಾವೇಶ ಬಗ್ಗೆ ಮುಂದಿನ ವಾರ ದಿನಾಂಕ ನಿಗದಿ ಮಾಡಲಾಗಿದೆ. ಬಿ.ಎಸ್.ಯಡಿಯೂರಪ್ಪ ಬಗ್ಗೆ ಕುಮಾರಸ್ವಾಮಿ ಅನುಕಂಪ ವಿಚಾರವಾಗಿ ಜೆಡಿಎಸ್ ಪಕ್ಷ ಸಂಪೂರ್ಣವಾಗಿ ಗೊಂದಲದಲ್ಲಿದೆ ಎಂದು ರಾಜ್ಯ ಬಿಜೆಪಿ ಕಚೇರಿಯಲ್ಲಿ ಬಿ.ವೈ.ವಿಜಯೇಂದ್ರ ಹೇಳಿದರು.
ಹೊಳೆನರಸೀಪುರದಲ್ಲಿನ ಬದಲಾವಣೆ ಇತಿಹಾಸದ ಪುಟ ಸೇರಬೇಕು. ಬಿಗಿ ಹಿಡಿತ ಹಾಗೂ ಬಿಗಿಯಾದ ವಾತಾವರಣ ಈ ಕ್ಷೇತ್ರದಲ್ಲಿ ಇದೆ. ನಾವು ನಿಮ್ಮ ನೋವಿಗೆ ಸ್ಪಂದಿಸುವ ಕೆಲಸ ಮಾಡುತ್ತೇವೆ. ಕೆಲವರು ಪೊಲೀಸರನ್ನು ಇಟ್ಟುಕೊಂಡು ಹೆದರಿಸುತ್ತಿದ್ದಾರೆ. ಕಾನೂನು ರಕ್ಷಣೆ ಮಾಡುವವರು ಒಬ್ಬರ ಪರ ಕೆಲಸ ಮಾಡಬಾರದು. ಈ ರೀತಿ ನಡೆದುಕೊಂಡರೆ ಮುಂದಿನ ದಿನದಲ್ಲಿ ಬೆಲೆ ತೆರಬೇಕಾಗುತ್ತೆ. ಹೊಳೆನರಸೀಪುರ ಕ್ಷೇತ್ರದಿಂದಲೇ ಬದಲಾವಣೆ ಗಾಳಿ ಆರಂಭವಾಗಿದೆ ಎಂದು ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ಸಂಸದ ಡಿ.ಕೆ.ಸುರೇಶ್ ಹೇಳಿಕೆ ನೀಡಿದರು.
ಬ್ರಾಹ್ಮಣ ಸಿಎಂ ಹೆಸರಲ್ಲಿ ಹೆಚ್ಡಿಕೆ ವಿವಾದಾತ್ಮಕ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಬಾಗಲಕೋಟೆಯಲ್ಲಿ ಬಿಜೆಪಿ ಶಾಸಕ ವೀರಣ್ಣ ಚರಂತಿಮಠ ಪ್ರತಿಕ್ರಿಯೆ ನೀಡಿದ್ದಾರೆ. ಜಾತ್ಯತೀತ ಜನತಾ ದಳವೆಂದು ಬಹಳ ಚೆನ್ನಾಗಿ ಹೆಸರಿಟ್ಟುಕೊಂಡಿದ್ದಾರೆ. ಮತ್ಯಾಕೆ ಜಾತಿ ಬಗ್ಗೆ ಹೆಚ್.ಡಿ.ಕುಮಾರಸ್ವಾಮಿ ಮಾತನಾಡ್ತಿದ್ದಾರೆ. ನಮ್ಮ ಪಕ್ಷದಲ್ಲಿ ಯಾರಿಗೆ ಅರ್ಹತೆ ಇರುತ್ತೋ ಅವರು ಸಿಎಂ ಆಗ್ತಾರೆ. ಕುಮಾರಸ್ವಾಮಿ ಜಾತಿ ಆಧಾರದಲ್ಲಿ ಮಾತನಾಡೋದು ಶೋಭೆ ತರಲ್ಲ. HDK ಹತಾಶರಾಗಿ, ಮಾನಸಿಕ ಸ್ಥಿತಿ ಕಳೆದುಕೊಂಡು ಮಾತಾಡ್ತಿದ್ದಾರೆ. H.D.ಕುಮಾರಸ್ವಾಮಿ ಬ್ರಾಹ್ಮಣರಲ್ಲಿ ಒಡಕು ಮೂಡಿಸುವುದು ತಪ್ಪು. ಜಾತಿ, ಉಪಜಾತಿ ಬಗ್ಗೆ ಮಾತಾಡಬಾರದು, ಇವೆಲ್ಲ ಸೂಕ್ಷ್ಮ ವಿಚಾರ. ಎಲ್ಲರಿಗೂ ಅವರವರ ಧರ್ಮ, ಮತ ದೊಡ್ಡದು. ರಾಜಕಾರಣಿಗಳು ಸ್ವಧರ್ಮ ನಿಷ್ಠೆ, ಪರಧರ್ಮ ಸಹಿಷ್ಣುತೆ ಕಲಿಯಬೇಕು. ಹರಾಶರಾಗಿ ಏನೇನೋ ಹೇಳಿಕೆ ನೀಡಿ ತಪ್ಪು ದಾರಿಗೆ ಎಳೆಯಬಾರದು ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿಕೆ ನೀಡಿದ್ದಾರೆ.
ಆರಗ ಜ್ಞಾನೇಂದ್ರ ಹಗರಣಗಳ ಬಗ್ಗೆ ಪುಸ್ತಕವನ್ನೇ ಬರೆಯಬಹುದು. ಶಿವಮೊಗ್ಗ, ಭದ್ರಾವತಿಯಲ್ಲಿ ರೈತರು, ಕಾರ್ಮಿಕರು ಬದುಕುವ ಹಾಗಿಲ್ಲ. ಬಿಜೆಪಿಯವರು ಎಲ್ಲಾ ಕಾರ್ಖಾನೆಗಳನ್ನು ಖಾಸಗೀಕರಣ ಮಾಡ್ತಿದ್ದಾರೆ. ಸರ್ಕಾರದ ಸುಪರ್ದಿಯಲ್ಲಿರುವ ಭದ್ರಾವತಿ ಕಾರ್ಖಾನೆ ಮುಚ್ಚಬಾರದು. ಈ ಬಿಜೆಪಿ ಸರ್ಕಾರ ರೈತರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ. ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡಿಲ್ಲ. ಈ ಸರ್ಕಾರ ಇನ್ನು 50 ದಿನಗಳ ಕಾಲ ಮಾತ್ರ ಇರುತ್ತದೆ. ನಾವು ಅಧಿಕಾರಕ್ಕೆ ಬಂದರೆ ಈ ಕಾರ್ಖಾನೆಗಳನ್ನು ಉಳಿಸಿಕೊಳ್ತೇವೆ ಎಂದು ಭದ್ರಾವತಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ರು.
ರಾಜ್ಯ ಬಿಜೆಪಿ ನಾಯಕತ್ವ ಇಲ್ಲದ ಪಕ್ಷ. ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ ಅಂದಿದ್ರು. ಈಗ ಪ್ರಧಾನಿ ಮೋದಿ ನೇತೃತ್ವದಲ್ಲಿ ಚುನಾವಣೆಗೆ ಹೋಗ್ತೀವೆ ಅಂತಿದ್ದಾರೆ. ನಳಿನ್ ಕುಮಾರ್ರನ್ನ ಬಿಜೆಪಿಯೇ ಗಂಭೀರವಾಗಿ ತೆಗೆದುಕೊಂಡಿಲ್ಲ. ನಳಿನ್ ಕುಮಾರ್ ಬಗ್ಗೆ ನಾವು ಯಾಕೆ ತಲೆಕೆಡಿಸಿಕೊಳ್ಳಬೇಕು ಎಂದು ಶಿವಮೊಗ್ಗದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ಬ್ರಾಹ್ಮಣ ಸಮುದಾಯದ ಬಗ್ಗೆ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ನಿಮ್ಮ ಹೇಳಿಕೆಯಿಂದ ಬೇಸರವಾಗಿದೆ ಎಂದು ಗೋಕರ್ಣ ಮಹಾಬಲೇಶ್ವರ ದೇವಸ್ಥಾನ ಅರ್ಚಕ ಹೆಚ್ಡಿಕೆ ಬಳಿ ಬೇಸರ ಹೊರ ಹಾಕಿದ್ದಾರೆ. ಗೋಕರ್ಣ ಮಹಾಬಲೇಶ್ವರ ದೇಗುಲಕ್ಕೆ HDK ಭೇಟಿ ವೇಳೆ ಅರ್ಚಕ ತಮಗಾದ ನೋವನ್ನು ಹೇಳಿಕೊಂಡಿದ್ದಾರೆ. ನಿಮ್ಮ ಕುಟುಂಬದ ಮೇಲೆ ನಮಗೆ ಅಭಿಮಾನವಿದೆ. ಗೋಕರ್ಣದಲ್ಲೇ ನಿಮ್ಮ ಸ್ಪಷ್ಟೀಕರಣ ತಿಳಿಸಿ ಎಂದು ಅರ್ಚಕ ಹೆಚ್‌ಡಿ ಕುಮಾರಸ್ವಾಮಿಯವರಿಗೆ ಮನವಿ ಮಾಡಿದ್ದಾರೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದಲ್ಲಿ ಕೈ ಪ್ರಜಾಧ್ವನಿ ಸಮಾವೇಶದಲ್ಲಿ ಲಂಬಾಣಿ ಮಹಿಳೆಯರು ಭರ್ಜರಿ ನೃತ್ಯ ಪ್ರದರ್ಶಿಸಿದ್ದಾರೆ. ಸಿದ್ದರಾಮಯ್ಯ ಸ್ವಾಗತಕ್ಕೆ ಸಾಂಪ್ರದಾಯಿಕ ಉಡುಪು ತೊಟ್ಟು ಲಂಬಾಣಿ ಮಹಿಳೆಯರು ಆಗಮಿಸಿದ್ದಾರೆ. ವೇದಿಕೆ ಮುಂಭಾಗದಲ್ಲಿ ನೃತ್ಯ ಮಾಡಿ ಸಂಭ್ರಮಿಸಿದ್ದಾರೆ.
ಮೋರ್ಚಾಗಳ ಜಿಲ್ಲಾ ಸಮಾವೇಶಗಳಿಗೆ ಸಂಚಾಲಕರಾಗಿ ನೇಮಕ ಹಿನ್ನೆಲೆ ಬಿ.ವೈ.ವಿಜಯೇಂದ್ರ ಆ್ಯಕ್ಟಿವ್ ಆಗಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂ ರಾಜ್ಯ ಬಿಜೆಪಿ ಕಚೇರಿಗೆ ವಿಜಯೇಂದ್ರ ಭೇಟಿ ನೀಡಿ ಜಿಲ್ಲೆಗಳಲ್ಲಿ ಪಕ್ಷದ ವತಿಯಿಂದ ಸಮಾವೇಶಗಳ ಆಯೋಜನೆ ಬಗ್ಗೆ ಸಭೆಯಲ್ಲಿ ಭಾಗಿಯಾಗಿದ್ದಾರೆ.
ರೈತರ ಸಾಲ ಮನ್ನಾ ಬಗ್ಗೆ ವಿವಾದಾತ್ಮಕ ಹೇಳಿಕೆ ಹಿನ್ನೆಲೆ ಬೆಂಗಳೂರಿನಲ್ಲಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕಾಂಗ್ರೆಸ್ ಮುಖಂಡ ಮನೋಹರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದ ಬಳಿ ತೇಜಸ್ವಿ ಸೂರ್ಯ ವಿರುದ್ಧ ಧಿಕ್ಕಾರ ಕೂಗಿ ತೀವ್ರ ಆಕ್ರೋಶ ಹೊರ ಹಾಕಲಾಗುತ್ತಿದೆ.
ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ನಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಹಾಲಿ ಶಾಸಕರಿಗೆ ಟಿಕೆಟ್ ನೀಡದಂತೆ JDS ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ. ಶಾಸಕ ನಿಸರ್ಗ ನಾರಾಯಣಸ್ವಾಮಿಗೆ ಟಿಕೆಟ್ ನೀಡದಂತೆ ಆಗ್ರಹಿಸಿ ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಕಾಂಗ್ರೆಸ್ ಆಯ್ತು ಈಗ ಬಿಜೆಪಿ ಸರದಿ. ಪಕ್ಷ ಚಿಹ್ನೆಯಲ್ಲಿ ಬದಲಾವಣೆ ಮೂಲಕ ಬಿಜೆಪಿ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ. ಕಾಂಗ್ರೆಸ್ ಲಾಂಚನದಲ್ಲಿ ಅಸ್ತ ರೇಖೆ ವಿಚಾರವಾಗಿ ಕಾಂಗ್ರೆಸ್ ಸುದ್ದಿಯಾಗಿತ್ತು. ಆದ್ರೆ ಇದೀಗ ಕಮಲ ಚಿಹ್ನೆಯಲ್ಲಿ ಬಿಜೆಪಿ ಬದಲಾವಣೆ ಮಾಡಿದೆ. ಕಮಲ ಚಿಹ್ನೆಯ ಬಣ್ಣವನ್ನ ಬದಲಾಯಿಸಲಾಗಿದೆಯಂತೆ. ಇಂದು ಯಲಹಂಕ ವಿಧಾನಭಾ ಕ್ಷೇತ್ರದ ದಾಸನಪುರ ಹೋಬಳಿ ಕಚೇರಿ ಉದ್ಘಾಟನೆ ಮಾಡಲಾಗಿದ್ದು ಕಚೇರಿಯಲ್ಲಿರು ಫ್ಲೆಕ್ಸ್‌ಗಳಲ್ಲಿ ಕಮಲದ ಬಣ್ಣ ಬದಲಾವಣೆ ಮಾಡಲಾಗಿದೆ. ಬಿಜೆಪಿ ಪಕ್ಷದ ಕಮಲ ದಳದ ಅಧಿಕೃತ ಬಣ್ಣ ಕೇಸರಿ. ಆದ್ರೆ ಕೇಸರಿ ಬದಲಾಯಿಸಿ ಕಡು ಗುಲಾಬಿ (ಡಾರ್ಕ್ ಪಿಂಕ್) ಬಣ್ಣವನ್ನ ಬಳಸಲಾಗಿದೆ.
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದಲ್ಲಿ ಪೋಸ್ಟರ್ನಲ್ಲಿನ ಬಿಜೆಪಿ ನಾಯಕರ ಭಾವಚಿತ್ರಕ್ಕೆ ಸಗಣಿ ಎರಚಿ ಕೆಲ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದಾರೆ. ರೈತವಿದ್ಯಾನಿಧಿ ಯೋಜನೆ ಸೇರಿದಂತೆ ವಿವಿಧ ಯೋಜನೆ ಜಾಹೀರಾತಿನ ಪೋಸ್ಟರ್ಗಳಲ್ಲಿನ ಪ್ರಧಾನಿ ಮೋದಿ, ನಡ್ಡಾ, ಬಿ ಎಸ್ ವೈ ಸೇರಿದಂತೆ ವಿವಿಧ ನಾಯಕರ ಭಾವಚಿತ್ರಕ್ಕೆ ಸಗಣಿ ಬಳಿಯಲಾಗಿದೆ.
ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಅವರ ಸ್ವಕ್ಷೇತ್ರ ರಾಮನಗರ ಜಿಲ್ಲೆ ಚನ್ನಪಟ್ಟಣ ನಗರದಲ್ಲಿ ಕಸದ ಸಮಸ್ಯೆ ಹೆಚ್ಚಾಗಿದೆ. ನಗರಸಭೆ ಸರಿಯಾಗಿ ಕಸ ವಿಲೇವಾರಿ ಮಾಡಿಲ್ಲ. ಹೀಗಾಗಿ ನಗರಸಭೆ ಮುಂಭಾಗ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ನಗರಸಭೆ ಆಡಳಿತ ಮಂಡಳಿ ವಿರುದ್ದ ಬಿಜೆಪಿ ಕಾರ್ಯಕರ್ತರು ಅಕ್ರೋಶ ಹೊರ ಹಾಕಿದ್ದಾರೆ.
ಜೋಶಿ ಸಿಎಂ ಮಾಡಲು RSS ಹುನ್ನಾರ ಎಂಬ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಯಾವ ವಿಚಾರವನ್ನೂ ನಾನು ಹೆಚ್ಚು ಚರ್ಚೆ ಮಾಡಲು ಹೋಗಲ್ಲ ಎಂದು ಹುಬ್ಬಳ್ಳಿಯಲ್ಲಿ ಟಿವಿ9ಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದಾರೆ. ಮಾಜಿ ಸಿಎಂ H.D.ಕುಮಾರಸ್ವಾಮಿಗೆ ರಾಜಕೀಯ ಅನುಭವವಿದೆ. ಮುಖ್ಯಮಂತ್ರಿ ಯಾರು ಆಗುತ್ತಾರೆ ಎಂಬ ಚರ್ಚೆ ಮಾಡಬಾರದು. ಹೆಚ್ಡಿಕೆಗೆ ರಾಜಕೀಯ ಅನುಭವವಿದೆ, HDD ಮಾರ್ಗದರ್ಶನವಿದೆ. ಯಾವುದೇ ಸಮುದಾಯವನ್ನು ಚರ್ಚೆಗೆ ಎಳೆದು ತರಬಾರದು. ಜಾತಿಯ ಮೂಲ ಇಟ್ಟುಕೊಂಡು ಟೀಕೆ ಮಾಡಬಾರದು ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯಗೆ ಹೊಸಪೇಟೆ ಕ್ಷೇತ್ರದಿಂದ ಸ್ಪರ್ಧಿಸಲು ಆಹ್ವಾನ ಸಿಕ್ಕಿದೆ. ಸಿದ್ದರಾಮಯ್ಯ ಸ್ಪರ್ದೆ ಮಾಡಿದ್ರೆ ಜಮೀನು ಮಾರಿ ಕೋಟಿ ರೂಪಾಯಿ ಕೊಡ್ತೀನಿ ಎಂದು ಅಭಿಮಾನಿ ಮಲಿಯಪ್ಪ ಘೋಷಣೆ ಮಾಡಿದ್ದರು. ತನ್ನ ಆರು ಎಕರೆ ಹೊಲದಲ್ಲಿ ಎರಡು ಎಕರೆ ಮಾರಾಟ ಮಾಡಿ ಒಂದು ಕೋಟಿ ರೂಪಾಯಿ ದೇಣಿಗೆ ಕೊಡ್ತೇನೆ ಎಂದಿದ್ದಾರೆ.
ಮುಂಬರುವ ವಿಧಾನಸಭೆ ಚುನಾವಣೆಗೆ ಬಿಜೆಪಿ ಭರದ ತಯಾರಿ ನಡೆಸಿದೆ. ಚುನಾವಣಾ ಪೂರ್ವ ಸಿದ್ಧತಾ ಕಾರ್ಯಕ್ರಮಗಳಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಜಿಲ್ಲೆಗಳಲ್ಲಿ ಮೋರ್ಚಾಗಳ ಸಮಾವೇಶ, ಫಲಾನುಭವಿಗಳ ಸಮ್ಮೇಳನ, ವಿಡಿಯೋ ವ್ಯಾನ್ ಪ್ರಚಾರ, ಪ್ರಣಾಳಿಕೆ ತಯಾರಿ ಸಲಹಾ ಅಭಿಯಾನ, ರಥ ಯಾತ್ರೆಗೆ ಉಸ್ತುವಾರಿಗಳನ್ನು ರಾಜ್ಯ ಬಿಜೆಪಿ ನೇಮಕ ಮಾಡಿದೆ. ನಾಲ್ಕು ತಂಡಗಳ ರಥಯಾತ್ರೆಗೂ ಮೂವರು ಉಸ್ತುವಾರಿಗಳ ನೇಮಕ ಮಾಡಲಾಗಿದೆ.
ಶಾಸಕ ರಮೇಶ್ ಜಾರಕಿಹೊಳಿಗೆ ಠಕ್ಕರ್ ಕೊಡಲು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೊಸ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ. ಪರದೆ ಹಿಂದೆ ಇದ್ದುಕೊಂಡು ಆಟವಾಡಲು ಹೆಬ್ಬಾಳ್ಕರ್ ಸೂತ್ರ ಹೆಣೆದಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ, ರಮೇಶ್ ಸಹೋದರ ಸತೀಶ್ ಜಾರಕಿಹೊಳಿ ಅವರು ಲಕ್ಷ್ಮೀ ಪರ ಪ್ರಚಾರಕ್ಕೆ ಇಳಿದಿದ್ದು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸಹೋದರರ ನಡುವೆ ಸವಾಲ್ ಎದುರಾಗಿದೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಬಡಗೊಲ್ಲರಹಟ್ಟಿಯಲ್ಲಿ ಮೌಢ್ಯ ಆಚರಣೆಗೆ ಹಿರಿಯೂರು ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಬ್ರೇಕ್ ಹಾಕಿದ್ದಾರೆ. ಹಾಗೂ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಋತು ಚಕ್ರದ ವೇಳೆ ಕೆಲ ಮಹಿಳೆಯರು ಊರಿಂದ ಹೊರಗಿದ್ದರು. ಇದನ್ನು ಗಮನಿಸಿದ ಶಾಸಕಿ ಪೂರ್ಣಿಮಾ ಮಹಿಳೆಯರನ್ನು ಮರಳಿ ಗ್ರಾಮದ ಮನೆಗೆ ಕರೆತಂದು ಮೌಢ್ಯ ಆಚರಣೆ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
ಶಿವಮೊಗ್ಗ ನಗರಕ್ಕೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಎನ್‍ಇಎಸ್ ಮೈದಾನದಲ್ಲಿ ಸಮಾವೇಶ ನಡೆಯಲಿದ್ದು ಸಂಜೆ ಶಿವಮೊಗ್ಗ ಪ್ರವಾಸಿ ಮಂದಿರದಲ್ಲಿ ಸಿಎಂ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಭದ್ರಾವತಿಯ VISL ಕಾರ್ಖಾನೆ ಕುರಿತು ಚರ್ಚಿಸಲಿದ್ದಾರೆ.
ಶಿವಮೊಗ್ಗ ಜಿಲ್ಲೆಯ 2 ಕ್ಷೇತ್ರಗಳಲ್ಲಿಂದು ಪ್ರಜಾಧ್ವನಿ ಸಮಾವೇಶ ನಡೆಯಲಿದೆ. ಭದ್ರಾವತಿ, ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ನ ಪ್ರಜಾಧ್ವನಿ ಸಮಾವೇಶ ನಡೆಯಲಿದ್ದು ಡಿ.ಕೆ.ಶಿವಕುಮಾರ್ ಭಾಗಿಯಾಗಲಿದ್ದಾರೆ. ಡಿಕೆಶಿಗೆ ಜಿಲ್ಲೆಯ ‘ಕೈ’ ಮುಖಂಡರು ಸಾಥ್ ನೀಡಲಿದ್ದಾರೆ.
ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಇಂದು ನಡೆಯಲಿರುವ ಪಂಚರತ್ನ ರಥಯಾತ್ರೆ ನಡೆಯಲಿದೆ. ಕುಮಟಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ಪರ ಹೆಚ್‌ಡಿ ಕುಮಾರಸ್ವಾಮಿ ಪ್ರಚಾರ ನಡೆಸಲಿದ್ದಾರೆ. ಗೋಕರ್ಣದಿಂದ ಆರಂಭವಾಗಲಿರುವ ಜೆಡಿಎಸ್ ಪಂಚರತ್ನ ರಥಯಾತ್ರೆ, ಗೋಕರ್ಣ, ಗಂಗಾವಳಿ, ಬರ್ಗಿ, ಮಿರ್ಜಾನ, ದಿವಗಿ, ಮೂಲಕ ಸಂಚರಿಸಲಿದೆ. ಪಂಚರತ್ನ ರಥಯಾತ್ರೆಯಲ್ಲಿ ಸಾವಿರಾರು ಜೆಡಿಎಸ್ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಸಂಜೆ ತಲಗೇರಿಯಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.
2023ರ ಚುನಾವಣೆಗೆಲ್ಲಲು ಮಾಜಿ ಸಿಎಂ ಕುಮಾರಸ್ವಾಮಿ ಆಪರೇಷನ್ ದಳಕ್ಕೆ ಕೈ ಹಾಕಿದ್ದಾರೆ. ತೆರೆಮರೆಯಲ್ಲಿ ಕಾಂಗ್ರೆಸ್ ಬಿಜೆಪಿ ಅಭ್ಯರ್ಥಿಗಳ ಆಪರೇಷನ್ಗೆ ಮುಂದಾಗಿದ್ದಾರೆ. 2018ರ ಬಸವ ಕಲ್ಯಾಣದ ಬಿಜೆಪಿ ಮುರಾರ್ಜಿತ ಅಭ್ಯರ್ಥಿಯನ್ನ ಜೆಡಿಎಸ್ ಗೆ ಕರೆ ತರಲು ನಿರ್ಧಾರ ಮಾಡಿದ್ದಾರೆ. ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಮಲ್ಲಿಕಾರ್ಜುನ್ ಕುಬಾ ಜೊತೆ ಕುಮಾರಸ್ವಾಮಿ ಮಾತುಕತೆ ನಡೆಸಿದ್ದಾರೆ.
ಮಾಜಿ ಸಚಿವ ಹೆಚ್.ಡಿ.ರೇವಣ್ಣಗೆ ಜೆಡಿಎಸ್ ಕಾರ್ಯಕರ್ತರು ಬಿಗ್ ಶಾಕ್ ಕೊಟ್ಟಿದ್ದಾರೆ. ಹೊಳೆನರಸೀಪುರದ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಹಲವರು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಶಾಸಕ ಹೆಚ್.ಡಿ.ರೇವಣ್ಣ ಮತ್ತು ಅವರ ಕುಟುಂಬ ವಲಯದಲ್ಲಿ ಆಪ್ತರೆಂದು ಗುರುತಿಸಿಕೊಂಡಿದ್ದ ಹಲವರು ಕಾಂಗ್ರೆಸ್‌ಗೆ ಸೇರುತ್ತಿದ್ದಾರೆ. ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಹಾಗೂ ಸಂಸದ ಡಿ.ಕೆ.ಸುರೇಶ್ ಸಮ್ಮುಖದಲ್ಲಿ ಹೊಳೆನರಸೀಪುರ ಪುರಸಭೆ ಮಾಜಿ ಅಧ್ಯಕ್ಷ ಪುಟ್ಟರಾಜು, ಮಾಜಿ ಸದಸ್ಯ ಗಂಗಾಧರ್ ಹಾಗೂ ಕುಮಾರ್ ಮತ್ತವರ ಬೆಂಬಲಿಗರು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ.
ಕಾಂಗ್ರೆಸ್ ಪಕ್ಷದ ವೋಟ್ ಬ್ಯಾಂಕ್ ಕಬಳಿಸಲು ಜನಾರ್ದನ ರೆಡ್ಡಿ ಮುಸ್ಲಿಂ ಸಮುದಾಯದ ಹಾಫೀಜ್, ಮೌಲ್ವಿಗಳ ಜೊತೆ ಸಭೆಗಳ ಮೇಲೆ ಸಭೆ ನಡೆಸುತ್ತಿದ್ದಾರೆ. ಲಕ್ಷ್ಮೀ ಅರುಣಾ ನೇತೃತ್ವದಲ್ಲಿ ಬಳ್ಳಾರಿ ನಗರದ 40ಕ್ಕೂ ಹೆಚ್ಚು ಮಸೀದಿಗಳ ಮೌಲ್ವಿಗಳ ಜೊತೆ ಸಭೆ ನಡೆದಿದೆ.
ಶಾಸಕ ಪ್ರಿಯಾಂಕ್ ಖರ್ಗೆ ಕ್ಷೇತ್ರದಲ್ಲಿ ಇಂದು ಮೂರನೇ ದಿನದ ಪ್ರಜಾಧ್ವನಿ ಯಾತ್ರೆ ನಡೆಯಲಿದೆ. ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಪ್ರಜಾಧ್ವನಿ ಸಮಾವೇಶ ನಡೆಯಲಿದ್ದು ಮಾಜಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ.
Published On - 9:13 am, Wed, 8 February 23