
ಬೆಂಗಳೂರು: ಒಳಗೆ ಕಲ್ಮಶ ಇಟ್ಟುಕೊಂಡು ಹೊರಗಿಂದ ಸ್ನಾನ ಮಾಡಿ ತಾನು ಪರಿಶುದ್ಧ ಎಂದು ತೋರಿಸಿಕೊಳ್ಳುವಂತಿದೆ ಈ ಬಿಬಿಎಂಪಿ (BBMP)ಯ ನಡೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಬರುವ ರಸ್ತೆಗಳನ್ನಷ್ಟೇ ಸ್ವಚ್ಛಗೊಳಿಸಿದ್ದಲ್ಲದೆ, ಅಂತಹ ರಸ್ತೆಗಳನ್ನು ಡಾಂಬರೀಕರಣ ಮಾಡಿ ದುರಸ್ತಿಗೊಳಿಸಲಾಗಿದೆ. ಅದರ ಪಕ್ಕದ ರಸ್ತೆಗಳು ಹದಗೆಟ್ಟಿದ್ದರೂ ಅದನ್ನು ಸರಿಪಡಿಸುವ ಗೋಜಿಗೆ ಅಧಿಕಾರಿಗಳು ಮುಂದಾಗದಿರುವುದು ವಿಷಾದವೇ ಸರಿ. ಸದ್ಯ ಬಿಬಿಎಂಪಿ ಅಧಿಕಾರಿಗಳ ಇಂತಹ ಚಾಣಾಕ್ಷತನದಿಂದಾಗಿ ವಾಹನ ಸವಾರರು ನರಕಯಾತನೆ ಅನುಭವಿಸುವಂತಾಗಿದೆ. ಮೋದಿ ಅವರ ಪ್ರಯಾಣದ ಮಾರ್ಗದಲ್ಲಿ ಬದಲಾವಣೆ ಆದಾಗ ಮೊದಲು ನಿಗದಿಯಾಗಿದ್ದ ರಸ್ತೆ ದುರಸ್ತಿಯನ್ನು ಅರ್ಧಕ್ಕೆ ಕೈಬಿಟ್ಟು ಮೋದಿ ಸಂಚರಿಸುವ ಆ ರಸ್ತೆಯ ಪಕ್ಕದ ರಸ್ತೆಗೆ ಡಾಂಬರೀಕರಣ ಮಾಡಿ ಅಧಿಕಾರಿಗಳು ಚಾಣಾಕ್ಷತನ ಮೆರೆದಿದ್ದಾರೆ.
ಪ್ರಧಾನಿ ಮೋದಿ ಬರುತ್ತಾರೆ ಎಂದು ಅವರು ಅಂಚರಿಸುವ ಮಾರ್ಗಗಳನ್ನು ದುರಸ್ತಿಗೊಳಿಸಲಾಗಿದೆ. ಸಿಟಿ ರೈಲ್ವೆ ನಿಲ್ದಾಣ ಮುಂಭಾಗ ಇರುವ ಗುಬ್ಬಿ ತೋಟದಪ್ಪ ರಸ್ತೆಯಲ್ಲಿ ಸಂಚಾರ ಮಾಡುತ್ತಾರೆ ಎಂಬ ಕಾರಣಕ್ಕೆ ಬಿಬಿಎಂಪಿ ಅಧಿಕಾರಿಗಳು ಆರಂಭದಲ್ಲಿ ರಸ್ತೆ ಡಾಂಬರೀಕರಣಕ್ಕೆ ತಯಾರಿ ನಡೆಸಿದ್ದರು. ಇದ್ದ ಡಾಂಬರ್ ಕಿತ್ತು ಹಾಕಿ ವಾಹನ ಓಡಾಟಕ್ಕೆ ಯೋಗ್ಯವಲ್ಲದಂತೆ ಮಾಡಿದ್ದ ಬಿಬಿಎಂಪಿ, ಯಾವಾಗ ಪ್ರಧಾನಿ ಆ ರಸ್ತೆಯಲ್ಲಿ ಬರಲ್ಲ ಎಂದು ಗೊತ್ತಾದಾಗ ಪಿಎಂ ಬರುವ ಪಕ್ಕದ ರಸ್ತೆಗೆ ಡಾಂಬರೀಕರಣ ಮಾಡಿದರು.
ಬಿಬಿಎಂಪಿ ಅಧಿಕಾರಿಗಳು ಮರೆದ ಈ ಚಾಣಾಕ್ಷತನವು ವಾಹನ ಸವಾರರಿಗೆ ಸಂಕಷ್ಟ ತಂದೊಡ್ಡಿದೆ. ರಸ್ತೆಯಲ್ಲಿದ್ದ ಡಾಂಬರ್ ಕಿತ್ತು ಹಾಕಿ ವಾಹನ ಸಂಚಾರಕ್ಕೆ ಅಡಚಣೆ ಉಂಟು ಮಾಡಿದ್ದಾರೆ. ವಾಹನ ಸವಾರರು ತಮ್ಮ ವಾಹನಗಳನ್ನು ಹರಸಾಹಸಪಟ್ಟು ಸಮತೋಲನ ಮಾಡಿಕೊಂಡು ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ. ಯಾವಾಗ ಬೈಕ್ ಸ್ಕಿಡ್ ಆಗುತ್ತದೆಯೋ ಎಂಬ ಭಯ ಆವರಿಸಿದೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:00 pm, Fri, 11 November 22