ನಾಳೆಯಿಂದ (ಜು.26) ಬೆಂಗಳೂರು ಮತ್ತು ಮಂಗಳೂರು ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು (Special Express Train) ಸಂಚಾರ ಆರಂಭಗೊಳ್ಳಲಿದೆ. ಇತ್ತೀಚಿನ ಭಾರಿ ಮಳೆಯಿಂದಾಗಿ ಬೆಂಗಳೂರು-ಮಂಗಳೂರು ಹೆದ್ದಾರಿ ಆಗಾಗ್ಗೆ ಭೂಕುಸಿತದಿಂದ ಹಾನಿಗೊಳಗಾಗುತ್ತಿರುವ ಕಾರಣ ಸಾರ್ವಜನಿಕ ಬೇಡಿಕೆಯನ್ನು ಪರಿಗಣಿಸಿದ ನೈಋತ್ಯ ರೈಲ್ವೆ ಇಲಾಖೆ ಜುಲೈ 26 ರಿಂದ ಆಗಸ್ಟ್ 30 ರವರೆಗೆ ವಾರದಲ್ಲಿ ಮೂರು ದಿನ ಬೆಂಗಳೂರು ಮತ್ತು ಮಂಗಳೂರು ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಓಡಿಸಲಿದೆ.
ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಹಲವು ಬಾರಿ ಭೂಕುಸಿತ ಪ್ರಕರಣಗಳು ನಡೆದಿದ್ದು, ಜನರು ಭೀತಿಯಲ್ಲೇ ಓಡಾಡುವಂತಾಗಿದೆ. ಹೀಗಾಗಿ ಬೆಂಗಳೂರು ಮತ್ತು ಮಂಗಳೂರು ನಡುವೆ ವಿಶೇಷ ರೈಲು ಹಾಕುವಂತೆ ಸಾರ್ವಜನಿಕರು ಬೇಡಿಕೆ ಇಟ್ಟಿದ್ದರು. ಇದನ್ನು ಪರಿಗಣಿಸಿದ ರೈಲ್ವೇ ಇಲಾಖೆ, ವಾರದಲ್ಲಿ ಮೂರು ದಿನ ಎಕ್ಸ್‌ಪ್ರೆಸ್ ರೈಲನ್ನು ಓಡಿಸಲು ನಿರ್ಧರಿಸಿದೆ.
ಹೊಸ ವಿಶೇಷ ರೈಲು 06547/06548 ಜುಲೈ 26 ರಂದು ಕೆಎಸ್‌ಆರ್ ಬೆಂಗಳೂರು ನಿಲ್ದಾಣದಿಂದ ಮಂಗಳೂರು ಕೇಂದ್ರ ನಿಲ್ದಾಣಕ್ಕೆ ಪ್ರಾರಂಭವಾಗಲಿದೆ. ರೈಲು ಸಂಖ್ಯೆ 06547 ಮಂಗಳವಾರ, ಗುರುವಾರ ಮತ್ತು ಶನಿವಾರದಂದು ರಾತ್ರಿ 8:30 ಕ್ಕೆ ಬೆಂಗಳೂರಿನಿಂದ ಹೊರಟು ಮರುದಿನ ಬೆಳಗ್ಗೆ 9.05ಕ್ಕೆ ಮಂಗಳೂರಿಗೆ ತಲುಪಲಿದೆ. 06548 ಸಂಖ್ಯೆಯ ರೈಲು ಸೋಮವಾರ, ಬುಧವಾರ ಮತ್ತು ಶುಕ್ರವಾರ ಸಂಜೆ 6:35 ಕ್ಕೆ ಮಂಗಳೂರಿನಿಂದ ಹೊರಟು ಮರುದಿನ ಬೆಳಗ್ಗೆ 6.15ಕ್ಕೆ ಬೆಂಗಳೂರಿಗೆ ತಲುಪಲಿದೆ.
ಈ ವಿಶೇಷ ರೈಲು ಎರಡು 2- ಟೈರ್ ಎಸಿ ಬೋಗಿ, ಎರಡು 3 ಟೈರ್ ಎಸಿ ಬೋಗಿ, 9 ಎರಡನೇ ದರ್ಜೆಯ ಸ್ಲೀಪರ್ ಮತ್ತು 2 ಸಾಮಾನ್ಯ ಎರಡನೇ ದರ್ಜೆಯ ಬೋಗಿಗಳನ್ನು ಹೊಂದಿದೆ. ಪಿಟಿಐ ವರದಿಯ ಪ್ರಕಾರ, ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಬೆಂಗಳೂರಿಗೆ ಹೆಚ್ಚುವರಿ ರೈಲುಗಳನ್ನು ಅನುಮೋದಿಸಲು ಜುಲೈ 18 ರಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ದೆಹಲಿಯಲ್ಲಿ ಸಂಪರ್ಕಿಸಿದ್ದರು.