ಬೆಂಗಳೂರು: ಕೊರೊನಾ ತಡೆಗೆ ಇಂದಿನಿಂದ ಜಾರಿಯಾಗುವ ನೈಟ್ ಕರ್ಫ್ಯೂವಿನಲ್ಲಿ ರಾತ್ರಿ 10ರಿಂದ ಬೆಳಗ್ಗೆ 5ರವರೆಗೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸಂಚಾರ ನಿಷೇಧಿಸಲಾಗಿದ್ದು, ಅಗತ್ಯ ಸೇವೆಗಳಿಗೆ ಮಾತ್ರ ವಿನಾಯಿತಿ ಇದೆ. ರಾತ್ರಿಪಾಳಿಯ ನೌಕರರು ರಾತ್ರಿ 10ರೊಳಗೆ ಕಚೇರಿ ತಲುಪಿ ಬೆಳಗ್ಗೆ 5ರ ನಂತರವೇ ಕಚೇರಿಯಿಂದ ಹೊರಬರಬೇಕು. ರಾತ್ರಿ ಸಮಯದಲ್ಲಿ ಪ್ರಯಾಣಕ್ಕೆ ಟಿಕೆಟ್ ಕಡ್ಡಾಯವಾಗಿದ್ದು, ರಾತ್ರಿ ಸಮಯದಲ್ಲಿ ಬೆಂಗಳೂರಿಗೆ ಬರುವ, ತೆರಳುವ ರೈಲು, ಬಸ್, ವಿಮಾನದ ಟಿಕೆಟ್ ತೋರಿಸಬೇಕಾಗುತ್ತದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದರು.
ಇದೇ ವೇಳೆ ಮಾತನಾಡಿದ ಹೆಚ್ಚುವರಿ ಪೊಲೀಸ್ ಆಯುಕ್ತ ರವಿಕಾಂತೇಗೌಡ, ಕೊರೊನಾ ತಡೆಗೆ ಇಂದು ರಾತ್ರಿ (ಏಪ್ರಿಲ್10) 9.30ರಿಂದ ಬೆಳಗ್ಗೆ 5.30ರವರೆಗೆ ಬೆಂಗಳೂರಿನ ಎಲ್ಲ ಫ್ಲೈಓವರ್ ಬಂದ್ ಮಾಡಲು ನಿರ್ಧರಿಸಲಾಗಿದೆ. ಡಬಲ್ ರೋಡ್ಗಳಲ್ಲಿ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬೆಂಗಳೂರು ನಗರದಾದ್ಯಂತ 180 ಚೆಕ್ಪೋಸ್ಟ್ ಸ್ಥಾಪಿಸಲಾಗುವುದು. ರಸ್ತೆಯ ಎರಡೂ ಕಡೆ ಬ್ಯಾರಿಕೇಡ್ ಅಳವಡಿಸಲಾಗುವುದು. ಅನಿವಾರ್ಯತೆ ಇರುವವರು ಮಾತ್ರ ಸಂಚಾರ ನಡೆಸಬಹುದು. ಅನಗತ್ಯವಾಗಿ ಓಡಾಡಿದರೆ ವಾಹನ ಸೀಜ್ ಮಾಡುತ್ತೇವೆ ಎಂದು ತಿಳಿಸಿದರು.
* ರಾತ್ರಿ 10ರ ನಂತರ ದಿನಸಿ ಅಂಗಡಿ, ದರ್ಶಿನಿ, ಬಾರ್, ಪಬ್, ಹೋಟೆಲ್ಗಳು ಸಂಪೂರ್ಣ ಬಂದ್ ಆಗಲಿವೆ.
* ರಾತ್ರಿ ಸಮಯದಲ್ಲಿ ವೈದ್ಯಕೀಯ, ತುರ್ತು ಚಟುವಟಿಕೆ ಸೇವೆ, ಹೋಂ ಡೆಲಿವರಿ, ಇ-ಕಾಮರ್ಸ್ ವಾಹನಗಳಿಗೆ ಅನುಮತಿ ನೀಡಲಾಗಿದೆ.
* ಪ್ರಯಾಣಿಕರು ಮನೆಯಿಂದ ನಿಲ್ದಾಣಗಳಿಗೆ ಮತ್ತು ನಿಲ್ದಾಣಗಳಿಂದ ಮನೆಗೆ ಅಧಿಕೃತ ಟಿಕೆಟ್ ತೋರಿಸಿ ಪ್ರಯಾಣಿಸಬಹುದು.
* ಅತ್ಯವಶ್ಯ ಸೇವೆ ವಾಹನ, ಸರಕು- ಸಾಗಣೆ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು, ರಾತ್ರಿ ವೇಳೆ ರೈಲು ಸಂಚಾರಕ್ಕೆ ಯಾವುದೇ ನಿರ್ಬಂಧವಿಲ್ಲ.
* ರಾತ್ರಿ 10 ಗಂಟೆಯ ನಂತರ ಎಲ್ಲ ರೀತಿಯ ವಾಣಿಜ್ಯ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ.
* ವಿವಿಧ ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಮತ್ತು ಅವರ ಸಹಾಯಕರ ಸಂಚಾರಕ್ಕೆ ಅನುಮತಿ ನೀಡಲಾಗಿದೆ.
* ರಾತ್ರಿಪಾಳಿಯಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಕಾರ್ಖಾನೆಗಳು / ಕಂಪನಿಗಳು ಅಥವಾ ಸಂಸ್ಥೆಗಳು ಯಥಾರೀತಿ ಕಾರ್ಯ ನಿರ್ವಹಿಸಲು ಅನುಮತಿ ಇದೆ. ಆದರೆ, ಸಂಬಂಧಿಸಿದ ಕಾರ್ಮಿಕರು / ನೌಕರರು ಕೊರೊನ ಕರ್ಪ್ಯೂ ಅವಧಿಗೆ ಮುನ್ನವೇ ಕರ್ತವ್ಯದಲ್ಲಿ ಹಾಜರಿರತಕ್ಕದ್ದು ಎಂದು ಸರ್ಕಾರ ಘೋಷಿಸಿರುವ ನಿಯಮಗಳು ಹೇಳುತ್ತವೆ.
* ಮದುವೆ ರಿಸೆಪ್ಶನ್, ಬರ್ತ್ ಡೇ ಪಾರ್ಟಿ, ಮಾಲ್ಗಳು, ಥಿಯೇಟರ್ಗಳು ಬಂದ್ ಆಗಿವೆ. ಪುಡ್ ಸ್ಟ್ರೀಟ್ಗಳು ಸ್ಥಗಿತಗೊಳ್ಳಬೇಕಿದೆ. ಆಸ್ಪತ್ರೆಗಳ ವಿಚಾರಕ್ಕೆ ಓಡಾಡುವವರು ಅಗತ್ಯ ದಾಖಲೆ ತೋರಿಸಬೇಕಿದೆ.
* ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಸರಕು ಸಾಗಣೆ, ಹೋಂ ಡೆಲಿವರಿ, ಇ- ಕಾಮರ್ಸ್ ವಾಣಿಜ್ಯ ಖಾಲಿ ವಾಹನಗಳ ಓಡಾಟಕ್ಕೆ ಅನುಮತಿ ಇದೆ.
ಬಾರ್ಗಳು 10 ಗಂಟೆಗೆ ಬಂದ್ ಆಗಲಿದ್ದು, 10 ಗಂಟೆಯ ನಂತರ ಸಾರ್ವಜನಿಕ ಸ್ಥಳಗಳಲ್ಲಿ ಜನ ಸೇರುವಂತಿಲ್ಲ ಎಂದು ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
* ಈ ಆದೇಶ ಪಾಲನೆಯಲ್ಲಿ ಲೋಪವೆಸಗುವಂತಹವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ, 2005ರ ಸೆಕ್ಷನ್ 51 ರಿಂದ 60 ಹಾಗೂ ಭಾರತೀಯ ದಂಡ ಸಂಹಿತೆ ಹಾಗೂ ಅನ್ವಯವಾಗಬಹುದಾದ ಇತರ ಕಾನೂನು ಉಪಬಂಧಗಳ ಅವಸಾರ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ತಿಳಿಸಿದೆ.
ಯಾವ ನಗರ ವ್ಯಾಪ್ತಿಯಲ್ಲಿ ಈ ನಿಯಮಗಳು ಅನ್ವಯವಾಗಲಿವೆ?
ಬೆಂಗಳೂರು ನಗರ, ಮೈಸೂರು ನಗರ, ಮಂಗಳೂರು ನಗರ, ಕಲಬುರಗಿ ನಗರ, ತುಮಕೂರು ನಗರ, ಬೀದರ್ ನಗರ, ಉಡುಪಿ ನಗರ & ಮಣಿಪಾಲದಲ್ಲಿ ಕೊರೊನಾ ಕರ್ಫ್ಯೂ ಜಾರಿಯಾಗಲಿದೆ.
ಇದನ್ನೂ ಓದಿ: ಕೊರೊನಾ ಪ್ರಕರಣ ಹೆಚ್ಚಾಗುತ್ತಿದೆ, ಮುಂದಿನ 10 ದಿನ ತುಂಬಾ ಕಠಿಣವಾಗಿರುತ್ತದೆ: ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ
ಭಾರತದ ಸಂಗ್ರಹದಲ್ಲಿರುವುದು 5 ದಿನಕ್ಕಾಗುವಷ್ಟು ಕೊವಿಡ್ ಲಸಿಕೆ; ಲಸಿಕೆ ಕೊರತೆ ಇಲ್ಲ ಎಂದ ಕೇಂದ್ರ ಸರ್ಕಾರ\
(Bangalore Night curfew will start from April 10 All Flyover closed says ADGP Ravikanthe gowda)
Published On - 6:21 pm, Fri, 9 April 21