Siddaramaiah City Round: ಸಮಸ್ಯೆ ಕೇಳದೆ ಗೇಟ್ ಮುಂದೆ ನಿಂತು ಫೋಟೋ ತೆಗೆದು ಹೋದ್ರು ಸರ್..

| Updated By: Rakesh Nayak Manchi

Updated on: Sep 08, 2022 | 3:18 PM

Bangalore Flood: ನಗರದಲ್ಲಿ ಸುರಿದ ಧಾರಾಕಾರ ಮಳೆಗೆ ಅನೇಕ ಪ್ರದೇಶಗಳು ಜಲಾವೃತಗೊಂಡು ಹಾನಿಗೊಳಗಾಗಿವೆ. ಈ ನಿಟ್ಟಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸಿಟಿ ರೌಂಡ್ ಹೊಡೆದು ಮಾಹಿತಿ ಕಲೆಹಾಕಿಕೊಳ್ಳುತ್ತಿದ್ದಾರೆ.

Siddaramaiah City Round: ಸಮಸ್ಯೆ ಕೇಳದೆ ಗೇಟ್ ಮುಂದೆ ನಿಂತು ಫೋಟೋ ತೆಗೆದು ಹೋದ್ರು ಸರ್..
ಸಿದ್ದರಾಮಯ್ಯ ಬೆಂಗಳೂರು ಸಿಟಿ ರೌಂಡ್ಸ್
Follow us on

ಬೆಂಗಳೂರು: ನಗರದಲ್ಲಿ ಸುರಿದ ಧಾರಾಕಾರ ಮಳೆಗೆ ಪ್ರವಾಹ ಸ್ಥಿತಿ ತಲೆದೋರಿ ಅನೇಕ ಪ್ರದೇಶಗಳು ಹಾನಿಗೊಳಗಾಗಿವೆ. ಈ ನಿಟ್ಟಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸಿಟಿ ರೌಂಡ್ಸ್ ಹೊಡೆದು ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿನೀಡಿ ಪರಿಶೀಲನೆ ನಡೆಸಿ ಮಾಹಿತಿ ಕಲೆಹಾಕುವುದರ ಜೊತೆಗೆ ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ. ಅದರಂತೆ ಮಳೆಯಿಂದ ನಿರಂತರವಾಗಿ ಜಲಾವೃತಗೊಳ್ಳುತ್ತಿರುವ ರೈನ್​​ಬೋ ಲೇಔಟ್​ಗೂ ಭೇಟಿ ಕೊಟ್ಟಿದ್ದಾರೆ. ಆದರೆ ಇಲ್ಲಿ ಅವರು ಜನರ ಸಮಸ್ಯೆ ಆಲಿಸದೆ ಕೇವಲ ಫೋಟೋ ತೆಗೆದುಕೊಂಡು ಹೋಗಿದ್ದಾರೆ ಎಂದು ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.

ಔಟರ್​​ರಿಂಗ್ ರಸ್ತೆಯಲ್ಲಿ ಮಳೆ ಹಾನಿ ಹಿನ್ನೆಲೆ ನೆರೆಪೀಡಿತ ಪ್ರದೇಶವಾದ ರೈನ್​​ಬೋ ಲೇಔಟ್​ಗೆ ಸಿದ್ದರಾಮಯ್ಯ ಭೇಟಿ ಕೊಟ್ಟಿದ್ದಾರೆ. ಈ ವೇಳೆ ಲೇಔಟ್ ಒಳಗೆ ಹೋಗದಿದ್ದಕ್ಕೆ ಸಿದ್ದರಾಮಯ್ಯ ವಿರುದ್ಧ ಅಲ್ಲಿನ ನಿವಾಸಿಗಳು ಕೋಪಗೊಂಡಿದ್ದಾರೆ. “ಗೇಟ್ ಮುಂದೆ ಫೋಟೋ ಹಿಡಿದುಕೊಂಡು ಹೊರಟಿದ್ದಾರೆ, ಇದರಿಂದ ಪ್ರಯೋಜನವೇನು? ನಮಗೆ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ, ಸಿದ್ದರಾಮಯ್ಯನವರ ವೀಕ್ಷಣೆಯಿಂದ ಏನು ಪ್ರಯೋಜನ? ನಾವು ನೀರಿನಲ್ಲೇ ಸಾಯುತ್ತಿದ್ದೇವೆ, ಸಮಸ್ಯೆ ಹೇಳಿಕೊಳ್ಳಲು ನಾವು ನೀರಿನಲ್ಲೇ ನಿಂತಿದ್ದೇವೆ, ಆದರೆ ಅವರು ನಮ್ಮ ಸಮಸ್ಯೆ ಕೇಳುವುದಕ್ಕೆ ನೀರಿಗೆ ಇಳಿದಿಲ್ಲ” ಎಂದು ಆಕ್ರೋಶ ಹೊರಹಾಕಿದ್ದಾರೆ.

ರಿಂಗ್​​ರೋಡ್​ ರಸ್ತೆಯನ ಮಳೆ ಅವಾಂತರಕ್ಕೆ ಸಿಲುಕಿದ ಪಣತ್ತೂರು-ವರ್ತೂರು ಮುಖ್ಯ ರಸ್ತೆಯ ಅಪಾರ್ಟ್​ಮೆಂಟ್​ಕ್ಕೂ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪ್ರತಿಬಾರಿ ಮಳೆ ಬಂದಾಗಲೂ ಇದೇ ರೀತಿ ಸಮಸ್ಯೆ ಆಗುತ್ತಿದೆ ಎಂದು ದಿಶಾ ಸೆಂಟ್ರಲ್​ ಪಾರ್ಕ್​ ಅಪಾರ್ಟ್​ಮೆಂಟ್​​ ನಿವಾಸಿಗಳ ಅಳಲು ತೋಡಿಕೊಂಡಿದ್ದು, ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ.

ಇದಕ್ಕೂ ಮುನ್ನ ಸಿದ್ದರಾಮಯ್ಯ ಅವರು ಇಕೋ ಸ್ಪೇಸ್​​ನಿಂದ ಪಣತ್ತೂರು ರೈಲ್ವೆ ಬ್ರಿಡ್ಜ್​ವರೆಗೆ ವೀಕ್ಷಣೆ ನಡೆಸಿ ಮಳೆ ಹಾನಿ ಕುರಿತು ಮಾಹಿತಿ ಕಲೆಹಾಕಿಕೊಂಡರು. ಅಲ್ಲದೆ ಮಳೆಯಿಂದಾಗಿ ಇಕೋ ಸ್ಪೆಸ್ ಟೆಕ್ ಪಾರ್ಕ್​ಗೂ ನೀರು ನುಗ್ಗಿದ್ದು, ಇಲ್ಲಿಯೂ ಸಿದ್ದರಾಮಯ್ಯ ಅವರು ಪರಿಶೀಲನೆ ನಡೆಸಿದರು. ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗರೆಡ್ಡಿ ಸಾಥ್ ನೀಡಿದರು.

ಸೀರೆ ಹಾಗೂ ಕಂಬಳಿ ವಿತರಣೆ

ಮಳೆ ಅವಾಂತರಗಳಿಂದಾಗಿ ಹಲವಾರು ಮನೆಗಳು ಜಲಾವೃತಗೊಂಡಿದ್ದು, ಜನರ ನಿತ್ಯ ಬಳಕೆಯ ವಸ್ತುಗಳು ನೀರಿನಲ್ಲಿ ಕೊಚ್ಚಿಹೋಗಿದ್ದು, ಒಂದಷ್ಟು ವಸ್ತುಗಳು ನೀರಿನಲ್ಲೇ ಹಾನಿಗೊಳಲಾಗಿವೆ. ಈ ನಿಟ್ಟಿನಲ್ಲಿ ನೆರೆಯಿಂದ ಸಮಸ್ಯೆಗೊಳಗಾದ ಜನರಿಗೆ ಸಿದ್ದರಾಮಯ್ಯ ಅವರು ಸೀರೆ ಮತ್ತು ಕಂಬಳಿ ವಿತರಿಸಿದರು.

ಸ್ವ ಕ್ಷೇತ್ರಕ್ಕೆ ಭೇಟಿ ನೀಡಲಿರುವ ಸಿದ್ದು

ಬಾಗಲಕೋಟೆ: ಭಾರಿ ಮಳೆಯಿಂದ ತತ್ತರಿಸಿರುವ ಸ್ವ ಕ್ಷೇತ್ರ ಬಾದಾಮಿ ತಾಲೂಕಿಗೆ ಸಿದ್ದರಾಮಯ್ಯ ಅವರು ಭೇಟಿ ನೀಡಿ ಪರಿಶೀಲನೆ ನಡೆಸಲು ಮುಂದಾಗಿದ್ದಾರೆ. ಮಲಪ್ರಭಾ ಪ್ರವಾಹದಿಂದಾಗಿ ಬಾದಾಮಿ ತಾಲೂಕು ತತ್ತರಿಸಿದ್ದು, ಸೆ.10ರಂದು ಕ್ಷೇತ್ರದ ಹಲವು ಪ್ರದೇಶಗಳಿಗೆ ಭೇಟಿ ನೀಡಿ ಮಾಹಿತಿ ಕಲೆಹಾಕಿಕೊಳ್ಳಲಿದ್ದಾರೆ. ಇದೇ ವೇಳೆ ಬಾದಾಮಿ ಪಟ್ಟಣದಲ್ಲಿ ಪ್ರವಾಹ, ಹಾನಿಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಿದ್ದಾರೆ. ನಂತರ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:16 pm, Thu, 8 September 22