ಬೆಂಗಳೂರು: ನಗರದಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಮುಂದಿನ 2 ದಿನ ಅದೇ ರೀತಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಸದ್ಯ ನಗರದಲ್ಲಿ ಸುರಿದ ಮಳೆಗೆ ವಾಹನ ಸವಾರರು ಸಂಚರಿಸಲು ಪರದಾಡುತ್ತಿದ್ದು ಒಂದಷ್ಟು ಮಂದಿ ಟ್ರ್ಯಾಕ್ಟರ್ ಮೂಲಕ ಸಂಚರಿಸುತ್ತಿದ್ದಾರೆ. ಇನ್ನೊಂದೆಡೆ ಮಹಾಮಳೆಗೆ ಯುವತಿಯೊಬ್ಬಳು ಬಲಿಯಾಗಿದ್ದು, ಸರ್ಜಾಪುರ, ಮಾರತ್ತಹಳ್ಳಿ ವ್ಯಾಪ್ತಿಯ ರಸ್ತೆಗಳಿಗೆ ಜಲ ದಿಗ್ಬಂಧನ ಹಾಕಿದೆ.
ವೈಟ್ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದಾಪುರದಲ್ಲಿ ಖಾಸಗಿ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಬಿಕಾಂ ಪದವೀಧರೆ ಅಖಿಲಾ ಅಖಿಲಾ(23) ನಿನ್ನೆ ರಾತ್ರಿ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾಳೆ. ಮಾರತ್ತಹಳ್ಳಿ-ವರ್ತೂರು ಕೋಡಿ ಮಾರ್ಗ ಮಧ್ಯೆ ಇರುವ ಸಿದ್ದಾಪುರದಲ್ಲಿ ನಿನ್ನೆ ರಾತ್ರಿ 9.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಬೆಸ್ಕಾಂ ನಿರ್ಲಕ್ಷ್ಯವೇ ಮಗಳ ಸಾವಿಗೆ ಕಾರಣ ಎಂದು ಪೋಕಷರು ಆರೋಪಿಸಿದ್ದಾರೆ. ಎಂದಿನಂತೆ ಕೆಲಸ ಮುಗಿಸಿ ರಾತ್ರಿ 8 ಗಂಟೆಗೆ ಶಾಲೆಯಿಂದ ಹೊರಟ ಅಖಿಲಾ ಮತ್ತೆ ಮನೆಗೆ ಸೇರಿದ್ದು ಮೃತವಾಗಿ.
ಸುರಿಯುತ್ತಿರುವ ಮಳೆಯಿಂದಾಗಿ ಅಲ್ಲಲ್ಲಿ ನೀರು ತುಂಬಿಕೊಳ್ಳುತ್ತಿದ್ದು, ಸರ್ಜಾಪುರ, ಮಾರತ್ತಹಳ್ಳಿ ವ್ಯಾಪ್ತಿಯ ರಸ್ತೆಗಳಿಗೆ ಜಲ ದಿಗ್ಬಂಧನ ಹಾಕಿದೆ. ರೈನ್ ಬೋ ಡ್ರೈವ್ ಲೇಔಟ್ ವ್ಯಾಪ್ತಿಯಲ್ಲೂ ನೀರು ತುಂಬಿ ಹರಿಯುತ್ತಿದ್ದು, ರೈನ್ ಬೋ ಡ್ರೈವ್ ಲೇಔಟ್, ಸನ್ನಿಬ್ರೋಕ್ ಲೇಔಟ್, ಸರ್ಜಾಪುರ, ಮಾರತ್ತಹಳ್ಳಿ ಔಟರ್ ರಿಂಗ್ ರಸ್ತೆಗಳು ಮುಳುಗಡೆಯಾಗಿವೆ. ಇನ್ನೊಂದೆಡೆ ಮಾರತಹಳ್ಳಿ ಮುಖ್ಯ ರಸ್ತೆಯಲ್ಲೂ ನೀರು ತುಂಬಿ ಜನರಿಗೆ ಓಡಾಡಲು ಸಾಧ್ಯವಾಗುತ್ತಿಲ್ಲ, ಪರಿಣಾಮವಾಗಿ ಟ್ರ್ಯಾಕ್ಟರ್ ಅವಂಬಿಸಿದ್ದಾರೆ. ಮುಖ್ಯ ರಸ್ತೆವರೆಗೂ ವಿದ್ಯಾರ್ಥಿಗಳು, ಜನರು ಆಗಮಿಸುತ್ತಿದ್ದಾರೆ.
ಸಿಲಿಕಾನ್ ಸಿಟಿ ಜನರೇ ಎಚ್ಚರ ಎಚ್ಚರ
ಬೆಂಗಳೂರಿಗರಿಗೆ ಇಂದು ಟ್ರಾಫಿಕ್ ಜಾಮ್ ಬಿಸಿ ತಟಲ್ಲಿದ್ದು, ಸರ್ಜಾಪುರ, ಬೆಳ್ಳಂದೂರು ಮಾರತಹಳ್ಳಿ , ಔಟರ್ ರಂಗ್ ರಸ್ತೆ ಕಡೆ ಕಾಲಿಡುವ ಮುನ್ನ ಎಚ್ಚರವಹಿಸುವುದು ಅವಶ್ಯಕವಾಗಿದೆ. ಏಕೆಂದರೆ ಈ ಭಾಗದ ರಸ್ತೆಗಳಲ್ಲಿ ಮಳೆ ನೀರು ತುಂಬಿರುವ ಹಿನ್ನೆಲೆ ಇಂದು ಟ್ರಾಫಿಕ್ ಜಾಮ್ ಎದುರಾಗುವ ಸಾಧ್ಯತೆ ಇದೆ.
ಅಪಾರ್ಟ್ ಮೆಂಟ್ ಮುಳಗಡೆ
ಸರ್ಜಾಪುರ ರಸ್ತೆಯ ದಿ ಕಂಟ್ರೀಸೈಡ್ ಅಪಾರ್ಟ್ಮೆಂಟ್ಗೆ ಮಳೆ ನೀರು ನುಗ್ಗಿದ್ದು, ಸುಮಾರು ಐದು ಅಡಿಯಷ್ಟು ನೀರು ತುಂಬಿದೆ. ರೈನ್ ಬ್ರೂ ಡ್ರೈವ್ ಬಡವಾಣೆ ಪಕದಲ್ಲಿರುವ ಕಂಟ್ರಿಸೈಡ್ ಅಪಾರ್ಟಮೆಂಟ್ ಇದಾಗಿದ್ದು, ಹತ್ತಕ್ಕೂ ಹಚ್ಚು ಕಾರುಗಳು, ಐದು ಬೈಕ್ಗಳು ನೀರಿನಲ್ಲಿ ಮುಳುಗಿವೆ. ಇನ್ನೊಂದೆಡೆ ಯಮಲೂರಿನಲ್ಲೂ ಭಾರೀ ಮಳೆಯಾಗಿದ್ದು, ಪರಿಣಾಮವಾಗಿ ರಸ್ತೆತುಂಬೆಲ್ಲಾ ನೀರು ಹರಿಯುತ್ತಿದೆ. ಹೀಗಾಗಿ ರಸ್ತೆಗಳಿಗೆ ಬೋಟ್ಗಳನ್ನು ಇಳಿಸಲಾಗಿದ್ದು, ಆ ಮೂಲಕ ಅಗ್ನಿಶಾಮಕ ದಳದ ಸಿಬ್ಬಂದಿಗಳು ಜನರಿಗೆ ನೆರವನ್ನು ನೀಡುತ್ತಿದ್ದಾರೆ. ಅಲ್ಲದೆ ಟ್ರ್ಯಾಕ್ಟರ್ಗಳಲ್ಲಿಯೇ ಜನರು ಓಡಾಡುವ ಸ್ಥಿತಿ ಬಂದಿದೆ.
ಇನ್ನೊಂದೆಡೆ ತುಂಬಿದ ಮಳೆ ನೀರಿನಲ್ಲಿ ಯುವಕನೊಬ್ಬ ಮಧ್ಯರಾತ್ರಿಯಲ್ಲಿ ಈಜಾಡಿದ್ದಾನೆ. ದೊಮ್ಮಲೂರು ಲೇಔಟ್ ನ ರಸ್ತೆಗಳಲ್ಲಿ ನಿಂತಿದ್ದ ಮಳೆ ನೀರಿನಲ್ಲಿ ಯುವಕ ಸ್ವಿಮ್ ಮಾಡಿದ್ದು, ಸಿಸಿಟಿವಿಯಲ್ಲಿ ಈ ದೃಶ್ಯಾವಳಿ ಸೆರೆಯಾಗಿದೆ.
ವರ್ಕ್ ಫ್ರಮ್ ಹೋಮ್
ಬೆಂಗಳೂರಿನ ಔಟರ್ ರಿಂಗ್ರೋಡ್ನಲ್ಲಿ ಭಾರೀ ಮಳೆಯಾದ ಪರಿಣಾಮ ರಸ್ತೆಗಳು ಮಳೆ ನೀರಿನಿಂದ ತುಂಬಿವೆ. ಜನರು ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ಈ ನಿಟ್ಟಿನಲ್ಲಿ 50ಕ್ಕೂ ಹೆಚ್ಚು ಕಂಪನಿಗಳು ತನ್ನ ನೌಕರರಿಗೆ ಮನೆಯಿಂದ ಕೆಲಸ ನಿರ್ವಹಿಸುವ ಅವಕಾಶವನ್ನು ನೀಡಿದೆ.
ಬೆಂಗಳೂರು ಚೆನೈ ಹೆವೇ ಬ್ಲಾಕ್
ಆನೇಕಲ್ ತಾಲೂಕಿನಲ್ಲೂ ಭಾರೀ ಮಳೆಯಾಗಿದ್ದು, ಕಳೆದ ಮೂರು ತಾಸಿನಿಂದ ಮಳೆ ಸುರಿಯುತ್ತಿದೆ. ಸದ್ಯ ಸುರಿದ ಧಾರಾಕಾರ ಮಳೆಗೆ ಬೆಂಗಳೂರು ಚೆನೈ ಹೆವೇ ಬ್ಲಾಕ್ ಆಗಿದೆ. ಎಲೆಕ್ಟ್ರಾನಿಕ್ ಸಿಟಿ ಸಿಗ್ನಲ್ ಬಳಿ ಪ್ರವಾಹ ಪರಿಸ್ಥಿತಿ ತಲೆದೋರಿದ ಪರಿಣಾಮ ತಮಿಳುನಾಡಿಗೆ ಹೊರಟಿದ್ದ ಪ್ರಯಾಣಿಕರಿಗೆ ಟ್ರಾಫಿಕ್ ಕಿರಿಕಿರಿ ಬಿಸಿ ತಟ್ಟಿತು. ವೀರಸಂದ್ರ ಬಳಿ ಸಂಪೂರ್ಣ ಟ್ರಾಫಿಕ್ ಜಾಮ್ ಆಗಿದ್ದು, ಮಧ್ಯ ರಾತ್ರಿ ಆದ್ರೂ ಟೋಲ್ ಬಳಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:31 am, Tue, 6 September 22