Drinking Water: ಬೆಂಗಳೂರಿಗೆ ಕಾವೇರಿ ನೀರು ಸರಬರಾಜು ಸ್ಥಗಿತ: ಇಂದು ಜಲಮಂಡಳಿಯಿಂದ ಉಚಿತ ನೀರು ಪೂರೈಕೆ
ಏಕಾಏಕಿ ಭಾರೀ ಮಳೆ ಸುರಿದ ಕಾರಣ ಭೀಮೇಶ್ವರ ನದಿ ಹಾಗೂ ಕೆರೆ ತುಂಬಿ ಜಲಮಂಡಳಿಯ ಪಂಪಿಂಗ್ ಸ್ಟೇಷನ್ಗೆ ನೀರು ನುಗ್ಗಿ ಹಾನಿಯಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಂಗಳೂರು: ಮಂಡ್ಯ ಜಿಲ್ಲೆಯಲ್ಲಿ ಭಾರೀ ಮಳೆ (Heavy Rain) ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮಳವಳ್ಳಿ ತಾಲ್ಲೂಕಿನ ತೊರೆಕಾಡನಹಳ್ಳಿ (ಟಿಕೆ ಹಳ್ಳಿ) ಗ್ರಾಮದಲ್ಲಿರುವ (TK Halli Village) ಬೆಂಗಳೂರು ಜಲಮಂಡಳಿಯ ಪಂಪಿಂಗ್ ಸ್ಟೇಷನ್ಗೆ (BWSSB Pumping Station) ನೀರು ನುಗ್ಗಿದೆ. ಪಂಪ್ಗಳು ಮತ್ತು ಇತರ ಯಂತ್ರಗಳ ರಿಪೇರಿ ಕೆಲಸ ಚುರುಕಾಗಿ ನಡೆಯುತ್ತಿದೆಯಾದರೂ ಯಂತ್ರಾಗಾರವು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲು ಇನ್ನೂ ಒಂದು ದಿನದ ಸಮಯ ಬೇಕಿದೆ ಜಲಮಂಡಳಿ ತಿಳಿಸಿದೆ. ಬೆಂಗಳೂರು ನಗರಕ್ಕೆ ಕಾವೇರಿ ನೀರು ಪೂರೈಕೆ ಸ್ಥಗಿತಗೊಂಡಿರುವ ಕಾರಣ, ಜಲಮಂಡಳಿಯು ನಗರದ ವಿವಿಧೆಡೆ ಉಚಿತ ನೀರು ಪೂರೈಸಲು ತೀರ್ಮಾನಿಸಿದೆ.
ಬೆಂಗಳೂರು ನಗರದ ಹಲವು ಬಡಾವಣೆಗಳಲ್ಲಿ ಕಾವೇರಿ ನೀರು ಪೂರೈಕೆ ಸ್ಥಗಿತಗೊಂಡಿದೆ. ಯಶವಂತಪುರ, ಮಲ್ಲೇಶ್ವರಂ, ಓಕಳಿಪುರ, ಸಂಜಯನಗರ, ಸದಾಶಿವನಗರ, ಆರ್.ಟಿ.ನಗರ, ಜಿಕೆವಿಕೆ, ಚಿಕ್ಕಪೇಟೆ, ಮೆಜೆಸ್ಟಿಕ್, ಶಿವಾಜಿನಗರ, ಫ್ರೇಜರ್ ಟೌನ್, ಡಿ.ಜೆ.ಹಳ್ಳಿ, ಕೋಲ್ಸ್ ಪಾರ್ಕ್, ಟ್ಯಾನರಿ ರೋಡ್, ಇಂದಿರಾನಗರ, ಹಲಸೂರು, ಮಲ್ಲಸಂದ್ರ, ಬಾಗಲಗುಂಟೆ, ದಾಸರಹಳ್ಳಿ, ನಂದಿನಿ ಲೇಔಟ್, ಆರ್.ಆರ್.ನಗರ, ಕೆಂಗೇರಿ, ಮಹದೇವಪುರ, ಎಚ್ಎಸ್ಆರ್ ಲೇಔಟ್, ಮಂಗಮ್ಮನಪಾಳ್ಯ, ಜೆ.ಪಿ.ನಗರ, ಶ್ರೀನಿವಾಸನಗರ, ಸುಂಕದಕಟ್ಟೆ, ಕೊಟ್ಟಿಗೆಪಾಳ್ಯ, ಬ್ಯಾಡರಹಳ್ಳಿ, ಶಿರ್ಕೆ, ಮೈಸೂರು ರಸ್ತೆ, ನಾಯಂಡಹಳ್ಳಿ, ಕಾಮಾಕ್ಷಿಪಾಳ್ಯ, ಮೂಡಲಪಾಳ್ಯ, ಕೊಡಿಗೆಹಳ್ಳಿ, ಕೋಗಿಲು, ಎಚ್ಆರ್ಬಿಆರ್ ಲೇಔಟ್ನಲ್ಲಿ ನೀರು ಸರಬರಾಜು ಸ್ಥಗಿತಗೊಂಡಿದೆ.
ಪಂಪ್ಹೌಸ್ ಸುತ್ತ ಕಾಂಕ್ರೀಟ್ ತಡೆಗೋಡೆ
ಬೆಂಗಳೂರು ಜಲಮಂಡಳಿಯ ಟಿಕೆ ಹಳ್ಳಿ ಪಂಪ್ಹೌಸ್ಗೆ ನೀರು ನುಗ್ಗಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ (ಸೆ 5) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಏಕಾಏಕಿ ಭಾರೀ ಮಳೆ ಸುರಿದ ಕಾರಣ ಭೀಮೇಶ್ವರ ನದಿ ಹಾಗೂ ಕೆರೆ ತುಂಬಿ ಜಲಮಂಡಳಿಯ ಪಂಪಿಂಗ್ ಸ್ಟೇಷನ್ಗೆ ನೀರು ನುಗ್ಗಿ ಹಾನಿಯಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.
ನದಿಯಲ್ಲಿ ಈ ಪ್ರಮಾಣದಲ್ಲಿ ನೀರು ಬಂದು 75 ವರ್ಷಗಳೇ ಆಗಿದ್ದವು. ಈ ಕೇಂದ್ರದಲ್ಲಿ ಒಟ್ಟು ಐದು ಘಟಕಗಳಿದ್ದು, ಎರಡು ಘಟಕಗಳಿಗೆ ನೀರು ನುಗ್ಗಿದೆ. ಒಟ್ಟು 1,450 ಎಂಎಲ್ಡಿ ಸಾಮರ್ಥ್ಯದ ಪಂಪ್ಹೌಸ್ ಇದಾಗಿದ್ದು, 550 ಎಂಎಲ್ಡಿ ಸಾಮರ್ಥ್ಯದ ಪಂಪಿಂಗ್ ಸ್ಟೇಷನ್ ಈಗಾಗಲೇ ಕೆಲಸ ಮಾಡುತ್ತಿದೆ. ದ್ದು, ನೀರು ಬೆಂಗಳೂರಿಗೆ ನಿರಂತರವಾಗಿ ಸರಬರಾಜು ಆಗುತ್ತಿದೆ ಎಂದರು. 4ನೇ ಹಂತದ ಪಂಪ್ಹೌಸ್ನಲ್ಲಿ 12 ಅಡಿ ನೀರು ಹೊರ ತೆಗೆಯಲಾಗಿದೆ. ಇನ್ನೂ 11 ಅಡಿ ನೀರು ಇದೆ ಎಂದು ಹೇಳಿದರು. ನೀರು ಹೊರತೆಗೆದ ನಂತರ ಯಂತ್ರೋಕರಣಗಳನ್ನು ಒಣಗಿಸಬೇಕಿದೆ. ನಂತರವಷ್ಟೇ ಅವುಗಳ ನಿರ್ವಹಣೆ, ಪರಿಶೀಲನೆ ಮಾಡಬೇಕಿದೆ. ನೀರು ನುಗ್ಗುವ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪಂಪ್ಹೌಸ್ ಸುತ್ತಲೂ ಕಾಂಕ್ರಿಟ್ ತಡೆಗೋಡೆ ನಿರ್ಮಿಸಲಾಗುವುದು ಎಂದರು.
ಉನ್ನತ ಶಿಕ್ಷಣ ಸಚಿವರಾದ ಡಾ.ಸಿ.ಎನ್.ಅಶ್ವಥ್ ನಾರಾಯಣ, ಕಂದಾಯ ಇಲಾಖೆಯ ಸಚಿವರಾದ ಆರ್.ಆಶೋಕ್, ನಗರಾಭಿವೃದ್ಧಿ ಖಾತೆ ಸಚಿವರಾದ ಬೈರತಿ ಬಸವರಾಜು, ಶಾಸಕರಾದ ಡಾ.ಕೆ.ಅನ್ನದಾನಿ, ಜಿಲ್ಲಾಧಿಕಾರಿ ಎಸ್.ಅಶ್ವತಿ, ಪೊಲೀಸ್ ವರಿಷ್ಠಾಧಿಕಾರಿ ಎಸ್.ಯತೀಶ್ ಇತರರು ಉಪಸ್ಥಿತರಿದ್ದರು.
Published On - 7:18 am, Tue, 6 September 22