ಬೆಂಗಳೂರಿನಲ್ಲಿ ಆಗಸ್ಟ್​​ನಲ್ಲಿ 100 ವರ್ಷಗಳ ಗರಿಷ್ಠ ತಾಪಮಾನ! ಬಿಸಿಲ ಬೇಗೆಗೆ ಬಸವಳಿದ ನಗರದ ಜನ

| Updated By: ಗಣಪತಿ ಶರ್ಮ

Updated on: Aug 16, 2023 | 9:26 PM

Bengaluru Records Maximum Temperature; ಬೆಂಗಳೂರಿನಲ್ಲಿ ಈ ತಿಂಗಳು ಕೇವಲ 3.9 ಮಿ.ಮೀ ಮಳೆಯಾಗಿದೆ. 1885ರಲ್ಲಿ ಆಗಸ್ಟ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ದಾಖಲಾದ ಅತಿ ಕಡಿಮೆ ಮಳೆಯ ಪ್ರಮಾಣವು 20.6 ಮಿ.ಮೀ ಆಗಿತ್ತು. ನಮ್ಮ ನಗರಕ್ಕೆ ಎಷ್ಟು ಹಾನಿಕಾರಕ ತಿಂಗಳು ಇದು ಎಂಬುದನ್ನು ಈ ಬೆಳವಣಿಗೆ ಸೂಚಿಸುತ್ತದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಬೆಂಗಳೂರಿನಲ್ಲಿ ಆಗಸ್ಟ್​​ನಲ್ಲಿ 100 ವರ್ಷಗಳ ಗರಿಷ್ಠ ತಾಪಮಾನ! ಬಿಸಿಲ ಬೇಗೆಗೆ ಬಸವಳಿದ ನಗರದ ಜನ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಸಾಮಾನ್ಯವಾಗಿ ಮಳೆಯಾಗುವ ಆಗಸ್ಟ್‌ ತಿಂಗಳಲ್ಲಿ ಬೆಂಗಳೂರು (Bangalore) ನಗರದಲ್ಲಿ ಈ ವರ್ಷ ಅಸಾಧಾರಣ ಬಿಸಿಯ (Temperature) ವಾತಾವರಣ ದಾಖಲಾಗಿದೆ. ಮಳೆಯ ಬದಲು ಶುಷ್ಕ ವಾತಾವರಣ ಮುಂದುವರಿದಿದ್ದು, ನಗರದಲ್ಲಿ ತಾಪಮಾನ ಗಗನಕ್ಕೇರುತ್ತಿದೆ. ಬುಧವಾರದ ಗರಿಷ್ಠ ತಾಪಮಾನ (Maximum Temperature) 31.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಸಾಮಾನ್ಯಕ್ಕಿಂತ 3.7 ಡಿಗ್ರಿ ಹೆಚ್ಚಾಗಿದೆ. ಹವಾಮಾನ ಇಲಾಖೆ ಪ್ರಕಾರ, ಆಗಸ್ಟ್​ ತಿಂಗಳಲ್ಲಿ ಬೆಂಗಳೂರಿನಲ್ಲಿ ಅತಿ ಹೆಚ್ಚು ತಾಪಮಾನ ದಾಖಲಾದ ಐದು ದಿನಗಳಲ್ಲಿ ಇಂದೂ ಸೇರಿದೆ.

ಬುಧವಾರ, ಜಿಕೆವಿಕೆ ಪ್ರದೇಶದಲ್ಲಿ ಗರಿಷ್ಠ 31 ಡಿಗ್ರಿ ಸೆಲ್ಸಿಯಸ್ ಮತ್ತು ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ 29.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. 1899 ರಲ್ಲಿ ಆಗಸ್ಟ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ದಾಖಲಾದ ಗರಿಷ್ಠ ತಾಪಮಾನ 33.3 ಡಿಗ್ರಿ ಸೆಲ್ಸಿಯಸ್ ಆಗಿತ್ತು.

ನಗರದಲ್ಲಿ ಈ ತಿಂಗಳು ಕೇವಲ 3.9 ಮಿ.ಮೀ ಮಳೆಯಾಗಿದೆ. 1885ರಲ್ಲಿ ಆಗಸ್ಟ್ ತಿಂಗಳಿನಲ್ಲಿ ನಗರದಲ್ಲಿ ದಾಖಲಾದ ಅತಿ ಕಡಿಮೆ ಮಳೆಯ ಪ್ರಮಾಣವು 20.6 ಮಿ.ಮೀ ಆಗಿತ್ತು. ಎರಡು ಕಳಪೆ ದಾಖಲೆಗಳು ಒಂದೇ ವರ್ಷದಲ್ಲಿ ಮುರಿಯುವ ಹಂತದಲ್ಲಿವೆ. ನಮ್ಮ ನಗರಕ್ಕೆ ಎಷ್ಟು ಹಾನಿಕಾರಕ ತಿಂಗಳು ಇದು ಎಂಬುದನ್ನು ಈ ಬೆಳವಣಿಗೆ ಸೂಚಿಸುತ್ತದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಈ ವರ್ಷದ ಆಗಸ್ಟ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಶೇ 40 ಕ್ಕಿಂತ ಹೆಚ್ಚು ಮಳೆಯ ಕೊರತೆ ಕಂಡುಬಂದಿದೆ. ಮುಂದಿನ ವಾರ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಲ್ಪ ಪ್ರಮಾಣದ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.

ಇದನ್ನೂ ಓದಿ: Bangalore Power Cut: ಇಂದು, ನಾಳೆ ಬೆಂಗಳೂರಿನ ಹಲವೆಡೆ ವಿದ್ಯುತ್ ಕಡಿತ, ಎಲ್ಲೆಲ್ಲಿ ಎಂಬ ಮಾಹಿತಿ ಇಲ್ಲಿದೆ?

ಈ ಮಧ್ಯೆ, ಕರ್ನಾಟಕದಲ್ಲಿ ಕೂಡ ಈ ವರ್ಷ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಬೆಂಗಳೂರಿಗೆ ನೀರು ಪೂರೈಸುವ ಪ್ರಮುಖ ನದಿಯಾಗಿರುವ ಕಾವೇರಿ ನದಿಯ ಜಲಾನಯನ ಪ್ರದೇಶಗಳಲ್ಲೂ ಈ ವರ್ಷ ಕಡಿಮೆ ಮಳೆಯಾಗಿರುವುದು ಸರ್ಕಾರವನ್ನು, ಜನಸಾಮಾನ್ಯರನ್ನು ಚಿಂತೆಗೀಡು ಮಾಡಿದೆ. ಈ ಮಧ್ಯೆ, ಕೆಆರ್​ಎಸ್ ಜಲಾಶಯದಿಂದ ನೆರೆಯ ತಮಿಳುನಾಡಿಗೆ ನೀರು ಬಿಡಬೇಕಾದ ಒತ್ತಡವೂ ಕರ್ನಾಟಕ ಸರ್ಕಾರಕ್ಕೆ ಎದುರಾಗಿದೆ.

ಕಾವೇರಿ ನೀರು ಹಂಚಿಕೆ ವಿಚಾರವಾಗಿ ತಮಿಳುನಾಡು ಮತ್ತೆ ಸುಪ್ರೀಂ ಕೋರ್ಟ ಮೆಟ್ಟಿಲೇರಿದೆ. ಇತ್ತ ಮಳೆ ಕೊರತೆಯಿಂದಾಗಿ ಸಾಕಷ್ಟು ನೀರಿಲ್ಲದೆ ಕರ್ನಾಟಕವೂ ಸಂಕಷ್ಟಕ್ಕೆ ಸಿಲುಕಿದೆ. ಅದರ ಮಧ್ಯೆ, ಬಿಸಿಲ ಬೇಗೆ ಜನರನ್ನು ತತ್ತರಿಸುವಂತೆ ಮಾಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ