ಹೊಂಡ-ಗುಂಡಿ ರಸ್ತೆ; ಗುಂಡಿಗಳಿಗೆ ಇಳಿದು ಪೈರು ನಾಟಿ ಮಾಡಿದ ಶಾಸಕ ನಿಸರ್ಗ ನಾರಾಯಣಸ್ವಾಮಿ

TV9kannada Web Team

TV9kannada Web Team | Edited By: Rakesh Nayak Manchi

Updated on: Nov 08, 2022 | 10:26 AM

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪಕ್ಕದ ದೇವನಹಳ್ಳಿ ಪಟ್ಟಣದಲ್ಲಿನ ಯಮಸ್ವರೂಪಿ ಗುಂಡಿಗಳಿಗೆ ವಾಹನ ಸವಾರರು ಹೈರಾಣಾಗಿದ್ದಾರೆ. ರಸ್ತೆ ಡಾಂಬರು ಹಾಕುವಂತೆ ಹಲವು ಭಾರಿ ಸರ್ಕಾರಕ್ಕೆ ಸ್ಥಳೀಯ ಶಾಸಕರ ಮನವಿ ಮಾಡಿದ್ದರೂ ಸರ್ಕಾರ ಮೀನಾಮೇಷ ಎಣಿಸುತ್ತಿದೆ.

ಹೊಂಡ-ಗುಂಡಿ ರಸ್ತೆ; ಗುಂಡಿಗಳಿಗೆ ಇಳಿದು ಪೈರು ನಾಟಿ ಮಾಡಿದ ಶಾಸಕ ನಿಸರ್ಗ ನಾರಾಯಣಸ್ವಾಮಿ
ರಸ್ತೆ ಸರಿಪಡಿಸುವಂತೆ ಒತ್ತಾಯಿಸಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರಿಂದ ಪೈರು ನಾಟಿ ಮಾಡಿ ವಿಭಿನ್ನ ಹೋರಾಟ

ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವೇ ಇರುವ ದೇವನಹಳ್ಳಿ ವಿಶ್ವದ ಭೂಪಟಗಳಲ್ಲಿ ಸೇರಿದ ನಗರವಾಗಿದೆ. ಇಂತಹ ನಗರದ ರಸ್ತೆಗಳೆಲ್ಲಾ ಯಮಸ್ವರೂಪಿ ಗುಂಡಿಗಳಾಗಿ ಮಾರ್ಪಟ್ಟಿವೆ. ಈ ರಸ್ತೆಯಲ್ಲಿ ದಿನನಿತ್ಯ ಸಂಚರಿಸುವ ವಾಹನ ಸವಾರರು ಹೈರಾಣಾಗಿದ್ದಾರೆ. ಈ ಬಗ್ಗೆ ಸ್ಥಳೀಯ ಶಾಸಕರು ರಸ್ತೆ ಸರಿಪಡಿಸುವಂತೆ ಹಲವು ಭಾರಿ ಸರ್ಕಾರಕ್ಕೆ ಮನವಿ ಮಾಡಿದರೂ ಸರ್ಕಾರ ಮಾತ್ರ ಮೀನಾಮೇಷ ಎಣಿಸುತ್ತಿದೆ. ಹೀಗಾಗಿ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿರುವ ಶಾಸಕ ನಿಸರ್ಗ ನಾರಾಯಣಸ್ವಾಮಿ ಸ್ವತಃ ರಸ್ತೆಗೆ ಇಳಿದು ವಿಭಿನ್ನವಾಗಿ ಹೋರಾಟ ನಡೆಸಿ ಸರ್ಕಾರದ ಗಮನಸೆಳೆಯುವ ಪ್ರಯತ್ನ ಮಾಡಿದ್ದಾರೆ.

ಪಟ್ಟಣದ ಪ್ರಮುಖ ರಸ್ತೆಗಳೆಲ್ಲಾ ಹಲವು ವರ್ಷಗಳಿಂದ ಡಾಂಬರು ಹಾಕದಿರುವ ಪರಿಣಾಮ ಎರಡು ಮೂರು ಅಡಿಗಳಷ್ಟು ಗುಂಡಿಗಳು ಬಿದ್ದಿವೆ. ಇನ್ನೂ ಇದೇ ರಸ್ತೆಯಲ್ಲಿ ಓಡಾಡುವ ವಿದ್ಯಾರ್ಥಿಗಳು, ಶಾಲಾ ಮಕ್ಕಳು, ಪ್ರಯಾಣಿಕರು ಎಷ್ಟೋ ಭಾರಿ ಬಿದ್ದು ಗಾಯಗೊಂಡಿದ್ದಾರೆ. ಈ ಬಗ್ಗೆ ಸ್ಥಳೀಯ ಶಾಸಕ ನಿಸರ್ಗ ನಾರಾಯಣಸ್ವಾಮಿ ವರ್ಷದ ಹಿಂದೆಯೇ ಸರ್ಕಾರದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಜೊತೆಗೆ ಅಧಿವೇಶನದಲ್ಲೂ ಪಟ್ಟಣದ ಹದಗೆಟ್ಟ ರಸ್ತೆಗಳಿಗೆ ಡಾಂಬರು ಹಾಕಿಸುವಂತೆ ಒತ್ತಾಯ ಮಾಡಿದ್ದ ಶಾಸಕರಿಗೆ ಸರ್ಕಾರ ಕಿಮ್ಮತ್ತು ನೀಡಿಲ್ಲ. ಇದರಿಂದ ರೊಚ್ಚಿಗೆದ್ದ ಶಾಸಕ ನಿಸರ್ಗ ನಾರಾಯಣಸ್ವಾಮಿ ಹಾಗೂ ನೂರಾರು ಜೆಡಿಎಸ್ ಕಾರ್ಯಕರ್ತರು ವಿಭಿನ್ನ ಹೋರಾಟ ನಡೆಸಿದರು. ಪಟ್ಟಣದ ಗುಂಡಿಗಳಲ್ಲಿ ಪೈರು ನಾಟಿ ಮಾಡಿದ ಶಾಸಕರು ಸರ್ಕಾರ ರಸ್ತೆಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು.

ತಾಜಾ ಸುದ್ದಿ

ಬಸ್ ನಿಲ್ದಾಣದ ರಸ್ತೆಗಳ ಗುಂಡಿಗಳಲ್ಲೇ ಕುಳಿತ ಶಾಸಕ ನಿಸರ್ಗ ನಾರಾಯಣಸ್ವಾಮಿ, ಪಟ್ಟಣದಿಂದ ಹೊಸಕೋಟೆ, ಬೆಂಗಳೂರು ಕಡೆ ಹೋಗುವ ರಸ್ತೆ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ 9 ತಿಂಗಳ ಹಿಂದೆ ರಸ್ತೆ ಡಾಂಬರಿಗೆ ಟೆಂಡರ್ ನೀಡಿ ಸರ್ಕಾರ ಏಕೆ ರದ್ದು ಮಾಡಿತು ಅಂತಾ ಸರ್ಕಾರಕ್ಕೆ ಪ್ರಶ್ನಿಸಿದರು. ಪಟ್ಟಣದ ರಸ್ತೆಗಳು ಗುಂಡಿಗಳು ಒಂದೆಡೆಯಾದರೆ, ಮತ್ತೊಂದೆಡೆ ಗುಂಡಿಗಳಲ್ಲಿ ವಾಹನಗಳು ಸಾಗುತ್ತಿದ್ದಂತೆ ಧೂಳು ಮೇಲೇಳುತ್ತದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಂಗಡಿಗಳಿಗೆ ಧೂಳು ನುಗ್ಗುತ್ತಿರುವ ಹಿನ್ನೆಲೆ ಸಾಮಾಗ್ರಿ ಖರೀದಿಗೆ ಜನರು ಬರುತ್ತಿಲ್ಲ ಎಂದು ಅಂಗಡಿ ಮಾಲೀಕರು ಅಸಾಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಒಟ್ಟಾರೇ, ಕೆಂಪೇಗೌಡ ಏರ್ಪೋಟ್ ಪಕ್ಕದ ದೇವನಹಳ್ಳಿ ಪಟ್ಟಣವೆಲ್ಲಾ ಯಮಸ್ವರೂಪಿ ಗುಂಡಿಗಳಿಂದ ಕೂಡಿದ್ದು, ಡಾಂಬರು ಹಾಕಿಸುವಂತೆ ಸ್ಥಳೀಯ ಶಾಸಕರು ವಿಭಿನ್ನ ಹೋರಾಟದ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. 15 ದಿನದೊಳಗೆ ರಸ್ತೆ ಡಾಂಬರು ಹಾಕಿಸದೆ ಇದ್ದಲ್ಲಿ ವಿಧಾನಸೌಧ ಮುಂಭಾಗ ಧರಣಿ ನಡೆಸುವ ಎಚ್ಚರಿಕೆಯನ್ನ ಶಾಸಕರು ನೀಡಿದ್ದಾರೆ.

ವರದಿ: ನವೀನ್, ಟಿವಿ9 ದೇವನಹಳ್ಳಿ

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada