ಬೆಂಗಳೂರು ಆಡಳಿತಕ್ಕೆ ಹೊಸ ರೂಪ: ಬಿಬಿಎಂಪಿ ಮಸೂದೆಗೆ ಅಧಿವೇಶನದಲ್ಲಿ ಒಪ್ಪಿಗೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 10, 2020 | 10:36 PM

ಪ್ರಸ್ತುತ, ಕರ್ನಾಟಕ ಮಹಾನಗರ ಪಾಲಿಕೆ ಕಾಯ್ದೆಯಡಿ ಬೆಂಗಳೂರು ಆಡಳಿತ ನಡೆಸುತ್ತಿದೆ. ನಗರಕ್ಕೆ ಪ್ರತ್ಯೇಕ ಕಾನೂನು ಸಿಗಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿತ್ತು. ಈಗ ಈ ಬೇಡಿಕೆ ಈಡೇರಿದಂತಾಗಿದೆ.

ಬೆಂಗಳೂರು ಆಡಳಿತಕ್ಕೆ ಹೊಸ ರೂಪ: ಬಿಬಿಎಂಪಿ ಮಸೂದೆಗೆ ಅಧಿವೇಶನದಲ್ಲಿ ಒಪ್ಪಿಗೆ
ಬಿಬಿಎಂಪಿ ಮುಖ್ಯ ಕಚೇರಿ
Follow us on

ಬೆಂಗಳೂರು: ವಿಧಾನಸಭೆಯ ಗುರುವಾರದ ಅಧಿವೇಶನದಲ್ಲಿ ಬ್ರಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಸೂದೆಗೆ ಅಂಗೀಕಾರ ಸಿಕ್ಕಿದೆ. ಇದು ಮಹಾನಗರ ಪಾಲಿಕೆ ವಿಸ್ತೀರ್ಣವನ್ನು ಹೆಚ್ಚಿಸುವುದರ ಜೊತೆಗೆ ನಗರಕ್ಕೆ ಹೊಸ ಆಡಳಿತ ರಚನೆಯ ಭರವಸೆ ನೀಡಲಿದೆ.

ಪ್ರಸ್ತುತ, ಕರ್ನಾಟಕ ಮಹಾನಗರ ಪಾಲಿಕೆ ಕಾಯ್ದೆಯಡಿ ಬೆಂಗಳೂರು ಆಡಳಿತ ನಡೆಸುತ್ತಿದೆ. ನಗರಕ್ಕೆ ಪ್ರತ್ಯೇಕ ಕಾನೂನು ಸಿಗಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿತ್ತು. ಈಗ ಈ ಬೇಡಿಕೆ ಈಡೇರಿದಂತಾಗಿದೆ. ಕಾಂಗ್ರೆಸ್​ ಇಂದಿನ ಅಧಿವೇಶನವನ್ನು ಬಹಿಷ್ಕರಿಸಿತ್ತು. ಹೀಗಾಗಿ, ಪ್ರತಿಪಕ್ಷ ಸ್ಥಾನ ಖಾಲಿ ಇರುವಂತೆಯೇ ಮಸೂದೆಯನ್ನು ಅಂಗೀಕರಿಸಲಾಯಿತು.

ಕಾನೂನು ಸಚಿವ ಜೆ.ಸಿ.ಮಧುಸ್ವಾಮಿ ಮಾತನಾಡಿ, ಬೆಂಗಳೂರಿನಲ್ಲಿ ಸಾಕಷ್ಟು ವಿಚಾರಗಳು ಬದಲಾಗಿವೆ. ಬಿಬಿಎಂಪಿ ಯಾವುದು, ಗ್ರಾಮ ಪಂಚಾಯಿತಿ ಅಥವಾ ಪಟ್ಟಣ ಪಂಚಾಯತ್ ಯಾವುದು ಎಂದು ನಮಗೆ ಹೇಳಲು ಸಾಧ್ಯವಿಲ್ಲ. ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಪ್ರದೇಶಕ್ಕೆ ಅನುಗುಣವಾಗಿ, ನಗರಕ್ಕೆ ಉತ್ತಮ ಆಡಳಿತವನ್ನು ಒದಗಿಸಲು ನಾವು ಬಯಸುತ್ತೇವೆ. ಬೆಂಗಳೂರು ದಿನೇ ದಿನೇ ಬೆಳೆಯುತ್ತಿರುವುದರಿಂದ ಪ್ರತ್ಯೇಕ ಕಾನೂನಿನ ಅವಶ್ಯಕತೆ ಇತ್ತು ಎಂದರು.

ಈ ಮಸೂದೆಯು ರಾಜ್ಯಪಾಲರ ಸಹಿಯೊಂದಿಗೆ ಕಾಯ್ದೆಯಾಗಿ ಜಾರಿಯಾದ ನಂತರ ಬೆಂಗಳೂರಿನಲ್ಲಿ ಐದು ವರ್ಷಗಳಲ್ಲಿ ಇಬ್ಬರು ಮೇಯರ್‌ಗಳು ಇರಲಿದ್ದಾರೆ. ಪ್ರತಿಯೊಬ್ಬರಿಗೂ 30 ತಿಂಗಳ ಅಧಿಕಾರಾವಧಿ ಸಿಗಲಿದೆ.

ಶಾಸಕರ ನೇತೃತ್ವದಲ್ಲಿ ರಚಿಸುವ ಕ್ಷೇತ್ರ ಸಮಾಲೋಚನಾ ಸಮಿತಿಗಳಲ್ಲಿ ಬಡಾವಣೆ ಕ್ಷೇಮಾಭಿವೃದ್ಧಿ ಸಂಘಗಳ ಸದಸ್ಯರೂ ಇರುತ್ತಾರೆ. ವಿಭಾಗೀಯ ಸಮಿತಿಗಳಿಗೆ ಈ ಸಮಿತಿಗಳು ಮಾರ್ಗದರ್ಶನ ನೀಡುತ್ತವೆ. ಅವುಗಳ ಕಾರ್ಯನಿರ್ವಹಣೆ ಮತ್ತು ಕಾಮಗಾರಿಗಳ ಅನುಷ್ಠಾನದಲ್ಲಿ ಸಹಕರಿಸಲಿವೆ. ವಾರ್ಡ್​ಗಳ ಅಭಿವೃದ್ಧಿ ಯೋಜನೆಗಳನ್ನು ಪರಾಮರ್ಶಿಸಲಿವೆ ಎಂದು ಮಾಧುಸ್ವಾಮಿ ಹೇಳಿದರು.

ಮನರಂಜನಾ ತೆರಿಗೆ ಸಂಗ್ರಹ ಮತ್ತು ಜಾಹೀರಾತುಗಳಿಗೆ ತೆರಿಗೆ ವಿಧಿಸಲು ಹೊಸ ಮಸೂದೆಯು ಬಿಬಿಎಂಪಿಗೆ ಅಧಿಕಾರ ನೀಡುತ್ತದೆ. ಜಿಎಸ್​ಟಿ ಜಾರಿಯ ನಂತರ ಜಾಹೀರಾತು ಮೇಲೆ ತೆರಿಗೆ ವಿಧಿಸಲು ಆಗುವುದಿಲ್ಲ. ಹೀಗಾಗಿ ಶುಲ್ಕ ವಿಧಿಸುತ್ತೇವೆ. ಅದೇ ರೀತಿ ಮನರಂಜನಾ ತೆರಿಗೆ ವಿಧಿಸಲು ಅವಕಾಶ ಮಾಡಿಕೊಡುತ್ತೇವೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ವಾರ್ಡ್​ಗಳ ಪುನರ್​ ವಿಂಗಡನೆಗೂ ಈ ಮಸೂದೆ ಮುನ್ನುಡಿ ಬರೆದಿದೆ. ಬೆಂಗಳೂರು ನಗರದಲ್ಲಿ ಈಗ 198 ವಾರ್ಡ್​ಗಳಿವೆ. ಮುಂದಿನ ದಿನಗಳಲ್ಲಿ ಇದು 243 ಮುಟ್ಟಲಿದೆ. ಮಹಾನಗರದ ವಿಸ್ತೀರ್ಣವು 1 ಕಿ.ಮೀ. ಸುತ್ತಳತೆಯಷ್ಟು ಹೆಚ್ಚಾಗಲಿದೆ. ಸುತ್ತಮುತ್ತಲಿನ ಹಳ್ಳಿಗಳು ಮತ್ತು ಉಪನಗರಗಳನ್ನೂ ಬಿಬಿಎಂಪಿ ಈ ಮೂಲಕ ತನ್ನ ಒಡಲಿಗೆ ಸೇರಿಸಿಕೊಳ್ಳಲಿದೆ. 1 ಕಿ.ಮೀ. ಸುತ್ತಳತೆಯಿಂದ ಕೇವಲ 300-400 ಮೀಟರ್​ ದೂರದಲ್ಲಿ ಹಳ್ಳಿಗಳಿದ್ದರೆ ಏನು ಮಾಡಬೇಕು ಎಂಬ ಬಗ್ಗೆ ಗೊಂದಲವಿತ್ತು. ಅಂಥ ಸಂದರ್ಭದಲ್ಲಿ ಈ ಹಳ್ಳಿಗಳನ್ನು ನಗರ ವ್ಯಾಪ್ತಿಗೆ ತರಲು ವಿಶೇಷ ಅಧಿಸೂಚನೆ ಹೊರಡಿಸಲಾಗುವುದು ಎಂದು ಮಾಧುಸ್ವಾಮಿ ಸ್ಪಷ್ಟಪಡಿಸಿದರು.

ಗೋಹತ್ಯೆ ನಿಷೇಧ ವಿಧೇಯಕಕ್ಕೆ ಹಿನ್ನಡೆ: ವಿಧಾನ ಪರಿಷತ್​ನಲ್ಲಿ ಮಂಡನೆಯೇ ಆಗಲಿಲ್ಲ

Published On - 10:31 pm, Thu, 10 December 20