ಸಿಟಿ ಪೊಲೀಸರು ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಜನರು ಯಾವ್ಯಾವ ದೂರು ಹಂಚಿಕೊಂಡರು?

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 29, 2020 | 4:45 PM

ಬೆಂಗಳೂರು: ನಗರ ಪೊಲೀಸರು ಮೊದಲ ಮಾಸಿಕ ಜನಸಂಪರ್ಕ ಸಭೆಯನ್ನು ಶನಿವಾರ ಆಯೋಜಿಸಿದ್ದರು. ಕೊರೊನಾ ಭೀತಿಯ ನಡುವೆಯೂ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ದೂರುಗಳನ್ನು ದಾಖಲಿಸಿದರು.

ಸಿಟಿ ಪೊಲೀಸರು ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಜನರು ಯಾವ್ಯಾವ ದೂರು ಹಂಚಿಕೊಂಡರು?
ಕಮಲ್ ಪಂತ್
Follow us on

ಬೆಂಗಳೂರು: ನಗರ ಪೊಲೀಸರು ಮೊದಲ ಮಾಸಿಕ ಜನಸಂಪರ್ಕ ಸಭೆಯನ್ನು ಶನಿವಾರ ಆಯೋಜಿಸಿದ್ದರು. ಕೊರೊನಾ ಭೀತಿಯ ನಡುವೆಯೂ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ದೂರುಗಳನ್ನು ದಾಖಲಿಸಿದರು.

ನಗರದಲ್ಲಿ ಹೆಚ್ಚುತ್ತಿರುವ ಬೈಕ್ ಕಳವು, ಸೈಬರ್ ಅಪರಾಧಗಳು, ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಕೊರತೆ, ಹೀಗೆ ಹಲವು ದೂರುಗಳನ್ನು ಸಾರ್ವಜನಿಕರು ದಾಖಲಿಸಿದರು. ಸ್ವತಃ ಪೊಲೀಸ್ ಆಯುಕ್ತ ಕಮಲ್ ಪಂತ್ ತಮ್ಮ ಕಚೇರಿಯಲ್ಲಿ ಹಾಗೂ ವಿವಿಧ ಪೊಲೀಸ್ ಅಧಿಕಾರಿಗಳು ಠಾಣೆಗಳಲ್ಲಿ ದೂರು ಸ್ವೀಕರಿಸಿದರು.

ಬೆಂಗಳೂರು ಮಾದಕವಸ್ತು ಭೀತಿ
ಮನಸ್ಸು ಕೆರಳಿಸುವ ಪ್ರಮುಖ ಸಮಸ್ಯೆ ಎಂದರೆ ಡ್ರಗ್ ಪೆಡ್ಲಿಂಗ್. ದಯವಿಟ್ಟು ಮಾದಕವಸ್ತು ಭೀತಿಯನ್ನು ಕೊನೆಗೊಳಿಸಿ ಮುಂದಿನ ಪೀಳಿಗೆಯನ್ನು ಉಳಿಸಿ ಎಂದು ಸಾರ್ವಜನಿಕರು ಪೊಲೀಸರಿಗೆ ಮನವಿ ಮಾಡಿದರು.

ಹೆಣ್ಣೂರು, ಪುಲಕೇಶಿನಗರ, ಬಾಣಸವಾಡಿ ರಸ್ತೆಯಲ್ಲಿ ಡ್ರಗ್ಸ್ ಮಾರಾಟ ವ್ಯಾಪಕವಾಗಿ ನಡೆಯುತ್ತಿದೆ. ವಿದ್ಯಾರ್ಥಿಗಳು ಮತ್ತು ವಿದೇಶಿಯರು ಹಣಗಳಿಸಲು ಡ್ರಗ್ಸ್ ದಂಧೆಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಡ್ರಗ್ಸ್​ ಮಾಫಿಯಾಗೆ ಕಡಿವಾಣ ಹಾಕಬೇಕು. ಸಿಕ್ಕಿಬಿದ್ದ ಯುವಕರಿಗೆ ಕೌನ್ಸೆಲಿಂಗ್ ಸೆಷನ್ ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಿಕರು ವಿನಂತಿಸಿದರು.

ಬೈಕ್ ವೀಲಿಂಗ್ ಸಮಸ್ಯೆ
ನಗರದ ಪಶ್ಚಿಮ ಭಾಗದ ವಿವಿಧ ಪೊಲೀಸ್ ಠಾಣೆಗಳ ಅಡಿಯಲ್ಲಿ ಬರುವ ನಿವಾಸಿಗಳು ರಸ್ತೆಗಳಲ್ಲಿ ವೀಲಿಂಗ್ ಮತ್ತು ಅಪಾಯಕಾರಿ ಬೈಕ್ ಸಾಹಸಗಳ ಬಗ್ಗೆ ದೂರು ನೀಡಿದರು. ಕೆಂಗೇರಿಯಿಂದ ಜ್ಞಾನಭಾರತಿ ಕ್ಯಾಂಪಸ್‌ಗೆ ಹೋಗುವ ಮಾರ್ಗದಲ್ಲಿ ಯುವಕರು ಇಂಥ ದುಸ್ಸಾಹಸ ಪ್ರದರ್ಶಿಸುತ್ತಾರೆ. ಉಳಿದ ವಾಹನ ಚಾಲಕರಿಗೆ ತೊಂದರೆಯಾಗುತ್ತಿದೆ. ಅಲ್ಲಿನ ಚಹಾ ಸ್ಟಾಲ್‌ಗಳಿಗೆ ಬೈಕರ್ ಗುಂಪುಗಳು ಭೇಟಿ ನೀಡುತ್ತವೆ ಎಂದು ನಿವಾಸಿಗಳು ದೂರಿದರು.

ಹೊಸ ಪೊಲೀಸ್​ ಪಾಯಿಂಟ್ ಸ್ಥಾಪಿಸಿ
ಕೆಲವು ಪೊಲೀಸ್ ಅಧಿಕಾರಿಗಳು ಒಂದೇ ಪೊಲೀಸ್ ಠಾಣೆಯಲ್ಲಿ ಹಲವು ವರ್ಷಗಳಿಂದ ಏಕೆ ಮುಂದುವರಿಯುತ್ತಿದ್ದಾರೆ ಎಂದು ಸಾರ್ವಜನಿಕರು ಹಿರಿಯ ಅಧಿಕಾರಿಗಳನ್ನು ಪ್ರಶ್ನಿಸಿದರು. ಹೊಸ ಪೊಲೀಸ್ ಪಾಯಿಂಟ್‌ಗಳನ್ನು ಸ್ಥಾಪಿಸಬೇಕು ಎಂದು ಕೆಲವರು ಸಲಹೆ ನೀಡಿದರು. ಅಲ್ಲದೆ, ಚಾಮರಾಜ‌ಪೇಟೆ ಮತ್ತು ಕೆಂಗೇರಿ ನಡುವಿನ ಮೈಸೂರು ರಸ್ತೆಯಲ್ಲಿನ ಸಂಚಾರ ದಟ್ಟಣೆ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.

ಮಾತಿನಿಂದ ತೊಂದರೆ
ತಡರಾತ್ರಿಯವರೆಗೆ ಕಾರ್ಮಿಕರು ಜೋರಾಗಿ ಮಾತನಾಡುವುದರಿಂದ ನಮಗೆ ತೊಂದರೆಯಾಗುತ್ತಿದೆ ಎಂದು ಅಶೋಕ‌ನಗರ, ಕಬ್ಬನ್ ಪಾರ್ಕ್, ಲ್ಯಾವೆಲ್ಲೆ ರಸ್ತೆ, ರಿಚ್ಮಂಡ್ ಟೌನ್ ಮತ್ತು ಅಕ್ಕಪಕ್ಕದ ಶ್ರೀಮಂತ ಬಡಾವಣೆಗಳ ಕೆಲ ನಿವಾಸಿಗಳು ದೂರಿದರು. ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ರೇಸ್ ಕೋರ್ಸ್ ರಸ್ತೆ, ಶೇಷಾದ್ರಿಪುರಂ ಮತ್ತು ಹತ್ತಿರದ ಪ್ರದೇಶಗಳಲ್ಲಿ ಯುವಕರು ಬೈಕ್​ಗಳಲ್ಲಿ ತಡರಾತ್ರಿಯವರೆಗೆ ಸಂಚರಿಸುವ ಬಗ್ಗೆಯೂ ದೂರು ಹೇಳಿಕೊಂಡರು.

ಬೈಕ್​ ಕಳವು
ವೈಟ್‌ಫೀಲ್ಡ್, ಕೆ.ಆರ್. ಪುರಂ ಪ್ರದೇಶಗಳಲ್ಲಿ ಬೈಕ್‌ ಕಳವು ವ್ಯಾಪಕವಾಗಿ ನಡೆಯುತ್ತಿದೆ. ಇಂಥ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಕಣ್ಗಾವಲು ಹೆಚ್ಚಿಸುವಂತೆ ಅಲ್ಲಿನ ನಿವಾಸಿಗಳು ಪೊಲೀಸರನ್ನು ಒತ್ತಾಯಿಸಿದರು.

ಇದನ್ನೂ ಓದಿ: ಬೆಂಗಳೂರಿಗರ ಅನುಕೂಲಕ್ಕಾಗಿ ಜನಸಂಪರ್ಕ ದಿನ: ಸಿಲಿಕಾನ್​ ಸಿಟಿ ಖಾಕಿ ಪಡೆಯ ಹೊಸ ಪ್ರಯತ್ನ