ಮುಂದಿನ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧಿಸಿ; ಸಿದ್ದರಾಮಯ್ಯಗೆ ಮನವಿ ನೀಡಿದ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ

ಜಿಲ್ಲೆಯ ಹಿತ ದೃಷ್ಟಿಯಿಂದ ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧಿಸುವಂತೆ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಮನವಿ ಮಾಡಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧಿಸಿ; ಸಿದ್ದರಾಮಯ್ಯಗೆ ಮನವಿ ನೀಡಿದ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ
ಶಾಸಕ ಎಸ್​.ಎನ್​.ನಾರಾಯಣಸ್ವಾಮಿ

Updated on: Mar 28, 2021 | 4:19 PM

ಕೋಲಾರ: ಜಿಲ್ಲೆಯ ಹಿತದೃಷ್ಟಿಯಿಂದ ಸಿದ್ದರಾಮಯ್ಯ ಅವರನ್ನು ಮುಂದಿನ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧೆ ಮಾಡಲು ಒತ್ತಾಯಿಸಿದ್ದೇವೆ ಎಂದು ಬಂಗಾರಪೇಟೆ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಹೇಳಿದರು.  ಕೋಲಾರ ಜಿಲ್ಲೆಯಿಂದ ಸ್ಪರ್ಧಿಸುವಂತೆ ಶಾಸಕ ರಮೇಶ್ ಕುಮಾರ್,ಎಂಎಲ್​ಸಿ ನಜೀರ್ ಅಹ್ಮದ್, ಮಾಲೂರು ಶಾಸಕ ನಂಜೇಗೌಡ ಎಲ್ಲರೂ ಕೂಡಿ ಮನವಿ ಮಾಡಿದ್ದೇವೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರ ಜಿಲ್ಲೆಗೆ ಕೆ.ಸಿ.ವ್ಯಾಲಿ ನೀರಾವರಿ ಯೋಜನೆ ಒದಗಿಸಿದ್ದಾರೆ.  ಹೀಗಾಗಿ, ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸಬೇಕು ಎಂದು ನಾವೆಲ್ಲರೂ ಕೂಡಿ ಒತ್ತಾಯಿಸಿದ್ದೇವೆ ಎಂದು ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ತಿಳಿಸಿದರು.

ಕೋಲಾರಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ
ಇಂದು ಕೋಲಾರ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಸಿಡಿ‌ ಲೇಡಿ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಉತ್ತರ ಕೊಟ್ಟಿದ್ದಾರೆ. ನನಗೂ ಅವರಿಗೂ ಸಂಬಂಧವಿಲ್ಲ ಎಂದು ಎಂದು ಹೇಳಿದ್ದಾರೆ. ಸಂತ್ರಸ್ತ‌ ಮಹಿಳೆ ಅಜ್ಞಾತ ಸ್ಥಳದಿಂದ ಹೊರಬಂದು ಉತ್ತರ‌ಕೊಡಬೇಕು. ಸಿಡಿ ಮಾರ್ಚ್​ 2ರಂದು ಬಿಡುಗಡೆ ಆಗಿದೆ. ಇದುವರೆಗೂ ಸಂತ್ರಸ್ತೆಯನ್ನು ಹುಡುಕಿಲ್ಲ. ಸಂತ್ರಸ್ತೆ ಹುಡುಗಿಗೆ ರಕ್ಷಣೆ ಕೊಡಬೇಕು. ಆಕೆ‌ ಭಯ ಬಿಟ್ಟು‌ ಹೊರಬಂದು ಹೇಳಿಕೆ ನೀಡಬೇಕು. ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಪ್ರಕರಣ ದಾಖಲಾಗಿದೆ. ಕಾನೂನಿನಲ್ಲಿ ಏನು ಅವಕಾಶ ಇದೆಯೋ ಅದರಂತೆ ಮಾಡಲಿ ಎಂದು ಹೇಳಿದರು.

ಹಿಂದುಳಿದ ಜಾತಿಗಳ ಒಕ್ಕೂಟದಿಂದ ಪ್ರತಿಭಟನೆ ವೇದಿಕೆಯಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ನಾನು ಸಿಎಂ ಆಗಿದ್ದಾಗ ಸಾಮಾಜಿಕ ಹಾಗೂ ಆರ್ಥಿಕ ಗಣತಿ ಮಾಡಿಸಿದ್ದೆ. ಬಳಿಕ ಸಮ್ಮಿಶ್ರ ಸರ್ಕಾರ ಬಂದ ಮೇಲೆ ಅದನ್ನ ಕೈ ಬಿಡಲಾಗಿದೆ. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸಿಕ್ಕಿರಲಿಲ್ಲ. ಹಾಗಾಗಿ 2005 ಮೇ ತಿಂಗಳಲ್ಲಿ ಇದನ್ನ ಚಾಲ್ತಿ ಮಾಡಿದ್ದೆ. ಬಳಿಕ ಕಾಂತರಾಜ ವರದಿ ಆಧರಿಸಿ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ 58 ಮಾನದಂಡಗಳೊಂದಿಗೆ ಗಣತಿ ಮಾಡಲಾಗಿದೆ. ವರದಿ ಸಿಕ್ಕಿರಲಿಲ್ಲ ಕುಮಾರಸ್ವಾಮಿ ಸಿಎಂ ಆಗಿದ್ದಾಗ ವರದಿ ಕೊಟ್ಟಾಗ ಪಡೆದಿರಲಿಲ್ಲ. ಬಿಜೆಪಿ ಸರ್ಕಾರ ಬಂದು 2 ವರ್ಷ‌ ಆಗಿದೆ ಆದ್ರೆ ಇದುವರೆಗೂ ಅದನ್ನ ಪಡೆದಿಲ್ಲ ಎಂದು ಹೇಳಿದ್ದಾರೆ.

ವರದಿ ಸಿಕ್ಕರೆ ಹಿಂದುಳಿದ ವರ್ಗಗಳಿಗೆ ಸೌಲಭ್ಯಗಳು ಸಿಗಲಿದೆ. ಬೆಂಗಳೂರು ನಗರ ಬಿಟ್ಟು ರಾಜ್ಯದಲ್ಲಿ ಎಲ್ಲೆಡೆ ಸರ್ವೆ ಆಗಿದೆ. ವರದಿ ತೆಗೆದುಕೊಂಡು ಜನರ ಮುಂದಿಡಬೇಕು ಆದ್ರೆ ಮಾಡಿಲ್ಲ. ಇನ್ನೂ ಸಾಕಷ್ಟು ಜನ ಮೀಸಲಾತಿ ಕೇಳುತ್ತಿದ್ದಾರೆ. ಮಿಸಲಾತಿ ಕೇಳುವುದಕ್ಕೆ ನಮ್ಮ ವಿರೋಧವಿಲ್ಲ ಆದ್ರೆ ಯಾರು ಶೋಷಣೆಗೆ ಒಳಗಾಗಿದ್ದಾರೆ ಅವರಿಗೆ ಮೀಸಲಾತಿ ಸಿಗಬೇಕು. ಕೇಂದ್ರ, ಹಲವು ರಾಜ್ಯದಲ್ಲಿ ಶಾಶ್ವತ ಹಿಂದುಳಿತ ವರ್ಗಗಳ ಅಯೋಗ ಜಾರಿಯಾಗಬೇಕು‌. ಸಂವಿಧಾನ ರೀತಿಯಲ್ಲಿ ಅರ್ಹರಿಗೆ ಮೀಸಲಾತಿ ಸಿಗಬೇಕು ಎಂದು ಹೇಳಿದ್ದಾರೆ.

57 ಇಂಚಿನ ಮೋದಿ ಎದೆ ಇದ್ದರೆ ಸಾಲದು. ಅದು ಬಾಡಿ ಬಿಡ್ಡರ್ಸ್​ ಪೈಲ್ವಾನ್​ಗಳಿಗೂ ಇರುತ್ತೆ. ಅದರಲ್ಲಿ ಬಡವರ ಪರವಾಗಿ ಸ್ಪಂದಿಸುವ ಮನಸ್ಸಿರಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ನಿಮಗೇನು ಕೋಪ ಬರೋದಿಲ್ವಾ, ಮನೆಯಲ್ಲಿ ಮಾತ್ರ ಕೋಪ ಮಾಡಿಕೊಂಡರೆ ಆಗಲ್ಲ.
ಬೀದಿಗೆ ಬರಬೇಕು ಅನ್ಯಾಯವನ್ನು ಪ್ರತಿಭಟಿಸಬೇಕು. ಅನ್ಯಾಯದ ವಿರುದ್ಧ ಹೋರಾಡಬೇಕು ಎಂದು ಕಾರ್ಯಕರ್ತರನ್ನು ಹುರಿದುಂಬಿಸಿ ಸಿದ್ದರಾಮಯ್ಯ ಮಾತನಾಡಿದ್ದಾರೆ. ಬಿಜೆಪಿ ಸರ್ಕಾರ ತಾರತಮ್ಯ ಮಾಡುತ್ತಿದೆ. ಬಿಜೆಪಿ ಸರ್ಕಾರ ಬಡವರು, ಹಿಂದುಳಿದವರ, ಅಲ್ಪಸಂಖ್ಯಾತರ ವಿರುದ್ಧವಾದ ಸರ್ಕಾರ. ಇವರ ವಿರುದ್ದ ಹೋರಾಟ ಮಾಡಬೇಕು ಎಂದು ಸಿದ್ದರಾಮಯ್ಯ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಇದನ್ನೂ ಓದಿ: ನೆತ್ತಿ ಸುಡುತ್ತಿದ್ದಾನೆ ಸೂರ್ಯ.. ಕೋಲಾರದಲ್ಲಿ ಜೋರಾದ ತಂಪು ಪಾನೀಯ ವ್ಯಾಪಾರ

ಕೋಲಾರದಲ್ಲಿ ಗ್ರಾಮ ಪಂಚಾಯತಿ ಸದಸ್ಯರಿಗೆ ಅಭಿನಂದನೆ ಕಾರ್ಯಕ್ರಮ; ಬಿರಿಯಾನಿಗಾಗಿ ಮುಗಿಬಿದ್ದ ಕಾಂಗ್ರೆಸ್ ಕಾರ್ಯಕರ್ತರು

Published On - 3:45 pm, Sun, 28 March 21