ಹಲಾಲ್​ ಪ್ರಮಾಣಪತ್ರ ನೀಡುವ ಸಂಸ್ಥೆಗಳಿಗೆ ನಿರ್ಬಂಧ ಹೇರಿ: ಕೇಂದ್ರ ಸಚಿವರಿಗೆ ಬಸನಗೌಡ ಪಾಟೀಲ್ ಯತ್ನಾಳ್ ಪತ್ರ

| Updated By: Ganapathi Sharma

Updated on: Nov 22, 2023 | 5:31 PM

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು ಹಲಾಲ್ ಪ್ರಮಾಣಪತ್ರದದೊಂದಿಗೆ ಆಹಾರ ಉತ್ಪನ್ನಗಳ ಉತ್ಪಾದನೆ, ಸಂಗ್ರಹಣೆ, ವಿತರಣೆ ಮತ್ತು ಮಾರಾಟವನ್ನು ತಕ್ಷಣವೇ ಜಾರಿಗೆ ಬರುವಂತೆ ಶನಿವಾರ ನಿಷೇಧಿಸಿತ್ತು. ಅದರ ಬೆನ್ನಲ್ಲೇ ಇದೀಗ ಹಲಾಲ್​ ಪ್ರಮಾಣಪತ್ರ ನೀಡುವ ಸಂಸ್ಥೆಗಳಿಗೆ ನಿರ್ಬಂಧ ಹೇರಬೇಕು ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಹಲಾಲ್​ ಪ್ರಮಾಣಪತ್ರ ನೀಡುವ ಸಂಸ್ಥೆಗಳಿಗೆ ನಿರ್ಬಂಧ ಹೇರಿ: ಕೇಂದ್ರ ಸಚಿವರಿಗೆ ಬಸನಗೌಡ ಪಾಟೀಲ್ ಯತ್ನಾಳ್ ಪತ್ರ
ಬಸನಗೌಡ ಪಾಟೀಲ್ ಯತ್ನಾಳ್
Follow us on

ಬೆಂಗಳೂರು, ನವೆಂಬರ್ 22: ದೇಶದಲ್ಲಿ ಹಲಾಲ್​ ಪ್ರಮಾಣಪತ್ರ (Halal Certification) ನೀಡುವ ಸಂಸ್ಥೆಗಳಿಗೆ ನಿರ್ಬಂಧ ಹೇರಬೇಕು ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ವಿಚಾರವಾಗಿ ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್​ಗೆ ಯತ್ನಾಳ್ ಪತ್ರ ಬರೆದು ಮನವಿ ಮಾಡಿದ್ದಾರೆ. ಹಲಾಲ್ ಪ್ರಮಾಣಪತ್ರದ ಜತೆ ಜೊತೆ ಮಾರಾಟ ಮಾಡುವ ಉತ್ಪನ್ನಗಳನ್ನು ನಿಷೇಧಿಸಿದ ಬೆನ್ನಲ್ಲೇ ಯತ್ನಾಳ್ ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದಾರೆ.

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು ಹಲಾಲ್ ಪ್ರಮಾಣಪತ್ರದದೊಂದಿಗೆ ಆಹಾರ ಉತ್ಪನ್ನಗಳ ಉತ್ಪಾದನೆ, ಸಂಗ್ರಹಣೆ, ವಿತರಣೆ ಮತ್ತು ಮಾರಾಟವನ್ನು ತಕ್ಷಣವೇ ಜಾರಿಗೆ ಬರುವಂತೆ ಶನಿವಾರ ನಿಷೇಧಿಸಿತ್ತು. ಆದರೆ, ರಫ್ತಿಗೆ ತಯಾರಿಸಿದ ಉತ್ಪನ್ನಗಳಿಗೆ ಮಾತ್ರ ವಿನಾಯಿತಿ ನೀಡಿತ್ತು. ಇದೀಗ ಉತ್ತರ ಪ್ರದೇಶದಲ್ಲಿ ಹಲಾಲ್ ಪ್ರಮಾಣೀಕೃತ ಔಷಧಗಳು, ವೈದ್ಯಕೀಯ ಸಾಧನಗಳು ಮತ್ತು ಸೌಂದರ್ಯವರ್ಧಕಗಳ ಉತ್ಪಾದನೆ, ಸಂಗ್ರಹಣೆ, ವಿತರಣೆ, ಖರೀದಿ ಮತ್ತು ಮಾರಾಟ ನಿಷೇಧಿಸಲ್ಪಟ್ಟಿದೆ. ಈ ಚಟುವಟಿಕೆಗಳಲ್ಲಿ ತೊಡಗಿರುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಶನಿವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಸರ್ಕಾರ ತಿಳಿಸಿತ್ತು.

ಕರ್ನಾಟಕದಲ್ಲಿ ಸಹ ಕಳೆದ ವರ್ಷ ಹಲಾಲ್ ಮಾಂಸದ ವಿಚಾರ ಬಹಳಷ್ಟು ಚರ್ಚೆಗೆ ಗ್ರಾಸವಾಗಿತ್ತು. ನಂತರ ರಾಜಕೀಯ ಆಯಾಮವನ್ನೂ ಪಡೆದಿತ್ತು. ಹಲಾಲ್ ನಿಷೇಧಿಸಬೇಕೆಂಬ ಕೂಗು ಕೇಳಿಬಂದಿತ್ತು. ಹಲಾಲ್ ಮಾಂಸ ಬಹಿಷ್ಕಾರಕ್ಕೆ ಸಂಬಂಧಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಿಂದೂ ಪರ ಸಂಘಟನೆಗಳು ಅಭಿಯಾನ ನಡೆಸಿದ್ದವು.

ಇಲಾಖೆಯಲ್ಲಿರುವ ಇಲಿ, ಹೆಗ್ಗಣಗಳ ಓಡಿಸಿ: ಜಾರ್ಜ್​​ಗೆ ಕುಟುಕಿದ ಯತ್ನಾಳ್

ಬೆಂಗಳೂರಿನಲ್ಲಿ ವಿದ್ಯುತ್ ತಂತಿ ತಗುಲಿ ತಾಯಿ ಹಾಗೂ ಮಗು ಮೃತಪಟ್ಟ ವಿಚಾರವಾಗಿ ಇಂಧನ ಸಚಿವ ಕೆಜೆ ಜಾರ್ಜ್ ನೀಡಿರುವ ಹೇಳಿಕೆಗೆ ಯತ್ನಾಳ್ ತಿರುಗೇಟು ನೀಡಿದ್ದಾರೆ. ತಾಯಿ, ಮಗು ಸಾವಿಗೆ ಇಲಿ ಕಾರಣ ಎಂದು ಜಾರ್ಜ್ ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿರುವ ಯತ್ನಾಳ್, ನಿಮ್ಮ ಇಲಾಖೆಯಲ್ಲಿರುವ ಹೆಗ್ಗಣಗಳು, ಇಲಿಗಳನ್ನು ಮೊದಲು ಓಡಿಸಿದರೆ, ಅಮಾಯಕ ನಾಗರೀಕರ ಜೀವವನ್ನು ರಕ್ಷಿಸಬಹುದು. ಅರ್ಥಿಂಗ್ (Earthing) ಇಲ್ಲ ಅಂತ ಹೇಳುವ ಅಧಿಕಾರಿಗಳು ಯಾಕೆ ಅಲ್ಲಿ ಅರ್ಥಿಂಗ್ ಮಾಡಿಸರಿಲಿಲ್ಲ? ಮುಖ್ಯ ಜಾಗಗಳನ್ನು ಗುರುತಿಸಿ ಅಲ್ಲಿ ಖಾಸಗಿ ನಿರ್ವಹಣೆ ಮಾಡದೆ ಇರುವುದು ಯಾರ ಅಚಾತುರ್ಯ ಜಾರ್ಜ್ ಅವರೇ? ನಿಮ್ಮ ಇಲಾಖೆಯ ಬೇಜವಾಬ್ದಾರಿತನ, ಸಂವಹನ ಕೊರತೆಯಿಂದ ಎರಡು ಅಮಾಯಕ ಜೀವಗಳು ಹೋಗಿವೆ ಎಂದು ನಿಮಗೆ ತಿಳಿದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಕೇರಳದ ರೀತಿ ರಾಜ್ಯದಲ್ಲೂ ಮುಸ್ಲಿಮರಿಗೆ ಪ್ರಚೋದಿಸುವ ಕೆಲಸ ಸಿದ್ದರಾಮಯ್ಯ ಸರ್ಕಾರ ಮಾಡ್ತಿದೆ; ಯತ್ನಾಳ್​

ನಿಮ್ಮ (ಜಾರ್ಜ್) ಹೇಳಿಕೆಗಳು ಪತ್ರಿಕೆಗಳಿಗೆ, ಮಾಧ್ಯಮಕ್ಕೆ ಸೀಮಿತವಾಗಬಾರದು. ಹವಾನಿಯಂತ್ರಿತ ಕೊಠಡಿಯಲ್ಲಿ ಉಡಾಫೆ ಮಾತನಾಡುವ ಅಧಿಕಾರಿಗಳ ‘ಶಾಕ್ ಟ್ರೀಟ್ಮೆಂಟ್’ ಕೊಡಬೇಕಾದದ್ದು ನಿಮ್ಮ ಕರ್ತವ್ಯ. ಕೂಡಲೇ ರಾಜ್ಯದ ಎಲ್ಲ ಕಡೆ ಈ ರೀತಿ ಇರುವ ಕೇಬಲ್ ಗಳನ್ನೂ ಕಿತ್ತು ಹಾಕಿ. ಒಎಫ್​ಸಿ ಸಂಸ್ಥೆಯವರು ಕಾನೂನು ಉಲ್ಲಂಘಿಸಿ ವೈರಿಂಗ್ ಮಾಡಿದ್ದಾರೆ. ಮುಲಾಜಿಲ್ಲದೆ ಕಿತ್ತು ಬಿಸಾಕಿ. ಜೀವಕ್ಕಿಂತ ಕೇಬಲ್ ಅಳವಡಿಕೆ ಮುಖ್ಯವಲ್ಲ ಎಂದು ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ