ಬೆಂಗಳೂರು ಟ್ರಾಫಿಕ್ ಜಾಮ್ ನಿವಾರಣೆಗೆ ರಸ್ತೆ ಅಗಲೀಕರಣ ತ್ವರಿತಗೊಳಿಸುವಂತೆ ಡಿಕೆ ಶಿವಕುಮಾರ್ಗೆ ಲಹರ್ ಸಿಂಗ್ ಪತ್ರ
ಬೆಂಗಳೂರು ನಗರದಲ್ಲಿ ಟ್ರಾಫಿಕ್ ಜಾಮ್ ನಿವಾರಣೆಗೆ ರಸ್ತೆ ಅಗಲೀಕರಣ ಕಾಮಗಾರಿಯನ್ನು ತ್ವರಿತಗೊಳಿಸುವಂತೆ ಸಂಸದ ಲಹರ್ ಸಿಂಗ್ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಜೊತೆಗೆ ಟ್ರಾಫಿಕ್ ಜಂಕ್ಷನ್‌ಗಳ ಸುಂದರೀಕರಣಕ್ಕಾಗಿ ಸಂಸದರ ನಿಧಿಯ ಅನುದಾನ ನೀಡುವುದಾಗಿಯೂ ತಿಳಿಸಿದ್ದಾರೆ.
ಬೆಂಗಳೂರು, ನ.22: ಬೆಂಗಳೂರಿನಲ್ಲಿ ಬಾಕಿ ಇರುವ ರಸ್ತೆ ಅಗಲೀಕರಣ ಕಾಮಗಾರಿಯನ್ನು ತ್ವರಿತಗೊಳಿಸಿ ಪ್ರಯಾಣಿಕರು ಹಾಗೂ ನಿವಾಸಿಗಳನ್ನು ಸಂಚಾರ ದಟ್ಟಣೆಯಿಂದ ಪಾರು ಮಾಡಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್(DK Shivakumar) ಅವರಿಗೆ ಬಿಜೆಪಿ ಸಂಸದ ಲಹರ್ ಸಿಂಗ್(Lahar Singh) ಒತ್ತಾಯಿಸಿದ್ದು, ಜೊತೆಗೆ ಈ ಯೋಜನೆಗಳು ಬ್ರ್ಯಾಂಡ್ ಬೆಂಗಳೂರಿನ ಗುರಿಗೆ ಅನುಗುಣವಾಗಿವೆ. ಹೀಗಾಗಿ ಮೇಖ್ರಿ ವೃತ್ತ ಹಾಗೂ ಕಾವೇರಿ ವೃತ್ತದ ಸುಂದರೀಕರಣಕ್ಕೆ ಸಂಸದರ ನಿಧಿಯಿಂದ ಅನುದಾನ ನೀಡುವುದಾಗಿ ತಿಳಿಸಿದ್ದಾರೆ.
ಬೆಂಗಳೂರಿನ ಹೃದಯ ಭಾಗದಲ್ಲಿರುವ ಪ್ರಮುಖ ರಸ್ತೆಗಳಲ್ಲಿ ಸಂಚರಿಸುವ ಪ್ರಯಾಣಿಕರ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದಿರುವ ಬಿಜೆಪಿ ಸಂಸದ ಲಹರ್ ಸಿಂಗ್, ಬೆಂಗಳೂರಿನಲ್ಲಿ ಮತ್ತು ವಿಶೇಷವಾಗಿ ಮೇಖ್ರಿ ವೃತ್ತದಿಂದ ನಗರಕ್ಕೆ ಮತ್ತು ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಕ್ಕೆ ಪ್ರಯಾಣಿಸುವವರ ಅನುಕೂಲಕ್ಕಾಗಿ ರಸ್ತೆ ಅಗಲೀಕರಣ ಯೋಜನೆಗಳನ್ನು ತ್ವರಿತಗೊಳಿಸುವಂತೆ ಒತ್ತಾಯಿಸಿದ್ದಾರೆ.
In my letter to Dy CM Shri @DKShivakumar, I have highlighted the plight of residents and commuters in Bengaluru, particularly in two crucial stretches – between Mekhri Circle to city and to Cantonment Station which suffer from daily traffic jams. 1/2@CMofKarnataka pic.twitter.com/MWXT3WqWGl
— Lahar Singh Siroya (@LaharSingh_MP) November 22, 2023
ಪ್ರತಿದಿನ ಟ್ರಾಫಿಕ್ ಜಾಮ್‌ನಿಂದಾಗಿ ಸಮಸ್ಯೆಗೊಳಗಾಗಿರುವ ಪ್ರಯಾಣಿಕರ ಹಿತದೃಷ್ಟಿಯಿಂದ ಈ ಕುರಿತು ಕ್ರಮ ವಹಿಸುವಂತೆ ಒತ್ತಾಯಿಸಿ ಲಹರ್ ಸಿಂಗ್ ಅವರು ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವರಾದ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ:ಬ್ರ್ಯಾಂಡ್ ಬೆಂಗಳೂರು: ನಾಗರಿಕರ ಸಮಸ್ಯೆ ಆಲಿಸಲು “ಸಹಾಯ ಹಸ್ತ” ವೆಬ್ಸೈಟ್
“ಹೆಬ್ಬಾಳ ಕಡೆಯಿಂದ ಮೇಖ್ರಿ ವೃತ್ತದ ಕಡೆಗೆ ಬರುವ ರಸ್ತೆ ವಿಸ್ತಾರವಾಗಿದೆ. ಆದರೆ ಮೇಖ್ರಿ ವೃತ್ತದ ಅಂಡರ್‌ಪಾಸ್ ದಾಟಿ ನಗರದ ಕಡೆಗೆ ಬರುವಾಗ 6 ಪಥಗಳಿದ್ದ ರಸ್ತೆ 4 ಪಥಗಳಾಗಿ ಕಿರಿದಾಗುತ್ತದೆ. ಈ ಜಾಗದಲ್ಲಿ ಉಂಟಾಗುವ ಅಡಚಣೆಯು ನಿರಂತರ ಟ್ರಾಫಿಕ್ ಜಾಮ್‌ಗೆ ಕಾರಣವಾಗಿ ವಾಹನಗಳು ದೂರದವರೆಗೆ ಸರತಿಯಲ್ಲಿ ನಿಲ್ಲುವಂತಾಗಿದೆ” ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
“ಹಾಗೆಯೇ, ಮೇಖ್ರಿ ವೃತ್ತದಿಂದ ಕಂಟೋನ್ಮೆಂಟ್ ನಿಲ್ದಾಣದವರೆಗೆ ಹೆಚ್ಚು ಸಂಚಾರ ದಟ್ಟಣೆ ಉಂಟಾಗಿ ಬಳ್ಳಾರಿ ರಸ್ತೆಯಲ್ಲಿ ಸಮಸ್ಯೆ ಬಿಗಡಾಯಿಸುತ್ತದೆ” ಎಂದು ಲಹರ್ ಸಿಂಗ್ ಪತ್ರದಲ್ಲಿ ತಿಳಿಸಿದ್ದಾರೆ. ಈ ಭಾಗದಲ್ಲಿ ರಸ್ತೆ ಅಗಲೀಕರಣ ಯೋಜನೆಗಳಿಗೆ ಬಿಬಿಎಂಪಿಯಿಂದ ಪ್ರಸ್ತಾವನೆ ರೂಪಿಸಿದ್ದರೂ ಮತ್ತು ಸುಪ್ರೀಂ ಕೋರ್ಟ್‌ನಿಂದ ಅನುಮೋದನೆ ಪಡೆದಿದ್ದರೂ ಕಾಮಗಾರಿ ವಿಳಂಬವಾಗುತ್ತಿದೆ ಎಂದು ಅವರು ಗಮನ ಸೆಳೆದಿದ್ದಾರೆ.
ರಸ್ತೆ ಅಗಲೀಕರಣ ಕಾಮಗಾರಿಯು ಡಿ.ಕೆ.ಶಿವಕುಮಾರ್ ಅವರ ಬ್ರ್ಯಾಂಡ್ ಬೆಂಗಳೂರಿನ ಗುರಿಗೆ ಪೂರಕವಾಗಿದೆ ಎಂದಿರುವ ಸಂಸದ ಲಹರ್ ಸಿಂಗ್, ರಸ್ತೆ ಅಗಲೀಕರಣ ಕಾಮಗಾರಿ ಜೊತೆಗೆ ಮೇಖ್ರಿ ವೃತ್ತ ಹಾಗೂ ಕಾವೇರಿ ವೃತ್ತದ ಸುಂದರೀಕರಣ ಕಾಮಗಾರಿ ನಡೆದರೆ, ಅದಕ್ಕೆ ತಮ್ಮ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಅನುದಾನ ನೀಡುವುದಾಗಿ ತಿಳಿಸಿದ್ದಾರೆ. ರಾಜ್ಯಸಭಾ ಸಂಸದರ ಈ ಮನವಿಯು ರಸ್ತೆ ವಿಸ್ತರಣೆ ಯೋಜನೆಗಳಿಗೆ ಸರ್ಕಾರ ಕೂಡಲೇ ಗಮನ ಹರಿಸುವಂತೆ ಕರೆ ನೀಡಿದೆ. ಸಂಚಾರ ದಟ್ಟಣೆಯನ್ನು ನಿವಾರಿಸುವಲ್ಲಿ ಮತ್ತು ಬೆಂಗಳೂರಿನ ನಿವಾಸಿಗಳಿಗೆ ಸುಲಲಿತವಾದ ಪ್ರಯಾಣದ ಅನುಭವ ದೊರಕಿಸಿಕೊಡುವ ಬಗ್ಗೆ ಈ ಪತ್ರವನ್ನು ಪ್ರಸ್ತಾಪಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:07 pm, Wed, 22 November 23