ಡಿಕೆ ಶಿವಕುಮಾರ್​ ವಿರುದ್ಧ ಯತ್ನಾಳ್ ರಿಟ್ ಅರ್ಜಿ: ಜ. 5ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್

| Updated By: ಗಂಗಾಧರ​ ಬ. ಸಾಬೋಜಿ

Updated on: Dec 15, 2023 | 9:26 PM

ಡಿ.ಕೆ.ಶಿವಕುಮಾರ್ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಕೇಸ್​ಗೆ ಸಂಬಂಧಿಸಿದಂತೆ ಸಿಬಿಐಗೆ ನೀಡಿದ್ದ ಅನುಮತಿಯನ್ನು ಹಿಂಪಡೆದಿರುವ ಸಚಿವ ಸಂಪುಟದ ನಿರ್ಧಾರವನ್ನು ಪ್ರಶ್ನಿಸಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಿಚಾರಣೆ ಮಾಡಿರುವ ಕರ್ನಾಟಕ ಹೈಕೋರ್ಟ್‌ ಪ್ರಕರಣದ ವಿಚಾರಣೆಯನ್ನು 2024 ಜನವರಿ 5ಕ್ಕೆ ಮುಂದೂಡಿದೆ. 

ಡಿಕೆ ಶಿವಕುಮಾರ್​ ವಿರುದ್ಧ ಯತ್ನಾಳ್ ರಿಟ್ ಅರ್ಜಿ: ಜ. 5ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್
ಬಸನಗೌಡ ಪಾಟೀಲ್‌ ಯತ್ನಾಳ್, ಡಿ.ಕೆ.ಶಿವಕುಮಾರ್
Follow us on

ಬೆಂಗಳೂರು, ಡಿಸೆಂಬರ್​ 15: ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಕೇಸ್​ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಒಪ್ಪಿಗೆ ಹಿಂಪಡೆದಿರುವ ಸರ್ಕಾರದ ಕ್ರಮ ಪ್ರಶ್ನಿಸಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal)​ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಇಂದು ಕರ್ನಾಟಕ ಹೈಕೋರ್ಟ್‌ ವಿಚಾರಣೆ ನಡೆಸಿದೆ. ನ್ಯಾಯಾಲಯವು ರಾಜ್ಯ ಸರ್ಕಾರದಿಂದ ಆಕ್ಷೇಪಣೆಗಳನ್ನು ಕೋರಿದ್ದು, ಪ್ರಕರಣದ ವಿಚಾರಣೆಯನ್ನು 2024 ಜನವರಿ 5ಕ್ಕೆ ಮುಂದೂಡಿದೆ.

ಸರ್ಕಾರದ ಕ್ರಮದಿಂದ ನೀವು ಹೇಗೆ ಬಾದಿತರಾಗುತ್ತೀರಾ? ನಿಮ್ಮ ಯಾವ ಹಕ್ಕು ನಷ್ಟವಾಗಿದೆ ಎಂದು ಅರ್ಜಿ ಸಲ್ಲಿಸಿದ್ದೀರಾ. ನೀವು ಪಿಐಎಲ್‌ ಸಲ್ಲಿಸದೇ ರಿಟ್ ಸಲ್ಲಿಸಿರುವುದೇಕೆ ಎಂದು ಶಾಸಕ ಯತ್ನಾಳ್ ಪರ ವಕೀಲರಿಗೆ ಹೈಕೋರ್ಟ್ ನ್ಯಾ.ಎಂ.ನಾಗಪ್ರಸನ್ನ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಡಿಕೆ ಶಿವಕುಮಾರ್ ವಿರುದ್ಧದ ತನಿಖೆ ವಾಪಸ್: ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಯತ್ನಾಳ್

ಹೈಕೋರ್ಟ್ ವಿಭಾಗೀಯ ಪೀಠ ಶಾಸಕ ಯತ್ನಾಳ್ ವಾದ ಆಲಿಸಿತ್ತು. ಕ್ರಿಮಿನಲ್ ಪ್ರಕರಣವನ್ನು ಯಾರಾದರೂ ದಾಖಲಿಸಬಹುದೆಂಬ ತೀರ್ಪಿದೆ. ಸುಪ್ರೀಂಕೋರ್ಟ್ ತೀರ್ಪು ಉಲ್ಲೇಖಿಸಿ ಯತ್ನಾಳ್ ಪರ ವೆಂಕಟೇಶ್ ದಳವಾಯಿ ವಾದ ಮಂಡಿಸಿದ್ದಾರೆ.

ಸರ್ಕಾರದ ಪರ ವಾದಮಂಡನೆಗೆ ಕಾಲಾವಕಾಶ ಕೋರಿಕೆ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಮನವಿ ಸಲ್ಲಿಸಿದ್ದಾರೆ. ಯತ್ನಾಳ್ ಅರ್ಜಿ ವಿಚಾರಣೆಗೆ ಯೋಗ್ಯವೇ ಎಂದು ಮೊದಲು ತೀರ್ಮಾನ ಮಾಡಿ. ನಂತರ ಸರ್ಕಾರದ ಕ್ರಮದ ಕಾನೂನುಬದ್ಧತೆ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ವಿಚಾರಣೆಯನ್ನು 2024ರ ಜನವರಿ 5ಕ್ಕೆ ಹೈಕೋರ್ಟ್ ಮುಂದೂಡಿದೆ.

ಇದನ್ನೂ ಓದಿ: ಡಿಕೆ ಶಿವಕುಮಾರ್​ಗೆ ತಾತ್ಕಾಲಿಕ ರಿಲೀಫ್: ಸಿಬಿಐ ನಡೆ ನೋಡಿಕೊಂಡು ಮುಂದಿನ ನಿರ್ಧಾರ ಮಾಡುತ್ತೇನೆ ಎಂದ ಯತ್ನಾಳ್

ನವೆಂಬರ್ 23 ರಂದು, ಕರ್ನಾಟಕ ಕ್ಯಾಬಿನೆಟ್​ ಆದಾಯ ಮೀರಿ ಆಸ್ತಿ ಗಳಿಕೆ ಕೇಸ್​ದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ತನಿಖೆ ನಡೆಸಲು ಸಿಬಿಐಗೆ ನೀಡಿದ್ದ ಅನುಮತಿಯನ್ನು ಹಿಂಪಡೆಯಲು ನಿರ್ಧರಿಸಿತ್ತು. ಹಿಂದಿನ ಬಿಜೆಪಿ ಸರ್ಕಾರವು ಈ ನಿರ್ಧಾರವನ್ನು ತೆಗೆದುಕೊಂಡಿರಲಿಲ್ಲ.

ಸಂಪುಟದ ನಿರ್ಧಾರದ ನಂತರ ವಿಭಾಗೀಯ ಪೀಠದಲ್ಲಿ ಏಕ ಪೀಠದ ತೀರ್ಪನ್ನು ಪ್ರಶ್ನಿಸಿದ ಶಿವಕುಮಾರ್ ತಮ್ಮ ಮನವಿಯನ್ನು ಹಿಂಪಡೆದಿದ್ದರು. ಸಿಬಿಐ ತನಿಖೆಗೆ ಅನುಮತಿ ನೀಡಿರುವ ಸರ್ಕಾರದ ಆದೇಶವನ್ನು ರದ್ದುಗೊಳಿಸುವಂತೆ ಡಿಸಿಎಂ ಡಿಕೆ ಶಿವಕುಮಾರ್ ಸಲ್ಲಿಸಿದ್ದ ಮನವಿಯನ್ನು ಏಕಾಂಗಿ ಪೀಠ ತಿರಸ್ಕರಿಸಿತ್ತು. ಕಳೆದ ವಾರ ಯತ್ನಾಳ್ ಅವರು ಕ್ಯಾಬಿನೆಟ್ ನಿರ್ಧಾರವನ್ನು ಪ್ರಶ್ನಿಸಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು. ಸದ್ಯ ಈ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ ಜ. 5 ಕ್ಕೆ ಮುಂದೂಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.