ಡಿಕೆ ಶಿವಕುಮಾರ್​ಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್, ಮೇಲ್ಮನವಿ ವಾಪಸ್​ಗೆ ಅನುಮತಿ

ಡಿ.ಕೆ.ಶಿವಕುಮಾರ್ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಮೇಲ್ಮನವಿ ಹಿಂಪಡೆಯಲು ಅರ್ಜಿದಾರರಿಗೆ ಅವಕಾಶವಿದೆ ಎಂದು ಹೇಳಿದ ಹೈಕೋರ್ಟ್, ಗುರುದೇವ್ ಸಿಂಗ್ ವರ್ಸಸ್ ಪಂಜಾಬ್ ಸರ್ಕಾರ ಕೇಸ್ ಉಲ್ಲೇಖಿಸಿತು. ಅಲ್ಲದೆ, ಸಿಬಿಐ, ಯತ್ನಾಳ್ ವಾದವನ್ನು ನಾವು ಒಪ್ಪಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.

ಡಿಕೆ ಶಿವಕುಮಾರ್​ಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್, ಮೇಲ್ಮನವಿ ವಾಪಸ್​ಗೆ ಅನುಮತಿ
ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಡಿಕೆ ಶಿವಕುಮಾರ್​ಗೆ ತಾತ್ಕಾಲಿಕ ರಿಲೀಫ್ ನೀಡಿದ ಹೈಕೋರ್ಟ್
Follow us
Ramesha M
| Updated By: Rakesh Nayak Manchi

Updated on:Nov 29, 2023 | 4:08 PM

ಬೆಂಗಳೂರು, ನ.29: ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಬಿಜೆಪಿ ಸರ್ಕಾರ ಸಿಬಿಐ ತನಿಖೆಗೆ ನೀಡಿದ ಅನುಮತಿಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಾಪಸ್ ಪಡೆಯಲು ಡಿಕೆ ಶಿವಕುಮಾರ್ (DK Shivakumar)​ ಅವರಿಗೆ ಹೈಕೋರ್ಟ್ (High Court) ಒಪ್ಪಿಗೆ ಸೂಚಿಸಿದೆ. ಆ ಮೂಲಕ ಡಿಕೆ ಶಿವಕುಮಾರ್​ಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.

ಸಿಬಿಐ ತನಿಖೆಗೆ ಅನುಮತಿ ನೀಡಿ ಹೊರಡಿಸಿದ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಡಿಕೆ ಶಿವಕುಮಾರ್ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಏಕ ಸದಸ್ಯ ಪೀಠ, ಅರ್ಜಿ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಡಿಕೆ ಶಿವಕುಮಾರ್, ಮೇಲ್ಮನವಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಸಿಜೆ ಪ್ರಸನ್ನ ಬಿ ವರಾಳೆ ಮತ್ತು ನ್ಯಾ.ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ, ಮೇಲ್ಮನವಿ ಹಿಂಪಡೆಯಲು ಅರ್ಜಿದಾರರಿಗೆ ಅವಕಾಶವಿದೆ ಎಂದು ಹೇಳಿ ಗುರುದೇವ್ ಸಿಂಗ್ ಮತ್ತು ಪಂಜಾಬ್ ಸರ್ಕಾರದ ಪ್ರಕರಣವನ್ನು ಉಲ್ಲೇಖಿಸಿತು. ಪ್ರಕರಣದ ಅರ್ಹತೆ ಬಗ್ಗೆ ಯಾವುದೇ ತೀರ್ಮಾನ ನೀಡುತ್ತಿಲ್ಲ. ಸಂಪುಟದ ನಿರ್ಧಾರವನ್ನು ಸಿಬಿಐ ಸೇರಿದಂತೆ ಯಾರು ಬೇಕಾದರೂ ಪ್ರಶ್ನಿಸಬಹುದು. ನಂತರ ಅರ್ಜಿಯನ್ನು ಪರಿಗಣಿಸಿ ಮುಂದುವರೆಯಬೇಕಾ ಬೇಡವಾ ಅಂತ ನಿರ್ಧಾರ ಮಾಡಲಾಗುತ್ತದೆ ಎಂದು ಪೀಠ ಹೇಳಿದೆ.

ಇದನ್ನೂ ಓದಿ: ಹೈಕೋರ್ಟ್ ರಿಲೀಫ್: ವಕೀಲರು ಮಾಹಿತಿ ನೀಡದ ಹೊರತು ಯಾವುದೇ ಪ್ರತಿಕ್ರಿಯೆ ನೀಡೋದಿಲ್ಲ: ಡಿಕೆ ಶಿವಕುಮಾರ್

ಸರ್ಕಾರದ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ಹಿಂಪಡೆದಿರುವ ರಾಜ್ಯ ಸರ್ಕಾರದ ಅಧಿಸೂಚನೆಯನ್ನು ನ್ಯಾಯಪೀಠಕ್ಕೆ ಮೆಮೊ ಮೂಲಕ ಸಲ್ಲಿಸಿದರು. ಅಲ್ಲದೆ, ರಿಟ್ ಅರ್ಜಿ ಮತ್ತು ಮೇಲ್ಮನವಿಯನ್ನು ಹಿಂಪಡೆಯುವುದಾಗಿ ಡಿಕೆ ಶಿವಕುಮಾರ್ ಪರ ವಕೀಲರು ಲಿಖಿತ ಮೆಮೊ ಸಲ್ಲಿಸಿದರು. ಇದನ್ನು ಮಾನ್ಯ ಮಾಡಿದ ಪೀಠ, ಮೇಲ್ಮನವಿ ಹಿಂಪಡೆಯುವುದಕ್ಕೆ ಅನುಮತಿ ನೀಡಿತು.

ಪ್ರಕರಣ ಸಂಬಂಧ ಸಿಬಿಐ ತನಿಖೆಗೆ ತಡೆ ಕೋರಿ ಡಿಕೆ ಶಿವಕುಮಾರ್​ ಸಲ್ಲಿಸಿದ್ದ ಅರ್ಜಿಗೆ ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ ಸಲ್ಲಿಸಿ ತಮ್ಮನ್ನು ಪ್ರತಿವಾದಿಯನ್ನಾಗಿ ಮಾಡುವಂತೆ ಕೋರಿದ್ದರು. ಇದರ ವಿಚಾರಣೆಯೂ ಇಂದು ನಡೆಯಿತು. ಆದರೆ, ಡಿಕೆ ಶಿವಕುಮಾರ್ ಮೇಲ್ಮನವಿಯನ್ನು ವಾಪಸ್ ಪಡೆದಿರುವ ಹಿನ್ನೆಲೆ ಯತ್ನಾಳ ಸಲ್ಲಿಸಿದ್ದ ಆಕ್ಷೇಪ ಅರ್ಜಿ ಅನೂರ್ಜಿತಗೊಂಡಿತು.

ಯತ್ನಾಳ್ ಈ ಕೇಸಿನಲ್ಲಿ ಪ್ರತಿವಾದಿಯಾಗಲು ಬಯಸಿಲ್ಲ. ಮಾಧ್ಯಮ ವರದಿ ಆಧರಿಸಿ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಸರ್ಕಾರ ಒಪ್ಪಿಗೆ ನೀಡಿದ ನಂತರ ಎಫ್‌ಐಆರ್ ದಾಖಲಾಗಿದೆ. ತನಿಖೆಯ ಅಂತಿಮ ಹಂತದಲ್ಲಿ ಸರ್ಕಾರ ಒಪ್ಪಿಗೆ ಹಿಂಪಡೆದಿದೆ. 1994 ರ ಸುಪ್ರೀಂಕೋರ್ಟ್ ತೀರ್ಪನ್ನು ಸಿಬಿಐ, ಯತ್ನಾಳ್ ಉಲ್ಲೇಖಿಸಿದ್ದಾರೆ. ಸರ್ಕಾರದ ಕ್ರಮ ಕಾನೂನುಬಾಹಿರವೆಂದು ವಾದಿಸಿದ್ದಾರೆ.

ಸಿಬಿಐ, ಯತ್ನಾಳ್ ವಾದವನ್ನು ನಾವು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ ಪೀಠ, ಇಲ್ಲಿಯವರೆಗೂ ಸರ್ಕಾರದ ಕ್ರಮವನ್ನು ಯಾರೂ ಪ್ರಶ್ನಿಸಿಲ್ಲ. ಕಾಜಿ ಲೆಂಡಪ್ ದೋರ್ಜಿ ಪ್ರಕರಣದಲ್ಲಿ ಸರ್ಕಾರದ ಕ್ರಮವನ್ನು ಪ್ರಶ್ನಿಸಲಾಗಿತ್ತು. ಆದರೆ ಇಲ್ಲಿ ಈವರೆಗೂ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿಲ್ಲ ಎಂದು ಹೇಳಿದೆ.

ಸಿಬಿಐ ನಡೆಯ ಮೇಲಿದೆ‌ ಡಿಕೆ ಶಿವಕುಮಾರ್ ಭವಿಷ್ಯ

ಡಿಕೆ ಶಿವಕುಮಾರ್​ಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದ್ದರೂ ಅವರ ಭವಿಷ್ಯ ಸಿಬಿಐ ಮುಂದಿನ ನಡೆಯ ಮೇಲೆ ನಿಂತಿದೆ. ಕಾಜಿ‌ ಲೆಂಡಪ್‌ ದೋರ್ಜಿ‌ ಪ್ರಕರಣದ ತೀರ್ಪನ್ನು ಆಧರಿಸಿ‌ ತನಿಖೆ ಮುಂದುವರಿಸುವ ಅವಕಾಶ ಸಿಬಿಐಗೆ ಇದೆ.

ಸರ್ಕಾರದ ಒಪ್ಪಿಗೆಗೆ ನೀಡಿದ್ದ ತಡೆಯಾಜ್ಞೆ ತೆರವಾಗಿದೆ. ಡಿಕೆ ಶಿವಕುಮಾರ್​ಗೆ ರಿಲೀಫ್​ ಸಿಗಲಿದೆಯೋ ಅಥವಾ ಸಂಕಷ್ಟ ಎದುರಾಗಲಿದೆಯೋ ಮುಂದೆ ತೀರ್ಮಾನವಾಗಲಿದೆ. ಅಂದರೆ ಹಿಂದೆ ಡಿಕೆ ಶಿವಕುಮಾರ್ ಮೇಲ್ಮನವಿ ಆಧರಿಸಿ ಹೈಕೋರ್ಟ್ ಸಿಬಿಐ ತನಿಖೆಗೆ ಸರ್ಕಾರದ ಒಪ್ಪಿಗೆಗೆ ತಡೆ ನೀಡಿತ್ತು. ಈಗ ಮೇಲ್ಮನವಿ ಹಿಂಪಡೆದಿರುವುದರಿಂದ‌ ತಡೆಯಾಜ್ಞೆ ತೆರವಾದಂತಾಗಿದೆ. ಹೀಗಾಗಿ ಸಿಬಿಐ ಮುಂದೆ ಸಾಕಷ್ಟು ಆಯ್ಕೆಗಳಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:38 pm, Wed, 29 November 23