ಬೆಂಗಳೂರು, ನವೆಂಬರ್ 21: ನಗರದ ರಸ್ತೆ ಗುಂಡಿ (potholes) ಮುಚ್ಚಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಾನಾ ಕಸರತ್ತು ಮಾಡುತ್ತಿರುತ್ತದೆ. ಇತ್ತೀಚೆಗೆ ರಸ್ತೆ ಗುಂಡಿ ಮುಚ್ಚಲು ಡೆಡ್ಲೈನ್ ನೀಡಲಾಗಿತ್ತು. ಇದೀಗ ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆಗೆ ಬಿಬಿಎಂಪಿ ಹೊಸ ಡ್ರಾಮಾ ಶುರು ಮಾಡಿದ್ದು, ಸಮಿತಿ ರಚನೆ ಮಾಡಲಾಗಿದೆ.
ಬೆಂಗಳೂರು ಅಭಿವೃದ್ಧಿ ಸಚಿವ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚನೆಯಂತೆ ಬಿಬಿಎಂಪಿ ಮುಖ್ಯ ಅಭಿಯಂತರ ಪ್ರಹ್ಲಾದ್ ನೇತೃತ್ವದಲ್ಲಿ ಐಐಎಸ್ಸಿ ತಜ್ಞರನ್ನೊಳಗೊಂಡ ಸಮಿತಿ ರಚನೆ ಮಾಡಲಾಗಿದೆ.
ಇದನ್ನೂ ಓದಿ: ರಸ್ತೆ ಗುಂಡಿ ಮುಚ್ಚಲು ಹೈಟೆಕ್ ತಂತ್ರಜ್ಞಾನ, ಕೋಲ್ಡ್ ಪಾಟ್ ಹೋಲ್ ಮಿಕ್ಸ್ ಆವಿಷ್ಕಾರ
ಬೆಂಗಳೂರಿನ ರಸ್ತೆಗಳ ಸ್ಥಿತಿ ಪರಿಶೀಲನೆ, ಹೊಸ ರಸ್ತೆ ನಿರ್ಮಾಣದ ಹೊಣೆ, ರಸ್ತೆ, ಚರಂಡಿ ವ್ಯವಸ್ಥೆ ಸೇರಿದಂತೆ ಹಲವು ವಿಷಯಗಳ ಪರಿಗಣನೆಗೆ ತೆದುಕೊಳ್ಳಲಾಗಿದೆ. ಪ್ರತಿ ತಿಂಗಳ ಮೊದಲ, 3ನೇ ಬುಧವಾರ ಸಮಿತಿ ಸಭೆ ನಡೆಸಲಿದೆ. ಸಭೆಯಲ್ಲಿ ರಸ್ತೆಗಳ ನಿರ್ವಹಣೆ ಕುರಿತು ಡಿ.15ರೊಳಗೆ ಕೈಪಿಡಿ ರಚಿಸಿ ಸಲ್ಲಿಸುವಂತೆ ಬಿಬಿಎಂಪಿ ಆಯುಕ್ತರು ಸೂಚನೆ ನೀಡಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಗುಂಡಿ ಗಂಡಾಂತರ ಮುಗಿಯುತ್ತಿಲ್ಲ. ಹಲವು ರಸ್ತೆಗಳಲ್ಲಿ ಡೆಡ್ಲಿ ಗುಂಡಿಗಳು ಬಾಯ್ತೆರೆದು ಕುಂತಿವೆ. ಪಾಲಿಕೆ ಕಳಪೆ ಕಾಮಗಾರಿ ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಟಿವಿ9 ರಿಯಾಲಿಟಿ ಚೆಕ್ ಕೂಡ ಮಾಡಿತ್ತು.
ಇದನ್ನೂ ಓದಿ: ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚಲು 15 ದಿನ ಗಡುವು: ಅಧಿಕಾರಿಗಳಿಗೆ ಡಿಕೆ ಶಿವಕುಮಾರ್ ತಾಕೀತು
ಟಿವಿ9 ಅಭಿಯಾನದ ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ನಗರದ ಗುಂಡಿಗಳನ್ನು ಮುಚ್ಚಲು ಬಿಬಿಎಂಪಿ ಅಧಿಕಾರಿಗಳಿಗೆ ಡೆಡ್ ಲೈನ್ ನೀಡಲಾಗಿತ್ತು. ಡೆಡ್ ಲೈನ್ ನೀಡುತ್ತಿದ್ದಂತೆ ದಿನಕ್ಕೊಂದು ಏರಿಯಾದಲ್ಲಿ ಅಧಿಕಾರಿಗಳು ಗುಂಡಿ ಮುಚ್ಚಿದ್ದರು. ಆದರೆ ಬಳಿಕ ನಗರದಲ್ಲಿ ಸುರಿದ್ದಿದ ಒಂದೇ ಒಂದು ಮಳೆಗೆ ಮತ್ತೆ ಗುಂಡಿಗಳು ಕಾಣಿಸಿಕೊಂಡಿದ್ದವು. ಅಲ್ಲಿಗೆ ರಸ್ತೆ ಮುಚ್ಚುವಂತೆ ಫೋಸ್ ಕೊಟ್ಟಿದ್ದ ಪಾಲಿಕೆಯ ಅಸಲಿ ಮುಖ ಬಟಾಬಯಲಾಗಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.