ಹಾವೇರಿ: ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತರುವ ಒತ್ತಾಯಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಬಿ.ಸಿ.ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮಯ್ಯ ಹೇಳಿದ ತಕ್ಷಣವೇ ಅದು ವೇದಾಂತವಲ್ಲ. ಈ ಹಿಂದೆ ಹೆಚ್.ವೈ.ಮೇಟಿ ಕೇಸ್ನಲ್ಲಿ ಎಫ್ಐಆರ್ ಕೂಡ ಆಗಿರಲಿಲ್ಲ. ನಮ್ಮ ಸರ್ಕಾರ ಎಸ್ಐಟಿ ತನಿಖೆಗೆ ಸೂಚನೆ ಕೊಟ್ಟಿದೆ ಎಂದು ಹೇಳಿದರು.
ಸಂತ್ರಸ್ತೆ ಬಂದ ಬಳಿಕ ಪ್ರಕರಣ ಕೂಡ ದಾಖಲಿಸಿದ್ದಾರೆ. ಅವಶ್ಯಕತೆ ಕಂಡುಬಂದರೆ ರಮೇಶ್ ಜಾರಕಿಹೊಳಿ ವಿರುದ್ಧ ಆರೋಪ ಸಾಬೀತಾದರೆ, ಖಂಡಿತವಾಗಿ ರಮೇಶ್ ಜಾರಕಿಹೊಳಿಯನ್ನು ಬಂಧಿಸುತ್ತಾರೆ ಎಂದು ಹೇಳಿದ ಸಚಿವ ಬಿ.ಸಿ.ಪಾಟೀಲ್ ಚಿತ್ರರಂಗಕ್ಕೆ ಕೊರೊನಾ ನಿಯಮದಲ್ಲಿ ಸಡಿಲಿಕೆ ಕೊಟ್ಟಿರುವುದಕ್ಕೆ ಸಮರ್ಥನೆ ಮಾಡಿಕೊಂಡರು.
ಚಿತ್ರರಂಗಕ್ಕೆ ನಿಯಮಗಳ ಸಡಿಲಿಕೆ ಅತಿ ಅವಶ್ಯಕ ಇದೆ. ಎಲ್ಲರೂ ಕೂಡ ಮಾಸ್ಕ್ ಧರಿಸಬೇಕು ಎನ್ನುವ ಸೂಚನೆ ಕೊಟ್ಟಿದ್ದಾರೆ. ಆದರೆ ಕೊರೊನಾ ನಿಯಮಗಳನ್ನು ಕಳೆದ ವರ್ಷದಂತೆ ಜನರು ಪಾಲನೆ ಮಾಡುತ್ತಿಲ್ಲ. ಜನರ ಜವಾಬ್ದಾರಿಯೂ ಬಹಳಷ್ಟಿದೆ. ಒಂದು ವಾರದ ಮಟ್ಟಿಗೆ ಸಿನಿಮಾ ಮಂದಿರ ಬಿಟ್ಟಿದ್ದಾರೆ. ಜನರೂ ಈ ಬಗ್ಗೆ ಜಾಗೃತರಾಗಿರಬೇಕು ಎಂದು ಅಭಿಪ್ರಾಯಪಟ್ಟರು.
ಕಾಮಾಲೆ ಕಣ್ಣಿನವರಿಗೆ ಲೋಕವೆಲ್ಲ ಹಳದಿ ಎಂದ ಸಚಿವ ಬಿ.ಸಿ.ಪಾಟೀಲ್
ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಸಚಿವ ಈಶ್ವರಪ್ಪ ದೂರು ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಬಿ.ಸಿ.ಪಾಟೀಲ್ ಒಂದು ಮನೆಯಲ್ಲಿದ್ದಾಗ ಸಣ್ಣ ಪುಟ್ಟ ವ್ಯತ್ಯಾಸಗಳು ಇರುತ್ತವೆ. ವರಿಷ್ಠರು ಎಲ್ಲವನ್ನೂ ಸರಿಪಡಿಸುವ ಕೆಲಸವನ್ನು ಮಾಡುತ್ತಾರೆ ಎಂದರು. ಜೊತೆಗೆ ವಿಜಯೇಂದ್ರ ದೇವಲೋಕದಿಂದ ಬಂದಿದ್ದಾರಾ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಕಾಮಾಲೆ ಕಣ್ಣಿನವರಿಗೆ ಲೋಕವೆಲ್ಲ ಹಳದಿಯಾಗಿ ಕಾಣುತ್ತದೆ. ಕಾಂಗ್ರೆಸ್ನವರಿಗೆ ವಿಜಯೇಂದ್ರರನ್ನು ನೋಡಿದರೆ ಬೇರೆ ರೀತಿ ಕಾಣುತ್ತದೆ. ಬಿ.ವೈ.ವಿಜಯೇಂದ್ರ ಯುವ ನಾಯಕರು, ಚಾಣಾಕ್ಷರಿದ್ದಾರೆ. ಮಸ್ಕಿ, ಬಸವಕಲ್ಯಾಣ, ಬೆಳಗಾವಿ ಚುನಾವಣೆಯಲ್ಲಿ ಅವರ ಪ್ರಭಾವವನ್ನು ತೋರಿಸುತ್ತಾರೆ. ಕ್ಷುಲ್ಲಕ ಕಾರಣಕ್ಕೆ ಬಿ.ವೈ.ವಿಜಯೇಂದ್ರ ಬಗ್ಗೆ ಟೀಕೆ ಸರಿಯಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ
ಹುಣಸೂರು ಕ್ಷೇತ್ರಕ್ಕೆ ಯಾವ ಅನುದಾನವನ್ನೂ ನೀಡಿಲ್ಲ: ಶಾಸಕ ಮಂಜುನಾಥ್ ಸುದ್ದಿಗೋಷ್ಠಿ
(BC Patil React to siddaramaiah statement in haveri)